‘ರಸಿಕರ ರಾಜ’ ಡಾ.ರಾಜ್‌ಕುಮಾರ್ ರೀತಿ ಕನ್ನಡಿಗರಿಗೆ ಸರ್ಪ್ರೈಸ್ ಕೊಡಲಿದ್ದಾರಾ ರಾಕಿಂಗ್ ಸ್ಟಾರ್ ಯಶ್?
ಕನ್ನಡ ಚಿತ್ರರಂಗ ಕಟ್ಟಿ ಬೆಳೆಸಿದ ಮಹಾನ್ ಚೇತನ ಡಾ.ರಾಜ್‌ಕುಮಾರ್. ಆಡು ಮುಟ್ಟದ ಸೊಪ್ಪು ಇಲ್ಲ ಎನ್ನುವಂತೆ, ಡಾ.ರಾಜ್ ಅವರು ಮಾಡದೇ ಇರುವ ಪಾತ್ರಗಳೇ ಇಲ್ಲ. ಹೀಗೆ ಕನ್ನಡ ಸಿನಿ ಪ್ರಿಯರಿಗೆ ಅದ್ಭುತವನ್ನೇ ಉಣಬಡಿಸಿದ್ದರು ವರನಟ ಡಾ.ರಾಜ್‌ಕುಮಾರ್. ಈ ಪೈಕಿ ರಾಜ್‌ಕುಮಾರ್‌ರ ಡಬಲ್ ರೋಲ್ ಅರ್ಥಾತ್ ದ್ವಿಪಾತ್ರ ಸಿಕ್ಕಾಪಟ್ಟೆ ಫೇಮಸ್ ಆಗಿದ್ದವು.
ಕನ್ನಡಕ್ಕೆ ಇಂತಹ, ಹೊಸತನ ಪರಿಚಯಿಸಿದ್ದೇ ಡಾ.ರಾಜ್. ಇದೀಗ ಈ ಮಹಾನ್ ನಟನ ಹಾದಿಯಲ್ಲಿ ರಾಕಿಭಾಯ್ ಯಶ್ ಕೂಡ ಸಾಗಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ರಾಕಿಂಗ್ ಸ್ಟಾರ್ ಯಶ್ ತಮ್ಮ 'ಟಾಕ್ಸಿಕ್' ಟೈಟಲ್ ಮೂಲಕ ಸಿನಿ ಜಗತ್ತಿನಲ್ಲಿ ಅಲ್ಲೋಲ & ಕಲ್ಲೋಲ ಸೃಷ್ಟಿಸಿದ್ದಾರೆ. ಯಾಕಂದ್ರೆ ಯಶ್ ಅವರ ಮುಂದಿನ ಸಿನಿಮಾದ ಒಂದೇ ಒಂದು ಲುಕ್ ಈಗ ಹಳ್ಳಿಯಿಂದ ದಿಲ್ಲಿವರೆಗೂ ಸದ್ದು ಮಾಡುತ್ತಿದೆ. ಇದೀಗ ಮತ್ತೊಂದು ಸರ್ಪ್ರೈಸ್ ಕೊಡುವ ಸುದ್ದಿ ಹೊರಬಿದ್ದಿದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ.

ಯಶ್ 'ಡಬಲ್ ರೋಲ್' ಗ್ಯಾರಂಟಿ?
ಮೊದಲೇ ಹೇಳಿದಂತೆ, ಕನ್ನಡದಲ್ಲಿ 'ಡಬಲ್ ರೋಲ್' ಅಂದ್ರೆ ದ್ವಿಪಾತ್ರ ಸಿನಿಮಾಗಳು ಹೆಚ್ಚು ಜನಪ್ರಿಯ ಆಗಿದ್ದವು. ಇದಕ್ಕೆ ಕಾರಣ ವರನಟ ಡಾ.ರಾಜ್‌ಕುಮಾರ್. 1975ರಲ್ಲಿ ಬಿಡುಗಡೆ ಆಗಿದ್ದ 'ದಾರಿ ತಪ್ಪಿದ ಮಗ' & 1978ರಲ್ಲಿ ರಿಲೀಸ್ ಆಗಿದ್ದ ಬ್ಲಾಕ್ ಬಸ್ಟರ್ ಹಿಟ್ ಶಂಕರ್ ಗುರು ಸಿನಿಮಾಗಳು ಇದಕ್ಕೆ ಉದಾಹರಣೆ. ಈಗ ರಾಕಿಂಗ್ ಸ್ಟಾರ್ ಯಶ್ ಕೂಡ ಮುಂದಿನ ಸಿನಿಮಾ ಅಂದ್ರೆ ಯಶ್-19 ಅಂತ ಘೋಷಣೆ ಮಾಡಲಾಗಿರುವ, 'ಟಾಕ್ಸಿಕ್' ಸಿನಿಮಾದಲ್ಲಿ 'ಡಬಲ್ ರೋಲ್' ಮಾಡಲಿದ್ದಾರೆ ಎನ್ನಲಾಗಿದೆ. ಇದು ಅಭಿಮಾನಿಗಳ ಎದೆಯಲ್ಲಿ ಹೊಸ ರೋಮಾಂಚನ ಸೃಷ್ಟಿ ಮಾಡುತ್ತಿದೆ. ಈ ಅಧಿಕೃತವಲ್ಲದ ಸುದ್ದಿ ಎಲ್ಲೆಲ್ಲೂ ಹಬ್ಬುತ್ತಿದೆ.
'ಕೆಜಿಎಫ್' ನಂತರ ಮತ್ತೆ ಅಬ್ಬರ!
ಯಶ್ ತಮ್ಮ 'ಕೆಜಿಎಫ್' ಸಿನಿಮಾ ಸರಣಿ ಮೂಲಕ ಕ್ರಿಯೇಟ್ ಮಾಡಿರುವ ಸೌಂಡ್ ಜಗತ್ತಿನಲ್ಲಿ ಮೂಲೆ ಮೂಲೆಗೂ ಹಬ್ಬಿತ್ತು. ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ಸೀಮಿತ ಅಂತಾ ಡೈಲಾಗ್ ಹೊಡೆಯುತ್ತಿದ್ದವರ ಬಾಯಿ ಮುಚ್ಚಿತ್ತು. ಇದಾದ ನಂತರ ಮತ್ತೆ ಯಶ್ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. 'ಟಾಕ್ಸಿಕ್' ಫಸ್ಟ್ ಲುಕ್ ಟೀಸರ್ ಈಗಾಗಲೇ ಪ್ರಪಂಚದ ಮೂಲೆ ಮೂಲೆಗೂ ಆವರಿಸುತ್ತಿದೆ. ಈ ಮೂಲಕ 'ಕೆಜಿಎಫ್' ಸಿನಿಮಾ ಸರಣಿಯ ನಂತರ ಯಶ್ ಮತ್ತೆ ಅಬ್ಬರಿಸಿ ಬೊಬ್ಬಿರಿಯಲು ಸಜ್ಜಾಗಿದ್ದಾರೆ.
ಟೈಟಲ್ ನೋಡಿ ಜನ ಏನಂದ್ರು?
ಯಶ್ 19ನೇ ಸಿನಿಮಾ ಫಸ್ಟ್ ಲುಕ್ ರಿಲೀಸ್ ಆದ ನಂತರ ಕೋಟ್ಯಂತರ ಫ್ಯಾನ್ಸ್ ಅದಕ್ಕೆ ಫಿದಾ ಆಗಿದ್ದಾರೆ. ಹಾಗೇ ಉತ್ತರ ಭಾರತದ ವಿವಿಧ ಪ್ರದೇಶದಲ್ಲಿ ಯಶ್ ಅವರ 'ಟಾಕ್ಸಿಕ್' ಸಿನಿಮಾದ ಫಸ್ಟ್ ಲುಕ್ ಲಾಂಚ್ ಹಿನ್ನೆಲೆ ಸೆಲೆಬ್ರೇಷನ್ ನಡೆದಿದೆ. ಇದು ಮಾತ್ರವಲ್ಲ ಜಗತ್ತಿನಾದ್ಯಂತ ನಟ ಯಶ್ ಅವರ 'ಟಾಕ್ಸಿಕ್' ಸಿನಿಮಾ ಟೈಟಲ್ ಟೀಸರ್ ನೋಡಿ ಸಾಕಷ್ಟು ಜನ ಯುಟ್ಯೂಬ್ ರಿವೀವ್ ಮಾಡಿದ್ದಾರೆ. ಹೀಗಿದ್ದಾಗ ಯಶ್ ಅವರು 'ಟಾಕ್ಸಿಕ್' ಸಿನಿಮಾದಲ್ಲಿ ದ್ವಿಪಾತ್ರವನ್ನ ಮಾಡ್ತಿದ್ದಾರೆ ಅನ್ನೋ ಗಾಳಿ ಸುದ್ದಿ ಮತ್ತಷ್ಟು ಸಂಚಲನ ಸೃಷ್ಟಿಸಿದೆ.

ಕನ್ನಡ ಸಿನಿಮಾಗಳಿಗೆ ಮತ್ತಷ್ಟು ಗತ್ತು!
ಯಶ್ ಏನೇ ಮಾಡಿದರೂ ಕನ್ನಡ ಸಿನಿಮಾ ರಂಗಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಇದೇ ಮಾತನ್ನು ಅವರು ಪದೇ ಪದೆ ಹೇಳುತ್ತಾ ಬಂದಿದ್ದಾರೆ. 'ಕೆಜಿಎಫ್' ಸಿನಿಮಾ ಬಿಡುಗಡೆಯ ಮೊದಲು ಯಶ್ ಕನ್ನಡ ಸಿನಿಮಾ ಇಂಡಸ್ಟ್ರಿ ದೊಡ್ಡ ಮಟ್ಟಕ್ಕೆ ಹೋಗುತ್ತೆ ಅಂತಾ ಹೇಳಿಕೆಯ ನೀಡಿದ್ದರು. ಅದು ನೆರವೇರಿತು, ಆಧುನಿಕ ಕಾಲದಲ್ಲಿ ಕನ್ನಡ ಸಿನಿಮಾಗಳ ಗತ್ತು ಜಗತ್ತಿಗೆ ತಿಳಿಯಿತು.
ಕನ್ನಡ ಚಿತ್ರರಂಗಕ್ಕೆ ಹಳೆಯ ವೈಭವ ಮರಳಿದೆ ಅಂತಿದ್ದಾರೆ ಫ್ಯಾನ್ಸ್. ಇದೀಗ ಮತ್ತೊಮ್ಮೆ, ಟಾಕ್ಸಿಕ್ ಸಿನಿಮಾ ಮೂಲಕ ಭರ್ಜರಿ ಸದ್ದು ಮಾಡಲು ಯಶ್ ಸಜ್ಜಾಗಿದ್ದಾರೆ. ದ್ವಿಪಾತ್ರದಲ್ಲಿ ಯಶ್ ಅವರು ಕಾಣಿಸಿಕೊಂಡರೆ ಅದು ಅಭಿಮಾನಿಗಳಿಗೆ ಡಬಲ್ ಸರ್ಪ್ರೈಸ್ ಆಗಿರಲಿದೆ. ಹಾಗೇ ಅದು ನಡೆಯದೇ ಇದ್ರೂ ಯಶ್ ಅವರು ಅಭಿಮಾನಿಗಳಿಗೆ ಏನಾದರೂ ಒಂದು ಸರ್ಪ್ರೈಸ್ ನೀಡೋದು ಪಕ್ಕಾ!












Click it and Unblock the Notifications