Dhanush Gowda: ನೀವು 2ನೇ ಹೆಂಡತಿನಾ? ಎಂದು ಕಾವ್ಯ ಶೈವಗೆ ಪ್ರಶ್ನೆ: ನೆಗೆಟಿವ್ ಕಾಮೆಂಟ್ ಮಾಡಿದವರಿಗೆ ಚಳಿ ಬಿಡಿಸಿದ ಧನುಷ್
ಬಿಗ್‌ಬಾಸ್ ಮೂಲಕ ಮನೆಮಾತಾಗಿರುವ ನಟಿ ಕಾವ್ಯ ಶೈವ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಕಹಿ ಅನುಭವವೊಂದು ಎದುರಾಗಿತ್ತು. ಪುಂಡನೊಬ್ಬ "ನೀವು ನಟ ಧನುಷ್ ಗೌಡ ಅವರ ಎರಡನೇ ಹೆಂಡತಿಯಂತೆ ಹೌದಾ?" ಎಂದು ಅತ್ಯಂತ ಅಸಭ್ಯವಾಗಿ ಪ್ರಶ್ನಿಸಿದ್ದ. ಈ ಅವಮಾನಕ್ಕೆ ಸುಮ್ಮನೆ ಕೂರದ ಕಾವ್ಯ, ಆತನಿಗೆ ತಕ್ಕ ಪ್ರತ್ಯುತ್ತರ ನೀಡಿ ಬಾಯಿ ಮುಚ್ಚಿಸಿದ್ದರು. ಈ ಕಿಡಿಗೇಡಿತನದ ಬಗ್ಗೆ ಇದೀಗ ನಟ ಧನುಷ್ ಗೌಡ ಅವರು ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೆಣ್ಣುಮಗಳ ಬಗ್ಗೆ ಮಾತನಾಡುವಾಗ ಸಂಸ್ಕಾರವಿರಲಿ
ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಧನುಷ್ ಗೌಡ, "ನಾನೊಬ್ಬ ಹುಡುಗ, ಹೇಗೋ ನಿಭಾಯಿಸಬಹುದು. ಆದರೆ ಒಬ್ಬ ಹೆಣ್ಣುಮಗಳ ಬಗ್ಗೆ ಈ ರೀತಿ ಹಗುರವಾಗಿ ಮಾತನಾಡುವುದು ಎಷ್ಟು ಸರಿ? ನನಗೂ ಒಂದು ಕುಟುಂಬವಿದೆ, ಅವರಿಗೂ ಕುಟುಂಬವಿದೆ. ಅವರು ಮುಂದೆ ಮದುವೆಯಾಗಿ ಜೀವನ ರೂಪಿಸಿಕೊಳ್ಳಬೇಕಾದವರು. ಇಂತಹ ನೆಗೆಟಿವ್ ಮಾತುಗಳಿಂದ ಎರಡು ಕುಟುಂಬಗಳಿಗೂ ತುಂಬಾನೇ ನೋವಾಗಿದೆ" ಎಂದು ಧನುಷ್ ಬೇಸರ ವ್ಯಕ್ತಪಡಿಸಿದ್ದಾರೆ.

ನೆಗೆಟಿವ್ ಜನರಿಗೆ ಉತ್ತರ ಕೊಡುವ ಅಗತ್ಯವಿಲ್ಲ
ನೆಗೆಟಿವ್ ಕಾಮೆಂಟ್ ಮಾಡುವವರ ಬಗ್ಗೆ ಮಾತನಾಡುತ್ತಾ, "ಕೆಟ್ಟದಾಗಿ ಟೀಕಿಸುವವರು ಈ ರೀತಿ ಮಾಡುತ್ತಲೇ ಇರುತ್ತಾರೆ. ನಮಗೆ ಆಶೀರ್ವಾದ ಮಾಡುವವರಿಗೆ, ಪ್ರೀತಿ ತೋರುವರಿಗೆ ಮಾತ್ರ ನಾವು ಉತ್ತರಿಸಬೇಕು. ಇಂತಹವರ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು, ನಮ್ಮ ಕೆಲಸದ ಮೂಲಕ ಅವರಿಗೆ ಉತ್ತರಿಸಬೇಕು. ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೂ ಮುಂದೊಂದು ದಿನ ನಮ್ಮ ಕೆಲಸ ಇಷ್ಟವಾಗುವಂತೆ ನಾವು ಬೆಳೆಯಬೇಕು" ಎಂದು ಪ್ರತಿಕ್ರಿಯಿಸಿದ್ದಾರೆ.
ಕನ್ನಡಿಗರಾಗಿ ಒಬ್ಬರನ್ನೊಬ್ಬರು ಬೆಳೆಸೋಣ
ಇದೇ ವೇಳೆ ಕಾವ್ಯ ಶೈವ ಅವರಿಗೆ ಧೈರ್ಯ ತುಂಬಿರುವ ಧನುಷ್, "ನಾನು ಕಾವ್ಯಗೆ ಕರೆ ಮಾಡಿ ಮಾತನಾಡಿದೆ. ಇಂತಹ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡ ಎಂದು ಧೈರ್ಯ ಹೇಳಿದ್ದೇನೆ. ನಮ್ಮ ಮನೆಯವರಿಗೂ ಈ ಬಗ್ಗೆ ಸಮಾಧಾನ ಪಡಿಸಿದ್ದೇನೆ" ಎಂದಿದ್ದಾರೆ. ಅಲ್ಲದೆ "ಹೊಸಬರು ಚಿತ್ರರಂಗಕ್ಕೆ ಬಂದಾಗ ಅವರಿಗೆ ಬೆಂಬಲ ನೀಡಬೇಕೇ ಹೊರತು, ಕಾಲೆಳೆಯಬಾರದು. ಕನ್ನಡಿಗರಾಗಿ ನಾವು ಒಬ್ಬರನ್ನೊಬ್ಬರು ಬೆಳೆಸುವ ಗುಣ ಬೆಳೆಸಿಕೊಳ್ಳೋಣ. ದಯವಿಟ್ಟು ಕೆಟ್ಟ ಕಾಮೆಂಟ್‌ಗಳನ್ನು ನಿಲ್ಲಿಸಿ, ಪ್ರೀತಿ ಹಂಚೋಣ" ಎಂದು ಅವರು ಮನವಿ ಮಾಡಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಗಳ ಖಾಸಗಿ ಬದುಕಿನ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ. ನಟ ಧನುಷ್ ಅವರ ಈ ಪ್ರಬುದ್ಧ ನಡೆಗೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಾವ್ಯ ಶೈವ ಮತ್ತು ಧನುಷ್ ಗೌಡ ಅವರು ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಈ ಸೀಸನ್‌ನಲ್ಲಿ ಇವರಿಬ್ಬರೂ ಮನೆಯೊಳಗೆ ಇದ್ದಾಗ ಅವರ ಸ್ನೇಹ ಮತ್ತು ಒಡನಾಟ ಗಮನ ಸೆಳೆದಿತ್ತು. ಒಂದೇ ಸೀಸನ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರಿಂದ ಸಹಜವಾಗಿಯೇ ಪ್ರೇಕ್ಷಕರು ಇವರನ್ನು ಗಮನಿಸಿದ್ದರು. ಆದರೆ, ಶೋ ಮುಗಿದ ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ಇವರ ಸ್ನೇಹವನ್ನು ತಪ್ಪಾಗಿ ಅರ್ಥೈಸಿ, ಅಸಭ್ಯವಾಗಿ ಕಾಮೆಂಟ್ ಮಾಡುತ್ತಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಧನುಷ್ ಅವರು, ಒಬ್ಬ ಹೆಣ್ಣುಮಗಳ ಬಗ್ಗೆ ಈ ರೀತಿ ಕೀಳುಮಟ್ಟದಲ್ಲಿ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.













Click it and Unblock the Notifications