Darshan Thoogudeepa: ಅಕ್ಕನ ಮಗನನ್ನು ಡೆವಿಲ್ ಸಿನಿಮಾದಿಂದ ಹೊರಗಿಟ್ಟ ದರ್ಶನ್!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ ತೂಗುದೀಪ 6 ತಿಂಗಳ ಜೈಲುವಾಸದ ಬಳಿಕ ಜಾಮೀನು ಪಡೆದು ಹೊರಗಡೆ ಬಂದಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದು ಸಿನಿಮಾ ಮಾಡುವತ್ತ ಗಮನ ಹರಿಸಿದ್ದಾರೆ. ಅರ್ಧಕ್ಕೆ ನಿಂತಿದ್ದ ಡೆವಿಲ್ ಸಿನಿಮಾ ಶೂಟಿಂಗ್ ಮತ್ತೆ ಶುರುವಾಗಿದ್ದು ದರ್ಶನ್ ಮತ್ತೆ ಬಣ್ಣ ಹಚ್ಚಲಿದ್ದಾರೆ. ದರ್ಶನ್ ಸಿನಿಮಾ ಶುರುವಾಗುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಡೆವಿಲ್ ಸಿನಿಮಾದಲ್ಲಿ ದರ್ಶನ್ ಅಕ್ಕನ ಮಗ ಚಂದು ಕೂಡ ನಟಿಸುತ್ತಿದ್ದರು. ದರ್ಶನ್ ಜೈಲು ಸೇರಿದ್ದಾಗ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಸೇರಿದಂತೆ ಕುಟುಂಬದ ಜೊತೆ ಸಹಾಯಕ್ಕೆ ಚಂದು ಕೂಡ ನಿಂತಿದ್ದರು. ದರ್ಶನ್ ಅಭಿಮಾನಿಗಳಿಗೆ ಚಂದು ಮೇಲೆ ಕೂಡ ವಿಶೇಷ ಪ್ರೀತಿ ಇದೆ. ಆದರೆ ಅಭಿಮಾನಿಗಳಿ ಈ ಪ್ರೀತಿಯೇ ಚಂದುಗೆ ಮುಳ್ಳಾಗಿದೆ!

ಹೌದು, ದರ್ಶನ್ ಅಭಿಮಾನಿಯೊಬ್ಬ ಮಾಡಿದ ಎಡವಟ್ಟಿನಿಂದ ಚಂದು ಡೆವಿಲ್ ಸಿನಿಮಾದಲ್ಲಿ ನಟಿಸಬೇಕಿದ್ದ ಅವಕಾಶವನ್ನೇ ಕಳೆದುಕೊಂಡಿದ್ದಾರೆ. ನಟ ದರ್ಶನ್ ಸ್ವತಃ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಅಲ್ಲದೆ ಅಭಿಮಾನಿಯ ವರ್ತನೆಗೆ ಬೇಸರ ಕೂಡ ವ್ಯಕ್ತಪಡಿಸಿದ್ದು ಈ ರೀತಿ ಮಾಡಿದರೆ ನನಗೆ ಹತ್ತಿರವಾಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ದರ್ಶನ್ ಹೇಳಿದ್ದೇನು?
ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಯೊಬ್ಬ ಚಂದು ಕಾಲಿಗೆ ಬೀಳುತ್ತಿರುವ ವಿಡಿಯೋ ಹಂಚಿಕೊಂಡಿರುವ ದರ್ಶನ್ ತೂಗುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಮೇಲಿನ ಅಭಿಮಾನದಿಂದ ಅವರ ಕಾಲಿಗೆ ಬಿದ್ದರೆ ನನಗೆ ಹತ್ತಿರವಾಗಲು ಸಾಧ್ಯವೇ ಇಲ್ಲ ಎಂದಿದ್ದಾರೆ.
"ಎಲ್ಲಾ ನನ್ನ ಸೆಲೆಬ್ರಿಟಿಸ್ ಗಳಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ನನ್ನ ಮತ್ತು ನಮ್ಮ ಕುಟುಂಬದ ಮೇಲಿಟ್ಟಿರುವ ಪ್ರೀತಿ ಅಭಿಮಾನಕ್ಕೆ ನಾವು ಸದಾ ಚಿರಋಣಿ. ಆದರೆ, ಈ ವೀಡಿಯೊದಲ್ಲಿ ನಮ್ಮ ಮೇಲಿರುವ ಅಭಿಮಾನದಿಂದ ಇನ್ನೂ ಏನು ಸಾಧನೆ ಮಾಡದಿರುವ ನನ್ನ ಅಕ್ಕನ ಮಗನಾದ ಚಂದುಗೆ ಅಭಿಮಾನಿಯೊಬ್ಬರು ಕಾಲಿಗೆ ಬೀಳುವುದನ್ನು ನೋಡಿ ನನ್ನ ಮನಸಿಗೆ ತುಂಬಾ ನೋವಾಗಿದೆ. ಅದರಿಂದ ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಬೇಕಿದ್ದ ಚಂದುನನ್ನು ಈ ಚಿತ್ರದಿಂದ ಹೊರಗಿಡಲಾಗಿದೆ, ಚಂದು ಅಥವಾ ನನ್ನ ಮಗ ವಿನೀಶ್‌ಗೆ ನೀವು ಅಭಿಮಾನದಿಂದಲೋ ಅಥವಾ ಅವರೊಂದಿಗೆ ಚೆನ್ನಾಗಿ ಗುರುತಿಸಿಕೊಂಡರೆ ನನಗೆ ಹತ್ತಿರವಾಗಬಹುದು ಎಂದು ನೀವು ಭಾವಿಸಿದರೆ ಅದನ್ನು ನಿಮ್ಮ ಮನಸಿನಿಂದ ತೆಗೆದು ಹಾಕಿ ನೀವು ಹೀಗೆ ಮಾಡುವುದು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ." ಎಂದು ಖಡಕ್ ಆಗಿ ಸಂದೇಶ ರವಾನಿಸಿದ್ದಾರೆ.
ಎಲ್ಲರನ್ನೂ ಅನ್‌ಫಾಲೋ ಮಾಡಿದ ದರ್ಶನ್
ದರ್ಶನ್ ತಮ್ಮ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮತ್ತು ಎಕ್ಸ್ ಖಾತೆಯಲ್ಲಿ ಎಲ್ಲರನ್ನೂ ಅನ್‌ಫಾಲೋ ಮಾಡಿದ್ದಾರೆ. ಈ ಮೂಲಕ ದರ್ಶನ್ ಇನ್ನು ಮುಂದೆ ಸಿನಿಮಾ ಬಗ್ಗೆ ಮಾತ್ರ ಗಮನ ಹರಿಸುವ ಮೂಲಕ ಎಲ್ಲದರಿಂದ ಅಂತರ ಕಾಯ್ದುಕೊಳ್ಳುವ ಸೂಚನೆ ಕೊಟ್ಟಿದ್ದಾರೆ.












Click it and Unblock the Notifications