19ನೇ ವಯಸ್ಸಿಗೆ ದಂಗಲ್ ಚಿತ್ರನಟಿ ದುರಂತ ಸಾವು- ಕಾರಣ ಕೇಳಿ ಬೆಚ್ಚಿಬಿದ್ದ ಬಾಲಿವುಡ್
ನವದೆಹಲಿ, ಫೆಬ್ರವರಿ 17: ಖ್ಯಾತ ನಟ ಅಮೀರ್ ಖಾನ್ ಅಭಿನಯಿಸಿದ್ದ, ದಂಗಲ್ ಚಿತ್ರದಲ್ಲಿ ಬಬಿತಾ ಫೋಗಟ್ ಪಾತ್ರ ನಿರ್ವಹಿಸಿದ ನಟಿ ಸುಹಾನಿ ಭಟ್ನಾಗರ್ ಅವರು ಶನಿವಾರ (ಫೆಬ್ರವರಿ 17, 2024)ರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ನಟಿಗೆ ಕೇವಲ 19 ವರ್ಷ ವಯಸ್ಸಾಗಿತ್ತು. ಹೀಗಾಗಿ ನಟಿಯ ಸಾವಿನ ಕಾರಣ ಇದೀಗ ಸಂಚಲನ ಸೃಷ್ಟಿ ಮಾಡಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಮೂಲಗಳ ಪ್ರಕಾರ ಔಷಧಿಗಳಿಂದ ಉಂಟಾದ ದುಷ್ಪರಿಣಾಮದಿಂದಾಗಿ ನಟಿಯನ್ನ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್) ಗೆ ದಾಖಲಿಸಿದ್ದರು ಎನ್ನಲಾಗಿದೆ. ನಟಿಯ ದೇಹದಲ್ಲಿ ದ್ರವ ಶೇಖರಣೆಗಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಹರಿಯಾಣದ ಫರಿದಾಬಾದ್ ಸೆಕ್ಟರ್ 15ರಲ್ಲಿ ಇರುವ ಅಜ್ರೋಂಡಾ ಸ್ಮಶಾನದಲ್ಲಿ ನಟಿಯ ದೇಹವನ್ನ ಇದೀಗ, ಅಂತ್ಯಸಂಸ್ಕಾರ ಮಾಡಲಾಗುವುದು ಅಂತಾ ಹೇಳಲಾಗುತ್ತಿದೆ. ಇದು ದೇಶದಲ್ಲಿ ಈಗ ಭಾರಿ ದೊಡ್ಡ ಸಂಚನ ಸೃಷ್ಟಿ ಮಾಡಿದೆ.

ಸುಹಾನಿ ಭಟ್ನಾಗರ್ ನಿಧನಕ್ಕೆ ಸಂತಾಪ
ದಂಗಲ್ ನಟಿ ಸುಹಾನಿ ಮೃತಪಟ್ಟ ಸುದ್ದಿ ವೈರಲ್ ಆದ ತಕ್ಷಣ, ಸೋಷಿಯಲ್ ಮೀಡಿಯಾ ಬಳಕೆದಾರರು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಮ್ಮ ಸಂತಾಪ ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ. 'ಬಬಿತಾ ಫೋಗಟ್ ಪಾತ್ರ ನಿರ್ವಹಿಸಿದ ದಂಗಲ್ ನಟಿ ಸುಹಾನಿ ಭಟ್ನಾಗರ್ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಕುಟುಂಬ & ಪ್ರೀತಿಪಾತ್ರರಿಗೂ ನನ್ನ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ' ಎಂದು 'ಎಕ್ಸ್' ಅಂದ್ರೆ ಟ್ವಿಟ್ಟರ್ ಬಳಕೆದಾರರು ಬರೆದು ಪೋಸ್ಟ್ ಹಾಕಿದ್ದಾರೆ.
ದಂಗಲ್ ಸಿನಿಮಾ ಇತಿಹಾಸ ಬರೆದಿತ್ತು
'ಸುಹಾನಿ ಭಟ್ನಾಗರ್ ಅವರ ನಿಧನದ ಸುದ್ದಿಯಿಂದ ಆಘಾತ & ದುಃಖವಾಗಿದೆ. ದಂಗಲ್‌ನಲ್ಲಿ ಯುವ ಬಬಿತಾ ಪಾತ್ರವನ್ನು ಮರೆಯಲಾಗದ್ದು. ನಟಿಯ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಈಗ ಮತ್ತೊಬ್ಬ ಸೋಷಿಯಲ್ ಮೀಡಿಯಾ ಬಳಕೆದಾರರು ಪೋಸ್ಟ್ ಹಾಕಿದ್ದಾರೆ. ಹೀಗೆ ನಟಿಯ ಸಾವು ಭಾರಿ ದೊಡ್ಡ ಆಘಾತ ನೀಡಿದೆ. ಅದರಲ್ಲೂ ಇಡೀ ಭಾರತದ ಸಿನಿಮಾ ಇಂಡಸ್ಟ್ರಿಗೆ ಹೊಸ ತಿರುವು ಕೊಟ್ಟಿದ್ದ ದಂಗಲ್ ಸಿನಿಮಾ, ಹತ್ತಿರ ಹತ್ತಿರ 2 ಸಾವಿರ ಕೋಟಿ ರೂಪಾಯಿ ವಸೂಲಿ ಮಾಡಿತ್ತು.
ದಂಗಲ್ ಸಿನ್ಮಾ ಹವ್ಯಾಸಿ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಅವರ ಜೀವನ ಆಧರಿಸಿತ್ತು. ಅವರು ತಮ್ಮ ಹೆಣ್ಣು ಮಕ್ಕಳನ್ನು ಭಾರತದ ಮೊದಲ ಮಹಿಳಾ ವಿಶ್ವ ದರ್ಜೆಯ ಕುಸ್ತಿಪಟುಗಳ ಮಾಡಲು ತರಬೇತಿ ನೀಡುತ್ತಾರೆ. ಅಮೀರ್ & ಸುಹಾನಿ ಅವರಲ್ಲದೆ, ಈ ಚಿತ್ರದಲ್ಲಿ ಫಾತಿಮಾ ಸನಾ ಶೇಖ್, ಸನ್ಯಾ ಮಲ್ಹೋತ್ರಾ, ಸಾಕ್ಷಿ ತನ್ವರ್ & ಅಪರಶಕ್ತಿ ಖುರಾನಾ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಇದು ಸಿನಿಮಾ, ಅಂದರೆ ದಂಗಲ್ ಸಿನಿಮಾ ಭಾರತದ ಸಿನಿಮಾಗಳಲ್ಲಿಯೇ ಸಾರ್ವಕಾಲಿಕ ದಾಖಲೆ ಬರೆದಿತ್ತು.
2016ರ ಡಿಸೆಂಬರ್ 23ಕ್ಕೆ ರಿಲೀಸ್
ದಂಗಲ್ ಸಿನಿಮಾ 2016ರ ಡಿಸೆಂಬರ್ 23ಕ್ಕೆ ರಿಲೀಸ್ ಆಗಿತ್ತು. ಭಾರತದಲ್ಲಿ ಮೊದಲು ನೂರಾರು ಕೋಟಿ ಬಾಚಿದ್ದ ದಂಗಲ್ ಸಿನಿಮಾ, ಆ ನಂತರ ಚೀನಾದಲ್ಲೂ ರಿಲೀಸ್ ಆಗಿ ತನ್ನ ದಿಕ್ಕನ್ನೇ ಬದಲಿಸಿತ್ತು. ಚೀನಾದಲ್ಲಿ ದಂಗಲ್ ಸಿನಿಮಾಗೆ ಸಿಕ್ಕ ಅಭೂತಪೂರ್ವ ಯಶಸ್ಸಿನ ಪರಿಣಾಮ ಈ ಸಿನಿಮಾ ಯಾರೂ ಊಹೆ ಮಾಡದಷ್ಟು ಹಣ ಗಳಿಸಿತ್ತು. ನೋಡ ನೋಡುತ್ತಲೇ ದಂಗಲ್ ಸಿನಿಮಾದ ಗಲ್ಲಾಪೆಟ್ಟಿಗೆಗೆ ಸಾವಿರಾರು ಕೋಟಿ ರೂಪಾಯಿ ಹರಿದು ಬಂದಿತ್ತು.
ಹೀಗೆ ಚೀನಾದಲ್ಲೇ ಅತಿಹೆಚ್ಚು ಹಣವನ್ನ ಬಾಚಿದ್ದ ದಂಗಲ್ ಸಿನಿಮಾ, ನೋಡ ನೋಡುತ್ತಲೇ ಸುಮಾರು 2,024 ಕೋಟಿ ರೂಪಾಯಿ ಬಾಚಿತ್ತು. ಹೀಗೆ ಅತಿಹೆಚ್ಚು ಹಣ ಗಳಿಸಿದ ಭಾರತೀಯ ಸಿನಿಮಾ ಆಗಿ ಹೊರಹೊಮ್ಮಿತ್ತು ದಂಗಲ್ ಚಿತ್ರ. ಆದರೆ ಈ ಸಿನಿಮಾದ ನಟಿ ಇದೀಗ 19ನೇ ವಯಸ್ಸಿಗೆ ಮೃತಪಟ್ಟಿರುವುದು ಇಡೀ ಭಾರತ ಸಿನಿಮಾ ರಂಗಕ್ಕೆ ನೋವು ತಂದಿದೆ.












Click it and Unblock the Notifications