Kotee Teaser out: 'ಕೋಟಿ'ಗೆ ಎಷ್ಟು ಸೊನ್ನೆ ಎಂದು ಕೇಳುತ್ತಾ ಥಿಯೇಟರ್‌ಗೆ ಬರುತ್ತಿದ್ದಾರೆ ನಟ ಧನಂಜಯ್!
ಬೆಂಗಳೂರು, ಏಪ್ರಿಲ್ 13: ಕಳೆದ ವಾರದಿಂದ ಕನ್ನಡ ಸಿನಿಮಾರಂಗದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ 'ಕೋಟಿ'. ನಟ ರಾಕ್ಷಸ ಡಾಲಿ ಧನಂಜಯ್ ನಟನೆಯ ಸಿನಿಮಾ ಮೂಲಕ ಪರಮೇಶ್ವರ ಗುಂಡ್ಕಲ್ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಏಪ್ರಿಲ್ 13ರಂದು ಟೀಸರ್ ಬಿಡುಗಡೆಯಾಗಿದೆ.
ಕೋಟಿ ಸಿನಿಮಾ ಮೂಲಕ ದೇಶದ ಪ್ರಮುಖ ನಿರ್ಮಾಣ ಸಂಸ್ಥೆ ಜಿಯೋ ಸ್ಟುಡಿಯೋಸ್ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದೆ. ಬೈಪನ್ ಭಾರಿ ದೇವಾ (ಮರಾಠಿ), ಆರ್ಟಿಕಲ್ 370, ತೇರಿ ಬಾತೋಂಮೆ ಐಸಾ ಉಲ್ಜಾಜಿಯಾ, ಶೈತಾನ್ ಮತ್ತು ಲಾಪಾತಾ ಲೇಡೀಸ್ ಹೀಗೆ ಒಂದಾದ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡಿರುವ ಜಿಯೋ ಸಿನಿಮಾ ಕನ್ನಡ ಸಿನಿ ರಂಗಕ್ಕೂ ಕಾಲಿಡುತ್ತಿದೆ.

ಕೋಟಿ ಬಗ್ಗೆ ಧನಂಜಯ್ ಮಾತು
'ಒಂದೇ ಒಂದು ಕೋಟಿ ಸಿಕ್ಕಿಬಿಟ್ಟರೆ ಅಥವಾ ದುಡಿಯೋದಕ್ಕಾದರೆ ಜೀವನದಲ್ಲಿ ಸೆಟ್ಲ್ ಆಗಿಬಿಡಬಹುದು ಎಂದು ಎಲ್ಲರೂ ಅಂದ್ಕೊಳ್ಳುತ್ತಾರೆ. ನಮ್ ಕೋಟಿನೂ ಹಾಗೇಯೇ. ಎಲ್ಲಾ ಮನೆಗಳಲ್ಲೂ ಈ ಕೋಟಿಯಂಥ ಅಣ್ಣ, ತಮ್ಮ, ಮಗ ನಿಮಗೆ ಸಿಕ್ತಾರೆ. ಕಷ್ಟಪಟ್ಟು ದುಡಿದು ಎಲ್ಲಾ ಸರಿ ಮಾಡ್ಕೋಬಹುದು ಅಂದುಕೊಂಡಿರುತ್ತಾರೆ. ಎಲ್ಲರಲ್ಲೂ ಕೋಟಿಯಂಥ ಒಬ್ಬ ವ್ಯಕ್ತಿ ಇರುತ್ತಾನೆ. ಈ ಪಾತ್ರ, ನನ್ನೊಳಗಿನ ಕೋಟಿಯನ್ನು ನನಗೆ ಪರಿಚಯಿಸಿದೆ. ಹಾಗೆಯೇ ನಿಮ್ಮೊಳಗಿನ ಕೋಟಿಯನ್ನು ಹುಡುಕಲು ನೀವು ಈ ಸಿನಿಮಾ ನೋಡಬೇಕು" ಎಂದಿದ್ದಾರೆ.
ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ್ದ ಹಲವು ಯಶಸ್ವಿ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳನ್ನು ಕೊಟ್ಟ ಪರಮೇಶ್ವರ ಗುಂಡ್ಕಲ್ ಈ 'ಕೋಟಿ' ಸಿನಿಮಾ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. "ನನ್ನ ಕನಸು ಈ ಸಿನಿಮಾ ಮೂಲಕ ನಿಜವೇ ಆಗಿಬಿಟ್ಟಿರುವುದನ್ನು ವಿವರಿಸಲು ಶಬ್ದಗಳಿಲ್ಲ. ಇದು ಸಾಧ್ಯ ಆಗಿದ್ದು ಜಿಯೋ ಸ್ಟುಡಿಯೋಸ್ ಮತ್ತು ಜ್ಯೋತಿ ದೇಶಪಾಂಡೆ ನನ್ನ ಮೇಲೆ ಇಟ್ಟ ನಂಬಿಕೆಯಿಂದ. ಒಳ್ಳೆ ಕತೆಗಳನ್ನು ಹೇಳಬೇಕು, ಬೇರೆ ಕತೆಗಳನ್ನು ಹೇಳಬೇಕು, ಬೇರೆ ಧ್ವನಿಗಳು ಕೇಳಿಸಬೇಕು ಅನ್ನೋದು ಜಿಯೋ ಸ್ಟುಡಿಯೋಸ್ ನ ಮೂಲ ಉದ್ದೇಶ. ಕನ್ನಡದಲ್ಲೂ ಈ ಇದು ಮುಂದುವರೆಯಬೇಕು ಅನ್ನೋದರ ಕಡೆಗೆ ನಮ್ಮ ತಂಡ ಕೆಲಸ ಮಾಡುತ್ತೆ" ಎಂದಿದ್ದಾರೆ.

ಕೋಟಿಗೆ ನಾಯಕಿಯಾಗಿ ಮೋಕ್ಷಾ ಕುಶಾಲ್
'ಕೋಟಿ'ಯಲ್ಲಿ ನಟ ಧನಂಜಯ್ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ನಟಿಸುತ್ತಿದ್ದಾರೆ. ಹಲವು ಜಾಹೀರಾತುಗಳಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದಾರೆ. 'ಸಪ್ತ ಸಾಗರದಾಚೆ' ಸಿನಿಮಾಗಳ ನಂತರ ಹೆಚ್ಚು ಖ್ಯಾತಿ ಗಳಿಸಿರುವ ರಮೇಶ್ ಇಂದಿರಾ ಈ ಸಿನಿಮಾದಲ್ಲಿ ಖಳನಟನಾಗಿ ಮಿಂಚಿದ್ದಾರೆ.
ವಾಸುಕಿ ವೈಭವ್ ಕೋಟಿ ಸಿನಿಮಾದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿವೆ. ಮೂರು ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯ ಇದೆ. ಒಂದು ಹಾಡನ್ನು ವಾಸುಕಿ ಬರೆದಿದ್ದಾರೆ. ಹಿನ್ನೆಲೆ ಸಂಗೀತವನ್ನು ನೊಬಿನ್ ಪೌಲ್ ನೀಡಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು, ತಾರಾ, ಪೃಥ್ವಿ ಶಾಮನೂರು, ಸರದಾರ ಸತ್ಯಾ ಮತ್ತು ತನುಜಾ ವೇಂಕಟೇಶ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೂನ್ 14 ರಂದು 'ಕೋಟಿ' ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.












Click it and Unblock the Notifications