ಡಾಲಿ ಧನಂಜಯ್- ಅಮೃತಾ ಐಯ್ಯಂಗಾರ್ ಮಧ್ಯೆ ನಿಜಕ್ಕೂ ಏನಾಯ್ತು?
ಕನ್ನಡದ ಅನೇಕ ಆನ್‌ಸ್ಕ್ರೀನ್ ಜೋಡಿಗಳಲ್ಲಿ ಡಾಲಿ ಧನಂಜಯ್ ಮತ್ತು ಅಮೃತಾ ಐಯ್ಯಂಗಾರ್ ಕೂಡ ಒಬ್ಬರು. ಸಾಲು ಸಾಲು ಚಿತ್ರಗಳನ್ನು ಇಬ್ಬರು ಒಟ್ಟಿಗೆ ನಟಿಸಿದ್ದು, ಡಾಲಿ ಧನಂಜಯ್ ಹೀರೋ ಎಂದರೆ ಅಮೃತಾ ಐಯ್ಯಂಗಾರ್ ನಾಯಕಿನಾ ಅಂತಾ ಜನರೇ ಕೇಳುವಷ್ಟರ ಮಟ್ಟಿಗೆ ಈ ಜೋಡಿ ತೆರೆ ಮೇಲೆ ಮೋಡಿ ಮಾಡಿತ್ತು. ಹೀಗಾಗಿ ತೆರೆ ಮರೆಯಲ್ಲೂ ಡಾಲಿ ಧನಂಜಯ್ ಮತ್ತು ಅಮೃತಾ ಐಯ್ಯಂಗಾರ್ ನಡುವೆ ಪ್ರೇಮಾಂಕುರವಾಗಿತ್ತು ಎನ್ನುವ ಗಾಳಿ ಸುದ್ದಿ ಎಲ್ಲೆಡೆ ಹರಿದಾಡಿತ್ತು.
ಡಾಲಿ ಧನಂಜಯ್ ಡಾಕ್ಟರ್ ಧನ್ಯತಾ ಜೊತೆ ಮದುವೆಯಾಗುತ್ತಿರುವುದಾಗಿ ಘೋಷಣೆ ಮಾಡುತ್ತಿದ್ದಂತೆ ಡಾಲಿ-ಅಮೃತಾ ಐಯ್ಯಂಗಾರ್ ಜೋಡಿಯನ್ನು ಸಂಭ್ರಮಿಸಿದ್ದ ಅಭಿಮಾನಿಗಳಿಗೆ ಬೇಸರವಾಗಿದ್ದಂತೂ ಸತ್ಯ. ಅಷ್ಟಕ್ಕೂ ಅವರಿಬ್ಬರ ಮಧ್ಯೆ ಇದ್ದ ಬಾಂಧವ್ಯವೇನು? ಡಾಲಿ- ಅಮೃತಾ ಮಧ್ಯೆ ನಿಜಕ್ಕೂ ಏನಾಯ್ತು? ಎನ್ನುವುದರ ಬಗ್ಗೆ ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಚಾನೆಲ್‌ನಲ್ಲಿ ಸ್ವತಃ ನಟಿ ಅಮೃತಾ ಐಯ್ಯಂಗಾರ್ ವಿವರಿಸಿದ್ದಾರೆ.

'ನಾನು ಹಾಗೂ ಡಾಲಿ ಧನಂಜಯ್ ತುಂಬಾ ಒಳ್ಳೆ ಸ್ನೇಹಿತರು. ಅವರು ಕೂಡ ಮೈಸೂರಿನವರು. ನಾನು ಅವರ ದೊಡ್ಡ ಅಭಿಮಾನಿ. ಅವರ ಜೊತೆ ಕೆಲಸ ಮಾಡಬೇಕಾದರೆ ಒಬ್ಬ ಫ್ಯಾನ್ ಮೂಮೆಂಟ್ ಯಾವಾಗಲೂ ಇತ್ತು. ನಾವೆಲ್ಲಾ ಕೊರೊನಾ ಸಮಯದಲ್ಲಿ ಒಂದೇ ಏರಿಯಾದಲ್ಲಿ ಇದ್ದೆವು. ನಾನು, ಸಪ್ತಮಿ, ಧನು ಎಲ್ಲಾ ಒಂದು ಗ್ಯಾಂಗ್ ರೀತಿ ಇದ್ದೆವು. ಆದರೆ ಇಲ್ಲಿ ಫ್ರೆಂಡ್‌ಶಿಪ್ ಸೆಲೆಬ್ರೆಟ್ ಮಾಡುವ ಯೋಚನೆ ತುಂಬಾ ಕಡಿಮೆ'.
'ನಿಜ ಹೇಳಬೇಕು ಅಂದರೆ ನಮ್ಮ ಜೋಡಿನ ಜನ ಮೆಚ್ಚಿಕೊಂಡಾಗ ತುಂಬಾ ಖುಷಿಯಾಗುತ್ತಿತ್ತು. ಯಾಕೆಂದರೆ ಹಿಂದಿನ ಕಾಲದಲ್ಲಿ ಒಂದು ಜೋಡಿ ಎನ್ನುವ ಸೆಲೆಬ್ರೆಷನ್ ಇರುತ್ತಿತ್ತು. ನನಗೂ ಆ ಖುಷಿ ಇತ್ತು. ಜನ ನಿಮ್ಮ ಜೋಡಿ ಇಷ್ಟ ಅಂದಾಗ ಖುಷಿಯಾಗುತ್ತಿತ್ತು. ನಾವಿಬ್ಬರು ಸ್ನೇಹಿತರಾಗಿ ಒಳ್ಳೆಯ ಬಾಂಧವ್ಯ ಹೊಂದಿದ್ದೆವು. ನಮ್ಮ ನಡುವೆ ಒಂದು ಕ್ಲೋಸ್ ಇತ್ತು. ನಾವಿಬ್ಬರು ಒಟ್ಟಿಗೆ ನಾಲ್ಕು ಸಿನಿಮಾ ಮಾಡಿದ್ದೇವೆ ಅಂದರೆ ಒಂದು ಸಲುಗೆ ಬಂದೇ ಬರುತ್ತದೆ' ಎಂದರು.

'ನಮ್ಮ ನಡುವೆ ಆ ಸಲುಗೆ ಇತ್ತು. ನಾವು ತುಂಬಾ ಸಿನಿಮಾಗಳನ್ನು ಒಟ್ಟಿಗೆ ಮಾಡಿದೆವು. ಒಂದು ರಿಯಾಲಿಟಿ ಶೋನಲ್ಲಿ ಪ್ರಪೋಸ್ ಮಾಡುವ ಟಾಸ್ಕ್ ಮಾಡಿದ ಮೇಲೆ ತುಂಬಾ ಕಷ್ಟ ಆಯ್ತು. ಇಬ್ಬರ ಕುಟುಂಬಗಳಿಗೂ ಸಹ. ಆದರೆ ಜನ ನಮ್ಮ ಜೋಡಿಯನ್ನು ಮೆಚ್ಚಿಕೊಂಡಿದ್ದು ಖುಷಿ ಆಯ್ತು. ಧನಂಜಯ್ ಮದುವೆ ವಿಚಾರ ಬಂದಾಗಲು ಜನ ತುಂಬಾ ಪ್ರಬುದ್ಧವಾಗಿ ತೆಗೆದುಕೊಂಡರು. ಅದು ಕೂಡ ಇಷ್ಟ ಆಯ್ತು. ಇದರಲ್ಲಿ ನನ್ನನ್ನು ದೂಷಿಸುವ ಸಾಧ್ಯತೆ ಇತ್ತು. ಇದೆಲ್ಲಾ ಆದ ಮೇಲೆ ಜನ ನನ್ನನ್ನು ಇಷ್ಟು ಇಷ್ಟ ಪಡುತ್ತಾರಾ ಎನ್ನುವುದು ಗೊತ್ತಾಯ್ತು'.
'ಎಷ್ಟೋ ಜನ ಆರ್‌ಯು ಓಕೆ ಅಂತಾ ಮೆಸೇಜ್ ಹಾಕಿದ್ರು. ಅವರು ಅಂದುಕೊಂಡಿರುವುದು ಸತ್ಯವಲ್ಲದೇ ಇದ್ದರೂ ಜನ ನನ್ನನ್ನು ಕೇರ್ ಮಾಡುತ್ತಿರುವುದು ನೋಡಿ ತುಂಬಾ ಖುಷಿ ಆಯ್ತು. ಒಂದೇ ಹೀರೋ ಜೊತೆ ನಾಲ್ಕು ಸಿನಿಮಾ, ಇಬ್ಬರು ಸಿಂಗಲ್, ಇಬ್ಬರೂ ಕ್ಲೋಸ್ ಫ್ರೆಂಡ್ಸ್ ಅಂದಾಗ ಈ ರೀತಿ ಎಲ್ಲಾ ಆಗುವುದು ಸಾಮಾನ್ಯ' ಎಂದು ನಟಿ ಅಮೃತಾ ಅಯ್ಯಂಗಾರ್ ತಮ್ಮ ಮತ್ತು ಡಾಲಿ ಧನಂಜಯ್ ಬಗ್ಗೆ ಹರಡಿರುವ ಗಾಳಿ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದರು.












Click it and Unblock the Notifications