ಕನ್ನಡದ ಕಿರುತೆರೆ ನಟಿಗೆ ಅಶ್ಲೀಲ ಫೋಟೋ ವೈರಲ್ ಮಾಡುವ ಬೆದರಿಕೆ: ಯಾರಿಂದ?
ಇತ್ತೀಚಿಗೆ ಆನ್‌ಲೈನ್ ವಂಚನೆಗಳು ಅತೀವವಾಗಿ ಹೆಚ್ಚಾಗುತ್ತಿದ್ದು, ಸೈಬರ್ ವಂಚಕರ ಜಾಲಕ್ಕೆ ಸಿಕ್ಕಿ ಪ್ರತಿ ದಿನಕ್ಕೆ ಒಬ್ಬ ವ್ಯಕ್ತಿಯಾದರೂ ಹಣ ಕಳೆದುಕೊಳ್ಳುತ್ತಿದ್ದಾರೆ. ಅಥವಾ ಅವರ ಬೆದರಿಕೆಗಳಿಗೆ ಹೆದರಿ ತಾವೇ ಸ್ವತಃ ಹಣವನ್ನು ವಂಚಕರಿಗೆ ನೀಡುತ್ತಿದ್ದಾರೆ. ಇನ್ನೂ ಕೆಲವರು ವಂಚಕರ ಜಾಲಕ್ಕೆ ಸಿಕ್ಕಿ ಅವರು ಕೇಳಿದ ಹಣ ಕೊಡಲಾಗದೇ, ತಮ್ಮ ಮಾನ-ಮರ್ಯಾದೆ ಹೋಗುತ್ತದೆ ಎಂದು ಹೆದರಿ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ.
ಇದೀಗ ನಟ-ನಟಿಯರಿಗೂ ಕೂಡ ಸೈಬರ್ ವಂಚಕರ ಕಾಟ ತಟ್ಟಿದ್ದು, ಕನ್ನಡದ ಕಿರುತೆರೆಯ ಖ್ಯಾತ ನಟಿಗೆ ಅಶ್ಲೀಲ ಫೋಟೋ ವೈರಲ್ ಮಾಡುವ ಬೆದರಿಕೆ ಹಾಕಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಸೈಬರ್ ವಂಚನೆಗೆ ನೂರಾರು ದಾರಿಗಳನ್ನು ಮಾಡಿಕೊಂಡಿರುವ ವಂಚಕರು ಇದೀಗ ಲೋನ್ ಆ್ಯಪ್‌ಗಳ ಹೆಸರಿನಲ್ಲಿ ಕನ್ನಡದ ಕಿರುತೆರೆ ನಟಿ ಶರ್ಮಿಳಾ ಚಂದ್ರಶೇಖರ್ ಅವರಿಗೆ ಬೆದರಿಕೆ ಹಾಕಿದ್ದಾರೆ. ಸೀತೆ, ಪತ್ತೇದಾರಿ ಪ್ರತಿಭಾ, ಅಂತರಪಟ ಧಾರಾವಾಹಿಗಳ ಮೂಲಕ ಖ್ಯಾತಿ ಪಡೆದುಕೊಂಡಿರುವ ನಟಿ ಶರ್ಮಿಳಾ ಚಂದ್ರಶೇಖರ್ ಅವರಿಗೆ ಈ ರೀತಿಯ ಬೆದರಿಕೆಯ ಮೆಸೇಜ್‌ಗಳು ಬರುತ್ತಿದ್ದು, ಈ ಬಗ್ಗೆ ಸ್ವತಃ ನಟಿ ಶರ್ಮಿಳಾ ಚಂದ್ರಶೇಖರ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
"ಎಲ್ಲರಿಗೂ ನಮಸ್ಕಾರ. ಈ ವಿಡಿಯೋ ಮಾಡುತ್ತಿರುವ ಉದ್ದೇಶ ಅಂದರೆ. ನಿಮಗೆ ಗೊತ್ತಿರುವ ಹಾಗೆ ಇತ್ತೀಚಿಗೆ ಆನ್‌ಲೈನ್ ವಂಚನೆ ಹೆಚ್ಚಾಗುತ್ತಿದೆ. ಇತ್ತೀಚಿಗೆ ನನಗೊಂದು ಮೆಸೇಜ್ ಬಂದಿದ್ದು, ವೇವ್ ಕ್ಯಾಶ್‌ಯಿಂದ ನನಗೆ ಲೋನ್ ಆಗಿದೆ. ಅದನ್ನು ಮರು ಪಾವತಿ ಮಾಡದೇ ಇದ್ದರೆ, ನಿಮ್ಮ ಫೋಟೋವನ್ನು ಅಶ್ಲೀಲವಾಗಿ ಬಳಸಿಕೊಂಡು ನಿಮ್ಮ ಎಲ್ಲಾ ವಾಟ್ಸಪ್ ಕಾಂಟ್ಯಾಕ್ಟ್‌ಗಳಿಗೆ ಕಳುಹಿಸುತ್ತೇವೆ ಎಂದು ಬ್ಲ್ಯಾಕ್‌ಮೇಲ್ ಮೆಸೇಜ್‌ಗಳು ಬರುತ್ತಿದೆ. ನಿಮಗೆ ಎಲ್ಲರಿಗೂ ಎಚ್ಚರಿಕೆ ಕೊಡಲು ಈ ವಿಡಿಯೋ ಮಾಡುತ್ತಿದ್ದೇನೆ'.

"ನನ್ನ ಫೋಟೋವನ್ನು ಎಡಿಟ್ ಮಾಡಿ ಅಶ್ಲೀಲವಾದ ಫೋಟೋ ಬಂದರೆ, ಅಥವಾ ಈ ವ್ಯಕ್ತಿ ಸಾಲ ತೆಗೆದುಕೊಂಡು ವಾಪಸ್ ಕೊಡುತ್ತಿಲ್ಲ ಎಂದು ಸಂದೇಶಗಳು ಬಂದರೆ, ದಯವಿಟ್ಟು ನಿರ್ಲಕ್ಷಿಸಿ ಬಿಡಿ. ಹಾಗೂ ಗೊತ್ತಿರದ ನಂಬರ್‌ಗಳಿಗೆ ಉತ್ತರಿಸಬೇಡಿ. ನಿಮ್ಮ ಸಂಪರ್ಕಗಳನ್ನು ಕೂಡ ಹೀಗೆ ಬಳಸಿಕೊಳ್ಳಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ' ಎಂದು ನಟಿ ಶರ್ಮಿಳಾ ಚಂದ್ರಶೇಖರ್ ವಿಡಿಯೋ ಮೂಲಕ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ನಟಿ ಶರ್ಮಿಳಾ ಚಂದ್ರಶೇಖರ್ ಅವರ ವಿಡಿಯೋ ನೋಡಿದ ನೆಟ್ಟಿಗರು, ಸೈಬರ್ ವಂಚಕರ ವಿರುದ್ಧ ಪೊಲೀಸರಿಗೆ ದೂರು ನೀಡಿ. ನೀವು ಹೆದರಬೇಡಿ ನಿಮ್ಮ ಜೊತೆಗೆ ನಾವಿದ್ದೇವೆ. ನಿಮ್ಮ ವಿಡಿಯೋದಿಂದ ನಾವು ಕೂಡ ಎಚ್ಚರಗೊಂಡಿದ್ದೇವೆ. ಅಪರಿಚಿತ ನಂಬರ್‌ಗಳಿಂದ ನಾವು ಎಚ್ಚರದಿಂದ ಇರುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ.












Click it and Unblock the Notifications