Darshan Thoogudeepa: ದರ್ಶನ್‌ಗೆ ಬಿಗ್ ರಿಲೀಫ್ ಕೊಟ್ಟ ನ್ಯಾಯಾಲಯ!
ಇತ್ತೀಚೆಗೆ ತಾನೆ ಹುಟ್ಟು ಆಚರಿಸಿಕೊಂಡಿರುವ ನಟ ದರ್ಶನ್ ತೂಗುದೀಪ ಅವರಿಗೆ ನ್ಯಾಯಾಲಯ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಮೈಸೂರಿಗೆ ತೆರಳಲು ದರ್ಶನ್‌ಗೆ ಇದ್ದ ಅನುಮತಿಯನ್ನು ವಿಸ್ತರಣೆ ಮಾಡಿ ನ್ಯಾಯಾಲಯ ಆದೇಶ ನೀಡಿದೆ. ಫೆಬ್ರವರಿ 18ರಂದು ಮೈಸೂರಿಗೆ ತೆರಳಲು ನೀಡಿದ್ದ ಅನುಮತಿ ಮುಕ್ತಾಯವಾಗಿದ್ದರಿಂದು ಇಂದು (ಬುಧವಾರ,ಪೆ. 18) ವಿಚಾರಣೆ ನಡೆಸಿದ ನ್ಯಾಯಾಲಯ ದಿನಾಂಕವನ್ನು ಮತ್ತೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ ಎಂದು ಟಿವಿ9 ವರದಿ ಮಾಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರು ತಿಂಗಳ ಕಾಲ ಜೈಲಿನಲ್ಲಿದ್ದ ನಟ ದರ್ಶನ್ ತೂಗುದೀಪ ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದ ಬಳಿಕ ಹೆಚ್ಚಿನ ಸಮಯವನ್ನು ಅವರು ತಮ್ಮ ಫಾರ್ಮ್‌ಹೌಸ್‌ನಲ್ಲಿ ಕಳೆಯುತ್ತಿದ್ದಾರೆ.

ದರ್ಶನ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ್ದು, ಇದನ್ನು ದರ್ಶನ್ ಪಾಲಿಸಲೇಬೇಕಾಗಿದೆ. ಇದರಲ್ಲಿ ಅವರು ಬೆಂಗಳೂರಿನಿಂದ ಹೊರಗಡೆ ಹೋಗುವಾಗ ಕಡ್ಡಾಯವಾಗಿ ಕೋರ್ಟ್‌ನಿಂದ ಅನುಮತಿ ಪಡೆಯಬೇಕಿದೆ. ಈ ಮೊದಲು ಕೂಡ ದರ್ಶನ್ ನ್ಯಾಯಾಲಯದಿಂದ ಅನುಮತಿ ಸಿಕ್ಕ ಬಳಿಕವೇ ಮೈಸೂರಿಗೆ ತೆರಳಿದ್ದರು, ಈಗ ಕೋರ್ಟ್ ಮತ್ತೆ ಅವಧಿಯನ್ನು ವಿಸ್ತರಣೆ ಮಾಡಿದ್ದು, ದರ್ಶನ್ ಫಾರ್ಮ್‌ಹೌಸ್‌ನಲ್ಲಿ ಇರಲು ಯಾವುದೇ ಅಡ್ಡಿಯಿಲ್ಲದಂತಾಗಿದೆ.
ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎ2 ಆಗಿದ್ದು, ಪವಿತ್ರಾ ಗೌಡ ಎ1 ಆರೋಪಿಯಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ನಟ ದರ್ಶನ್‌ಗೆ ಹೈಕೋರ್ಟ್ ಜಾಮೀನು ನೀಡಿದ್ದರೂ ಅವರ ಆತಂಕ ಸಂಪೂರ್ಣವಾಗಿ ದೂರವಾಗಿಲ್ಲ. ದರ್ಶನ್‌ಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು ಮಾರ್ಚ್ 18ರಂದು ವಿಚಾರಣೆ ನಡೆಯಲಿದೆ.
ದರ್ಶನ್ ಜೈಲಿನಲ್ಲಿದ್ದಾಗಿನಿಂದಲೂ ಬೆನ್ನು ನೋವಿನಿಂದ ಬಳಲುತ್ತಿದ್ದು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಬೆನ್ನು ನೋವಿಗೆ ನೋವು ನಿವಾರಕ ಇಂಜೆಕ್ಷನ್ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಶಸ್ತ್ರ ಚಿಕಿತ್ಸೆ ಅನಿವಾರ್ಯ ಎಂದು ಅವರೇ ಹೇಳಿದ್ದಾರೆ. ಒಂದು ವರ್ಷದಿಂದ ಕಾದಿರುವ ನಿರ್ಮಾಪಕರಿಗೆ ಸಿನಿಮಾ ಮಾಡಿಕೊಡುತ್ತೇನೆ, ಎಷ್ಟು ದಿನ ಆಗುತ್ತದೋ ಅಷ್ಟು ದಿನ ಶಸ್ತ್ರಚಿಕಿತ್ಸೆ ಮುಂದೆ ಹಾಕುತ್ತೇನೆ ಎಂದು ದರ್ಶನ್ ಹೇಳಿದ್ದಾರೆ.
ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಅವರ ಮುಂಬರುವ ಡೆವಿಲ್ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಅಭಿಮಾನಿಗಳು ಖುಷಿಯಾಗಿದ್ದಾರೆ. ಡೆವಿಲ್ ಸಿನಿಮಾ ಶೂಟಿಂಗ್ ಕೂಡ ಮೈಸೂರಿನಲ್ಲಿ ನಡೆಯಲಿದ್ದು ಶೀಘ್ರದಲ್ಲೇ ಅವರು ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ವಿವಿಧ ಸಮಾಜ ಸೇವೆ ಮಾಡಿದ ಅಭಿಮಾನಿಗಳಿಗೆ ದರ್ಶನ್ ತೂಗುದೀಪ ಧನ್ಯವಾದ ತಿಳಿಸಿದ್ದಾರೆ. ನಿಮ್ಮಂತಹ ಸೆಲೆಬ್ರಿಟಿಗಳನ್ನು ಪಡೆದ ನಾನೇ ಧನ್ಯ ಎಂದು ಹೇಳಿದ್ದಾರೆ.












Click it and Unblock the Notifications