Master Anand: ಕಾಮಿಡಿ ಕಿಲಾಡಿಗಳು ನಯನಾಗೆ ಮಾಸ್ಟರ್ ಆನಂದ್ ಅಂದರೆ ಯಾಕಷ್ಟು ಇಷ್ಟ?
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ ಕನ್ನಡ ಕಿರುತೆರೆ ಲೋಕದಲ್ಲಿ ಚಿರಪರಿಚಿತ ಮುಖ. ಸ್ಕ್ರೀನ್ ಮೇಲೆ ನಯನಾ ಬರುತ್ತಿದ್ದಂತೆ ಅಲ್ಲೊಂದು ನಗುವಿನ ಹೊಳೆ ಹರಿಯುವುದಂತೂ ಗ್ಯಾರಂಟಿ. ಪಟಪಟ ಮಾತು..ನಕ್ಕು ನಗಿಸುವ ಪಂಚ್ ಡೈಲಾಗ್‌ಗಳು, ನಗು ಮುಖ..ನೋಡಿದ ಎಂತವರಾದರೂ ಎಷ್ಟು ಚಂದದ ಲವಲವಕೆಯ ಜೀವನ ಎಂದುಕೊಳ್ಳುವಂತೆ ನಯನಾ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ. ಕನ್ನಡವನ್ನೇ ವಿವಿಧ ರೀತಿಯಲ್ಲಿ ಮಾತನಾಡುವ ನಯನಾ ಸದ್ಯ ಕನ್ನಡಿಗರ ಮೆಚ್ಚಿನ ಹಾಸ್ಯ ನಟಿ.
ತಮ್ಮ ಪ್ರತಿಭೆ ಹಾಗೂ ಶ್ರಮದಿಂದ ನಯನಾ ಈ ಮಟ್ಟಿನ ಜನಪ್ರಿಯತೆ ಪಡೆದಿದ್ದಾರೆ. ಕಾಮಿಡಿ ಕಿಲಾಡಿಗಳು ಎನ್ನುವ ವೇದಿಕೆ ಅವರ ಜೀವನದ ಹಾದಿಯನ್ನೇ ಬದಲಿಸಿದೆ ಎನ್ನಬಹುದು. ನಯನಾ ಎಷ್ಟೇ ಕಾರ್ಯಕ್ರಮಗಳನ್ನು ಮಾಡಿದರೂ, ಧಾರಾವಾಹಿ ಮಾಡಿದರೂ, ಸಿನಿಮಾ ಮಾಡಿದರೂ ಜನರು ಅವರನ್ನು ಗುರುತಿಸುವುದು ಕಾಮಿಡಿ ಕಿಲಾಡಿಗಳು ನಯನಾ ಎಂದೇ. ಹೀಗಾಗಿ ಅವರು ಕೂಡ ತಮ್ಮ ನಟನಾ ಪಯಣದ ಬಗ್ಗೆ ಮಾತನಾಡುವಾಗ ಮೊದಲು ಕಾಮಿಡಿ ಕಿಲಾಡಿಗಳು ವೇದಿಕೆಗೆ ಧನ್ಯವಾದ ತಿಳಿಸುತ್ತಾರೆ.

ತಮ್ಮ ಯಶಸ್ಸಿನ ಹಾದಿಯ ಮೊದಲ ಹೆಜ್ಜೆಯಾದ ಕಾಮಿಡಿ ಕಿಲಾಡಿಗಳು ವೇದಿಕೆಗೆ ನಯನಾ ಹೇಗೆ ಆಯ್ಕೆಯಾದರು? ಯಾರು ಆಯ್ಕೆ ಮಾಡಿದರು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ನಯನಾ ತಮ್ಮ ಸಂಗಾತಿ ಶರತ್ ಅವರ ಬೆಂಬಲದೊಂದಿಗೆ ನಟನಾ ಕ್ಷೇತ್ರಕ್ಕೆ ಬಂದವರು. ಈ ವೇಳೆ ಅವರ ಪ್ರತಿಭೆಯನ್ನು ಗುರುತಿಸಿ, ಇಂದಿನ ಅವರ ಸಾಧನೆಗೆ ಮಹತ್ವದ ಅವಕಾಶ ಕೊಟ್ಟು ಆಯ್ಕೆ ಮಾಡಿದ್ದು, ಕನ್ನಡ ಜನಪ್ರಿಯ ನಿರೂಪಕ ಹಾಗೂ ನಟ ಮಾಸ್ಟರ್ ಆನಂದ್ ಅವರು.
ಹೌದು ಈ ಬಗ್ಗೆ ಸ್ವತಃ ನಯನಾ ಹೇಳಿಕೊಂಡಿದ್ದು, 'ಆನಂದ್ ಸರ್ ಇವಳು ಈ ವೇದಿಕೆಗೆ ಬೇಕು. ಇವಳು ನಟನೆ ಮಾಡುತ್ತಾಳೆ, ಇವಳು ಕಾಮಿಡಿ ಕಿಲಾಡಿಗಳು ಶೋಗೆ ಬೇಕು ಅಂತಾ ಐದು ಸೆಂಕೆಂಡ್ ಅಲ್ಲಿ ನನ್ನನ್ನು ಆಯ್ಕೆ ಮಾಡಿಕೊಂಡರಂತೆ. ನನಗೆ ನನ್ನ ಮೇಲೆ ಆ ನಂಬಿಕೆ ಇರಲಿಲ್ಲ. ನನಗೆ ನಟನೆ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೆ ನನಗೆ ಕೊಟ್ಟಿರುವುದನ್ನು ನಾನು ಮಾಡುತ್ತೇನೆ ಎನ್ನುವ ನಂಬಿಕೆ ಇತ್ತು' ಎಂದಿದ್ದರು. ಹೀಗಾಗಿ ನಯನಾ ಅವರ ಇಂದಿನ ಈ ಸಾಧನೆಯ ಹಿಂದೆ, ಅಂದು ಅವರ ಮೇಲೆ ನಂಬಿಕೆಯಿಟ್ಟು ಅವಕಾಶ ಕೊಟ್ಟ ಮಾಸ್ಟರ್ ಆನಂದ್ ಅವರ ಪಾತ್ರವು ಮುಖ್ಯವಾಗಿದೆ.
ಈ ಹಿನ್ನೆಲೆಯಲ್ಲಿ ನಯನಾ ಕೂಡ ಮಾಸ್ಟರ್ ಆನಂದ್ ಹಾಗೂ ಅವರ ಕುಟುಂಬಕ್ಕೆ ಅಷ್ಟೇ ಪ್ರೀತಿ ಗೌರವ ತೋರುತ್ತಾರೆ. ಅಲ್ಲದೇ ತಮ್ಮ ಜೀವನದ ಅನೇಕ ಸಲಹೆಗಳನ್ನು ಅವರಿಂದ ಪಡೆಯುತ್ತಾರೆ. ಅಂದ ಹಾಗೇ ನಯನಾ ಮಗಳಿಗೂ ಹೆಸರು ಇಟ್ಟಿರುವುದು ಕೂಡ ಮಾಸ್ಟರ್ ಆನಂದ್ ಅವರಂತೆ.

ಈ ವಿಚಾರವನ್ನು ಕೂಡ ನಯನಾ ಹಂಚಿಕೊಂಡಿದ್ದು, 'ನನ್ನ ಮಗಳಿಗೆ ಹೆಸರು ಇಟ್ಟಿದ್ದು ಮಾಸ್ಟರ್ ಆನಂದ್ ಅವರು. ಅವಿನ್ಯಾ ಶ್ರೇಯಾ ಶೆಟ್ಟಿ ಅಂತಾ ಅವರೇ ಹೆಸರು ಇಟ್ಟಿದ್ದು. ನಮ್ಮ ಮನೆಯ ದೇವರು ಹಾಗೂ ಜಾತಿ ಎಲ್ಲಾ ನೋಡಿಕೊಂಡು ಅವಳಿಗೆ ಆ ಹೆಸರು ಇಟ್ಟರು. ನನ್ನ ಮಗಳದು ಹಾಗೂ ವಂಶಿಕಾದು ರಾಶಿ ನಕ್ಷತ್ರ ಒಂದೇ ಅಂತಾ ಅವರೇ ಹೇಳಿ ಈ ಹೆಸರನ್ನು ನಮಗೆ ಸೂಚಿಸಿದರು. ವಂಶಿಕಾಗೂ ಅವರೇ ವಂಶಿಕಾ ಅಂಜನಿ ಕಶ್ಯಪ ಅಂತಾ ಹೆಸರಿಟ್ಟಿದ್ದು, ನನ್ನ ಮಗಳಿಗೂ ಅವಿನ್ಯಾ ಶ್ರೇಯಾ ಶೆಟ್ಟಿ ಅಂತಾ ಅವರೇ ಹೆಸರು ಕೊಟ್ಟಿದ್ದುರು' ಎಂದು ಯಶಸ್ವಿ ಮಾಸ್ಟರ್ ಆನಂದ್ ಅವರ ಕನೆಕ್ಟ್ ಕನ್ನಡ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.












Click it and Unblock the Notifications