Chandan Shetty-Nivedita Gowda; ವಿಚ್ಛೇದನದ ಬಗ್ಗೆ ಚಂದನ್ ಶೆಟ್ಟಿ ಮೊದಲ ಪ್ರತಿಕ್ರಿಯೆ
ಬಿಗ್ ಬಾಸ್ 5ನೇ ಸೀಸನ್‌ನಲ್ಲಿ ಭಾಗವಹಿಸಿ ಬಳಿಕ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ 4 ವರ್ಷದ ದಾಂಪತ್ಯ ಅಂತ್ಯವಾಗಿದೆ. ಶುಕ್ರವಾರ ಬೆಳಗ್ಗೆಯಿಂದ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ ಎನ್ನುವ ಸುದ್ದಿಯಾಗಿತ್ತು, ಈ ಬಗ್ಗೆ ಚಂದನ್ ಶೆಟ್ಟಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಡಿವೋರ್ಸ್ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಖಚಿತ ಪಡಿಸಿರುವ ಚಂದನ್ ಶೆಟ್ಟಿ ಪರಸ್ಪರ ಒಪ್ಪಿಗೆ ಪಡೆದುಕೊಂಡೇ ಬೇರೆಯಾಗಿದ್ದೇವೆ ಎಂದು ಮಾಹಿತಿ ನೀಡುವ ಮೂಲಕ, ಡಿವೋರ್ಸ್ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಏನಿದೆ?
"ಈ ದಿನ ನಾನು, ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನು ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ನಮ್ಮ ಮಾಧ್ಯಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲ ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ, ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುತ್ತೇವೆ. ಸೂಕ್ಷ್ಮ ಪರಿಗಣೆನೆಗಾಗಿ ಎಲ್ಲರಿಗೂ ಧನ್ಯವಾದಗಳು" ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಚಂದನ್ ಶೆಟ್ಟಿ ರ್‍ಯಾಪ್ ಸಂಗೀತದ ಮೂಲಕ ಕನ್ನಡ ಸಂಗೀತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ ಹಾಡುಗಾರ. ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ಮೂಲಕ ಪ್ರಸಿದ್ಧಿಯಾದವರು ನಿವೇದಿತಾ ಗೌಡ. ಇಬ್ಬರೂ ಕೂಡ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪರಸ್ಪರ ಪರಿಚಯವಾಗಿದ್ದರು.
ಬಿಗ್ ಬಾಸ್ ಕಾರ್ಯಕ್ರಮದ ಬಳಿಕ ಇಬ್ಬರೂ ಕೂಡ ಪ್ರೀತಿಯಲ್ಲಿ ಬಿದ್ದಿದ್ದರು. ಬಳಿಕ ಮನೆಯವರ ಒಪ್ಪಿಗೆ ಪಡೆದು ಈ ಜೋಡಿ ಮದುವೆಯಾಗಿದ್ದರು. ನಾಲ್ಕು ವರ್ಷಗಳ ಕಾಲ ಒಂದಾಗಿದ್ದ ಈ ಜೋಡಿ ಕೊನೆಗೆ ಬೇರೆಯಾಗಿದ್ದಾರೆ.
ಚಂದನ್ ಶೆಟ್ಟಿ ಅವರ ಡಿವೋರ್ಸ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು, ಇನ್ನಾದರೂ ನಿಮ್ಮ ಸಂಗೀತದ ಮೇಲೆ ಗಮನ ಹರಿಸಿ, ಮೊದಲಿನಂತೆ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.












Click it and Unblock the Notifications