Blink Movie: ಒಟಿಟಿಯಲ್ಲಿ ಕಮಾಲ್ ಮಾಡುತ್ತಿರುವ 'ಬ್ಲಿಂಕ್' ಸಿನಿಮಾಗೆ ಭರಪೂರ ಮೆಚ್ಚುಗೆ
ಸದ್ಯದ ಕನ್ನಡದ ಟೈಮ್ ಟ್ರಾವೆಲ್ ಸಿನಿಮಾ ಆಗಿ ಕನ್ನಡಿಗರು ಸೇರಿದಂತೆ ಹಲವು ಭಾಷಿಗರನ್ನು ಸೆಳೆಯುತ್ತಿರುವ ಸಿನಿಮಾ 'ಬ್ಲಿಂಕ್'. ಶ್ರೀನಿಧಿ ಬೆಂಗಳೂರು ನಿರ್ದೇಶನದ 'ಬ್ಲಿಂಕ್' ಅಮೇಜಾನ್ ಪ್ರೈಮ್ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಒಟಿಟಿಯಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಯಶಸ್ವಿಯಾಗಿ 50 ದಿನ ಪೂರೈಸಿರುವ ಈ ಸಿನಿಮಾಗೆ ಒಟಿಟಿಯಲ್ಲಿ ಉತ್ತಮ ವಿಮರ್ಶೆ ವ್ಯಕ್ತವಾಗುತ್ತಿದೆ. ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಆಗಿರುವ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾಗಳನ್ನು ಥೀಯೆಟರ್‌ಗಳಲ್ಲಿ, ಒಟಿಟಿಗಳಲ್ಲಿ ನೊಡುವುದಿಲ್ಲ ಎಂಬ ಆರೋಪಕ್ಕೆ ಉತ್ತರವಾಗಿ ಈ ಸಿನಿಮಾ ನಿಂತಿದೆ.

ಕಣ್ಣು ಮಿಟುಕಿಸಲು ಬಿಡದ ಬ್ಲಿಂಕ್
ಚಿತ್ರತಂಡ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಚಿತ್ರದ ಬಗ್ಗೆ ಖುಷಿ ಹಂಚಿಕೊಂಡಿದೆ. ಈ ವೇಳೆ ಮಾತನಾಡಿರುವ ನಾಯಕ ನಟ ದೀಕ್ಷಿತ್ ಶೆಟ್ಟಿ ಮಾತನಾಡಿ, "ಬಹಳ ಖುಷಿಯಾಗುತ್ತಿದೆ. ಎಷ್ಟೋ ವರ್ಷಗಳ ನಂತರ ಹೊಸಬರ ತಂಡ 50 ದಿನಗಳ ಕಾಲ ಸಿನಿಮಾವನ್ನು ಥಿಯೇಟರ್ ನಲ್ಲಿ ಉಳಿಸಿಕೊಂಡಿದ್ದೇವೆ. ನಮಗೆ ಇದನ್ನು ನಂಬಲು ಆಗುತ್ತಿಲ್ಲ. ಮೊದಲ ದಿನದಿಂದ ಇಲ್ಲಿವರೆಗೂ ಬಹಳಷ್ಟು ಹೋರಾಟ ಮಾಡಿದ್ದೇವು. ನಾವು ಜನರನ್ನು ಕರೆದುಕೊಂಡು ಥಿಯೇಟರ್ ತುಂಬಿಸುತ್ತಿದ್ದೇವೆ ಎಂದು ಒಂದಷ್ಟು ಜನ ಮಾತಾನಾಡಿಕೊಂಡರು. ಹಾಗೇ ಹೇಳಿದವರಿಗೆ ಉತ್ತರ ಈ 50 ದಿನ" ಎಂದಿದ್ದಾರೆ.
"ಸಿನಿಮಾ ಅಷ್ಟು ಕೋಟಿ ಮಾಡಬೇಕು. ಇಷ್ಟು ಕೋಟಿ ಮಾಡಬೇಕು ಎನ್ನುವುದು ನನ್ನ ತಲೆಯಲ್ಲಿ ಇರಲಿಲ್ಲ. ನಿರ್ಮಾಪಕರು ಗೆಲ್ಲಬೇಕು. ನಿಲ್ಲಬೇಕು ಅನ್ನುವುದಷ್ಟೇ ಇತ್ತು. ಹಾಕಿದ ಬಂಡವಾಳ ವಾಪಸ್ ಬರುವುದರಲ್ಲಿದೆ. ಹೀಗಾಗಿ ಖುಷಿ ಇದೆ ಎಂದು ಭಾವಿಸಿದ್ದೇನೆ" ಎಂದು ನಟ ದೀಕ್ಷಿತ್ ಶೆಟ್ಟಿ ಗೆಲುವಿಗೆ ಕಾರಣರಾದ ಇಡೀ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
ಇಡೀ ಸಿನಿಮಾ ತಂಡ ಪ್ರಾಮಾಣಿಕವಾಗಿ ದುಡಿದಿದೆ
ನಿರ್ಮಾಪಕ ರವಿಚಂದ್ರ ಎ ಜೆ ಮಾತನಾಡಿ, "ಸಿನಿಮಾ ಈ ಲೆವೆಲ್‌ಗೆ ಆಗುತ್ತದೆ ಅಂದುಕೊಂಡಿರಲಿಲ್ಲ. ಮನೆಯವರು ಖುಷಿಯಾಗಿದ್ದಾರೆ. ಇಡೀ ಸಿನಿಮಾ ತಂಡ ಪ್ರಾಮಾಣಿಕವಾಗಿ ದುಡಿದಿದೆ. ಅವರಿಗೆಲ್ಲಾ ಮುಂದೆ ಒಳ್ಳೆ ಸಿನಿ ಕರಿಯರ್ ಸಿಗಬೇಕು. ಆದಷ್ಟು ಬೇಗ ತೆಲುಗಿಗೂ ಡಬ್ ಮಾಡಿಸುತ್ತೇವೆ. ತಮಿಳು ಡಬ್ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಸಿನಿಮಾಗೆ ಭಾಷೆಯ ಎಲ್ಲೆ ಇಲ್ಲ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟಿಟಿಯಲ್ಲಿಯೂ 'ಬ್ಲಿಂಕ್' ಸಿನಿಮಾಗೆ ಬಹುಪರಾಕ್
ಶಿವರಾತ್ರಿ ಹಬ್ಬದಂದು ತೆರೆಗೆ ಬಂದ ಸಿನಿಮಾಗೆ ಮೊದಲಿಗೆ ಅಂತಹ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಬಳಿಕ 8 ಶೋಗಳಿಂದ 82 ಶೋ ಬ್ಲಿಂಕ್ ಪಾಲಾಗಿತ್ತು. ಥಿಯೇಟರ್‌ನಲ್ಲಿ ಭರಪೂರ ಮೆಚ್ಚುಗೆ ಪಡೆದಿದ್ದ ಬ್ಲಿಂಕ್ ಸಿನಿಮಾ ಒಟಿಟಿಯಲ್ಲಿಯೂ ಸದ್ದು ಮಾಡಿದೆ. ಅಮೇಜಾನ್ ಪ್ರೈಮ್ ಒಟಿಟಿಗೆ ಎಂಟ್ರಿ ಕೊಟ್ಟು 3 ದಿನದಲ್ಲಿಯೇ 7 ಮಿಲಿಯನ್ಸ್ ಮಿನಿಟ್ ಸ್ಟ್ರೀಮಿಂಗ್ ಕಾಣುವ ಮೂಲಕ ಹೊಸ ದಾಖಲೆ ಸೃಷ್ಟಿಸಿತ್ತು. 4 ನೇ ದಿನ 10 ಮಿಲಿಯನ್ ಮಿನಿಟ್ಸ್ ರೀಚ್ ಆಗಿದೆ. ಹೊಸಬರ ಚಿತ್ರಕ್ಕೆ ಇಷ್ಟು ಒಳ್ಳೆ ರೆಸ್ಪಾನ್ಸ್ ಸಿಕ್ಕಿರುವುದು ಖುಷಿ ಎಂದಿದೆ ಚಿತ್ರತಂಡ.
'ಬ್ಲಿಂಕ್' ಚಿತ್ರಕ್ಕೆ ಶ್ರೀನಿಧಿ ಬೆಂಗಳೂರು ಆಕ್ಷನ್ ಕಟ್ ಹೇಳಿದ್ದಾರೆ. ರವಿಚಂದ್ರ ಎ.ಜೆ. ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. 'ದಿಯಾ' ಖ್ಯಾತಿಯ ದೀಕ್ಷಿತ್ ಶೆಟ್ಟಿ ಚಿತ್ರದ ಜೀವಾಳವಾಗಿದ್ದಾರೆ. ನಟಿ ಚೈತ್ರಾ ಆಚಾರ್, ಗೋಪಾಲ್ ದೇಶಪಾಂಡೆ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ.












Click it and Unblock the Notifications