Rajath: ಶೂ ಮೇಲೆ ನಟ ದರ್ಶನ್ ಹೆಸರು, ರಜತ್‌ಗೆ ರುಬ್ಬಿದ ಫ್ಯಾನ್ಸ್
ನಾನು ಡಿಬಾಸ್ ದರ್ಶನ್ ಅವರ ಅಪ್ಪಟ ಅಭಿಮಾನಿ ಎಂದಿದ್ದ ಬಿಗ್‌ಬಾಸ್ ಸ್ಪರ್ಧಿ ರಜತ್ ಕಿಶನ್ ಈಗ ವಿವಾದಕ್ಕೆ ಸಿಲುಕಿದ್ದಾರೆ. ದರ್ಶನ್ ಅವರ ಶೈಲಿಯಲ್ಲೇ ಮಿಂಚುತ್ತಿದ್ದ ರಜತ್ ಈಗ ದಚ್ಚು ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಬಿಗ್‌ಬಾಸ್ ಮನೆಯಲ್ಲೂ ರಜತ್ ದರ್ಶನ್ ಅವರ ಬಗ್ಗೆ ಮಾತನಾಡಿದ್ದರು. ನಾನು ಡಿಬಾಸ್ ಫ್ಯಾನ್ ಎಂದು ಹೇಳಿಕೊಂಡಿದ್ದ ರಜತ್ ವಿರುದ್ಧ ಅಭಿಮಾನಿಗಳು ಸಿಡಿದೆದ್ದಿದ್ದಾರೆ. ಇಷ್ಟಕ್ಕೂ ರಜತ್ ಮಾಡಿದ್ದಾದರೂ ಏನು ಗೊತ್ತಾ?
ಸಖತ್ ರಗಡ್ ಆಗಿ ಡೈಲಾಗ್ ಹೊಡೆಯುತ್ತಿದ್ದ ರಜತ್ ಅವರನ್ನು ನಟ ದರ್ಶನ್‌ಗೆ ಕೆಲವರು ಹೋಲಿಸಿದ್ದರು. ಆದ್ರೆ ದರ್ಶನ್ ಅಭಿಮಾನಿಯಾಗಿ ರಜತ್ ಮಾಡಿಕೊಂಡಿರುವ ಎಡವಟ್ಟಿನಿಂದ ಫುಲ್ ಶೇಪ್‌ಔಟ್ ಕೂಡ ಆಗಿದೆ. ಇದಕ್ಕೆ ಕಾರಣವಾಗಿದ್ದು ರಜತ್ ಮಾಡಿಸಿಕೊಂಡಿರುವ ಫೋಟೋಶೂಟ್. ಹೌದು, ರಜತ್ ಫೋಟೋ ಶೂಟ್ ಕಂಡು ಮೊದಲಿಗೆ ಎಲ್ಲರೂ ವಾವ್ ಎಂದಿದ್ದಾರೆ. ಆದರೆ ಅಲ್ಲಿ ನಡೆದಿರೋ ಒಂದು ಎಡವಟ್ಟಿನಿಂದ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ರಜತ್ ಅವರು ದರ್ಶನ್ ಮೇಲಿನ ಅಭಿಮಾನವನ್ನು ಪ್ರದರ್ಶಿಸಲು ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದಾರೆ. ವಿಶೇಷ ಅಂದ್ರೆ ರಜತ್ ಹಾಕಿರೋ ಪ್ಯಾಂಟ್ ಮೇಲೆಲ್ಲ ದರ್ಶನ್ ಅವರ ಸಿನಿಮಾಗಳ ಹೆಸರುಗಳಿವೆ. ಶರ್ಟ್ ಮೇಲೆ ದೊಡ್ಡದಾಗಿ "D Boss" ಎಂದೂ ಇದೆ. ಕೈಯಲ್ಲಿ ಸ್ಟೈಲಾಗಿ ಲಾಂಗ್ ಹಿಡಿದು ಕರಿಯ ಸಿನಿಮಾದಲ್ಲಿ ದರ್ಶನ್ ಅವರನ್ನೇ ಹೋಲುವಂತೆ ಪೋಸ್ ಕೊಟ್ಟಿದ್ದಾರೆ.
ಆದ್ರೆ ಈ ಫೋಟೋದಲ್ಲಿ ಒಂದು ಎಡವಟ್ಟು ಆಗಿದೆ. ಅದೇನಂದ್ರೆ ರಜತ್ ಹಾಕಿರುವ ಪ್ಯಾಂಟ್ ಮೇಲೆ ಬರೆಯಲಾಗಿದರು "ದರ್ಶನ್" ಎಂಬ ಹೆಸರು ರಜತ್ ಧರಿಸಿದ್ದ ಶೂ ಮೇಲೆ ಬಂದಿದೆ. ಇದನ್ನು ಗಮನಿಸಿದ ದರ್ಶನ್ ಅಭಿಮಾನಿಗಳು ರಜತ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

"ನಿಮ್ಮ ಅಭಿಮಾನ ಮೆಚ್ಚುವಂತದ್ದೇ, ಆದರೆ ಅಭಿಮಾನದ ಹೆಸರಿನಲ್ಲಿ ದರ್ಶನ್ ಅವರಿಗೇ ಅವಮಾನ ಮಾಡ್ತಿದ್ದೀರಲ್ಲ?" ಎಂದು ಪ್ರಶ್ನಿಸಿದ್ದಾರೆ. "ನೀವು ದರ್ಶನ್ ಫ್ಯಾನ್ ಅನ್ನೋದು ನಮಗೂ ಹೆಮ್ಮೆ. ಆದ್ರೆ, ಶೂ ಮೇಲೂ ಅವರ ಹೆಸರು ಬರಬೇಕಿತ್ತಾ?" ಎಂದಿದ್ದಾರೆ. "ಬಹುಶಃ ಇದು ನಿಮ್ಮ ಗಮನಕ್ಕೆ ಬಾರದೆಯೂ ಆಗಿರಬಹುದು. ದಯವಿಟ್ಟು ಇಂತಹ ಹುಚ್ಚಾಟ ತೋರುವಾಗ ದರ್ಶನ್ ಅವರ ಘನತೆಗೆ ಧಕ್ಕೆ ತರದಂತೆ ಎಚ್ಚರ ವಹಿಸಿ ರಜತ್" ಎಂದೂ ಕಿವಿಮಾತು ಹೇಳಿದ್ದಾರೆ. ರಜತ್ ಅವರ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಅಂದಹಾಗೆ ರಜತ್ ಫೋಟೋದಲ್ಲಿ ಧರಿಸಿರೋ ಪ್ಯಾಂಟ್ ಮೇಲೆ ಮೆಜೆಸ್ಟಿಕ್, ಅಣ್ಣಾವ್ರು, ಲಂಕೇಶ್ ಪತ್ರಿಕೆ, ಪೊರ್ಕಿ, ನನ್ನ ಪ್ರೀತಿಯ ರಾಮು, ಕರಿಯ, ಕಲಾಸಿಪಾಳ್ಯ, ಸುಂಟರಗಾಳಿ, ಮಂಡ್ಯ, ಶಾಸ್ತ್ರಿ, ಅರ್ಜುನ್, ಗಜ, ಲಾಲಿಹಾಡು ಸೇರಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸಿರುವ ಎಲ್ಲ ಸಿನಿಮಾಗಳ ಹೆಸರನ್ನು ಬರೆಸಿಕೊಂಡು, ಲಾಂಗ್ ಹಿಡಿದು ಖಡಕ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ ರಜತ್. ಕೆಲವರು ಈ ಐಡಿಯಾ ಚೆನ್ನಾಗಿದೆ ಗುರೂ ಎಂದೂ ರಜತ್‌ಗೆ ಭೇಷ್ ಎಂದಿದ್ದಾರೆ.












Click it and Unblock the Notifications