Bigg Boss Winner: ಬಿಗ್ ಬಾಸ್ ಗೆದ್ದ ಹನುಮಂತನ ಮದುವೆ ಯಾವಾಗ?
ಬಿಗ್ ಬಾಸ್ ಸೀಸನ್ 11 ಮುಕ್ತಾಯವಾಗಿದ್ದು ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಸ್ಪರ್ಧಿಯೊಬ್ಬ ವಿನ್ನರ್ ಆಗಿದ್ದಾನೆ. ತನ್ನ ಮುಗ್ದತೆ, ಸಹಜ ಆಟದಿಂದಲೇ ನಾಡಿನ ಜನತೆಯ ಮನ ಗೆದ್ದ ಹಳ್ಳಿ ಹೈದ ಹನುಮಂತ ಪ್ಯಾಟೆ ಮಂದಿಯ ಮುಂದೆ ಆಡಿ ಗೆದ್ದಿದ್ದಾನೆ. ಪ್ರತಿಭೆ ಒಂದಿದ್ದರೆ, ನಾವು ನಾವಾಗಿದ್ದರೆ ಯಾರನ್ನು ಬೇಕಾದರೂ ಮಣಿಸಬಹುದು ಎಂದು ತೋರಿಸಿಕೊಟ್ಟಿದ್ದಾನೆ.
ಬಿಗ್ ಬಾಸ್ ಗೆದ್ದ ಬಳಿಕ ಹನುಮಂತನ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಹಳ್ಳಿ ಹಕ್ಕಿಯಾಗಿ ಸರಿಗಮಪ ವೇದಿಕೆಗೆ ಬಂದು ಜನರ ಮನ ಗೆದ್ದಿದ್ದ ಹನುಮಂತಗೆ ಈಗ ಬಿಗ್ ಬಾಸ್ ಗೆಲುವಿನ ರೆಕ್ಕೆಗಳು ಕೂಡ ಸಿಕ್ಕಿವೆ. ಬಿಗ್ ಬಾಸ್‌ಗೆ ಬಂದಾಗಲೇ ಹನುಮಂತ ತನ್ನ ಮದುವೆ ಬಗ್ಗೆ ಮಾತನಾಡಿದ್ದ.

ಬಿಗ್ ಬಾಸ್ ಗೆದ್ದರೆ ನಾನು ಮದುವೆಯಾಗುವುದು ಸುಲಭವಾಗುತ್ತದೆ. ಹುಡುಗಿ ಮನೆಯವರು ಸುಲಭವಾಗಿ ಒಪ್ಪುತ್ತಾರೆ ಎಂದು ಹೇಳಿದ್ದರು. ಸುದೀಪ್ ಅವರೇ ಹನುಮಂತನ ತಂದೆ-ತಾಯಿಗೆ ಅವನು ಒಪ್ಪಿದ ಹುಡುಗಿ ಜೊತೆ ಮದುವೆ ಮಾಡಿಸಿ, ನಾನು ಊಟಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ.
ಹನುಮಂತನ ಮದುವೆ ಯಾವಾಗ?
ಈಗ ಬಿಗ್ ಬಾಸ್ ಪ್ರಶಸ್ತಿಯ ಜೊತೆಗೆ 50 ಲಕ್ಷ ರೂಪಾಯಿ ಪ್ರಶಸ್ತಿ ಮೊತ್ತವನ್ನು ಗೆದ್ದಿರುವ ಹನುಮಂತನ ಮದುವೆ ದಾರಿ ಸುಲಭವಾಗಿದೆ. ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂದಿರುವ ಹಣದಲ್ಲಿ ಮನೆ ಕಟ್ಟುತ್ತೇನೆ, ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಮೂರ್ನಾಲ್ಕು ತಿಂಗಳಿನಲ್ಲೇ ಹನುಮಂತ ಮದುವೆಯಾಗುವುದು ಫಿಕ್ಸ ಆಗಿದೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ಗ್ರಾಮದ ಹನುಮಂತ ಈಗ ಕನ್ನಡಿಗರ ಮನೆ ಮಗನಾಗಿದ್ದಾನೆ.
ಬಿಗ್ ಬಾಸ್ ಗೆದ್ದ ಬಳಿಕ ನಾನು ನನ್ನ ಹುಡುಗಿಗೆ ಫೋನ್ ಮಾಡಿ ಮಾತಾಡಿದ್ದೇನೆ, ಅವಳು ಅಳ್ತಾ ಇದ್ಲು, ನಾನು ಆಕೆಗೆ ಸಮಾಧಾನ ಮಾಡಿದ್ದೇನೆ ಎಂದು ಮಾಧ್ಯಮ ಗೋಷ್ಠಿಯಲ್ಲಿ ನಾಚಿ ನೀರಾಗಿದ್ದಾನೆ ಹನುಮಂತ.
ಹನುಮಂತ ಬಿಗ್ ಬಾಸ್ ಗೆಲ್ಲುತ್ತಿದ್ದಂತೆ ಅವರ ಊರಿನಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ನಮ್ಮೂರಿನಲ್ಲಿ ಕುರಿ ಕಾಯುತ್ತಿದ್ದ ಹುಡುಗ ಇಂದು ಅಷ್ಟು ದೊಡ್ಡ ರಿಯಾಲಿಟಿ ಶೋ ಒಂದರಲ್ಲಿ ಚಾಂಪಿಯನ್ ಆಗಿರುವುದು ಸಹಜವಾಗಿಯೇ ಸಂತೋಷಕ್ಕೆ ಕಾರಣವಾಗಿದೆ.
ನಾನು ಬಿಗ್ ಬಾಸ್‌ಗೆ ಗೆಲ್ಲಬೇಕು ಎಂದು ಬಂದಿರಲಿಲ್ಲ, ಇಲ್ಲಿದ್ದು ಜಾಲಿ ಮಾಡಿ ಹೋಗೋಣ ಎಂದು ಬಂದಿದ್ದೆ. ಜನ ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ. ವೋಟ್ ಮಾಡಿ ಗೆಲ್ಲಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.












Click it and Unblock the Notifications