Bigg Boss Kannada-12: ಬಿಗ್‌ಬಾಸ್ ಕನ್ನಡ ಶುರುವಾಗೋದು ಯಾವಾಗ? ಬಿಗ್ ಅಪ್ಡೇಟ್ ಕೊಟ್ಟ ಕಲರ್ಸ್
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್-12 (Bigg Boss Kannada 12) ಶುರುವಾಗಲು ದಿನಗಣನೆ ಶುರುವಾಗಿದೆ. ಇತ್ತೀಚೆಗಷ್ಟೇ ಕಾರ್ಯಕ್ರಮದ ಆಯೋಜಕರು ಬಿಗ್‌ಬಾಸ್ ಹೊಸ ಸೀಸನ್ ಬಗ್ಗೆ ಕೆಲ ಮಹತ್ವದ ಮಾಹಿತಿ ಹಂಚಿಕೊಂಡಿತ್ತು. ಈ ಸೀಸನ್‌ನಿಂದ ಕಿಚ್ಚ ಸುದೀಪ್ ನಿರೂಪಣೆಗೆ ಬರಲ್ಲ ಎಂದು ಹೇಳಲಾಗಿತ್ತು. ಆದರೆ ಕೊನೆಗೂ ಕಿಚ್ಚನ ಮನವೊಲಿಸಿ ಮುಂದಿನ ಹಲವು ಸೀಸನ್‌ಗ ಸಾರಥ್ಯ ನೀಡಲಾಗಿದೆ. ಅಲ್ಲಿಗೆ ಪ್ರೇಕ್ಷಕರಿಗೆ ಇದ್ದ ದೊಡ್ಡ ಆತಂಕ ದೂರಾಗಿದೆ. ಇನ್ನು ಈ ಬಾರಿ ಬಿಗ್‌ಬಾಸ್ ಶುರುವಾಗುವುದು ಯಾವಾಗ? ಸ್ಪರ್ಧಿಗಳು ಯಾರು? ಎಂಬ ಕುತೂಹಲ ಮನೆಮಾಡಿದ್ದು, ಇದೀಗ ಕಲರ್ಸ್ ವಾಹಿನಿ ಬಿಗ್ ಅಪ್ಡೇಟ್ ನೀಡಿದೆ.
ಕಳೆದ ಸೀಸನ್ ವೇಳೆ ಕಿಚ್ಚ ಬಿಗ್‌ಬಾಸ್‌ಗೆ ಗುಡ್‌ಬೈ ಹೇಳಿ ಶಾಕ್ ನೀಡಿದ್ದರು. ಸುದೀಪ್ ನಿರೂಪಣೆ ಇಲ್ಲದೆ ಬಿಗ್‌ಬಾಸ್ ನೋಡೋಕಾಗಲ್ಲ ಎಂದು ಎಂದು ಪ್ರೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಸುದೀಪ್ ಅವರನ್ನೇ ಮತ್ತೆ ಬಿಗ್‌ಬಾಸ್ ನಿರೂಪಣೆಗೆ ಒಪ್ಪಿಸಲು ಕಾರ್ಯಕ್ರಮದ ಆಯೋಜಕರು ಹರಸಾಹಸಪಟ್ಟಿದ್ದರು. ಸುದೀಪ್ ಹಾಕಿದ್ದ ಒಂದಷ್ಟು ಕಂಡೀಷನ್‌ಗಳನ್ನ ಬಿಗ್‌ಬಾಸ್ ಒಪ್ಪಿದ ಹಿನ್ನೆಲೆ ಎಂದಿನಂತೆ ಕಿಚ್ಚನೇ ಈ ಶೋ ನಡೆಸಿಕೊಡುವುದು ಪಕ್ಕಾ ಆಯ್ತು. ಆದರೆ ಈ ಸೀಸನ್ ಯಾವಾಗಿನಿಂದ ಶುರುವಾಗುತ್ತೆ ಎಂದು ಪ್ರೇಕ್ಷಕರು ಉತ್ತರಕ್ಕಾಗಿ ಕಾದಿದ್ದರು. ಈ ಬಗ್ಗೆ ಕಲರ್ಸ್ ಪ್ರೋಮೋ ಹಂಚಿಕೊಳ್ಳುವ ಮೂಲಕ ಗುಡ್‌ನ್ಯೂಸ್ ಕೊಟ್ಟಿದೆ.

ವಿಭಿನ್ನ ಲೋಗೋ, ಈ ಸಲ ಕಿಚ್ಚು ಹೆಚ್ಚು!
ಪ್ರತಿ ಬಾರಿಯೂ ಕನ್ನಡ ಬಿಗ್‌ಬಾಸ್ ಲೋಗೋ ವಿಭಿನ್ನವಾಗಿರುತ್ತೆ. ಅದರಂತೆ ಈ ಬಾರಿಯೂ ಹೊಸ ಶೈಲಿಯ ಲೋಗೋವನ್ನು ಬಿಗ್‌ಬಾಸ್ ರಿಲೀಸ್ ಮಾಡಿದೆ. ಗಡಿಯಾರ, ಕ್ಯಾಮೆರಾ ಥೀಮ್‌ನಲ್ಲಿ ಈ ಬಾರಿಯ ಲೋಗೋ ಅನಾವರಣಗೊಂಡಿದೆ. ವಿಶೇಷವಾಗಿ ಈ ಲೋಗೋದಲ್ಲಿರುವ ಗಡಿಯಾರದಲ್ಲಿ ಕನ್ನಡ ಸಂಖ್ಯೆಗಳಿವೆ. ಬಿಗ್‌ಬಾಸ್ ಆಯೋಜಕರು ಬೇರೆ ಭಾಷೆಗಳಲ್ಲಿ ಕೊಡುವ ಮಹತ್ವ ಕನ್ನಡಕ್ಕೆ ಕೊಡಲಿಲ್ಲ ಎಂದು ಕಿಚ್ಚ ಸುದೀಪ್ ನೇರವಾಗಿ ಅಸಮಾಧಾನ ಹೊರಹಾಕಿದ್ದರು. ಹಾಗಾಗಿಯೇ ಕನ್ನಡಕ್ಕೆ ಪ್ರಧಾನ ಆದ್ಯತೆ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಲೋಗೋದಲ್ಲಿಯೂ ಕನ್ನಡದ ಸಂಖ್ಯೆಗಳನ್ನೇ ಬಳಸಿರಬಹುದು ಎಂಬ ಚರ್ಚೆ ಶುರುವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್-12ರ ಪ್ರೋಮೋ ಹಂಚಿಕೊಂಡಿರುವ ಕಲರ್ಸ್ ವಾಹಿನಿಯು "ಕಾದಿದ್ದು ಸಾಕು! ಬಿಗ್ ಬಾಸ್ ಈಸ್ ಬ್ಯಾಕ್! ಆದ್ರೆ...ಈ ಸಲ ಕಿಚ್ಚು ಮಾತ್ರ ಹೆಚ್ಚು!" ಎಂದು ಸುಳಿವು ಕೊಟ್ಟಿದೆ. ಈಗಾಗಲೇ ಬಿಗ್‌ಬಾಸ್ ಮನೆ ನಿರ್ಮಾಣ ಭರ್ಜರಿಯಾಗಿ ಆಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಬಿಗ್‌ಬಾಸ್ ಶುರುವಾಗುವ ದಿನಾಂಕವನ್ನ ಅಧಿಕೃತವಾಗಿ ಘೋಷಣೆ ಮಾಡಲಿದೆ.

ಸಂಭಾವ್ಯ ಸ್ಪರ್ಧಿಗಳ ಬಗ್ಗೆ ಚರ್ಚೆ
ಬಿಗ್‌ಬಾಸ್ ಶುರುವಾಗುತ್ತಿರುವ ಹಿನ್ನೆಲೆ ಸೋಷಿಯಲ್ ಮೀಡಿಯಾಗಳಲ್ಲಿ ಸ್ಪರ್ಧಿಗಳ ಬಗ್ಗೆಯೇ ಚರ್ಚೆ ಜೋರಾಗಿದೆ. ಹಲವರ ಹೆಸರು ಹರಿದಾಡುತ್ತಿದ್ದು, ಕೆಲವರು ಬಿಗ್‌ಬಾಸ್ ಮನೆ ಪ್ರವೇಶಿಸುವುದು ಫಿಕ್ಸ್ ಎಂದು ಹೇಳುತ್ತಿದ್ದಾರೆ. ಹೆಚ್ಚಾಗಿ ಕಿರುತೆರೆ ನಟ ನಟಿಯರು, ಸೋಷಿಯಲ್ ಮೀಡಿಯಾ ಸ್ಟಾರ್ ಸಿನಿಮಾಗಳು, ಕಾಂಟ್ರವರ್ಸಿಗಳ ಮೂಲಕ ಗಮನ ಸೆಳೆದವರು ಹಾಗೂ ಸೆಲೆಬ್ರಿಟಿಗಳ ಹೆಸರು ಎಲ್ಲೆಡೆ ಸೌಂಡ್ ಮಾಡತ್ತಿವೆ. ಆದರೆ ಅಧಿಕೃತವಾಗಿ ಬಿಗ್‌ಬಾಸ್ ಯಾವ ಸ್ಪರ್ಧಿಯ ಹೆಸರನ್ನೂ ರಿವೀಲ್ ಮಾಡಿಲ್ಲ.












Click it and Unblock the Notifications