Bigg Boss: ಚಾಕಲೇಟ್ ನೂಡಲ್ ಸಮೋಸ ತಯಾರಿಸಿದ ಹನುಮಂತ- ಸೂಪರ್ ಆಗಿದ್ದರೂ ಅಂಕ ಸಿಕ್ಕಿದ್ದು ಎದುರಾಳಿ ತಂಡಕ್ಕೆ..
ಬಿಗ್‌ಬಾಸ್ ಮನೆಯಲ್ಲಿ ಸದಾ ಹಾಡು ಹೇಳಿ ವೀಕ್ಷಕರನ್ನು ರಂಜಿಸುತ್ತಿದ್ದ ಗಾಯಕ ಹನುಮಂತ ಈಗ ಅಡುಗೆ ಮಾಡಲು ಶುರು ಮಾಡಿದ್ದಾರೆ. ಅದು ರೊಟ್ಟಿ, ಮಂಡಕ್ಕಿ, ಮಿರ್ಜಿ ಇರಬೇಕು ಅಂತೆಲ್ಲಾ ನೀವು ಅಂದುಕೊಳ್ಳಬೇಡಿ. ಹನುಮಂತ ತನ್ನ ಕೈಯಾರೆ ಚಾಕಲೇಟ್ ನೂಡಲ್ ಸಮೋಸ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಹನುಮಂತ ಚಾಕಲೇಟ್ ನೂಡಲ್ ಸಮೋಸವನ್ನು ರುಚಿ ರುಚಿಯಾಗಿ ತಯಾರಿಸಿದ್ದು ಅದನ್ನು ಸವಿದು ಮನೆ ಜನ ಖುಷಿ ಪಟ್ಟು ಹನುಮಂತನನ್ನು ಪ್ರಶಂಸಿಸಿದ್ದಾರೆ.
ಹೌದು.. ಬಿಗ್‌ಬಾಸ್ ಈ ವಾರ ಸ್ಪರ್ಧಿಗಳಿಗೆ ವಿನೂತನ ಟಾಸ್ಕ್ ಅನ್ನು ನೀಡಿದ್ದಾರೆ. ಈ ಟಾಸ್ಕ್‌ನಲ್ಲಿ ಎರಡು ಚಾನೆಲ್‌ಗಳಾಗಿ ಎರಡು ತಂಡಗಳನ್ನು ನಿರ್ಮಿಸಲಾಗಿದೆ. ಒಂದು ತಂಡದಲ್ಲಿ ಧನ್‌ರಾಜ್ ಮೇಲ್ವಿಚಾರಕರಾಗಿದ್ದರೆ, ಇನ್ನೊಂದು ತಂಡದಲ್ಲಿ ಗೋಲ್ಡ್ ಸುರೇಶ್ ಮೇಲ್ವಿಚಾರಕರಾಗಿದ್ದಾರೆ. ಕಳೆದ ದಿನ ಬಿಗ್‌ಬಾಸ್ ಈ ಎರಡು ತಂಡಗಳಿಗೆ ಎರಡು ಟಾಸ್ಕ್ ಅನ್ನು ನೀಡಿದ್ದರು. ಮೊದಲನೇ ಟಾಸ್ಕ್‌ನಲ್ಲಿ ವಾರ್ತೆಗಳನ್ನು ಓದುವುದು. ಮತ್ತೊಂದು ಅಡುಗೆ ಮಾಡುವುದು.

ಅಡುಗೆ ಮಾಡುವ ಟಾಸ್ಕ್‌ನಲ್ಲಿ ತಂಡದ ಒಬ್ಬ ಸದಸ್ಯರು ಮಾತ್ರ ಅಡುಗೆಯನ್ನು ಮಾಡಬೇಕು. ಉಳಿದ ಸದಸ್ಯರು ಅವರಿಗೆ ಯಾವ ಪದಾರ್ಥಗಳನ್ನು ಹಾಕಿ ಅಡುಗೆ ಮಾಡಬೇಕು ಎಂದು ತಿಳಿಸಬೇಕು. ಆದರೆ ಅಡುಗೆ ಮಾಡುವ ಸದಸ್ಯನ ಕಿವಿಗೆ ಹೆಡ್‌ಫೋನ್ ಹಾಕಲಾಗಿರುತ್ತದೆ. ತಂಡದ ಸದಸ್ಯರು ಹೇಳಿರುವುದು ಕೇಳಿಸದಂತೆ ಹಾಡನ್ನು ಪ್ಲೈ ಮಾಡಲಾಗಿರುತ್ತದೆ. ಈ ನಡುವೆ ಅಡುಗೆ ಮಾಡುವ ಸದಸ್ಯ ಹಾಡಿನ ಕಡೆಗೆ ಗಮನ ಕೊಡದೆ ತಮ್ಮ ತಂಡದ ಸದಸ್ಯರು ಹೇಳಿದ ಮಾತುಗಳ ಕಡೆಗೆ ಗಮನ ಹರಿಸಿ ಅಡುಗೆ ಮಾಡಬೇಕು.
ಈ ಟಾಸ್ಕ್‌ನಲ್ಲಿ ಧನರಾಜ್ ತಂಡದಿಂದ ಹನುಮಂತ ಅಡುಗೆ ಮಾಡಿದರೆ, ಗೋಲ್ಡ್ ಸುರೇಶ್ ತಂಡದಿಂದ ತ್ರಿವಿಕ್ರಮ್ ಅಡುಗೆ ಮಾಡುತ್ತಾರೆ. ಇವರಿಬ್ಬರೂ ಅಡುಗೆ ಮಾಡುವ ಸಮಯದುದ್ದಕ್ಕೂ ಸಖತ್ ಎಂಜಾಯ್ ಮಾಡಿದ್ದಾರೆ ಬಿಗ್‌ಬಾಸ್ ವೀಕ್ಷಕರು. ಯಾಕೆಂದರೆ ತಂಡದ ಸದಸ್ಯರು ಹೇಳುವ ಮಾತು ಅಡುಗೆ ಮಾಡುವವರಿಗೆ ಕೇಳಿಸುವುದಿಲ್ಲ, ಅರ್ಥ ಕೂಡ ಆಗುವುದಿಲ್ಲ. ಹನುಮಂತನ ಕಿವಿ ಎಷ್ಟೇ ಶಾರ್ಪ್ ಆಗಿದ್ದರೂ ಕೂಡ ಮತ್ತೊಮ್ಮೆ ಹೇಳಿ, ಮಗದೊಮ್ಮೆ ಹೇಳಿ ಅಂತ ಕೇಳುತ್ತಲೇ ಇರುತ್ತಾರೆ. ಹೀಗೆ ನಗಾಡಿ ಸುಸ್ತಾಗಿ ಹನುಮಂತನ ಕೈಯಲ್ಲಿ ಅಡುಗೆ ಮಾಡಿಸುತ್ತಾರೆ ತಂಡದ ಉಳಿದ ಸದಸ್ಯರು.
ಮೊದಲ ಬಾರಿಗೆ ಅಡುಗೆ ಮಾಡಿದ ಹನುಮಂತ
ಹಿಂದೆಂದೂ ಕೂಡ ಅಡುಗೆ ಮಾಡದ ಹನುಮಂತ ಮೊದಲ ಬಾರಿಗೆ ಕೈಯಲ್ಲಿ ಚಮಚ, ತಲೆಯ ಮೇಲೆ ಒಂದು ಟೋಪಿ ಹಾಕಿಕೊಂಡು ಹಾಡು ಹಾಡುತ್ತಾ, ಡ್ಯಾನ್ಸ್ ಮಾಡುತ್ತಾ ಜಾಲಿ ಜಾಲಿಯಾಗಿ ಅಡುಗೆಯನ್ನು ತಯಾರಿಸಿದ್ದಾರೆ. ಟೈಮ್ ಮುಗಿದು ಹೋಗುತ್ತೆ ಅನ್ನೋ ಭಯದಲ್ಲಿ ತಂಡದ ಸದಸ್ಯರು ಅವಸರದಲ್ಲೇ ಅಡುಗೆ ಪದಾರ್ಥಗಳನ್ನು ಒಂದೊಂದಾಗಿ ಹಾಕಲು ಹನುಮಂತನಿಗೆ ಸೂಚಿಸುತ್ತಲೇ ಇರುತ್ತಾರೆ. ಆದರೆ ಹನುಮಂತ ಮಾತ್ರ ಏನೋ ಹಾಕಲು ಹೋಗಿ ಇನ್ನೇನೋ ಹಾಕಿ ಚಾಕಲೇಟ್ ನೂಡಲ್ ಸಮೋಸವನ್ನು ತಯಾರಿಸುತ್ತಾರೆ.

ಹನುಮಂತನಿಗೆ ಅದೆಷ್ಟೋ ಪದಾರ್ಥಗಳು ಅರ್ಥ ಆಗೋದೇ ಇಲ್ಲ. ಇದರಿಂದಾಗಿ ಹನುಮಂತ ಆಗಾಗ ಕೋಪಗೊಳ್ಳುತ್ತಾ ಧನ್‌ರಾಜ್ ಅವರನ್ನು ಬೈದುಕೊಳ್ಳುತ್ತಲೇ ಇದ್ದರೂ ಅದು ತುಂಬಾ ಗಂಭೀರವಾಗಿಯೇನೋ ಕಾಣಿಸುವುದಿಲ್ಲ. ಬದಲಾಗಿ ಕಾಮಿಡಿ ಮಾಡಿದಂತೆ ಕಾಣಿಸುತ್ತದೆ.
ಅಡುಗೆಯಲ್ಲೂ ಫೇವರ್ ಗೇಮ್
ಕಳೆದ ವಾರ ಬಿಗ್‌ಬಾಸ್ ಸ್ಪರ್ಧಿಗಳು ಮಾಡಿದ ತಪ್ಪನ್ನು ಸುದೀಪ್ ಮನವರಿಕೆ ಮಾಡಿದ್ರೂ ಈ ವಾರವೂ ಅದು ಮುಂದುವರೆದಂತೆ ಕಾಣಿಸುತ್ತಿದೆ. ಕಳೆದ ವಾರದ ಫೇವರ್ ಗೇಮ್ ಸುದೀಪ್ ತೆರೆ ಎಳೆದಿದ್ದರೂ ಕೂಡ ಈ ವಾರವೂ ಅದು ಮುಂದುವರೆದಂತೆ ಕಾಣಿಸುತ್ತಿದೆ. ಹನುಮಂತ ಮಾಡಿದ ಚಾಕಲೇಟ್ ನೂಡಲ್ ಸಮೋಸ ತಿಂದು ತುಂಬಾ ಚೆನ್ನಾಗಿತ್ತು ಅಂತ ತಂಡದ ಸದಸ್ಯರು ಹೇಳುತ್ತಾರೆ. ಆದರೆ ತ್ರಿವಿಕ್ರಮ್ ಮಾಡಿದ ಚಾಕಲೇಟ್ ನೂಡಲ್ ಸಮೋಸ ನೋಡಲು ಚೆನ್ನಾಗಿದ್ದರೂ ತಿನ್ನಲು ಚೆನ್ನಾಗಿದೆ ಎಂದು ಹೇಳಿದವರು ಭವ್ಯ ಮಾತ್ರ. ತ್ರಿವಿಕ್ರಮ್‌ಗಿಂತ ಹನುಮಂತ ಮಾಡಿದ ಚಾಕಲೇಟ್ ನೂಡಲ್ ಸಮೋಸಗೆ ಸಿಕ್ಕಾಪಟ್ಟೆ ಲೈಕ್ಸ್ ಬಂತು. ಆದರೆ ಅತೀ ಹೆಚ್ಚು ಅಂಕ ಗಳಿಸಿದ್ದು ಮಾತ್ರ ತ್ರಿವಿಕ್ರಮ್ ತಂಡದವರು. ಅಂದರೆ ಗೋಲ್ಡ್ ಸುರೇಶ್ ತಂಡದವರು.
ಒಟ್ಟಾರೆಯಾಗಿ ಬಿಗ್‌ಬಾಸ್ ಮನೆಯಲ್ಲಿ ಫೇವರ್ ಗೇಮ್‌ಗೆ ತೆರೆ ಬೀಳುವ ಲಕ್ಷಣಗಳು ಈ ವಾರದಲ್ಲೂ ಇಲ್ಲವೆಂಬಂತೆ ಕಾಣಿಸುತ್ತಿದೆ. ಹೀಗಾಗಿ ಇದು ಯಾವ ಹಂತಕ್ಕೆ ಹೋಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.












Click it and Unblock the Notifications