Holiday: ಮಲಯಾಳಂ ಸಿನಿಮಾ ನೋಡಲು ಬೆಂಗಳೂರಿನ ಕಾಲೇಜಿಗೆ ರಜೆ ಘೋಷಣೆ
ಸಾಮಾನ್ಯವಾಗಿ ಯಾವುದಾದರೂ ವಿಶೇಷ ದಿನಗಳು, ಹಬ್ಬಹರಿದಿನಗಳು, ಬಂದ್ ಸೇರಿದಂತೆ ವಿವಿಧ ಕಾರಣಗಳಿಗೆ ಮಾತ್ರವೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುತ್ತಾರೆ. ಆದರೆ, ಬೆಂಗಳೂರು ಕಾಲೇಜು ದಿಢೀರನೆ ವಿದ್ಯಾರ್ಥಿಗಳಿಗೆ ಇದೇ ಮಾರ್ಚ್ 27ರಂದು ರಜೆ ಘೋಷಿಸಿದೆ. ಆದರೆ ಆ ದಿನ ಯಾವುದೇ ವಿಶೇಷ ದಿನವೂ ಅಲ್ಲ. ವಿದ್ಯಾರ್ಥಿಗಳು ಸಾಮಾನ್ಯವಾಗಿ ಕಾಲೇಜು ಬಂಕ್ ಮಾಡಿ ಸಿನಿಮಾಗಳಿಗೆ ಹೋಗುವುದು ಹಳೆಯ ಟ್ರೆಂಡ್ ಆದ್ರೆ, ಈಗ ಕಾಲೇಜು ಕಡೆಯಿಂದಲೇ ಸಿನಿಮಾ ಕಳಿಸಿಕೊಡುವ ಟ್ರೆಂಡ್ ಶುರುವಾಗಿದೆ. ರಜೆ ಕೊಟ್ಟು, ಫ್ರೀಯಾಗಿ ಟಿಕೆಟ್ ಕೂಡ ಕೊಟ್ಟು ಕಳಿಸಿಕೊಡುತ್ತಿದೆಯಂತೆ ಬೆಂಗಳೂರಿನ ಈ ಕಾಲೇಜು. ಆದ್ರೆ ರಜೆ ಘೋಷಿಸಿರೋದು ಕನ್ನಡ ಸಿನಿಮಾ ನೋಡಕಂತೂ ಅಲ್ಲ. ಈ ವಿಚಾರ ಕೇಳಿದ್ರೆ ಕನ್ನಡಿಗರು ಗರಂ ಆಗೋದು ಗ್ಯಾರಂಟಿ..
ಹೌದು, ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳಿಗೆ ಸಿನಿಮಾ ನೋಡಿ ಬರಲು ರಜೆ ಘೋಷಿಸಿದೆ. ಆದರೆ ಇದು ಕನ್ನಡ ಸಿನಿಮಾ ಪ್ರೋತ್ಸಾಹಿಸುವುದಕ್ಕಂತೂ ಅಲ್ಲ. ಈಗಾಗಲೇ ವಲಸಿಗರ ಸ್ವರ್ಗ ಎನಿಸಿಕೊಂಡಿರೋ ಬೆಂಗಳೂರಿನಲ್ಲಿ ಪರಭಾಷೆಯ ಸಿನಿಮಾ ನೋಡಲು ಇಡೀ ಕಾಲೇಜಿಗೆ ರಜೆ ಘೋಷಿಸಿರುವುದಾಗಿ ವರದಿಯಾಗಿದೆ. ಮಲಯಾಳಂ ನಟ ಮೋಹನ್ ಲಾಲ್ ಅವರು ನಟಿಸಿರುವ L2: Empuraan ಸಿನಿಮಾ ನೋಡಿ ಎಂಜಾಯ್ ಮಾಡಲು ಮಾರ್ಚ್ 27ರಂದು ರಜೆ ಘೋಷಿಸಿದೆ. ರಜೆ ಮಾತ್ರವಲ್ಲದೆ, ಕಾಲೇಜು ಆಡಳಿತ ಮಂಡಳಿಯೇ ವಿದ್ಯಾರ್ಥಿಗಳಿಗೆ ಫ್ರೀ ಟಿಕೆಟ್ ಕೂಡ ಕೊಟ್ಟು ಕಳಿಸುತ್ತಿದೆಯಂತೆ.

ಬೆಂಗಳೂರಿನಲ್ಲಿರುವ ಗುಡ್ ಶೆಫರ್ಡ್ ಕಾಲೇಜು ತನ್ನ ಎಲ್ಲ ವಿದ್ಯಾರ್ಥಿಗಳಿಗೆ ಈ ಸಂಬಂಧ ಸುತ್ತೋಲೆ ಹೊರಡಿಸಿದೆ ಎಂದು ವರದಿಯಾಗಿದೆ. ಅದರಲ್ಲಿ "ಲೈಟ್ಸ್, ಕ್ಯಾಮೆರಾ, ಹಾಲಿಡೇ! ಉತ್ಸಾಹ ಮತ್ತು ಅಭಿಮಾನಿಗಳು ಒಂದಾದಾಗ, ಇತಿಹಾಸ ನಿರ್ಮಾಣವಾಗುತ್ತದೆ. ಲಾಲೆಟ್ಟನ್ ಅವರ ನಿಷ್ಠಾವಂತ ಅಭಿಮಾನಿಯಾಗಿರುವ ನಮ್ಮ ಪ್ರೀತಿಯ ಮೋಹನ್ ಲಾಲ್ ಅವರ ಪ್ರತಿಭೆ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ದಾರ್ಶನಿಕ ನಿರ್ದೇಶನವನ್ನು ಗೌರವಿಸಲು ಎಂಪೂರನ್ ಸಿನಿಮಾದ ವಿಶೇಷ ಸಿನಿಮಾ ಪ್ರದರ್ಶನವನ್ನು ಆಯೋಜಿಸಿದ್ದಾರೆ. ಇದು ಕೇವಲ ಒಂದು ಸಿನಿಮಾವಲ್ಲ, ಇದು ಒಂದು ವಿದ್ಯಮಾನ" ಎಂದು ಹೇಳಿದೆ.
ಕಾಲೇಜು ಆಡಳಿತ ಮಂಡಳಿ ಹಂಚಿಕೊಂಡ ಮಾಹಿತಿಯ ಪ್ರಕಾರ ಮೋಹನ್ ಲಾಲ್ ಅವರ ಮೇಲೆ ಕಾಲೇಜು ನಿರ್ದೇಶಕರು ಪ್ರೀತಿಯ ಬದಲಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ವೈಜಿಆರ್ ಮಾಲ್‌ನ ಮೂವೀಟೈಮ್ ಸಿನಿಮಾಸ್‌ನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 7 ಗಂಟೆಯ ಪ್ರದರ್ಶನವನ್ನು ಆಡಳಿತ ಮಂಡಳಿ ಕಾಯ್ದಿರಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ. ಕಾಲೇಜಿನ ನಿರ್ದೇಶಕರು ಮಲಯಾಳಂ ಹಿರಿಯ ನಟ ಮೋಹನ್ ಲಾಲ್ ಅವರ ದೊಡ್ಡ ಅಭಿಮಾನಿ. ಹಾಗಾಗಿ ಕಾಲೇಜು ಆಡಳಿತ ಮಂಡಳಿಯೇ ರಜೆ ಘೋಷಿಸಿ, ಚಿತ್ರದ ಬಿಡುಗಡೆ ದಿನದಂದು ವಿಶೇಷ ಪ್ರದರ್ಶನವನ್ನು ಆಯೋಜಿಸಿದೆ. ಕಾಲೇಜು ಆಡಳಿತ ಮಂಡಳಿಯ ಈ ನಿರ್ಧಾರದ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ.

2019ರಲ್ಲಿ ಈ ಸಿನಿಮಾದ ಮೊದಲ ಭಾಗ ರಿಲೀಸ್ ಆಗಿತ್ತು. ಇದರ ಯಶಸ್ಸಿನ ನಂತರ ಇದೀಗ ಸೀಕ್ವೆಲ್ ಕೂಡ ಬರುತ್ತಿದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ "ಎಲ್ 2: ಎಂಪುರಾನ್" ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಪ್ರಮುಖವಾಗಿದೆ. ಮೋಹನ್ ಲಾಲ್ ಜೊತೆಗೆ, ಟೋವಿನೋ ಥಾಮಸ್, ಅಭಿಮನ್ಯು ಸಿಂಗ್, ಇಂದ್ರಜಿತ್ ಸುಕುಮಾರನ್, ಮಂಜು ವಾರಿಯರ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.












Click it and Unblock the Notifications