ನಟಿ ಅನುಷ್ಕಾ ಶೆಟ್ಟಿ ಜೊತೆ ಸೇರಿಕೊಂಡ ಯಶ್ ತಾಯಿ ಪುಷ್ಪ, ಏನಿದು ಹೊಸ ಸುದ್ದಿ?
ಅನುಷ್ಕಾ ಶೆಟ್ಟಿ ಅವರು ಮೂಲತಃ ಕನ್ನಡದವರೇ ಆದರೂ ಕನ್ನಡದ ಯಾವ ಸಿನಿಮಾದಲ್ಲೂ ಇಲ್ಲಿವರೆಗೆ ನಟಿಸಲೇ ಇಲ್ಲ. ಅನುಷ್ಕಾ ಅವರನ್ನು ಕನ್ನಡ ಸಿನಿಮಾದಲ್ಲಿ ನೋಡಬೇಕು ಎನ್ನುವುದು ಕನ್ನಡಿಗರ ಬಹುಕಾಲದ ಆಸೆ. ಇತ್ತ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅವರು ಈಗಷ್ಟೇ ನಿರ್ಮಾಪಕಿಯಾಗಿ ಕಾಲಿಟ್ಟಿದ್ದಾರೆ. ತಮ್ಮ ಪಿಎ ಪ್ರೊಡಕ್ಷನ್ಸ್ ಮೂಲಕ "ಕೊತ್ತಲವಾಡಿ" ಸಿನಿಮಾ ನಿರ್ಮಿಸಿ, ಅಖಾಡಕ್ಕೆ ಇಳಿದಿದ್ದಾರೆ. ಇದರ ನಡುವೆ ಪುಷ್ಪ ಅವರು ಅನುಷ್ಕಾ ಶೆಟ್ಟಿ ಅವರೊಂದಿಗೆ ಜೊತೆಯಾಗುವ ಮೂಲಕ ಹೊಸ ಸಿಹಿಸುದ್ದಿ ನೀಡಿದ್ದಾರೆ.
ಅನುಷ್ಕಾ ಶೆಟ್ಟಿ ಅವರು ಇತ್ತೀಚೆಗೆ ಕೆಲವೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಟಾಪ್ ನಟಿಯಾಗಿದ್ದ ಅವರು ಬಾಹುಬಲಿ ಬಳಿಕ ತುಸು ಬ್ರೇಕ್ ಪಡೆದುಕೊಂಡಿದ್ದರು. ಇದೀಗ "ಘಾಟಿ" ಸಿನಿಮಾ ಮೂಲಕ ಅನುಷ್ಕಾ ಶೆಟ್ಟಿ ಅಬ್ಬರಿಸಲು ರೆಡಿಯಾಗಿದ್ದಾರೆ. ನಿರ್ದೇಶಕ ಕ್ರಿಶ್ ಜಾಗರ್ಲಮುಡಿ ಘಾಟಿ ಸಿನಿಮಾ ನಿರ್ದೇಶಿಸಿದ್ದು, ಚಿತ್ರದ ಟೀಸರ್ ಮತ್ತು ಟ್ರೇಲರ್ ವೈರಲ್ ಆಗಿದೆ. ಸೆಪ್ಟೆಂಬರ್ 5ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ಯಶ್ ತಾಯಿ ಅವರು ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ.

ನಿರ್ಮಾಪಕಿಯಾಗಿರುವ ಪುಷ್ಪ ಅವರು ಘಾಟಿ ಸಿನಿಮಾವನ್ನು ಕರ್ನಾಟಕದಾದ್ಯಂತ ವಿತರಣೆ ಮಾಡಲು ಮುಂದಾಗಿದ್ದಾರೆ. ಈ ಮೂಲಕ ವಿತರಕಿಯಾಗಿಯೂ ಜವಾಬ್ದಾರಿ ಹೊತ್ತಿದ್ದಾರೆ. ತಮ್ಮ ಪಿಎ ಪ್ರೊಡಕ್ಷನ್ಸ್ ಮೂಲಕ ಶ್ರೀಧರ್ ಕೃಪ ಕಂಬೈನ್ಸ್ ಜೊತೆಗೂಡಿ ಇದೇ ಮೊದಲ ಬಾರಿಗೆ ಅನುಷ್ಕಾ ಶೆಟ್ಟಿ ಅವರ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ "ಘಾಟಿ"ಯನ್ನು ಪುಷ್ಪ ಅವರು ರಾಜ್ಯದಲ್ಲಿ ವಿತರಣೆ ಮಾಡಲಿದ್ದಾರೆ.
ಫಾಟಿ ಸಿನಿಮಾ ಮೂಲಕ ತಮ್ಮ ಪ್ರೊಡಕ್ಷನ್‌ನಲ್ಲಿ ಸಿನಿಮಾ ವಿತರಣೆ ಆರಂಭಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕನ್ನಡ ಸೇರಿದಂತೆ ಎಲ್ಲ ಭಾಷೆಗಳ ಸಿನಿಮಾಗಳನ್ನ ಪಿಎ ಪ್ರೊಡಕ್ಷನ್ಸ್ ಮೂಲಕ ವಿತರಣೆ ಮಾಡಲಿದ್ದೇವೆ. ಸಿನಿಮಾ ನಿರ್ಮಾಣಕ್ಕೆ ಬಂದಾಗ ಎಲ್ಲ ತೋರಿದ ಪ್ರೀತಿಗೆ ಧನ್ಯವಾದಗಳು. ಈಗ ವಿತರಕಿಯಾಗಿಯೂ ನಾನು ಹೊಸ ಹೆಜ್ಜೆ ಇಡುತ್ತಿದ್ದೇನೆ. ಇದಕ್ಕೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಪುಷ್ಪ ಅರುಣ್ ಕುಮಾರ್ ಸಂತಸ ಹಂಚಿಕೊಂಡಿದ್ದಾರೆ.
ಅನುಷ್ಕಾ ಶೆಟ್ಟಿಗೆ ಕನ್ನಡ ಸಿನಿಮಾ ಮಾಡಿ
ಘಾಟಿ ಸಿನಿಮಾ ಮೂಲಕ ಅನುಷ್ಕಾ ಶೆಟ್ಟಿ ಸಿನಿಮಾಗೆ ಪುಷ್ಪ ಅವರು ಬೆನ್ನುತಟ್ಟುತ್ತಿರುವ ಹಿನ್ನೆಲೆ ಅವರಿಗೆ ಕನ್ನಡ ಪ್ರೇಕ್ಷಕರು ವಿಶೇಷ ಬೇಡಿಕೆ ಇಡುತ್ತಿದ್ದಾರೆ. ನಿಮ್ಮ ಮೂಲಕವಾದರೂ ಅನುಷ್ಕಾ ಶೆಟ್ಟಿ ಅವರು ಕನ್ನಡಕ್ಕೆ ಬರಲಿ ಎನ್ನುತ್ತಿದ್ದಾರೆ. ಸಾಧ್ಯವಾದರೆ ನಿಮ್ಮ ಪ್ರೊಡಕ್ಷನ್‌ನಲ್ಲೇ ಅನುಷ್ಕಾ ಅವರಿಗೆ ಒಂದು ಸಿನಿಮಾ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಘಾಟಿ ಕಥೆ ಏನು?
ಆಂಧ್ರ-ಒರಿಸ್ಸಾ ಗಡಿಯಲ್ಲಿರುವ ಪರ್ವತ ಶ್ರೇಣಿಗಳಲ್ಲಿ ವಾಸಿಸುವ ಜನರ ಜೀವನದ ಬಗ್ಗೆ ಘಾಟಿ ಸಿನಿಮಾ ಮೂಡಿಬಂದಿದೆ. ಈ ಚಿತ್ರವು ಒಂದು ಕಾದಂಬರಿ ಹಿನ್ನೆಲೆಯನ್ನು ಒಳಗೊಂಡ ಕಾಲ್ಪನಿಕ ಕಥೆಯಾಗಿದೆ. ಈ ಚಿತ್ರವು ಅನುಷ್ಕಾ ಅವರ ಆಕ್ಷನ್ ಸಿನಿಮಾ. ಇದರಲ್ಲಿ ಅನುಷ್ಕಾ ಅವರ ಅಭಿನಯವು ಅವರ ವೃತ್ತಿಜೀವನದಲ್ಲೇ ಅತ್ಯುತ್ತಮವಾದದ್ದು ಎಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಟೀಸರ್ ಮತ್ತು ಟ್ರೇಲರ್‌ನಲ್ಲಿ ಸ್ವೀಟಿ ಮಿಂಚಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.












Click it and Unblock the Notifications