ಕೊನೆಯ ಶೋನೂ ಕಂಪ್ಲೀಟ್ ಮಾಡಲಿಕ್ಕಾಗಿಲ್ಲ, ಬೇಸರದಿಂದಲೇ ಆ್ಯಂಕರಿಂಗ್‌ಗೆ ಗುಡ್ ಬೈ ಹೇಳಿದ ಅನುಪಮಾ ಗೌಡ
Anupama Gowda Ends her Anchoring Career: ಅನುಪಮಾ ಗೌಡ ಅಂದಾಗ ನೆನಪಾಗೋದು ʼಅಕ್ಕʼ ಸೀರಿಯಲ್. ಆ ಸೀರಿಯಲ್‌ನಲ್ಲಿ ಅನುಪಮಾ ಅವರ ಅಭಿನಯ ನೋಡಿದವರು ಮತ್ತೇನೂ ಯೋಚಿಸದೇ ಅವರ ಫ್ಯಾನೇ ಆಗಿ ಬಿಟ್ಟಿದ್ದರು. ಏಕೆಂದರೆ ಆ ಪಾತ್ರಕ್ಕೆ ಆ ಮಟ್ಟಿನ ಎಮೋಶನ್, ಪ್ರೀತಿ ಎಲ್ಲ ಕೊಟ್ಟು ಅದನ್ನು ಅನುಪಮಾ ಬಿಟ್ಟು ಮತ್ಯಾರು ಮಾಡ್ತಿದ್ದರೂ ಇಷ್ಟು ಚೆನ್ನಾಗಿ ಮಾಡೋದಕ್ಕೆ ಸಾಧ್ಯವಿಲ್ಲ ಎಂಬಂತೆ ನಟಿಸಿದವರು ಅನುಪಮಾ. ಆಮೇಲೆ ಏನಾಯ್ತೋ ಗೊತ್ತಿಲ್ಲ, ಅಷ್ಟಾಗಿ ಸೀರಿಯಲ್‌ನಲ್ಲಿ ನಟಿಸಲಿಲ್ಲ. ಆದರೆ ನಿರೂಪಣೆ ಮಾಡಲು ಶುರು ಮಾಡಿದರು. ಅನೇಕ ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಜನರ ಮನಗೆದ್ದರು. ಆದರೆ ಈಗ ಅದನ್ನೂ ನಿಲ್ಲಿಸೋದಾಗಿ ಹೇಳಿದ್ದಾರೆ.

ಯೂಟ್ಯೂಬ್‌ನಲ್ಲಿ ಎಮೋಶನಲ್ ಮಾತು
ʼನನ್ನ ಪ್ರೀತಿಯ ಕನ್ನಡದ ಮನಸ್ಸುಗಳಿಗೆ ನಿಮ್ಮ ಅನುಪಮಾ ಮಾಡುವ ಪ್ರೀತಿಯ ನಮಸ್ಕಾರ. ಪ್ರತೀ ಶೋ ದಲ್ಲಿ ಶನಿವಾರ ಭಾನುವಾರ ನಾನು ಇದೇ ಥರ ನಿಮ್ಮನ್ನು ವೆಲ್ಕಂ ಮಾಡುತ್ತಿದ್ದೆ. ಈಗ ನಿರೂಪಣೆಯ ಹೆಡ್ ಗೇರ್ ಮತ್ತು ಲ್ಯಾಪಲ್ ಮೈಕ್ ಮತ್ತು ಸ್ಕ್ರಿಪ್ಟ್ ಅನ್ನು ತೆಗೆದಿಡುವ ಸಮಯ ಬಂದಿದೆ. ಇದನ್ನೆಲ್ಲ ಯಾಕೆ ಹೇಳ್ತಿದ್ದೀನಿ ಅಂದರೆ ಇದು ನನ್ನ ಕಡೆಯಿಂದ ಕೃತಜ್ಞತೆ. ನನ್ನ ಮಾತು, ನನ್ನ ಕನ್ನಡ, ನಿಂತುಕೊಳ್ಳುವ ಭಂಗಿ, ವಾಯ್ಸ್ ಮಾಡಿಲೇಶನ್ ಎಲ್ಲವನ್ನೂ ತಿದ್ದಿ ಆಂಕರಿಂಗ್ ನಲ್ಲಿ ಪುಟ್ಟ ಮಕ್ಕಳೂ ಇಷ್ಟಪಡುವಂತೆ ಮಾಡಿದ್ದು ನೀವು. ನನ್ನ ಆಂಕರಿಂಗ್ ಜರ್ನಿ ಕೊನೆಗೊಳಿಸೋದನ್ನು ನಾನೇ ನನ್ನ ಕಡೆಯಿಂದಲೇ ತಿಳಿಸಬೇಕು ಅನ್ನುವದಿತ್ತು. ಹಾಗಾಗಿ ಈ ವೀಡಿಯೋ ಮಾಡುತ್ತಿದ್ದೇನೆʼ ಎಂದು ಅನುಪಮಾ ಎಮೋಷನಲ್ ಆಗಿ ನಿರೂಪಣೆಗೆ ಗುಡ್ ಬೈ ಹೇಳುತ್ತಿರುವಾಗಿ ತಿಳಿಸಿದ್ದಾರೆ.
8 ವರ್ಷಗಳ ನಿರೂಪಣಾ ಜರ್ನಿ
ಜೂನ್ 22, 2018 ಮೊದಲ ಆಂಕರಿಂಗ್ ಮಾಡಿದ್ದು. ಅದು ರಿಯಾಲಿಟಿ ಶೋಗಾಗಿ ಅಲ್ಲ, ಬದಲಿಗೆ ಸೀರಿಯಲ್ ಸಂತೆ ಕಾರ್ಯಕ್ರಮಕ್ಕಾಗಿ. ಆದರೆ ಇದಕ್ಕೂ ಎರಡು ವರ್ಷದ ಹಿಂದೆಯೇ ನಿರೂಪಣೆ ಶುರು ಮಾಡಬೇಕಿತ್ತು. ಯಾವ್ಯಾವುದೋ ಕಾರಣಕ್ಕೆ ಅದು ಸಾಧ್ಯ ಆಗಿರಲಿಲ್ಲ. ನಾನು ನನ್ನ ಕೊನೆಯ ಶೋಗಾಗಿ ವೇದಿಕೆ ಹತ್ತಿದ್ದ ಮೇ 5, 2026. ಅದೇ ನನ್ನ ಕೊನೆಕೊನೆಯ ಶೋ ಆಗಿತ್ತು. ಅದೇ ನನ್ನ ಕೊನೆಯ ಶೋ ಅಂತಲೂ ಅಂದುಕೊಂಡಿರಲಿಲ್ಲ. ಆದರೆ ಎಲ್ಲ ಸೇರಿ ಅದುವೇ ಕೊನೆಯ ಶೋ ಆಯ್ತು. ಅಂದರೆ ಕೈಗೆತ್ತಿಕೊಂಡ ನಿರೂಪಣೆಯನ್ನೂ ಕಂಪ್ಲೀಟೂ ಮಾಡಲಿಕ್ಕಾಗಿಲ್ಲ. ಅದೇ ಸ್ಯಾಡ್. ಇಷ್ಟು ವರ್ಷಗಳಲ್ಲಿ ಇದೊಂದು ಶೋ ಅರ್ಧಕ್ಕೆ ನಿಲ್ಲಿಸಬೇಕಾಯ್ತು. ಹಾಗೇ ನನ್ನ ನಿರೂಪಣಾ ಜರ್ನಿಯೂ ಮುಗಿಯುತ್ತಿದೆ.
ವಾಹಿನಿಯ ಕೆಲವು ಪ್ರಾಮಿಸ್‌ಗಳಿಂದ ಹೀಗಾಯ್ತು ಎಂದ ನಟಿ
ತಾನು ನಿರೂಪಣೆಯಿಂದ ಆಚೆಬರುವುದಕ್ಕೆ ಕಾರಣ ಇದೆ. ವಾಹಿನಿಯ ಕೆಲವು ಪ್ರಾಮಿಸ್‌ಗಳು ಈ ನಿರ್ಧಾರಕ್ಕೆ ಮುಖ್ಯ ಕಾರಣವಾಗಿವೆ ಎಂದೂ ನಟಿ ಹೇಳಿದ್ದಾರೆ. ಅಭಿಮಾನಿಗಳು ಅವರ ಮುಂದಿನ ಪ್ರಯಾಣಕ್ಕೆ ಶುಭ ಹಾರೈಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಟನೆಯತ್ತ ಹೆಚ್ಚು ಗಮನ ಹರಿಸುವ ಸುಳಿವು ಕೊಟ್ಟಿದ್ದಾರೆ. ಅನುಪಮಾ ಕಲರ್ಸ್ ಕನ್ನಡದಲ್ಲಿ ಹಲವು ಶೋಗಳನ್ನು ನಿರೂಪಣೆ ಮಾಡಿದ್ದರು. ಆದರೆ, ಈಗ ಅವರು ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಅನಿವಾರ್ಯವಾಗಿ ಆ್ಯಂಕರಿಂಗ್‌ಗೆ ಗುಡ್ ಬೈ ಹೇಳುವ ಕೆಲಸ ಮಾಡಿದ್ದಾರೆ. ಈ ವಿಷಯದಲ್ಲಿ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಅವರು ನಿರ್ಧಾರ ಬದಲಿಸಬೇಕು ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಮುಂದಿನ ಜರ್ನಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.
ಅನುಪಮಾ ಹೋಸ್ಟ್ ಮಾಡಿರೋ ಶೋಗಳು
ಮಜಾ ಭಾರತ', 'ಕನ್ನಡ ಕೋಗಿಲೆ', 'ರಾಜಾ ರಾಣಿ', 'ನಮ್ಮಮ್ಮ ಸೂಪರ್ ಸ್ಟಾರ್', 'ಸುವರ್ಣ ಸೂಪರ್ ಸ್ಟಾರ್ಸ್', 'ಸುವರ್ಣ ಜ್ಯಾಕ್ಪಾಟ್', 'ಗರ್ಲ್ಸ್ vs ಬಾಯ್ಸ್', 'ಕ್ವಾಟ್ಲೆ ಕಿಚನ್' ಶೋಗಳನ್ನು ಅವರು ಹೋಸ್ಟ್ ಮಾಡಿದ್ದಾರೆ. ಕೊನೆಯ ಶೋ ಅನ್ನು ಅವರಿಗೆ ಪೂರ್ಣವಾಗಿ ಮುಗಿಸುವ ಅವಕಾಶವೂ ಸಿಕ್ಕಿಲ್ಲ ಎಂಬ ಬೇಸರ ಅವರನ್ನು ಕಾಡುತ್ತಿದೆ.
ನೀವೇ ನಿಲ್ಲಿಸು ಅನ್ನುವ ಮೊದಲು ಸೈನ್ ಆಫ್ ಮಾಡುತ್ತಿದ್ದೇನೆ
ತಾನು ಆಂಕರಿಂಗ್ ನಿಲ್ಲಿಸುತ್ತಿರುವುದರ ಬಗ್ಗೆ ಮಾತನಾಡಲು ತನ್ನ ಅನುಪಮಾ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ (Anupama Gowda Youtube Channel) ಒಂದು ಸುದೀರ್ಘ ವೀಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ತನ್ನ ಆ್ಯಂಕರಿಂಗ್ ಜರ್ನಿ ನೆನೆದಿದ್ದಾರೆ. ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. 'ನಾನು ನಿಮ್ಮೆಲ್ಲರಲ್ಲೂ ಕ್ಷಮೆ ಕೇಳುತ್ತೇನೆ. ಹೊಸ ಶೋನಲ್ಲಿ ನಾನು ಇರಬೇಕಿತ್ತು. ಆದರೆ, ಇಲ್ಲ. ವಾಹಿನಿಯವರು ಏನೇನೋ ಪ್ರಾಮಿಸ್ ಮಾಡಿಕೊಂಡಿದ್ದಾರೆ. ಅಪೂರ್ಣವಾಗಿ ಈ ಪ್ರಯಾಣ ಕೊನೆ ಮಾಡುತ್ತಿದ್ದೇನೆ. ನೀವೆಲ್ಲ ಸಾಕಮ್ಮ ಎನ್ನುವುದರೊಳಗೆ ನಾನೇ ಆ್ಯಂಕರಿಂಗ್ ಮುಗಿಸಿದ್ದೇನೆ' ಎಂದಿದ್ದಾರೆ ಅನುಪಮಾ. 'ಸೀರಿಯಲ್ಗೆ ಮತ್ತೆ ಬರುತ್ತೇನೋ ಇಲ್ಲವೋ ಎಂಬುದು ಗೊತ್ತಿಲ್ಲ' ಎಂದೂ ಹೇಳಿದ್ದಾರೆ.
2003ರಲ್ಲಿ ರಿಲೀಸ್ ಆದ 'ಲಂಕೇಶ್ ಪತ್ರಿಕೆ' ಸಿನಿಮಾದಲ್ಲಿ ಬಾಲನಟಿಯಾಗಿ ಅನುಪಮಾ ಗೌಡ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. ಆ ಬಳಿಕ 2014ರಲ್ಲಿ ರಿಲೀಸ್ ಆದ 'ಅಕ್ಕ' ಧಾರಾವಾಹಿ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು. ಈ ಧಾರಾವಾಹಿಯಲ್ಲಿ ಅವರು ಡಬಲ್ ಆಕ್ಟಿಂಗ್ ಮೂಲಕ ಮಿಂಚಿದ್ದರು. ಇದನ್ನು ನಿರ್ವಹಿಸುವುದು ಅವರಿಗೆ ದೊಡ್ಡ ಸವಾಲಾಗಿತ್ತು. 2017-18ರಲ್ಲಿ ಬಿಗ್ ಬಾಸ್ನಲ್ಲಿ ಸ್ಪರ್ಧೆ ಮಾಡಿದರು. ಅವರು ಕೆಲವು ಸಿನಿಮಾ ಕೂಡ ಮಾಡಿದ್ದಾರೆ. ʼತ್ರ್ಯಂಬಕʼ ಸಿನಿಮಾದ ನಟನೆಗಾಗಿ ಅವರಿಗೆ ರಾಜ್ಯಪ್ರಶಸ್ತಿ ಬಂದಿತ್ತು.


Click it and Unblock the Notifications
