ಮೊದಲ ಮಗುವಿನ ನಿರೀಕ್ಷೆಯಲ್ಲಿ ಲವ್ ಮಾಕ್ಟೇಲ್-2 ನಟಿ
ಡಾರ್ಲಿಂಗ್ ಕೃಷ್ಣ ನಿರ್ದೇಶನದ ಲವ್ ಮಾಕ್ಟೇಲ್-2 ಸಿನಿಮಾದಲ್ಲಿ ನಟಿಸಿರುವ ಕನ್ನಡದ ನಟಿ ಸುಶ್ಮಿತಾ ಗೌಡ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಚಾರವನ್ನು ಸ್ವತಃ ನಟಿ ಸುಶ್ಮಿತಾ ಗೌಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಹಂಚಿಕೊಂಡಿದ್ದಾರೆ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ನಟಿಗೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರು ಕೂಡ ಶುಭಹಾರೈಸಿದ್ದಾರೆ.
ತಮ್ಮ ಮಗುವಿನ ಆಗಮನದ ಖುಷಿಯನ್ನು ಅಭಿಮಾನಿಗಳ ಜೊತೆ ವಿಶೇಷವಾಗಿ ಹಂಚಿಕೊಂಡಿರುವ ಸುಶ್ಮಿತಾ ಗೌಡ ವಿಭಿನ್ನವಾಗಿ ವಿಡಿಯೋ ಶೂಟ್ ಮಾಡಿಸಿದ್ದಾರೆ. ಯಕ್ಷಗಾನ ತಂಡದ ಜೊತೆ ವಿಡಿಯೋ ಮಾಡಲಾಗಿದ್ದು, ಯಕ್ಷಗಾನದ ಪಾತ್ರಧಾರಿಗಳೇ ಈ ಸಿಹಿ ಸುದ್ದಿಯನ್ನು ತಿಳಿಸುವ ರೀತಿಯಲ್ಲಿ ವಿಡಿಯೋ ಮಾಡಲಾಗಿದೆ. ಈ ವಿಡಿಯೋದಲ್ಲಿ ಸುಶ್ಮಿತಾ ಗೌಡ ಕೂಡ ಯಕ್ಷಗಾನ ತಂಡದ ಜೊತೆ ಹೆಜ್ಜೆ ಹಾಕಿದ್ದಾರೆ.

ಈ ವಿಶೇಷ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸುಶ್ಮಿತಾ ಗೌಡ, 'ನಮ್ಮಿಬ್ಬರ ಹೃದಯಗಳ ಜೊತೆ ಇನ್ನೊಂದು ಪುಟಾಣಿ ಎದೆಬಡಿತ. ನಮ್ಮ ಪುಟ್ಟ ರೂಪ ನೋಡಲು ಕಾತುರರಾಗಿದ್ದೇವೆ' ಎಂದು ಬರೆದುಕೊಂಡಿದ್ದಾರೆ. ತಾಯಾಗುತ್ತಿರುವ ಸುಶ್ಮಿತಾ ಗೌಡಗೆ ನಟಿ ಚೈತ್ರಾ ಆಚಾರ್, ಅನುಪಮಾ ಗೌಡ ಸೇರಿದಂತೆ ಅನೇಕರು ಶುಭಹಾರೈಸಿದ್ದಾರೆ.
ಸುಶ್ಮಿತಾ ಗೌಡ ಲವ್ ಮಾಕ್ಟೇಲ್ 2 ಚಿತ್ರದಲ್ಲಿ ಜಂಕಿ ಪಾತ್ರದಲ್ಲಿ ನಟಿಸಿದ್ದರು, ಆದಿಗೆ ಎರಡನೇ ಮದುವೆ ಮಾಡಿಸಲು ಸಂಬಂಧ ಹುಡುಕುತ್ತಿದ್ದ ಬ್ರೋಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜಂಕಿ ಪಾತ್ರ ತೆರೆ ಮೇಲೆ ಕಡಿಮೆ ಸಮಯದಲ್ಲಿ ಕಾಣಿಸಿಕೊಂಡರೂ ಕೂಡ ಜನರ ಮನಸ್ಸು ಗೆದ್ದಿತ್ತು. ಲವ್ ಮಾಕ್ಟೇಲ್ 2 ಚಿತ್ರದ ಬಳಿಕ ಸುಶ್ಮಿತಾ ಗೌಡ ಕನ್ನಡ ಕಟೆಂಟ್ ಕ್ರಿಯೇಟರ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಕಟೆಂಟ್‌ಗಳನ್ನು ಕ್ರಿಯೇಟ್ ಮಾಡಿ ನೋಡುಗರನ್ನು ನಗಿಸುತ್ತಾರೆ.

ಇನ್ನು ನಟಿ ಸುಶ್ಮಿತಾ ಗೌಡ 2022ರಲ್ಲಿ ಅಶ್ವಿನ್ ಎನ್ನುವವರನ್ನು ಮದುವೆಯಾಗಿದ್ದರು. ಕೆಲವು ಸಮಯ ವಿದೇಶದಲ್ಲಿ ನೆಲೆಸಿದ್ದ ಅವರು ಇದೀಗ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಕಟೆಂಟ್ ಕ್ರಿಯೇಟರ್ ಜೊತೆಗೆ ಉದ್ಯಮಿಯೂ ಆಗಿರುವ ನಟಿ ಸುಶ್ಮಿತಾ ಗೌಡ ತಮ್ಮದೇ ಆದ ಹೇರ್ ಆಯಿಲ್ ಹಾಗೂ ಫೇಸ್ ಕ್ರೀಮ್ ಕಂಪನಿ ಹೊಂದಿದ್ದಾರೆ. ಅಷ್ಟೇ ಅಲ್ಲದೇ ಮಹಿಳೆಯರ ಮೆಚ್ಚಿನ ಮೂಗುಬಟ್ಟು ಅಂಗಡಿ ಕೂಡ ತೆರೆದಿದ್ದಾರೆ. ಒಟ್ಟಾರೆ ನಟಿಯಾಗಿ ಕನ್ನಡಿಗರಿಗೆ ಪರಿಚಯವಾಗಿರುವ ಸುಶ್ಮಿತಾ ಗೌಡ ಸದ್ಯ ಸಿನಿಮೇತರ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ.












Click it and Unblock the Notifications