Rukmini Vasanth: ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ರುಕ್ಮಿಣಿ ವಸಂತ್
ಕಾಂತಾರ ಚಾಪ್ಟರ್-1 ಸಿನಿಮಾ ಮೂಲಕ ಮನೆಮಾತಾಗಿರುವ ನಟಿ ರುಕ್ಮಿಣಿ ವಸಂತ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ನಟಿ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ಪ್ರಮುಖ ಎಚ್ಚರಿಕೆ ಮತ್ತು ಜಾಗೃತಿ ಸಂದೇಶ ಎಂದು ರುಕ್ಮಿಣಿ ವಸಂತ್ ಬರೆದುಕೊಂಡಿದ್ದಾರೆ. ನಟಿಯ ಹೆಸರನ್ನು ಬಳಸಿಕೊಂಡು ವಂಚನೆ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಅವರು ಬೆಂಗಳೂರು ಪೊಲೀಸರಿಗೆ ಪೋಸ್ಟ್ ಟ್ಯಾಗ್ ಮಾಡಿದ್ದಾರೆ.
ರುಕ್ಮಿಣಿ ಅವರ ಹೆಸರು ಬಳಸಿಕೊಂಡು ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. 9445893273 ಸಂಖ್ಯೆಯನ್ನು ಬಳಸುವ ವ್ಯಕ್ತಿಯು ನನ್ನಂತೆ ನಟಿಸಿ, ಸುಳ್ಳು ನೆಪದಲ್ಲಿ ವಿವಿಧ ಜನರನ್ನು ತಲುಪುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಸಂಖ್ಯೆ ನನಗೆ ಸೇರಿಲ್ಲ ಮತ್ತು ಇದರಿಂದ ಬರುವ ಯಾವುದೇ ಸಂದೇಶಗಳು ಅಥವಾ ಕರೆಗಳು ಸಂಪೂರ್ಣವಾಗಿ ನಕಲಿ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ದಯವಿಟ್ಟು ಅಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಅವರೊಂದಿಗೆ ತೊಡಗಿಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

ಈ ಕೃತ್ಯವು ಸೈಬರ್ ಅಪರಾಧದ ವ್ಯಾಪ್ತಿಗೆ ಬರುತ್ತದೆ. ಅಂತಹ ವಂಚನೆ ಮತ್ತು ದಾರಿತಪ್ಪಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಇಂತಹವುಗಳನ್ನು ನಂಬಬೇಡಿ. ಯಾವುದೇ ಸ್ಪಷ್ಟೀಕರಣ ಅಥವಾ ಪರಿಶೀಲನೆಗಾಗಿ, ನೀವು ನೇರವಾಗಿ ನನ್ನನ್ನು ಅಥವಾ ನನ್ನ ತಂಡವನ್ನು ಸಂಪರ್ಕಿಸಬಹುದು. ನಿಮ್ಮ ತಿಳುವಳಿಕೆ ಮತ್ತು ಸಹಕಾರಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ಆನ್‌ಲೈನ್‌ನಲ್ಲಿ ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ ಎಂದು ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ರುಕ್ಮಿಣಿ ವಸಂತ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು, ಇವು ವಂಚಕರ ಕರೆಗಳು, ಸಂದೇಶಗಳು. ದಯವಿಟ್ಟು ಅವರಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಅಗತ್ಯ ಕ್ರಮಕ್ಕಾಗಿ ನಿಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲಿ ಈ ವಿಷಯವನ್ನು ವರದಿ ಮಾಡಲು ವಿನಂತಿ ಎಂದಿದ್ದಾರೆ.
ರುಕ್ಮಿಣಿ ವಸಂತ್ ಅವರು ಸಪ್ತಸಾಗರದಾಚೆ ಎಲ್ಲೋ ಸರಣಿ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದುಕೊಂಡರು. ಬಳಿಕ ತಮಿಳು ಸಿನಿಮಾಗಳಲ್ಲಿಯೂ ಅವರು ನಟಿಸಿದರು. ಸದ್ಯ ಬಹುಭಾಷೆಗಳಲ್ಲಿ ಮಿಂಚುತ್ತಿರುವ ಅವರು ಇತ್ತೀಚೆಗೆ ರಿಲೀಸ್ ಆದ ರಿಷಬ್ ಶೆಟ್ಟಿ ಅವರ ಕಾಂತಾರ ಚಾಪ್ಟರ್-1 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಎಲ್ಲೆಡೆ ನಟಿಗೆ ಬೇಡಿಕೆ ಇದ್ದು, ಸಾಲು ಸಾಲು ಸಿನಿಮಾಗಳು ಕೈಯಲ್ಲಿವೆ. ಇದರ ನಡುವೆ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆ ಕಿಡಿಗೇಡಿಗಳ ವಿರುದ್ಧ ನಟಿ ಕಾನೂನು ಸಮರ ಸಾರಿದ್ದಾರೆ.












Click it and Unblock the Notifications