ರೈತರ ಭೂಮಿ ಅವರ ಆಯ್ಕೆ: ದೇವನಹಳ್ಳಿ ಭೂಸ್ವಾಧೀನ ಕೈಬಿಟ್ಟಿದ್ದಕ್ಕೆ ನಟಿ ರಮ್ಯಾ ಹೇಳಿದ್ದೇನು?
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಭೂಸ್ವಾಧೀನ ಅಧಿಸೂಚನೆಯನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ಈ ಮೂಲಕ ರೈತರ ಬೇಡಿಕೆಗಳಿಗೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ದೇವನಹಳ್ಳಿ ತಾಲ್ಲೂಕಿನ ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದ ಸಭಾಂಗಣದಲ್ಲಿ ಇಂದು ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಘೋಷಿಸಿದರು. ಈ ಬಗ್ಗೆ ಮಾಜಿ ಸಂಸದೆ ಹಾಗೂ ಸ್ಯಾಂಡಲ್‌ವುಡ್ ನಟಿ ಮೋಹಕತಾರೆ ರಮ್ಯಾ ಪ್ರತಿಕ್ರಿಯಿಸಿದ್ದಾರೆ.
'ಕರ್ನಾಟಕ ಸರ್ಕಾರ ಭೂಸ್ವಾಧೀನವನ್ನು ಕೈಬಿಟ್ಟಿದೆ. ದೇವನಹಳ್ಳಿ ರೈತರು ಸಂಭ್ರಮಿಸುತ್ತಿದ್ದಾರೆ. ನಾನು ಅವರ ಬಗ್ಗೆ ಸಂತೋಷಪಡುತ್ತೇನೆ ಎಂದು ನಟಿ ರಮ್ಯಾ ಸಂತಸ ಹಂಚಿಕೊಂಡಿದ್ದಾರೆ. ನಾವು ರೈತರ ಬೇಡಿಕೆಗಳನ್ನು ಗೌರವಿಸಬೇಕು. ಅಭಿವೃದ್ಧಿ ಮುಖ್ಯ, ಆದರೆ ಅದು ಎಲ್ಲರನ್ನೂ ಒಳಗೊಳ್ಳುವ ಮತ್ತು ನ್ಯಾಯಯುತವಾಗಿರಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ರಮ್ಯಾ ಸಂತಸ ಹಂಚಿಕೊಂಡಿದ್ದಾರೆ. ರೈತರ ಭೂಮಿ-ಅವರ ಆಯ್ಕೆ' ಎಂದು ರಮ್ಯಾ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಭೂ ಸ್ವಾಧೀನ ಕೈಬಿಟ್ಟಿದ್ದೇಕೆ?
ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಲು ನಿರ್ಧರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೆಲವು ರೈತರು ಜಮೀನು ನೀಡಲು ಸಿದ್ಧರಿರುವುದಾಗಿ ಮುಂದೆ ಬಂದಿದ್ದಾರೆ. ಜಮೀನು ನೀಡಲು ಇಚ್ಚಿಸುವವರ ಜಮೀನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲಿದ್ದು, ಅವರಿಗೆ ಹೆಚ್ಚಿನ ಪರಿಹಾರ, ಅಭಿವೃದ್ಧಿಪಡಿಸಿದ ಜಮೀನು ನೀಡಲಾಗುವುದು ಎಂದೂ ಭರವಸೆ ನೀಡಿದ್ದಾರೆ. ಅಂತಹ ರೈತರಿಗೆ ಮಾರ್ಗಸೂಚಿ ದರಕ್ಕಿಂತ ಹೆಚ್ಚುವರಿ ದರವನ್ನು ನೀಡಲಿದೆ. ಅಲ್ಲಿ ಕೃಷಿ ಚಟುವಟಿಕೆಗಳನ್ನು ಮುಂದುವರಿಸಲು ಬಯಸುವ ರೈತರು ಕೃಷಿ ಚಟುವಟಿಕೆಗಳನ್ನು ಮುಂದುವರಿಸಬಹುದು ಎಂದು ಹೇಳಿದ್ದಾರೆ.
ದೇವನಹಳ್ಳಿ ಬೆಂಗಳೂರಿಗೆ ಹತ್ತಿರದ್ದಲ್ಲಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಅಲ್ಲಿಯೇ ಇದೆ. ರಾಜ್ಯದ ಪ್ರತಿಯೊಬ್ಬರ ವರಮಾನ ಹೆಚ್ಚಳವಾಗಲು ಅಭಿವೃದ್ಧಿ ಕಾರ್ಯ ನಡೆಯಬೇಕು. ಹೊಸ ಕೈಗಾರಿಕೆಗಳ ಪ್ರಾರಂಭಕ್ಕೆ, ಬಂಡವಾಳ ಹೂಡಿಕೆಗೆ ಜಮೀನು ಬೇಕು. ಜಮೀನು ಸ್ವಾಧೀನಪಡಿಸಿ ಕೈಗಾರಿಕೆ ಪ್ರಾರಂಭಿಸಲು ಸರ್ಕಾರ ನೀಡಬೇಕಾಗುತ್ತದೆ. 1,777 ಎಕರೆ ಜಮೀನು ದೇವನಹಳ್ಳಿ ತಾಲೂಕಿನಲ್ಲಿ ಸ್ವಾಧೀನಪಡಿಸಿಕೊಂಡು ಅಲ್ಲಿ ಏರೋಸ್ಪೇಸ್ ಪ್ರಾರಂಭಿಸಲು ಸರ್ಕಾರ ಉದ್ದೇಶಿಸಿತ್ತು. ರಾಜ್ಯದಲ್ಲಿ ಭೂಸ್ವಾಧೀನ ವಿರುದ್ಧ ಈ ಮಟ್ಟದ ಪ್ರತಿಭಟನೆ ನಡೆದಿಲ್ಲ. ಅದು ಫಲವತ್ತಾದ ವ್ಯವಸಾಯಕ್ಕೆ ಯೋಗ್ಯವಾದ ಭೂಮಿ. ಅಲ್ಲಿನ ರೈತರು ಆ ಜಮೀನಿನ ಮೇಲೆ ಹೆಚ್ಚು ಅವಲಂಬಿತರಾಗಿದ್ದ ಕಾರಣ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲಾಗಿದೆ ಎಂದಿದ್ದಾರೆ.
ಸರ್ಕಾರ ರೈತರು, ಜಮೀನುದಾರರು ಸೇರಿದಂತೆ ಎಲ್ಲರ ಅಹವಾಲುಗಳನ್ನು ಆಲಿಸಿದೆ. ಯಾವುದೇ ಕಾರಣಕ್ಕೂ ಜಮೀನು ಸ್ವಾಧೀನ ಕೈಬಿಟ್ಟರೆ, ಈ ಕೈಗಾರಿಕೆ ಬೇರೆ ಕಡೆ ಹೋಗುವ ಸಾಧ್ಯತೆ ಇದೆ. ಆದರೂ ಸರ್ಕಾರ ರೈತರ ಪರವಾಗಿದ್ದು, ಅವರ ಬೇಡಿಕೆಗಳನ್ನು ಪರಿಗಣಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ರೈತರು ಭೂಸ್ವಾಧೀನ ವಿರೋಧಿ ಹಲವು ವರ್ಷಗಳಿಂದ ಧರಣಿ ನಡೆಸಿದ್ದರು. ಇತ್ತೀಚೆಗೆ ದೇವನಹಳ್ಳಿಯಲ್ಲಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆದಿತ್ತು. ಇದಕ್ಕೆ ಚಿತ್ರರಂಗದ ಕಲಾವಿದರು, ರೈತ ಸಂಘಟನೆಗಳು ಸೇರಿ ಹಲವರು ಸಾಥ್ ನೀಡಿದ್ದರು.












Click it and Unblock the Notifications