Nayanthara: ಮೂರ್ಖನನ್ನ ಮದುವೆಯಾಗೋದು ತಪ್ಪು, ಒಬ್ಬಳನ್ನೇ ಬಿಡಿ: ನಟಿ ನಯನತಾರಾ ಡಿವೋರ್ಸ್‌ಗೆ ನಿರ್ಧಾರ?
ಸಿನಿಮಾರಂಗದಲ್ಲಿ ಡಿವೋರ್ಸ್ ಅನ್ನೋದು ಈಗ ಸರ್ವೇಸಾಮಾನ್ಯವಾಗಿದೆ. ಕೆಲ ಸೆಲೆಬ್ರಿಟಿಗಳು ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಡಿವೋರ್ಸ್ ಪಡೆದರೆ, ಇನ್ನೂ ಕೆಲವರು ಹತ್ತಾರು ವರ್ಷ ದಾಂಪತ್ಯ ಜೀವನ ಚೆನ್ನಾಗಿ ನಡೆಸಿದ್ರೂ ಡಿವೋರ್ಸ್ ಘೋಷಿಸಿ ಶಾಕ್ ಕೊಟ್ಟಿದ್ದೂ ಇದೆ. ಈಗ ಇದೇ ಡಿವೋರ್ಸ್ ವಿಚಾರದಲ್ಲಿ ಮತ್ತೊಬ್ಬ ಖ್ಯಾತ ನಟಿಯ ಹೆಸರು ಕೇಳಿಬರುತ್ತಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಲೇಡಿ ಸೂಪರ್‌ಸ್ಟಾರ್ ಖ್ಯಾತಿಯ ನಯನತಾರಾ ಅವರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ಸುದ್ದಿಯೊಂದು ಸಖತ್ ಸದ್ದು ಮಾಡುತ್ತಿದೆ. ನಯನತಾರಾ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾದ ವೈರಲ್ ಪೋಸ್ಟ್‌ನಲ್ಲಿ ತಮ್ಮ ಪತಿಯ ವರ್ತನೆ ಹಾಗೂ ಡಿವೋರ್ಸ್ ಬಗ್ಗೆ ಸುಳಿವು ನೀಡಿದ್ದಾರೆ ಎನ್ನಲಾಗಿದೆ.
ದಕ್ಷಿಣ ಸಿನಿಮಾ ರಂಗದ ಖ್ಯಾತ ನಟಿಯಾಗಿರುವ ನಯನತಾರಾ ಅವರು ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ಸೂಪರ್ ಸಿನಿಮಾದಲ್ಲಿ ನಟಿಸಿದ್ದರು. ಇನ್ನು ತಮಿಳು ಹಾಗೂ ತೆಲುಗು ಚಿತ್ರರಂಗಳಲ್ಲಿ ಟಾಪ್ ನಟಿಯಾಗಿ ಇಂದಿಗೂ ಅವರು ಮಿಂಚುತ್ತಿದ್ದಾರೆ. ಕೆಲವೇ ವರ್ಷಗಳ ಹಿಂದೆ ಅವರು ನಿರ್ದೇಶಕ ವಿಗ್ನೇಶ್ ಶಿವನ್ ಅವರೊಂದಿಗೆ ಅದ್ಧೂರಿಯಾಗಿ ಮದುವೆಯಾಗಿದ್ದರು. ಈ ದಂಪತಿಗೆ ಸದ್ಯ ಎರಡು ಮುದ್ದಾದ ಅವಳಿ ಮಕ್ಕಳೂ ಇವೆ. ಆದರೂ ನಯನತಾರಾ ದಿಢೀರ್ ಡಿವೋರ್ಸ್‌ಗೆ ಮುಂದಾಗಿರುವುದು ಏಕೆ? ಎಂದು ಅವರ ಅಭಿಮಾನಿಗಳು ಕೂಡ ಶಾಕ್‌ಗೆ ಒಳಗಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಆ ಸೋಷಿಯಲ್ ಮೀಡಿಯಾ ಪೋಸ್ಟ್..!

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಟಿ ನಯನತಾರಾ ಮತ್ತು ಪತಿ ವಿಗ್ನೇಶ್ ಶಿವನ್ ವಿಚ್ಛೇದನದತ್ತ ಹೆಜ್ಜೆ ಹಾಕುತ್ತಿದ್ದಾರೆ ಎಂಬ ವದಂತಿಗಳು ಹರಡಿವೆ. ನಯನತಾರಾ ಅವರ ಸಾಮಾಜಿಕ ಮಾಧ್ಯಮ ಖಾತೆಯಿಂದ ಬಂದಿರುವುದಾಗಿ ಹೇಳಲಾದ ಒಂದು ಸ್ಕ್ರೀನ್‌ಶಾಟ್ ವೈರಲ್ ಆಗಿದ್ದು, ಅದರಲ್ಲಿ ವಿವಾಹದ ಬಗ್ಗೆ ನಟಿ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ. ಪತಿಯ ವರ್ತನೆಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ವೈರಲ್ ಆಗಿರುವ ಸ್ಕ್ರೀನ್‌ಶಾಟ್ ನಯನತಾರಾ ಅವರ ಇನ್‌ಸ್ಟಾಗ್ರಾಂ ಸ್ಟೋರಿ ಎಂದು ಹೇಳಲಾಗಿದೆ. ಅದರಲ್ಲಿ "ಒಬ್ಬ ಮೂರ್ಖನನ್ನು ಮದುವೆಯಾಗುವುದು ತಪ್ಪು. ಪತಿಯ ಕೃತ್ಯಗಳಿಗೆ ಹೊಣೆ ಹೊತ್ತಿಕೊಳ್ಳಬೇಕಾಗಿಲ್ಲ, ಏಕೆಂದರೆ ಪುರುಷರು ಸಾಮಾನ್ಯವಾಗಿ ಬೆಳೆಯುವುದಿಲ್ಲ. ದಯವಿಟ್ಟು ನನ್ನನ್ನು ಒಬ್ಬಳೇ ಇರಲು ಬಿಡಿ. ನಾನು ತುಂಬಾ ಬೇಸತ್ತಿದ್ದೇನೆ" ಎಂಬ ಸಾಲುಗಳಿವೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಶೇರ್ ಆಗಿದ್ದು, ನಯನತಾರಾ-ವಿಘ್ನೇಶ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳಿಗೆ ಪುಷ್ಟಿ ನೀಡಿದೆ.

ನಯನತಾರಾ ಪ್ರತಿಕ್ರಿಯೆ ಏನು?
ಈ ಸ್ಕ್ರೀನ್‌ಶಾಟ್ ವೈರಲ್ ಆಗಿ ಡಿವೋರ್ಸ್ ಬಗ್ಗೆ ಎಲ್ಲೆಡೆ ಸುದ್ದಿ ಹರಿದಾಡುತ್ತಿದೆ. ಆದರೆ ನಟಿ ನಯನತಾರಾ ಹಾಗೂ ವಿಗ್ನೇಶ್ ಶಿವನ್ ಇಲ್ಲಿವರೆಗೆ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಹಲವಾರು ಮೂಲಗಳು ಈ ವೈರಲ್ ಪೋಸ್ಟ್ ಅನ್ನು ನಕಲಿ ಎಂದು ಹೇಳುತ್ತಿವೆ. ನಯನತಾರಾ ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ರೀತಿಯ ಯಾವುದೇ ಸಂದೇಶವಿಲ್ಲ. ಕೆಲ ಕಿಡಿಗೇಡಿಗಳು ಎಡಿಟ್ ಮಾಡಿರುವ ಸ್ಕ್ರೀನ್‌ಶಾಟ್ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಪಬ್ಲಿಸಿಟಿ ಸ್ಟಂಟ್ ಅಥವಾ ಅವರ ಹೆಸರು ಕೆಡಿಸುವ ಪ್ರಯತ್ನವೂ ಇರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ನಯನತಾರಾ ಅಥವಾ ವಿಗ್ನೇಶ್ ಶಿವನ್ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಅಥವಾ ವಿಚ್ಛೇದನದ ಬಗ್ಗೆ ದೃಢೀಕರಣ ಈವರೆಗೆ ಇಲ್ಲ.
ಪಳನಿ ದೇವಸ್ಥಾನಕ್ಕೆ ದಂಪತಿ ಭೇಟಿ
ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿಯು ತಮ್ಮ ಅವಳಿ ಪುತ್ರರಾದ ಉಯಿರ್ ಮತ್ತು ಉಲಗ್ ಅವರೊಂದಿಗೆ ತಮಿಳುನಾಡಿನ ಪ್ರಸಿದ್ಧ ಪಳನಿ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನದಲ್ಲಿ ದರ್ಶನ ಪಡೆದ ನಂತರ ಪೊಲೀಸ್ ರಕ್ಷಣೆಯೊಂದಿಗೆ ವಾಪಸ್ ಆಗಿದ್ದಾರೆ. ದೇವಾಲಯದ ಬಳಿ ತಮ್ಮ ಅಭಿಮಾನಿಗಳಿಗೆ ಕೈ ಬೀಸಿದ್ದಾರೆ. ಡಿವೋರ್ಸ್ ವದಂತಿಯ ನಡುವೆ ಒಟ್ಟಿಗೆ ಕಾಣಿಸಿಕೊಂಡು ಈ ಜೋಡಿ ಅಚ್ಚರಿ ಮೂಡಿಸಿದೆ. ಅಲ್ಲದೇ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೂಡ ನೀಡಲಿಲ್ಲ.
ಈ ವದಂತಿಗಳಿಗೆ ನಯನತಾರಾ ಅಥವಾ ವಿಘ್ನೇಶ್ ಶಿವನ್ ಇದುವರೆಗೆ ಸ್ಪಷ್ಟನೆ ನೀಡದ ಕಾರಣ ಅಭಿಮಾನಿಗಳು ಸತ್ಯವನ್ನು ತಿಳಿಯಲು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರರಂಗದಲ್ಲಿ ವಿಚ್ಛೇದನ ಹೊಸದಲ್ಲದಿದ್ದರೂ, ಈ ಮುದ್ದಾದ ದಂಪತಿಗಳ ಡಿವೋರ್ಸ್ ವಿಚಾರವು ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿದೆ.












Click it and Unblock the Notifications