ಹೂ ತರ ಇದ್ಳು, ಹೂಕೋಸು ತರ ಆದ್ಳು: ಆ ಪಾತ್ರ ಮಾಡಲೇಬಾರದಿತ್ತು ಎಂದಿದ್ದೇಕೆ "ಬ್ರಹ್ಮಗಂಟು" ನಟಿ?
"ಬ್ರಹ್ಮಗಂಟು" ಸೀರಿಯಲ್ ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಕೆಲ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ನಟಿಗೆ ಬಾಡಿ ಶೇಮಿಂಗ್ ಕಾಮೆಂಟ್ ಮಾಡುವ ಜನರೂ ಇದ್ದಾರೆ. ಇನ್ನು ಖ್ಯಾತ ನಟನ ಸಿನಿಮಾದಲ್ಲಿ ಗೀತಾ ಭಾರತಿ ಅವರು ಒಂದು ಸಣ್ಣ ಪಾತ್ರ ಮಾಡಿದ್ದರು. ಇದು ಸಿಕ್ಕಾಪಟ್ಟೆ ವೈರಲ್ ಆಗಿ, ನಟಿ ಫೇಮಸ್ ಕೂಡ ಆಗಿದ್ದರು. ಆದರೆ ತಮ್ಮ ಪಾತ್ರದ ಬಗ್ಗೆ ಖುದ್ದು ಗೀತಾ ಭಾರತಿ ಭಟ್ ಅವರೇ ಬೇಸರ ಹೊರಹಾಕಿದ್ದಾರೆ. 'ಆ ಪಾತ್ರದಿಂದ ದಪ್ಪಗೆ ಇರುವವರಿಗೆ ಬಾಡಿ ಶೇಮಿಂಗ್ ಮಾಡಲು ನಾನೇ ಒಪ್ಪಿಗೆ ಕೊಟ್ಟಂತೆ ಆಯ್ತು ಎಂಬ ನೋವಿದೆ' ಎಂದಿದ್ದಾರೆ. ಯಾವುದು ಆ ಸಿನಿಮಾ? ಹಾಗೂ ಆ ಪಾತ್ರದ ವಿವರ ಇಲ್ಲಿದೆ.
'ಈಗ ನಾವೆಲ್ಲ ಹೇಗೆ ಬಟ್ಟೆ ಹಾಕ್ತೀವಿ ಅದರ ಮೇಲೆ ಕಾಮೆಂಟ್ ಮಾಡ್ತಾರೆ. ಕೂದಲು, ಕೆನ್ನೆ, ಚರ್ಮ ಎಲ್ಲದರ ಮೇಲೂ ಕಾಮೆಂಟ್ ಮಾಡ್ತಾರೆ. ನಾವು ಅದಕ್ಕೆಲ್ಲ ತಲೆಕೆಡಿಸಿಕೊಂಡು ಕೂತರೆ ನಮ್ಮ ಮನಸ್ಸು ಹಾಳಾಗುತ್ತೆ ಹೊರತು, ಜೀವನ ಮುಂದೆ ನಡೆಯಲ್ಲ ಎಂದಿದ್ದಾರೆ. ಒಂದು ಸಿನಿಮಾ ಮಾಡಿದಾಗ ಇಂತಹ ಕೆಟ್ಟ ಅನುಭವ ನನಗೆ ಆಗಿದೆ. ನನಗೆ ಗೊತ್ತಿಲ್ಲದೆಯೇ ನನ್ನನ್ನ ಒಂದು ರೀತಿ ಕೆಟ್ಟ ರೀತಿಯಲ್ಲಿ ತೋರಿಸಲಾಗಿದೆ. ಅವರಿಗೆ ಅದು ಕಾಮಿಡಿ ಅನಿಸಬಹುದು. ಆದರೆ ನನಗೆ ಅದು ನೇರವಾಗಿ ಬಾಡಿ ಶೇಮಿಂಗ್ ಮಾಡಿದಂತೆ' ಎಂದು ರಾಜೇಶ್ ರಿವೀಲ್ಸ್ ಯುಟ್ಯೂಬ್ ಸಂದರ್ಶನದಲ್ಲಿ ನಟಿ ಗೀತಾ ಭಾರತಿ ಬೇಸರ ವ್ಯಕ್ತಪಡಿಸಿದ್ದಾರೆ.

'ನಾನು "ಲವ್ ಮಾಕ್ಟೇಲ್" ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದೆ. ಶೂಟಿಂಗ್‌ಗೆ ಹೋದಾಗ ನನ್ನ ಭಾಗದ ಶೂಟ್ ಎಲ್ಲ ಮುಗಿಯಿತು. ಅದರಲ್ಲಿ "ಇವಳು ಹೂ ತರ ಇದ್ಳು, ಹೋಕೋಸ್ ತರ ಆಗೋದ್ಳು" ಅನ್ನೋ ಡೈಲಾಗ್ ಇದೆ. ನೋಡುವವರಿಗೆ ಇದು ಏನೂ ಅನ್ನಿಸದೆ ಇರಬಹುದು. ಆದರೆ ದೊಡ್ಡ ಸ್ಕ್ರೀನ್‌ನಲ್ಲಿ ಆ ದೃಶ್ಯಗಳನ್ನು ನೋಡಿದಾಗ ನನಗೇ ಬೇಜಾರಾಯ್ತು. ನನ್ನ ಪಾತ್ರ ಬಂದಾಗ ಆನೆ ಸೌಂಡ್ ಮಾಡೋದು, ನಗೋದು, ಗೇಲಿ ಮಾಡೋದು ಒಬ್ಬರಿಗೆ ಎಷ್ಟು ಹರ್ಟ್ ಆಗುತ್ತೆ?' ಎಂದು ಭಾವುಕರಾಗಿದ್ದಾರೆ.
'ಕೆಟ್ಟ ಸಂದೇಶ ನಾನೇ ಕೊಟ್ಟಂತಾಯ್ತು'
'ಲವ್ ಮಾಕ್ಟೇಲ್ ಸಿನಿಮಾ ನಿಜಕ್ಕೂ ಸಕ್ಸಸ್ ಕಂಡಿದೆ. ಈ ಬಗ್ಗೆ ನನಗೆ ಖುಷಿಯೂ ಇದೆ. ಆದರೆ ನನಗೆ ಇವತ್ತಿಗೂ ಆ ಪಾತ್ರ ನಾನು ಯಾಕೆ ಮಾಡಬೇಕಿತ್ತು? ಅನ್ನೋದು ತುಂಬಾ ಕಾಡುತ್ತೆ. ನನ್ನ ರೀತಿ ಇರುವ ಎಷ್ಟೋ ಜನಕ್ಕೆ ನಾನಾಗಿಯೇ ಈ ರೀತಿಯ ಕೆಟ್ಟ ಮೆಸೇಜ್ ಕೊಟ್ಟೆ, ನಾನೇ ಬಾಡಿ ಶೇಮಿಂಗ್ ಮಾಡುವವರಿಗೆ ಒಪ್ಪಿಗೆ ಕೊಟ್ಟೆ ಅನ್ನೋ ಬೇಜಾರಿದೆ. ನನ್ನ ಪಾತ್ರ ಫೈನಲ್ ಆಗಿ ಆ ರೀತಿ ಬರುತ್ತೆ ಅನ್ನೋದು ಗೊತ್ತಿರಲಿಲ್ಲ. ಸಿನಿಮಾದಲ್ಲಿ ನಾನು ಆ ಸೀನ್‌ನಿಂದ ಹೋದ ಮೇಲೆ ಆ ಡೈಲಾಗ್ ಇದೆ. ನಾನು ಆ ದೃಶ್ಯದಲ್ಲಿರುವಾಗ ಒಳ್ಳೆಯ ಮಾತುಕತೆಯೇ ಇದೆ' ಎಂದಿದ್ದಾರೆ.
'ಆ ಸೀನ್ ನಾನು ಥಿಯೇಟರ್‌ನಲ್ಲಿ ನೋಡಿದಾಗ ತುಂಬಾ ನೋವಾಯ್ತು. ನಾನು ಮಾಸ್ಕ್ ಹಾಕೊಂಡು ಸಿನಿಮಾ ನೋಡಲು ಹೋಗಿದ್ದೆ. ನನ್ನ ಎದುರು ಕುಳಿತಿದ್ದವರು, ಇವರನ್ನು ಯಾಕೆ ಹೀಗೆ ತೋರಿಸಿದ್ದಾರೆ, ಪಾಪ ಅಂತಿದ್ರು. ಅದನ್ನು ಕೇಳಿ ನನಗೆ ಹೇಗೆ ಅನಿಸಿರಬೇಡ? ಕೆಲವೊಂದು ತಪ್ಪನ್ನ ನಾನು ಮಾಡಿದ್ದೀನಿ ಅಂತ ಅನಿಸುತ್ತೆ. ನಾನು ಕೆಲವು ಪಾತ್ರಗಳನ್ನು ತಪ್ಪಾಗಿ ಆಯ್ಕೆ ಮಾಡಿದ್ದೀನಿ, ತಪ್ಪಾದ ಸಂದೇಶ ಕೊಟ್ಟಿದ್ದೀನಿ ಅಂತ ನೋವಾಗುತ್ತೆ' ಎಂದಿದ್ದಾರೆ.
ಅಂತಹ ಫೇಮ್ ಯಾರಿಗೆ ಬೇಕು?
ಅದು ತುಂಬಾ ವೈರಲ್ ಆಗಿ ಫೇಮಸ್ ಕೂಡ ಆದೆ. ಆದ್ರೆ ಯಾರಿಗೆ ಬೇಕು ಆ ರೀತಿಯ ಫೇಮ್? ಯಾರಾದ್ರೂ ಮೇಡಂ ನೀವು ಲವ್ ಮಾಕ್ಟೇಲ್ ಸಿನಿಮಾದಲ್ಲಿ ನಟಿಸಿದ್ದೀರಲ್ಲ, ಸಖತ್ತಾಗಿದೆ ಅಂದಾಗ ಥೂ, ನನ್ನ ಕರ್ಮ ಅನಿಸುತ್ತೆ. ನನ್ನಿಂದ ತಪ್ಪಾಗಿದೆ ನಿಜ, ಅದನ್ನ ಸರಿಪಡಿಸಿಕೊಳ್ಳಬೇಕು ಅಷ್ಟೇ ಎಂದಿದ್ದಾರೆ. ನಾವು ಹೇಗೆ ಇದ್ದೀವೋ ಹಾಗೆ ನಮ್ಮನ್ನ ನಾವು ಪ್ರೀತಿಸಿಕೊಳ್ಳಬೇಕು. ಆದರೆ ಬಾಡಿ ಶೇಮಿಂಗ್ ಮಾಡಲು ಬೇರೆಯವರಿಗೆ ನಾವೇ ಅನುಮತಿ ಕೊಡುವುದು ತಪ್ಪು. ಸಿನಿಮಾ ಆಗಲಿ, ಸೀರಿಯಲ್ ಆಗಲಿ, ಎಲ್ಲೇ ಆದರೂ ಅಂತಹ ಸಂದೇಶ ನೀಡುವುದು ತಪ್ಪು' ಎಂದು ಖಡಕ್ ಆಗಿ ಹೇಳಿದ್ದಾರೆ.












Click it and Unblock the Notifications