'ಟಾಕ್ಸಿಕ್' ಅಲೆಗಳ ವಿರುದ್ಧ ಸಾಗಲು ಯಾವಾಗಲೂ ಸಮಯ ಬೇಕಾಗುತ್ತದೆ: ಕಿಚ್ಚ ಸುದೀಪ್ ಯಶ್‌ಗೆ ಧೈರ್ಯದ ಮಾತು
Actor Yash Toxic: ಇಡೀ ಭಾರತವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ನಟ ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇದರಲ್ಲಿನ ಒಂದೊಂದು ದೃಶ್ಯಗಳಂತೂ ಹಾಲಿಹುಡ್‌ಗೇನು ಕಡಿಮೆಯಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಮತ್ತೊಂದೆಡೆ 'ಹಸಿಬಿಸಿ' ಕುರಿತು ಟೀಕೆಗಳು ವ್ಯಕ್ತವಾಗುತ್ತಿದ್ದು, ಇದಕ್ಕೆ ನಟ ಕಿಚ್ಚ ಸುದೀಪ್ ತಮ್ಮದೇ ಶೈಲಿಯಲ್ಲಿ ಖಡಕ್ ಉತ್ತರ ನೀಡಿ ಯಶ್‌ಗೆ ಶುಭಹಾರೈಸಿದ್ದಾರೆ. ಹಾಗಾದ್ರೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಯಶ್ ಅವರ ಹುಟ್ಟುಹಬ್ಬ ಪ್ರಯುಕ್ತ (ಜನವರಿ 8) ಟಾಕ್ಸಿಕ್ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಮತ್ತೊಂದೆಡೆ, ಯಾರೋ ಕೆಲವರು ಇದರಲ್ಲಿ ಕಂಡುಬಂದ ಹಸಿಬಿಸಿ ದೃಶ್ಯಗಳ ಕುರಿತು ಟೀಕೆಗಳನ್ನು ಮಾಡಲು ಶುರು ಮಾಡಿದ್ದಾರೆ. ಈ ಟೀಕೆಗಳಿಗೆ ಸುದೀಪ್ ಖಡಕ್ ಉತ್ತರ ಕೊಟ್ಟು ಯಶ್ ಪರ ನಿಂತು ಶುಭಹಾರೈಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ಗಳ ನಡುವೆ ಯಾವುದೂ ಸರಿ ಇಲ್ಲ, ಒಬ್ಬ ನಟರಿಗೆ ಮತ್ತೊಬ್ಬರು ಸಾಥ್ ಕೊಡುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಇದೀಗ 'ಟಾಕ್ಸಿಕ್' ಸಿನಿಮಾದ ಟೀಸರ್ ನೋಡಿದ ನಟ ಕಿಚ್ಚ ಸುದೀಪ್ ಅವರು ಟ್ವೀಟ್ ಮೂಲಕ ಯಶ್ಗೆ ಶುಭಹಾರೈಸಿದ್ದಾರೆ. ಜೊತೆಗೆ ಟೀಕೆಗಳಿಗೆ ಖಡಕ್ ಪ್ರತಿಕ್ರಿಯೆ ನೀಡಿ ಗಮನ ಸೆಳೆದಿದ್ದಾರೆ.
ತಮ್ಮ ಜನ್ಮದಿನದಂದು 'ಟಾಕ್ಸಿಕ್' ಚಿತ್ರದ ಟೀಸರ್ ವಿಡಿಯೋವನ್ನು ಯಶ್ ಟ್ವೀಟ್ ಮಾಡಿಕೊಂಡಿದ್ದರು. ರಾಯ ಅನ್ನೋದು ಯಶ್ ಮಾಡುತ್ತಿರುವ ಪಾತ್ರದ ಹೆಸರು. ಪಾತ್ರವನ್ನು ಪರಿಚಯಿಸುವ ರೀತಿಯಲ್ಲಿ ಈ ಟೀಸರ್ ಇದೆ. ಈ ಟೀಸರ್ ಬಗ್ಗೆ ಯಶ್ ಮಾಡಿದ ಟ್ವೀಟ್ ಅನ್ನು ಕಿಚ್ಚ ಸುದೀಪ್ ರೀಟ್ವೀಟ್ ಮಾಡಿಕೊಂಡಿದ್ದಾರೆ.
ನಟ ಕಿಚ್ಚ ಸುದೀಪ್ ಹೇಳಿದ್ದೇನು?: "ಯಶ್ಗೆ ಶುಭಾಶಯಗಳು. ಅಲೆಗಳ ವಿರುದ್ಧ ಸಾಗಲು ಯಾವಾಗಲೂ ಸಮಯ ಬೇಕಾಗುತ್ತದೆ. ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಬಳಿ ಕೊಂಡೊಯ್ಯಲಿ. ನೀವು ನಿಮ್ಮ ಗುರಿಯನ್ನು ನಿರ್ಧರಿಸಿದ್ದೀರಿ" ಎಂದು ಸುದೀಪ್ ತಿಳಿಸಿದ್ದಾರೆ. ಇದೀಗ ಈ ಟ್ವೀಟ್ ದೊಟ್ಟ ಮಟ್ಟದಲ್ಲಿ ವೈರಲ್ ಆಗುತ್ತಿದೆ.
ಅಭಿಮಾನಿಗಳು ಹೇಳುವುದೇನು?: ನಟ ಯಶ್ ಅವರಿಗೆ ಸುದೀಪ್ ಶುಭಾಶಯ ಕೋರಿರುವುದು ಇದೀಗ ಅಚ್ಚರಿ ಮೂಡಿಸಿದೆ. ಆದರೂ, ಇದು ಉತ್ತಮ ಬೆಳವಣಿಗೆ. ಹೀಗೆ ಕನ್ನಡ ಚಿತ್ರರಂಗದಲ್ಲಿ ಒಬ್ಬರಿಗೊಬ್ಬರು ಸಾಥ್ ನೀಡಿದರೆ, ಯಾವುದೇ ದೊಡ್ಡ ಸಮಸ್ಯೆಗಳು ಬಂದರೂ ನಿವಾರಿಸಬಹುದು. ನಿಮ್ಮಿಬ್ಬರ ನಡುವಿನ ಸ್ನೇಹ ಹೀಗೆ ಮುಂದುವರೆಯಲಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
Bestest wshs... @TheNameIsYash
— Kichcha Sudeepa (@KicchaSudeep) January 8, 2026
It always takes a lot to go against the tide.
May this new step take u closer to the destiny ,, u have set ua eyes upon.
Cheers ♥️
Ķ https://t.co/2YZ8NU3KEF
ಇನ್ನೂ ಇದೀಗ ನಟ ಯಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಟಾಕ್ಸಿಕ್ ಚಿತ್ರದ ಟೀಸರ್‌ಗೆ ಶುಭಹಾರೈಕೆಗಳ ಮಹಾಪೂರವೇ ಹರಿದುಬರುತ್ತಿವೆ. ಅಭಿಮಾನಿಗಳು ಸೇರಿದಂತೆ ಬಹುತೇಕ ಬಹುತೇಕ ಸಿನಿಪ್ರೇಮಿಗಳು ಶುಭಹಾರೈಸಿದ್ದಾರೆ. ಈ ನಡುವೆ ಕೆಲವೇ ಕೆಲವು ಮಂದಿ ಮಾತ್ರ ಟೀಕೆ ಮಾಡುತ್ತಿದ್ದಾರೆ.
ಸದ್ಯ ಟಾಕ್ಸಿಕ್ ಟೀಸರ್ ಸಾಮಾಜಿಕ ಜಾತಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಯಾರ ಬಾಯಲ್ಲೂ ಕೇಳಿದರೂ ಟಾಕ್ಸಿಕ್ ಟೀಸರ್‌ನದ್ದೇ ಮಾತು ಕೇಳಿಬರುತ್ತಿದೆ. ಇದರಲ್ಲಿ ಯಶ್ ಮಾಸ್ ಆಗಿ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ಒಂದು ಕೈಯಲ್ಲಿ ಸಿಗರೇಟ್, ಹೆಗಲ ಮೇಲೆ ವಿಭಿನ್ನ ರೀತಿಯ ರೈಫೆಲ್ ಹಿಡಿದುಕೊಂಡು 'ಡ್ಯಾಡ್ ಈಸ್ ಹೋಂ' ಎಂದು ಹೇಳಿದ್ದಾರೆ. ಇದೇ ಡೈಲಾಗ್ ದೊಡ್ಡ ಮಟ್ಟದಲ್ಲಿ ಸಂಚಲ ಮೂಡಿಸಿದೆ. ಅಲ್ಲದೆ, ಭಾರೀ ಕುತೂಹಲವನ್ನೂ ಹುಟ್ಟುಹಾಕಿದೆ.
ದಾಖಲೆ ಬರೆದ ಟೀಸರ್: ಅಭಿಮಾನಿಗಳು ಈ ಟೀಸರ್ ಅನ್ನು ಇನ್‌ಸ್ಟಾಗ್ರಾಂ, ಟ್ವಿಟರ್, ವಾಟ್ಸಪ್ ಸ್ಟೇಟಸ್‌ಗಳಲ್ಲಿ ಹಾಕಿಕೊಂಡಿದ್ದಾರೆ. ಅಲ್ಲದೆ, ಯುಟ್ಯೂಬ್‌ನಲ್ಲಿ ಈ ಟೀಸರ್‌ನದ್ದೇ ಹವಾ ಎಂಬಂತಾಗಿದೆ. ಇದರಿಂದ ಈ ಟೀಸರ್ 100 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದು ದಾಖಲೆ ಸೃಷ್ಟಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications