ಯಶ್ ತಾಯಿ ಅಲ್ಲ, ಅರುಣ್ ಕುಮಾರ್ ಪತ್ನಿಯಾಗಿ ಬಂದಿದ್ದೇನೆ: ಪುಷ್ಪ
ನಟ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇದೀಗ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಅವರು ನಿರ್ಮಾಪಕಿಯಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ತಮ್ಮ ಪಿಎ ಪ್ರೊಡಕ್ಷನ್ಸ್ ಮೂಲಕ ಮೊದಲ ಸಿನಿಮಾ ಕೂಡ ಘೋಷಣೆಯಾಗಿದೆ. ಎಲ್ಲರೂ ಯಶ್ ಅವರ ತಾಯಿ ಚಿತ್ರರಂಗಕ್ಕೆ ಬಂದರು ಎಂದು ಮಾತನಾಡಿಕೊಳ್ಳುತ್ತಿದ್ದರೆ, ಇದೀಗ ನಾನು ಯಶ್ ತಾಯಿಯಾಗಿ ಅಲ್ಲ, ಅರುಣ್ ಕುಮಾರ್ ಪತ್ನಿಯಾಗಿ ಬಂದಿದ್ದೇನೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ತಾವು ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಬರುತ್ತಿರುವ ಬಗ್ಗೆ ಅವರು ಮಾಧ್ಯಮಕ್ಕೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ನಾನು ಡ್ರೈವರ್ ಅರುಣ್ ಕುಮಾರ್ ಅವರ ಪತ್ನಿಯಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದೇನೆ. ಆದರೆ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿಯಾಗಿ ಅಲ್ಲ ಎಂದು ಪುಷ್ಪ ಅವರು ಹೇಳಿದ್ದಾರೆ. ನನ್ನ ಮಗ ಯಶ್ ಈಗಾಗಲೇ ಚೆನ್ನಾಗಿ ಕೆಲಸ ಮಾಡುತ್ತಾ ಚಿತ್ರರಂಗದಲ್ಲಿ ಬೆಳೆಯುತ್ತಿದ್ದಾನೆ. ಆದರೆ ನಾನು ಯಶ್ ಅವರ ತಾಯಿ ಎಂಬ ಕಾರಣಕ್ಕೆ ಯಾರೂ ನಮ್ಮ ಸಿನಿಮಾ ನೋಡಲ್ಲ, ಕಥೆ ಚೆನ್ನಾಗಿದ್ದರೆ ಮಾತ್ರ ಪ್ರೇಕ್ಷಕರು ಬರುತ್ತಾರೆ ಎಂದು ಹೇಳಿದ್ದಾರೆ.

ನನ್ನ ಮಕ್ಕಳೆಲ್ಲ ಸೆಟಲ್ ಆಗಿದ್ದಾರೆ. ಆದರೆ ನಾನು ಏನಾದ್ರೂ ಮಾಡಬೇಕು ಎನ್ನುವ ಉದ್ದೇಶದಿಂದ ಸಿನಿಮಾರಂಗಕ್ಕೆ ಬರುತ್ತಿದ್ದೇನೆ. ಸ್ಯಾಂಡಲ್‌ವುಡ್‌ನಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅವರು ಹಲವು ಕಲಾವಿದರನ್ನು ಬೆಳೆಸಿದ್ದಾರೆ. ಹಾಗಾಗಿ ನಾನು ಕೂಡ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬ ಉದ್ದೇಶ ಹೊಂದಿದ್ದೇನೆ. ಯಾರೋ ಒಬ್ಬರು ಅವಕಾಶ ನೀಡಿದ್ದರಿಂದಲೇ ನನ್ನ ಮಗ ಯಶ್‌ಗೆ ಕೂಡ ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಬೆಳೆದ ಎಂದು ನೆನೆದಿದ್ದಾರೆ.
ನನಗೆ ರೆಸ್ಟ್ ಮಾಡುವಂತೆ, ಹಳ್ಳಿಗೆ ಹೋಗಿ ಕೃಷಿ ಮಾಡಿಕೊಂಡು ನೆಮ್ಮದಿಯಾಗಿ ಇರುವಂತೆ ಯಶ್ ಹೇಳುತ್ತಿರುತ್ತಾನೆ. ಆದರೆ ನನಗೆ ಚಿತ್ರರಂಗದಲ್ಲಿ ಏನಾದರೂ ಮಾಡಬೇಕು ಎನ್ನುವ ಬಯಕೆ. ಅದರಲ್ಲೂ ಹೊಸಬರಿಗಾಗಿ ಏನಾದ್ರೂ ಮಾಡೋಣ ಎಂದುಕೊಂಡಿದ್ದೇನೆ. ಯಶ್ ಇನ್ನು ಮುಂದೆ ಸಣ್ಣ ಬಜೆಟ್‌ನ ಸಿನಿಮಾಗಳನ್ನು ಮಾಡುತ್ತಾರೋ ಇಲ್ವೋ ಗೊತ್ತಿಲ್ಲ, ನಾನಂತೂ ಹೊಸಬರಿಗೆ ಅವಕಾಶ ನೀಡುತ್ತೇನೆ. ಆದರೆ ಜನರು ನಮ್ಮನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದಿದ್ದಾರೆ.

ಯಾವಾಗಲೂ ಸಿನಿಮಾಗೆ ಅರ್ಥಪೂರ್ಣವಾಗಿರುವುದನ್ನು ಮಾಡುವುದು ನನ್ನ ಉದ್ದೇಶ. ಆದರೆ ಪ್ರೇಕ್ಷಕರು ನಮ್ಮನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡಲು ಕಾಯುತ್ತಿದ್ದೇನೆ. ಪ್ರೇಕ್ಷಕರು ಒಪ್ಪಿಕೊಂಡರೆ ಮಾತ್ರವೇ ನಾವು ಚಿತ್ರರಂಗದಲ್ಲಿರಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ನಾನು ಇಂಡಸ್ಟ್ರಿಗೆ ಚಾಲಕ ಅರುಣ್ ಕುಮಾರ್ ಪತ್ನಿಯಾಗಿ ಬರುತ್ತಿದ್ದೇನೆ. ನನ್ನ ಮಗ ಯಶ್ ಸೇರಿದಂತೆ ಎಲ್ಲರ ಕೆಲಸವನ್ನು ನಾನು ಪರಸ್ಪರ ಗೌರವಿಸುತ್ತೇನೆ. ಅವರ ಸಮರ್ಪಣೆ ಹಾಗೂ ತಾಳ್ಮೆ ನಿಜಕ್ಕೂ ಸ್ಫೂರ್ತಿದಾಯಕ. ನಾವಿಬ್ಬರೂ ನಮ್ಮ ವೃತ್ತಿ ವಿಚಾರದಲ್ಲಿ ಹಸ್ತಕ್ಷೇಪ ಮಾಡಲ್ಲ. ಯಶ್ ದೊಡ್ಡ ಬಜೆಟ್‌ನ ಸಿನಿಮಾ ಮಾಡುತ್ತಿದ್ದಾರೆ. ನಾನು ಅವರ ಸೆಟ್‌ಗೂ ಭೇಟಿ ನೀಡಿಲ್ಲ ಎಂದು ಪುಷ್ಪ ಹೇಳಿದ್ದಾರೆ.












Click it and Unblock the Notifications