ಮ್ಯಾಕ್ಸ್ ಅಪ್‌ಡೇಟ್ ಬಗ್ಗೆ ಫ್ಯಾನ್ಸ್ ವ್ಯಂಗ್ಯ: ಇನ್ನೊಬ್ಬರ ಮೇಲಿನ ಪೈಪೋಟಿಗೆ ಅಪ್‌ಡೇಟ್ ಕೊಡೋಕ್ಕಾಗಲ್ಲ ಎಂದ ಸುದೀಪ್!
ಬೆಂಗಳೂರು, ಫೆಬ್ರವರಿ 08: ನಟರ ಸಿನಿಮಾಗಳು ಘೋಷಣೆಯಾದ ಬಳಿಕ ಆ ಸಿನಿಮಾಗಳ ಬಗ್ಗೆ ಅವರ ಫ್ಯಾನ್ಸ್‌ಗೆ ತುಂಬಾನೆ ಕುತೂಹಲವಿರೋದು ಸಹಜ. ತಮ್ಮ ನೆಚ್ಚಿನ ನಟನ ಸಿನಿಮಾ ಎಲ್ಲಿಯವರೆಗೆ ಬಂದಿದೆ..? ಯಾವಾಗ ಬಿಡುಗಡೆ..? ಯಾರ್ಯಾರು ಅದರಲ್ಲಿ ಇದ್ದಾರೆ ಹೀಗೆ ಹೊಸ ಅಪ್‌ಡೇಟ್‌ಗಾಗಿ ಕಾಯುತ್ತಾರೆ. ಆದರೆ, ಕೆಲವೊಮ್ಮೆ ಇದೆ ಅತಿರೇಕಕ್ಕೆ ಹೋಗುತ್ತದೆ. ಆಗ ನಟರೆ ಅವರಿಗೆ ಬುದ್ದಿವಾದ ಹೇಳಬೇಕಾಗುತ್ತದೆ. ಸದ್ಯ ಕಿಚ್ಚ ಸುದೀಪ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಂದ ಬುದ್ದಿವಾದ ಹೇಳಿಸಿಕೊಂಡಿದ್ದಾರೆ.
ಎಸ್.. ವಿಕ್ರಾಂತ್ ರೋಣ ಸಿನಿಮಾ ಬಂದ ನಂತರ ಮತ್ತೆ ಸುದೀಪ್ ತೆರೆ ಮೆಲೆ ಕಾಣಿಸಿಕೊಂಡಿಲ್ಲ. ಸಿಸಿಎಲ್, ಬಿಗ್ ಬಾಸ್ ಎನ್ನುತ್ತಾ ಓಡಾಡುತ್ತಲೇ 'ಮ್ಯಾಕ್ಸ್' ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಈ ಸಮಯದಲ್ಲಿ ಬಿಗ್ ಬಾಸ್ ಒಟಿಟಿ ಬೇರೆ ಬರುತ್ತೆ ಎಂಬ ಗುಸುಗುಸು ಇದ್ದು, ಮ್ಯಾಕ್ಸ್ ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳು ಸ್ವಲ್ಪ ಅತಿರೇಕ ತೋರಿದ್ದಾರೆ.

ಮ್ಯಾಕ್ಸ್ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಪಟ್ಟು, ಸುದೀಪ್ ಹೇಳಿದ್ದೇನು?
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ನಟ ಸುದೀಪ್ ಆಗ್ಗಾಗೆ ತಮ್ಮ ಅಭಿಮಾನಿಗಳ ಜೊತೆಗೆ ಆನ್‌ಲೈನ್‌ನಲ್ಲಿ ಸಮಯ ಹಂಚಿಕೊಳ್ಳುತ್ತಾರೆ. ಆಸ್ಕ್ ಮಿ ಸೆಷನ್‌ಗಳ ಮೂಲಕ ಫ್ಯಾನ್ಸ್ ಜೊತೆಗೆ ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಇದೇ ವೇಳೆ ಮ್ಯಾಕ್ಸ್ ಬಗ್ಗೆ ಅಪ್‌ಡೇಟ್ ಕೇಳುತ್ತಾ ಕೆಲವರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಸುದೀಪ್ ಸರಿಯಾಗಿ ತಿರುಗೇಟು ನೀಡಿದ್ದಾರೆ.
ಗ್ ಬಾಸ್ ಮತ್ತು ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ನಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಕಿಚ್ಚ ಸುದೀಪ್ ಇತ್ತೀಚಿನ ಅಪ್‌ಡೇಟ್‌ನಲ್ಲಿ, ಅಭಿಮಾನಿಗಳ ಕಾಮೆಂಟ್‌ಗಳಿಗೆ ಸೋಶೀಯಲ್ ಮಿಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ವ್ಯಂಗ್ಯದಿಂದ ದೂರವಿರಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ನಟರೊಂದಿಗೆ ಸ್ಪರ್ಧೆಗಾಗಿ ಅಪ್‌ಡೇಟ್ ಕೊಡುವುದಕ್ಕೆ ಆಗೋದಿಲ್ಲ!
ಈ ಬಗ್ಗೆ ಬೆಳಗ್ಗೆಯೇ ಗುಡ್ ಮಾರ್ನಿಂಗ್ ಸಂದೇಶದೊಂದಿಗೆ ನಟ ಸುದೀಪ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. "ಅಪ್‌ಡೇಟ್ಸ್ ಬಗ್ಗೆ ಬರುತ್ತಿರುವ ಟ್ವೀಟ್‌ಗಳನ್ನು ನೋಡಿದರೆ ಕ್ರೇಜಿ ಅನ್ನಿಸುತ್ತದೆ. ಬೇರೆ ಬೇರೆ ನಟರ ಸಿನಿಮಾಗಳು ಬಿಡುಗಡೆ ಆಗುತ್ತಿದೆ ಎಂದು ಅಥವಾ ಬೇರೆ ನಟರಿಗೆ ಪೈಪೋಟಿ ನೀಡಬೇಕು ಎಂದು ಅಪ್‌ಡೇಟ್ಸ್ ಕೊಡುವುದಕ್ಕೆ ಸಾಧ್ಯವಿಲ್ಲ. ಚಿತ್ರತಂಡ ಏನಾದರೂ ರಿಲೀಸ್ ಮಾಡಲು ಅಥವಾ ಘೋಷಿಸಬೇಕು ಎಂದಾಗ ಮಾತ್ರ ಅಪ್‌ಡೇಟ್ ಕೊಡಲು ಸಾಧ್ಯ" ಎಂದು ಹೇಳಿದ್ದಾರೆ.
Mornnn wishes to alll you friends with a biggg hug 🤗♥️#MaxTheMovie pic.twitter.com/SfU11hbW9X
— Kichcha Sudeepa (@KicchaSudeep) February 8, 2024
ಮುಂದುವರಿದು, "ನನ್ನ ಕೆಲಸದ ಮೇಲೆ ನೀವು ತೋರುತ್ತಿರುವ ಪ್ರೀತಿಯನ್ನು ಮೆಚ್ಚಿಕೊಂಡಿದ್ದೇನೆ. ಆದರೆ ಅಪ್‌ಡೇಟ್ಸ್, ಬಿಗ್‌ಬಾಸ್ ಅಥವಾ ಸಿಸಿಎಲ್ ಮೇಲಿನ ವ್ಯಂಗ್ಯ ಸರಿಯಲ್ಲ. ಇದು ಚಿತ್ರದ ಕಡೆಗೆ ಒಬ್ಬರ ಆಸಕ್ತಿ, ಕುತೂಹಲವನ್ನು ಪ್ರದರ್ಶಿಸುವ ಮಾರ್ಗ ಇದಲ್ಲ. ಮ್ಯಾಕ್ಸ್ ಸಿನಿಮಾ ಚೆನ್ನಾಗಿ ಬರುತ್ತಿದೆ. ನಿಮ್ಮನ್ನು ರಂಜಿಸುವುದೇ ನಮ್ಮ ಮೊದಲ ಆದ್ಯತೆ. ಅದಕ್ಕಾಗಿ ಸಾಧ್ಯವಿರುವಷ್ಟು ಪ್ರಯತ್ನಿಸುತ್ತಿದ್ದೇವೆ" ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಮ್ಯಾಕ್ಸ್ ಬಗ್ಗೆ ಇನ್ನಷ್ಟು ಮಾಹಿತಿ
ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ 'ಮ್ಯಾಕ್ಸ್' ಚಿತ್ರಕ್ಕೆ ವಿಜಯ್ ಕಾರ್ತಿಕೇಯನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ. 'ಮ್ಯಾಕ್ಸ್' ಒಂದು ಆಕ್ಷನ್ ಥ್ರಿಲ್ಲರ್ ಎಂದು ಹೇಳಲಾಗಿದೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಜೊತೆ ಸೇರಿ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಪ್ಯಾನ್ ಇಂಡಿಯಾ ಸಿನಿಮಾವಾಗಲಿರುವ ಮ್ಯಾಕ್ಸ್‌ನಲ್ಲಿ ಕನ್ನಡ, ತಮಿಳು ಕಲಾವಿದರು ಹಾಗೂ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅರ್ಜುನ್ ಮಹಾಕ್ಷಯ್ ಎನ್ನುವ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.











Click it and Unblock the Notifications