ಸೋನು ನಿಗಮ್ ಹಾಡು ಕಿತ್ತು ಬಿಸಾಕಿ, ಭಾಷೆ ಮೊದಲು: ನೆಚ್ಚಿನ ಗಾಯಕನಿಗೇ ಗುಮ್ಮಿದ ಗಣೇಶ್
ಗಾಯಕ ಸೋನು ನಿಗಮ್ ಅವರು ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಸೋನು ನಿಗಮ್ ಅವರನ್ನು ಕನ್ನಡದಿಂದ ಬ್ಯಾನ್ ಮಾಡಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಮುಂದಿನ ಯಾವ ಸಿನಿಮಾಗಳಲ್ಲೂ ಸೋನು ನಿಗಮ್ ಹಾಡಬಾರದು ಎಂದು ಎಚ್ಚರಿಕೆ ಕೊಡಲಾಗಿತ್ತು. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾಗಳಲ್ಲಿ ಸೋನು ನಿಗಮ್ ಹಾಡು ಇದ್ದೇ ಇರುತ್ತಿತ್ತು. ಅಷ್ಟರಮಟ್ಟಿಗೆ ಈ ಕಾಂಬಿನೇಷನ್ ಹಿಟ್ ಕಂಡಿತ್ತು. ಆದರೆ ಈಗ ಗಣೇಶ್ ಅವರೇ ಸೋನು ನಿಗಮ್ ಹಾಡು ಮೊದಲು ಸಿನಿಮಾದಿಂದ ತೆಗೆಯಿರಿ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಗಣೇಶ್ ಅವರ ಮುಂಗಾರು ಮಳೆ ಸಿನಿಮಾದಲ್ಲಿ ಸೋನು ನಿಗಮ್ ಅವರ ಹಾಡುಗಳು ಇಂದಿಗೂ ಎವರ್‌ಗ್ರೀನ್. ಹಾಗಾಗಿ ಗಣೇಶ್ ಅವರ ಬಹುತೇಕ ಸಿನಿಮಾಗಳಲ್ಲಿ ಸೋನು ಅವರ ಹಾಡೇ ಫಿಕ್ಸ್ ಆಗುತ್ತಿತ್ತು. ಅವರ ಧ್ವನಿಯೂ ಗಣೇಶ್ ಅವರಿಗೆ ಚೆನ್ನಾಗಿ ಹೊಂದುತ್ತಿತ್ತು. ಅಷ್ಟರಮಟ್ಟಿಗೆ ಹಿಟ್ ನೀಡಿದ್ದರೂ ಈಗ ಗಣೇಶ್ ಅವರೇ ಭಾಷಾ ವಿಚಾರವಾಗಿ ಗಾಯಕನ ವಿರುದ್ಧ ತಿರುಗಿಬಿದ್ದಿದ್ದಾರೆ.

"ನಿದ್ರಾದೇವಿ ನೆಕ್ಸ್ಟ್ ಡೋರ್" ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ನಟ ಗಣೇಶ್ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಸಿನಿಮಾದಲ್ಲಿ ಸೋನು ನಿಗಮ್ ಹಾಡಿರುವ ಹಾಡಿತ್ತು ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ಗಣೇಶ್, 'ಈ ಸಿನಿಮಾದ ಹಾಡು ಕೇಳಿದ ಕೂಡಲೇ ನಾನು ಆ ವಿಚಾರ ಕೇಳಲೇಬೇಕು ಅಂದುಕೊಂಡೆ. ಏಕೆಂದರೆ ಪ್ರಾಮಾಣಿಕವಾಗಿ ಇದು ನಾನೇ ಇದ್ರೂ ಕೇಳುತ್ತಿದ್ದ ಪ್ರಶ್ನೆ. ಭಾಷೆ ನಮ್ಮಿಂದ ಅಲ್ಲ, ಭಾಷೆಯಿಂದ ನಾವು, ಭಾಷೆ ಉಳಿದರಷ್ಟೇ ನಾವು' ಎಂದು ಗಣೇಶ್ ಪರೋಕ್ಷವಾಗಿ ಸೋನು ನಿಗಮ್ ಅವರಿಗೆ ಟಾಂಗ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಭಾಷೆ ಉಳಿಸಿದರೆ ಅದೇ ಧನ್ಯ
'ಭಾಷೆನೇ ಇಲ್ಲಾಂದ್ರೆ ನಾವೇನು ಮಾಡೋಕಾಗುತ್ತೆ? ಸಾವಿರಾರು ವರ್ಷಗಳ ಇತಿಹಾಸ ಇದೆ. ಅದರಿಂದ ನಾವಷ್ಟೇ, ನಮ್ಮಿಂದ ಭಾಷೆ ಅಲ್ಲ. ನಮ್ಮಂತವರು ಸಾವಿರಾರು ಜನ ಬಂದು ಹೋಗ್ತಾರೆ. ಆದರೆ ಉಳಿಯೋದು ಭಾಷೆ ಒಂದೇ. ಭಾಷೆಯನ್ನ ಬೆಳೆಸೋದಲ್ಲ, ಉಳಿಸೋದು ಮುಖ್ಯ. ಇರುವ ಭಾಷೆಯನ್ನ ಉಳಿಸಿದರೇ ಅದೇ ಧನ್ಯ ಎಂದಿದ್ದಾರೆ. ಈ ಸಿನಿಮಾ ನಿರ್ಮಾಪಕರು ನನ್ನ ಮನವಿಯನ್ನ ಪರಿಗಣಿಸುತ್ತೇವೆ ಎಂದಿದ್ದಾರೆ. ಪಟ್ ಅಂತ ಹೇಳಿಬಿಡಿ, ಯೋಚನೆ ಮಾಡೋದು ಬೇಡ, ಚೇಂಜ್ ಮಾಡ್ತೀವಿ ಅಂತ ಹೇಳಿಬಿಡಿ. ಭಾಷೆಯೇ ಮೊದಲು' ಎಂದು ಗಣೇಶ್ ಹೇಳಿದ್ದಾರೆ.

ಈ ಮೂಲಕ ಕನ್ನಡಿಗರ ಅವಹೇಳನ ಮಾಡಿದ ಗಾಯಕ ಸೋನು ನಿಗಮ್ ಹಾಗೂ ಇತ್ತೀಚೆಗೆ ಕನ್ನಡ ಭಾಷೆಯ ಬಗ್ಗೆ ವಿವಾದ ಸೃಷ್ಟಿಸಿದ ಕಮಲ್ ಹಾಸನ್ ಅವರಿಗೆ ತಮ್ಮ ಮಾತಿನ ಮೂಲಕ ಒಂದೇ ಕಲ್ಲಿನಿಂದ ಎರಡು ಹಕ್ಕಿಗೆ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರತಂಡ ಕೂಡ ಸೋನು ನಿಗಮ್ ಹಾಡನ್ನು ಬದಲಾಯಿಸಿ, ಬೇರೆಯವರಿಂದ ಹಾಡು ಹಾಡಿಸುವುದಾಗಿ ತಿಳಿಸಿದೆ. ಗಣೇಶ್ ಅವರ ಈ ನಡೆಗೆ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.












Click it and Unblock the Notifications