Daali Dhananjaya: ಡಾಲಿ ಧನಂಜಯ್ ಮನೆಯಲ್ಲಿ ಸೂತಕದ ಛಾಯೆ: ನಟನ ಪ್ರೀತಿಯ ಅಜ್ಜಿ ಇನ್ನಿಲ್ಲ
ಹಾಸನ, ಜುಲೈ 24: ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ ಅವರ ಅಜ್ಜಿ ಮಲ್ಲಮ್ಮ (95) ವಿಧಿವಶರಾಗಿದ್ದಾರೆ. ಧನಂಜಯ್ ಅವರ ಪ್ರೀತಿಯ ಅಜ್ಜಿ ಅಂದರೆ ಅಪ್ಪನ ತಾಯಿ ಮಲ್ಲಮ್ಮ ಹಾಸನ ಜಿಲ್ಲೆಯ ಅರಸೀಕೆರೆಯ ಕಾಳೇನಹಳ್ಳಿಯಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಲ್ಲಮ್ಮ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಪ್ರೀತಿಯ ಅಜ್ಜಿಯ ಅಗಲಿಕೆಯಿಂದ ಡಾಲಿ ಧನಂಜಯ್ ದು:ಖದಲ್ಲಿ ಇದ್ದಾರೆ. ಇಂದು ಜುಲೈ 24ರಂದು ಅರಸೀಕೆರೆಯ ಕಾಳೇನಹಳ್ಳಿಯಲ್ಲಿಯೇ ಮಲ್ಲಮ್ಮ ಅಜ್ಜಿಯ ಅಂತ್ಯಕ್ರಿಯೆ ಕೂಡ ನೆರವೇರುತ್ತಿದೆ ಎಂದು ತಿಳಿದು ಬಂದಿದೆ.

ಲಿಂಗದೇವರಾಜೇಗೌಡರ ಪತ್ನಿಯಾಗಿದ್ದ ಮಲ್ಲಮ್ಮ ಅವರಿಗೆ ಒಟ್ಟು ಐವರು ಮಕ್ಕಳು. ಇವರ ಎರಡನೇ ಪುತ್ರ ಅಡವಿಸ್ವಾಮಿ. ಅವರ ಮಗನೇ ಡಾಲಿ ಧನಂಜಯ್. ಅಪ್ಪನ ತಾಯಿ ಜೊತೆ ತುಂಬಾನೆ ಅಟ್ಯಾಚ್ ಆಗಿದ್ದ ಡಾಲಿ ಧನಂಜಯ್ ಊರಿಗೆ ಹೋದಾಗ ಹೆಚ್ಚಿನ ಸಮಯವನ್ನು ಅಜ್ಜಿಯ ಜೊತೆಗೆ ಕಳೆಯುತ್ತಿದ್ದರು.
ಮಲ್ಲಮ್ಮ ಅವರು ಪ್ರತಿ ಬಾರಿ ಚುನಾವಣಾ ಸಂದರ್ಭದಲ್ಲಿ ಮೊಮ್ಮಗ ಡಾಲಿ ಧನಂಜಯ್ ಜೊತೆ ತೆರಳಿ ತಪ್ಪದೇ ಮತದಾನ ಮಾಡುತ್ತಿದ್ದರು. ಇನ್ನು ವೀಕೆಂಡ್ ವಿತ್ ರಮೇಶ್ ಶೋಗೆ ಆಗಮಿಸಿದ್ದ ತಮ್ಮ ಪ್ರೀತಿಯ ಅಜ್ಜಿಯನ್ನು ಧನಂಜಯ್ ತಾವು ಕುಳಿತಿದ್ದ ಸೀಟ್ ಮೇಲೆ ಕುಳ್ಳಿರಿಸಿ ಖುಷಿಪಟ್ಟಿದ್ದರು. ಈ ವೇಳೆ ಮಲ್ಲಮ್ಮ ಅಜ್ಜಿ, ನಾನು ಎಲ್ಲರ ಮದುವೆ ನೋಡಿದ್ದೇನೆ. ಧನಂಜಯ್‌ನ ಮದುವೆಯೊಂದು ನೋಡಬೇಕು ಎಂದು ತಮ್ಮ ಆಸೆಯನ್ನು ಹೇಳಿಕೊಂಡಿದ್ದರು. ಇನ್ನು ಆಗಾಗ ಊರಿಗೆ ತೆರಳುತ್ತಿದ್ದ ಧನಂಜಯ್ ಅಜ್ಜಿಯೊಂದಿಗೆ ಸಮಯ ಕಳೆಯುತ್ತಾ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಶೇರ್ ಮಾಡುತ್ತಿದ್ದರು.












Click it and Unblock the Notifications