ಸೂಸೈಡ್‌ಗೆ ಯತ್ನಿಸಿದ 'ಕಲ್ಟ್' ಸಿನಿಮಾ ಟೆಕ್ನಿಷಿಯನ್, ಜಮೀರ್ ಪುತ್ರನ ವಿರುದ್ಧ ದೊಡ್ಡ ಆರೋಪ!
ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಹಾಗೂ ನಟ ಜೈದ್ ಖಾನ್ ಅವರ 'ಕಲ್ಟ್' ಸಿನಿಮಾ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಚಿತ್ರತಂಡದ ಟೆಕ್ನಿಷಿಯನ್ ಸೂಸೈಡ್‌ಗೆ ಯತ್ನಿಸಿರುವ ಸಂಬಂಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿಯಾಗಿದೆ.
ಕಲ್ಟ್ ಚಿತ್ರತಂಡ ಮಾಡಿದ ಯಡವಟ್ಟಿನಿಂದಾಗಿ ಡ್ರೋನ್ ಟೆಕ್ನಿಷಿಯನ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗಿದೆ. ಚಿತ್ರತಂಡದ ಡ್ರೋನ್ ಟೆಕ್ನಿಷಿಯನ್ ಆಗಿದ್ದ ಸಂತೋಷ್ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದ್ದು, ಇದಕ್ಕೆ ಕಲ್ಟ್ ಚಿತ್ರತಂಡದ ಯಡವಟ್ಟು ಕಾರಣ ಎನ್ನಲಾಗಿದೆ.

ಅಲ್ಲದೆ ಇದಕ್ಕೆ ಕಾರಣವಾದ ಕಲ್ಟ್ ಸಿನಿಮಾ ನಾಯಕ ಜೈದ್ ಖಾನ್ ಹಾಗೂ ನಿರ್ದೇಶಕ ಅನಿಲ್ ಮೇಲೆ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ದೂರು ಕೂಡ ದಾಖಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕಲ್ಟ್ ಸಿನಿಮಾದ ಶೂಟಿಂಗ್ ಚಿತ್ರದುರ್ಗದಲ್ಲಿ ನಡೆದಿತ್ತು. ಇದಕ್ಕೆ ಡ್ರೋನ್ ಟೆಕ್ನಿಷಿಯನ್ ಆಗಿ ಸಂತೋಷ್ ಕೆಲಸ ಮಾಡಿದ್ದರು.
ಆದರೆ ಕಲ್ಟ್ ಸಿನಿಮಾ ಲೊಕೇಷನ್‌ನಲ್ಲಿ ಶೂಟಿಂಗ್ ತುಂಬಾ ರಿಸ್ಕ್ ಇದೆ ಎಂದು ಸಂತೋಷ್ ಡೈರೆಕ್ಟರ್ ಗಮನಕ್ಕೆ ತಂದಿದ್ದರು. ಆದರೂ ಪರವಾಗಿಲ್ಲ ಎಂದು ಸಂತೋಷ್‌ಗೆ ಡ್ರೋನ್ ಬಳಸುವಂತೆ ಹೇಳಿದ್ದರು. ಅದರಂತೆ ಸಂತೋಷ್ ಡ್ರೋನ್ ಬಳಸಿದ್ದರು. ಆಗ ಶೂಟಿಂಗ್ ವೇಳೆ ಡ್ರೋನ್ ವಿಂಡ್ ಫ್ಯಾನ್‌ಗೆ ತಗುಲಿ ಪೀಸ್ ಪೀಸ್ ಆಗಿತ್ತು. ಇದಕ್ಕೆ ನಷ್ಟ ಭರಿಸಿಕೊಡುವಂತೆ ಸಂತೋಷ್ ಸಿನಿಮಾ ತಂಡದ ಬಳಿ ಕೇಳಿಕೊಂಡಿದ್ದರು.

ಆದರೆ ಚಿತ್ರತಂಡ ಸಂತೋಷ್‌ಗೆ ಯಾವುದೇ ನಷ್ಟ ಭರಿಸಿ ಕೊಡಲಿಲ್ಲ ಎಂದು ಆರೋಪಿಸಲಾಗಿದೆ. ಅಲ್ಲದೆ ಈ ಸಿನಿಮಾವನ್ನು ನಟರಾದ ಜೈದ್ ಖಾನ್ ಅವರೇ ನಿರ್ಮಾಣ ಕೂಡ ಮಾಡುತ್ತಿದ್ದು, ಅವರ ಬಳಿಯೂ ಪರಿಹಾರ ನೀಡುವಂತೆ ಕೇಳಿಕೊಂಡಿದ್ದರು. ಆದರೆ ಜೈದ್ ಖಾನ್ ಅವರು ಸಂತೋಷ್ ಅವರಿಂದ ಖಾಲಿ ಪೇಪರ್ ಮೇಲೆ ಸೈನ್ ಮಾಡಿಸಿಕೊಂಡಿದ್ದರು ಅಲ್ಲದೆ ಡ್ರೋನ್‌ನಲ್ಲಿ ಶೂಟ್ ಆಗಿದ್ದ ಫುಟೇಜ್ ಇದ್ದ ಮೆಮೋರಿ ಕಾರ್ಡ್ ಅನ್ನು ಸಹ ಕಸಿದುಕೊಂಡಿದ್ದಾರೆ ಎಂದು ಸಂತೋಷ್ ಆರೋಪ ಮಾಡಿದ್ದಾರೆ.
ಇನ್ನು ಸಂತೋಷ್ ಡ್ರೋನ್‌ಗಾಗಿ 25 ಲಕ್ಷ ಬಂಡವಾಳ ಹಾಕಿದ್ದ. ಹಲವು ಸಿನಿಮಾಗಳಿಗೆ ಸಂತೋಷ್ ಡ್ರೋನ್ ಟೆಕ್ನಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದ. ಪ್ರತಿದಿನಕ್ಕೆ 25,000 ರೂಪಾಯಿ ಚಾರ್ಜ್ ಮಾಡುತ್ತಿದ್ದ ಎನ್ನಲಾಗಿದೆ. ಇನ್ನು ಶೂಟಿಂಗ್‌ನಲ್ಲಿ ನಡೆದ ಘಟನೆಯಿಂದಾಗಿ ಡ್ರೋನ್ ಹಾಳಾಗಿದ್ದು, ಅತ್ತ ಪರಿಹಾರವೂ ಸಿಗದ ಕಾರಣ ಇದರಿಂದ ಮನನೊಂದಿದ್ದ. ಇದೇ ನೋವಿನಲ್ಲಿ ಸಂತೋಷ್ ಮನೆಯಲ್ಲಿ ನೇಣಿಗೆ ಕೊರಳೊಡ್ಡಲು ಮುಂದಾಗಿದ್ದ ಎಂದು ಹೇಳಲಾಗಿದೆ.
ಇದು ಕುಟುಂಬಸ್ಥರಿಗೆ ತಿಳಿದ ಕಾರಣ ಸಂತೋಷ್‌ನನ್ನ ಸಾವಿನಿಂದ ಪಾರು ಮಾಡಿದ್ದಾರೆ. ಅಲ್ಲದೆ ಸಂತೋಷ್ ಕುಟುಂಬಸ್ಥರು ಚಿತ್ರತಂಡದ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ವಿಚಾರಣೆಗೆ ಬರುವಂತೆ ಚಿತ್ರತಂಡಕ್ಕೆ ಪೊಲೀಸರು ಸೂಚನೆ ನೀಡಿದ್ದಾರೆ. ಇದರ ಬಳಿಕ ತಪ್ಪಿತಸ್ಥರ ವಿರುದ್ಧ ಪೊಲೀಸರು ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.












Click it and Unblock the Notifications