• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ನಾನು ಹಿಂದು'ವೆಂದರೆ ಕೋಮುವಾದವೇ? ಕಲ್ಲಡ್ಕ ಪ್ರಭಾಕರ್ ಭಟ್ ಸಂದರ್ಶನ

By ಅನುಶಾ ರವಿ
|

"ಹಿಂದು ಎಂಬ ಪದವನ್ನು ನಾನು ಹೇಳಿದಾಗ ಮಾತ್ರ ಅದು ಕೋಮುವಾದ ಅನ್ನಿಸುತ್ತದಲ್ಲ, ಯಾಕೆ..?" ಹಾಗೆನ್ನುತ್ತಲೇ ಒನ್ ಇಂಡೀಯಾಕ್ಕೆ ಸಂದರ್ಶನ ನೀಡಿದರು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್.

ಕರ್ನಾಟಕದ ಸಂಘಪರಿವಾರದ ಮುಖಂಡರಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಕಲ್ಲಡ್ಕ ಪ್ರಭಾಕರ್ ಭಟ್ಟರದು ಸರಳ ವ್ಯಕ್ತಿತ್ವ. ಸದಾ ಬಿಳಿ ಉಡುಪಿನಲ್ಲಿ ಕಾಣಿಸಿಕೊಳ್ಳುವ ಭಟ್ಟರ ಹಣೆಯ ಮೇಲೆ ಕುಂಕುಮ, ಭಸ್ಮ ಮರೆಯಾದುದೇ ಇಲ್ಲ. ಕಟ್ಟರ್ ಹಿಂದುವಾದಿಯಾದ ಭಟ್ಟರು ಎಲ್ಲೇ ಹಿಂದು ವಿರೋಧಿ ಹೇಳಿಕೆಯಾಗಲಿ, ನಡೆಯಾಗಲಿ ಕಂಡುಬಂದರೆ ನೇರಾನೇರವಾಗಿ ಅದನ್ನು ಖಂಡಿಸುವವರು.

ಕೋಮುವಾದ ವರ್ಸಸ್ ಜಾತ್ಯತೀತವಾದ : ಸಿದ್ದರಾಮಯ್ಯ ಸಂದರ್ಶನ

ಪ್ರಸ್ತುತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರ ಕಾರ್ಯಕಾರಿಣಿ ಸದಸ್ಯರಾಗಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಜವಾಬ್ದಾರಿ ಹೊತ್ತಿರುವ ಭಟ್ಟರು ಹಲವರ ಪಾಲಿಗೆ ಮತಾಂಧರೆನ್ನಿಸಿದರೆ, ಮತ್ತಷ್ಟು ಜನರ ಪಾಲಿಗೆ ಒಬ್ಬ ಉತ್ತಮ ಶಿಕ್ಷಣ ತಜ್ಞರಾಗಿದ್ದಾರೆ.

ದಕ್ಷಿಣ ಕನ್ನಡದ ಕಲ್ಲಡ್ಕದಲ್ಲಿ ತಮ್ಮದೇ ಆದ ಶಾಲೆಯೊಂದನ್ನು ನಡೆಸುತ್ತಿರುವ ಅವರು ಒನ್ ಇಂಡಿಯಾಕ್ಕೆ ನೀಡಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ. 2018 ರ ಕರ್ನಾಟಕ ವಿಧಾನಸಭೆಯಲ್ಲಿ ಆರ್ ಎಸ್ ಎಸ್ ಪಾತ್ರವೇನು? ಹಿಂದು ಸಮಾಜದ ಏಕೆ ಒಗ್ಗಟ್ಟು ಸಾಧಿಸಬೇಕಿದೆ? ಧರ್ಮ ಮತ್ತು ಕಾನೂನಿನ ನಡುವೆ ಇರುವ ವ್ಯತ್ಯಾಸವೇನು ಎಂಬಿತ್ಯಾದಿ ವಿಷಯಗಳ ಕುರಿತು ಸವಿವರವಾಗಿ ಅವರು ಮಾತನಾಡಿದ್ದಾರೆ.

ಹಿಂದುಗಳು ದುರ್ಬಲರಾಗಿದ್ದಾರೆ!

ಹಿಂದುಗಳು ದುರ್ಬಲರಾಗಿದ್ದಾರೆ!

ಪ್ರಶ್ನೆ: ನಿಮ್ಮ ಪ್ರಕಾರ ದಕ್ಷಿಣ ಕನ್ನಡದಲ್ಲಿ ಕೋಮುವಾದಕ್ಕೆ ಮುಖ್ಯ ಕಾರಣವೇನು?

ಉತ್ತರ: ಇಲ್ಲಿ ಒಂದೇ ದೇವರನ್ನು ಪೂಜಿಸುವ ಜನರಿದ್ದಾರೆ. ಸಮಸ್ಯೆ ಅದಲ್ಲ. ಆದರೆ ಒಂದೇ ದೇವರನ್ನು ಪೂಜಿಸುವ ಜನರು, ಬೇರೆ ದೇವರನ್ನು ಪೂಜಿಸುವ ಜನರನ್ನು ಅಸಹನೆಯಿಂದ ನೋಡುತ್ತಿದ್ದಾರೆ. ಹಿಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಅಲ್ಲಿ ಕಲ್ಲು ತೂರಾಟ ಶುರುವಾಗುತ್ತದೆ, ಗಾಜಿನ ಬಾಟಲ್ ಗಳನ್ನು ಎಸೆಯುವುದೂ ಪ್ರಾರಂಭವಾಗುತ್ತದೆ. ಇದರಿಂದ ಹಿಂಸೆಗೆ ಪ್ರಚೋದನೆ ಸಿಕ್ಕಂತಾಗುತ್ತದೆ. ದಕ್ಷಿಣ ಕನ್ನಡದಲ್ಲಿ ಆರೆಸ್ಸೆಸ್ ಬಲಯುತವಾಗಿದೆ. ಇಲ್ಲಿ ನಾವು ಸಾವಿರಕ್ಕೂ ಹೆಚ್ಚು ಶಾಖೆಯನ್ನು ಹೊಂದಿದ್ದೇವೆ. ಆದರೆ ಹಿಂದು ಸಮುದಾಯ ದುರ್ಬಲಗೊಳ್ಳುತ್ತಿರುವುದು ಆತಂಕದ ವಿಚಾರ. ಇಲ್ಲಿ ಹಿಂಸಾಚಾರ ಹೆಚ್ಚಾಗಿರುವುದಕ್ಕೂ, ಹಿಂದು ಸಮಾಜ ದುರ್ಬಲವಾಗುತ್ತಿರುವುದೇ ಕಾರಣ.

ಹಿಂದೂಗಳ ಪಾಲಿಗೆ ಸರಕಾರ ಸತ್ತಿದೆ: ಶಾಸಕ ಸುನಿಲ್ ಕುಮಾರ್ ಸಂದರ್ಶನ

ಬಹುಸಂಖ್ಯಾತರಲ್ಲಿ ಒಗ್ಗಟ್ಟಿಲ್ಲ

ಬಹುಸಂಖ್ಯಾತರಲ್ಲಿ ಒಗ್ಗಟ್ಟಿಲ್ಲ

ಪ್ರ: ಬಹುಸಂಖ್ಯಾತ ಹಿಂದುಗಳು ದಕ್ಷಿಣ ಕನ್ನಡದಲ್ಲಿ ದುರ್ಬಲರಾಗಿದ್ದಾರೆ ಮತ್ತು ತುಳಿತಕ್ಕೊಳಗಾಗುತ್ತಿದ್ದಾರೆ ಎಂದು ಹೇಗೆ ಹೇಳುತ್ತೀರಾ?

ಉ: ಬಹುಸಂಖ್ಯಾತರು ಎಂಬುದು ನಿಜ. ಆದರೆ ಬಹುಸಂಖ್ಯಾತರಲ್ಲಿ ಒಗ್ಗಟ್ಟಿಲ್ಲ. ದೇಶ ಎಂಬುದು ಒಂದೇ ಸಮುದಾಯವಾದರೂ, ಕಾಂಗ್ರೆಸ್ ಈ ಸಮುದಾಯದಲ್ಲೇ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಎಂದು ವಿಭಜನೆಯ ಗೆರೆ ಎಳೆದಿದೆ. ಅಷ್ಟೇ ಅಲ್ಲ, ಹಿಂದು ಸಮುದಾಯದಲ್ಲೂ ಜಾತಿ, ಉಪಜಾತಿ ಎಂದು ನಿರಂತರವಾಗಿ ವಿಭಜನೆ ಮಾಡಿದೆ. ಇದೀಗ ಸಿದ್ದರಾಮಯ್ಯ ಲಿಂಗಾಯತ ಸಮುದಾಯವನ್ನು ಇಬ್ಭಾಗ ಮಾಡಲು ಹೊರಟಿದ್ದಾರೆ. ನಾವು ಈಗಲೂ ಆಕ್ರಮಣಕಾರಿಗಳಾಗಿಲ್ಲ. ನಾವೊಮ್ಮೆ ಆಕ್ರಮಣಶೀಲರಾದರೆ ಅವರ್ಯಾರೂ ಉಳಿಯೋದಿಲ್ಲ!

ಇವೆಲ್ಲ ಕಾಂಗ್ರೆಸ್ ಸೃಷ್ಟಿ!

ಇವೆಲ್ಲ ಕಾಂಗ್ರೆಸ್ ಸೃಷ್ಟಿ!

ಪ್ರ: ಹಿಂದು ಮತದಲ್ಲಿ ಮೇಲ್ಜಾತಿಯನ್ನು ಓಲೈಸುವುದರಿಂದ ಕೆಳಜಾತಿಯಲ್ಲಿ ಒಡಕು ಮೂಡುತ್ತದೆಯೇ?

ಉ: ಖಂಡಿತ ಇಲ್ಲ. ಇವೆಲ್ಲ ಕಾಂಗ್ರೆಸ್ ನ ಸೃಷ್ಟಿ ಅಷ್ಟೆ. ಸಂಘ ಎಂದಿಗೂ ಈ ದೃಷ್ಟಿಯಲ್ಲಿ ಯೋಚಿಸುವುದಿಲ್ಲ. 1940 ರಲ್ಲಿ ಇಲ್ಲಿ ಸಂಘ ಸ್ಥಾಪನೆಯಾಗುವ ಹೊತ್ತಿಗೆ, ಕೊಂಕಣಿ ಸಮಾಜ, ಮರಾಠಿ ಸಮಾಜ, ಹವ್ಯಕ ಸಮಾಜ, ಗೌಡ ಸಂಘ, ಭಟ್ ಸಂಘ ಎಂಬಿತ್ಯಾದಿ ನೂರಾರು ಸಮಾಜಗಳಿದ್ದವು. ಆದರೆ ಈಗ ಇವೆಲ್ಲವೂ ಸಂಘದ ಒಂದು ಭಾಗವಾಗಿವೆ. ಅಷ್ಟೇ ಅಲ್ಲ, ತಥಾಕಥಿತ ಹಿಂದುಳಿದ ಸಮುದಾಯದ ಸಾಕಷ್ಟು ಜನರು ಈಗ ನಮ್ಮೊಂದಿಗಿದ್ದಾರೆ.

ಏಕೀಕರಣಕ್ಕಾಗಿ ನೂರಾರು ಕೆಲಸ

ಏಕೀಕರಣಕ್ಕಾಗಿ ನೂರಾರು ಕೆಲಸ

ಪ್ರ: ಹಿಂದು ಸಮಾಜದ ಏಕೀಕರಣಕ್ಕಾಗಿ ನೀವೇನು ಮಾಡುತ್ತಿದ್ದೀರಿ?

ಉ: ನಮ್ಮನ್ನು ಮುಸ್ಲಿಂ ವಿರೋಧಿ ಅಥವಾ ಕ್ರಿಶ್ಚಿಯನ್ ವಿರೋಧಿ ಸಮುದಾಯ ಎಂದು ನೋಡುವುದುಂಟು. ಆದರೆ ನಾವು ಹಾಗಿಲ್ಲ. ನಮ್ಮ ಕೆಲಸ ವಿಭಿನ್ನವಾದುದು. ಹಿಂದು ಸಮಾಜದಲ್ಲಿ ಅಸ್ಪೃಶ್ಯತೆಯ ಸಮಸ್ಯೆ ಇದೆ. ನಾವು ಈ ಪಾಪವನ್ನು ಹೋಗಲಾಡಿಸಲು ಯತ್ನಿಸುತ್ತಿದ್ದೇವೆ. ನಾವು ದಲಿತರ ಮನೆಗಳಿಗೆ ಭೇಟಿ ನೀಡುತ್ತಿದ್ದೇವೆ, ಅವರೊಂದಿಗೆ ಬೆರೆತು ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದ್ದೇವೆ.

ವಿಧವೆಯರ ವಿವಾಹ, ವರದಕ್ಷಿಣೆ ನಿರ್ಮೂಲನೆಯಂಥ ಸುಧಾರಣೆಯ ಕೆಲಸಕ್ಕೆ ಕೈಹಾಕಿದ್ದೇವೆ. ಶಿಕ್ಷಣ, ಮೂಲಸೌಕರ್ಯ, ವೈದ್ಯಕೀಯ ಕೇಂದ್ರ ಸೇರಿದಂತೆ ಅಶಕ್ತರಿಗೆ ನೆರವು ನೀಡುವ 1.57ಕ್ಕೂ ಹೆಚ್ಚು ಸೇವಾ ಘಟಕಗಳನ್ನು ನಾವು ಆರಂಭಿಸಿದ್ದೇವೆ. ಆರೆಸ್ಸೆಸ್ ನ ಉದ್ದೇಶ ನಮ್ಮ ದೇಶ, ಸಂಸ್ಕೃತಿ ಮತ್ತಿ ಇತಿಹಾಸವನ್ನು ಕಾಪಾಡುವುದು ಅಷ್ಟೆ.

ಬಷೀರ್ ಹತ್ಯೆಯಲ್ಲಿ ಬಜರಂಗದಳದ ಕೈವಾಡವಿಲ್ಲ

ಬಷೀರ್ ಹತ್ಯೆಯಲ್ಲಿ ಬಜರಂಗದಳದ ಕೈವಾಡವಿಲ್ಲ

ಪ್ರ: ಬಜರಂಗದಳವನ್ನೂ ಆರೆಸ್ಸೆಸ್ಸಿನ ಭಾಗವೆಂದೇ ತಿಳಿಯಲಾಗಿದೆ. ಅಕಸ್ಮಾತ್ ಬಜರಂಗದಳದ ಸದಸ್ಯನೊಬ್ಬ ಕೋಮುಗಲಭೆಯಲ್ಲಿ ಪಾಲ್ಗೊಂಡರೆ ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?

ಉ: ಬಜರಂಗದಳ ಸಂಘದ ವಿಶ್ವ ಹಿಂದು ಪರಿಷತ್ತಿನ ಒಂದು ಯುವ ಘಟಕ. ಇಂಥ ಘಟನೆಗಳು ಸಂಘದ ಹೆಸರನ್ನು ಹಾಳುಮಾಡಲು ನಡೆಯುತ್ತಿವೆ. ಮುಸ್ಲಿಮರ ಮೇಲೆ ಎಲ್ಲೇ ದಾಳಿಯಾದರೂ ಅದರಲ್ಲಿ ಆರೆಸ್ಸೆಸ್, ವಿಶ್ವಹಿಂದು ಪರಿಷತ್ ಅಥವಾ ಬಜರಂಗದಳದ ಹೆಸರನ್ನು ಸೇರಿಸಲಾಗುತ್ತದೆ. ಯಾವುದೇ ಸಾಕ್ಷ್ಯವಿಲ್ಲದೆ ಬಂಧಿಸಲಾಗುತ್ತದೆ.

'ಯಾರ ಮೇಲೂ ಅನಗತ್ಯವಾಗಿ ದಾಳಿ ನಡೆಸಬೇಡಿ, ಹಲ್ಲೆ ಮಾಡಬೇಡಿ' ಎಂದು ನಾವು ನಮ್ಮ ಎಲ್ಲಾ ಸದಸ್ಯರಿಗೂ, ಕಾರ್ಯಕರ್ತರಿಗೂ ಹೇಳಿದ್ದೇವೆ. ಆದರೆ ಕೆಲವೊಮ್ಮೆ ನಮ್ಮ ಮೇಲೆಯೇ ದಾಳಿ ನಡೆದಾಗ ನಾವು ಪ್ರತಿದಾಳಿ ನಡೆಸುವುದು ಅನಿವಾರ್ಯವಾಗುತ್ತದೆ. ಸ್ವರಕ್ಷಣೆಗಾಗಿಯಾದರೂ. ಹಲವು ಸನ್ನಿವೇಶಗಳಲ್ಲಿ ನಮ್ಮ ಕಾರ್ಯಕರ್ತರು ಇಂಥ ಘಟನೆಗಳಲ್ಲಿ ಪಾಲ್ಗೊಳ್ಳದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ್ ರೈ ಅಂಥವರು ವೃಥಾ ಆರೆಸ್ಸೆಸ್ ಹೆಸರನ್ನು ಎಳೆದು ತರುತ್ತಾರೆ. ಬಷೀರ್ ಸಾವಿನಲ್ಲಿ ನಮ್ಮ ಸಂಘದ ಯಾರ ಪಾತ್ರವೂ ಇಲ್ಲ. ಅವರ ಸಾವಿಗೆ ನಮಗೂ ನೋವಾಗಿದೆ.

ಪಿಎಫ್ ಐ ರಾಷ್ಟ್ರ ವಿರೋಧಿ ಸಂಘಟನೆ

ಪಿಎಫ್ ಐ ರಾಷ್ಟ್ರ ವಿರೋಧಿ ಸಂಘಟನೆ

ಪ್ರ: ಪಿಎಫ್ ಐ ಸದಸ್ಯರು ಹಿಂದುಗಳ ಮೇಲೆ ದಾಳಿ ನಡೆಸಿ ಬಂಧನಕ್ಕೊಳಗಾದರೂ ಇದೇ ಮಾತು ಅನ್ವಯವಾಗುತ್ತದೆಯೇ?

ಉ: ಹಿಂದು ಕಾರ್ಯಕರ್ತರ ಹತ್ಯೆಯ ಹಿಂದೆ ಪಿಎಫ್ ಐ ಮತ್ತು ಕೆಎಫ್ ಡಿ ಸಂಘಟನೆಗಳ ಕೈವಾಡವಿದೆ ಎಂದು ನಾವು ನಂಬಿದ್ದೇವೆ. ಏಕೆಂದರೆ ಅವರು ಹಿಂದು ವಿರೋಧಿಗಳು ಮಾತ್ರವಲ್ಲ, ರಾಷ್ಟ್ರ ವಿರೋಧಿಗಳು. ಸಿಮಿ ಸಂಘಟನೆಯನ್ನು ನಿಷೇಧಿಸಿದ ಮೇಲೆ ಹುಟ್ಟಿದವು ಅವು. ಮಂಗಳೂರು ಬಾಂಬ್ ಕಾರ್ಖಾನೆಯಾಗಿ ಬದಲಾಗುತ್ತಿದೆ. ಇಲ್ಲಿ ನಡೆಯುವ ಗೋಹತ್ಯೆ, ಲವ್ ಜಿಹಾದ್ ಮತ್ತು ಮತೀಯ ಗಲಭೆಗಳ ಹಿಂದೆ ಅವುಗಳ ಕೈವಾಡವಿದೆ ಎಂಬುದು ನಮ್ಮ ಅನುಮಾನ. ವಿಚಾರಣೆಯ ನಂತರ ಸತ್ಯ ಹೊರಬರಬೇಕಷ್ಟೆ.

ಹೆಣಗಳೊಂದಿಗೆ ರಾಜಕೀಯ

ಹೆಣಗಳೊಂದಿಗೆ ರಾಜಕೀಯ

ಪ್ರ: ಕೋಮು ಗಲಭೆಯಿಂದ ಸತ್ತವರ ಶವಗಳೊಂದಿಗೆ ರಾಜಕೀಯದಾಟ ಆಡಲಾಗುತ್ತಿದೆಯೇ?

ಉ: ಅಷ್ಟಕ್ಕೂ ಶವಗಳು ಬೀಳುವಂಥ ಘಟನೆಗಳು ನಡೆಯುತ್ತಿರುವುದೇಕೆ? ನಾವ್ಯಾರೂ ಯಾರ ಮೇಲೂ ದಾಳಿ ನಡೆಸಿಲ್ಲ. ಕ್ರೈಸ್ತರು ರಾಜಾರೋಷವಾಗಿ ಮತಾಂತರ ಮಾಡುತ್ತಿದ್ದಾರೆ. ಕ್ರಿಶ್ಚಿಯನ್ ಶಾಲೆಗಳಲ್ಲಿ ಹಿಂದು ಮಕ್ಕಳು ತಮ್ಮ ಮತದ ಆಚರಣೆಗಳನ್ನು ಪಾಲಿಸುವುದಕ್ಕೆ ನಿರ್ಬಂಧ ಹೇರಲಾಗುತ್ತಿದೆ.

ಮುಸ್ಲಿಮರು ನೇರವಾಗಿ ದಾಳಿ ನಡೆಸುತ್ತಾರೆ. ಕ್ರೈಸ್ತರು ಪರೋಕ್ಷ ದಾಳಿ ನಡೆಸುತ್ತಿದ್ದಾರೆ. ನಮ್ಮ ಮನೆಗೆ ನುಗ್ಗಿ, ನಮ್ಮ ಜನರನ್ನು ಅವರು ಮತಾಂತರ ಮಾಡಲು ನಾವು ಬಿಡುವುದಿಲ್ಲ. ಮುಸ್ಲಿಂ, ಕ್ರಿಶ್ಚಿಯನ್ನರೂ ಬದುಕಲಿ, ನಾವೂ ಬದುಕುತ್ತೇವೆ. ಎಲ್ಲರೂ ಒಟ್ಟಾಗಿ ಬದುಕೋಣ. ನಾವು ನಮ್ಮನ್ನು ರಕ್ಷಿಸಿಕೊಳ್ಳುವ ಅಗತ್ಯವಿದೆ.

ಈಗೇಕೆ ಜಾತಿಯ ವಿಷಯ?

ಈಗೇಕೆ ಜಾತಿಯ ವಿಷಯ?

ಪ್ರ: ಆದರೆ, ಕೋಮುಗಲಭೆಯಿಂದ ಮೃತರಾಗುತ್ತಿರುವವರೆಲ್ಲ ಹಿಂದುಳಿದ ವರ್ಗಕ್ಕೇ ಸೇರಿದವರು. ಇದನ್ನು ನೀವು ಹೇಗೆ ವಿವರಿಸುತ್ತೀರಾ?

ಉ: ಅವರು ಬಹುಸಂಖ್ಯಾತರು. ನಿಮ್ಮದೇ ಭಾಷೆಯಲ್ಲಿ ಹೇಳುವುದಾದರೆ, ನಾನೊಬ್ಬ ಮೇಲ್ಜಾತಿಯಿಂದ ಬಂದವನು, ಆದರೆ ನಮ್ಮ ಮೇಲೂ ಹಲವು ಪ್ರಕರಣಗಳಿವೆ. ದೌರ್ಜನ್ಯಗಳು ಎಲ್ಲಾ ಸಮುದಾಯದ ಮೇಲೂ ನಡೆಯುತ್ತಿದೆ. ಇಂದಿರಾ ಗಾಂಧಿಯವರ ಕಾಲದಲ್ಲಿ ಮೀಸಾ ಕಾಯ್ದೆಯಡಿ ನನ್ನನ್ನೂ, ನನ್ನ ಪತ್ನಿಯನ್ನೂ ಬಂಧಿಸಲಾಗಿತ್ತು. ಆಗ ಜಾತಿಯ ಬಗ್ಗೆ ಯಾರೂ ಮಾತನಾಡಲಿಲ್ಲ. ಆದರೆ ಈಗೇಗ ಜಾತಿಯ ವಿಷಯ? ಹೌದು, ನಮ್ಮ ಪೂರ್ಜರು ಹಿಂದುಳಿದ ವರ್ಗದವರನ್ನು ಕೀಳಾಗಿ ನೋಡಿರಬಹುದು. ಆದರೆ ಈಗ ಹಾಗಿಲ್ಲ. ಪರಿಸ್ಥಿತಿ ಬದಲಾಗಿದೆ.

ನೈತಿಕ ಪೊಲೀಸ್ ಗಿರಿ ಸರಿಯೇ?

ನೈತಿಕ ಪೊಲೀಸ್ ಗಿರಿ ಸರಿಯೇ?

ಪ್ರ: ನೈತಿಕ ಪೊಲೀಸ್ ಗಿರಿಯನ್ನು ನೀವು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?

ಉ: ನೀವು ಕಾನೂನಿನ ಬಗ್ಗೆ ಮಾತನಾಡುತ್ತಿದ್ದೀರಾ. ನಾನು ಧರ್ಮದ ಬಗ್ಗೆ ಮಾತನಾಡುತ್ತಿದ್ದೇನೆ. ಹೌದು, ಹಸುಗಳನ್ನು, ಮಹಿಳೆಯರನ್ನು ಕಾಪಾಡಲು ನಮ್ಮಲ್ಲಿ ಕಾನೂನಿದೆ. ಆದರೆ ಪೊಲೀಸರು ಆ ಕಾನೂನನ್ನು ಪಾಲಿಸುತ್ತಿದ್ದಾರಾ? ಕಾನೂನಿನ ಹಂಗಿಲ್ಲದೆಯೂ ನನ್ನ ಮಗಳನ್ನು, ಕುಟುಂಬವನ್ನು ಕಾಪಾಡುವುದು ನನ್ನ ಹಕ್ಕು. ಈ ಸಮಯದಲ್ಲಿ ಹಿಂಸೆಯಾದರೆ, ಆ ಹಿಂಸೆಯನ್ನು ನಾವು ಆರಂಭಿಸಿಲ್ಲ.

ಆದರೆ ನಮ್ಮ ಮೇಲೆ ಹಿಂಸೆಯಾದರೆ ನಾವು ಪ್ರತಿದಾಳಿ ನಡೆಸಲೇಬೇಕಲ್ಲ. ಮುಸ್ಲಿಮರಿಗೆ ಸಾಕಷ್ಟು ದೇಶಗಳಿವೆ. ಆದರೆ ಹಿಂದುಗಳಿಗಿರುವುದು ಭಾರತ ಮಾತ್ರ. ಎಲ್ಲಾ ಮುಸ್ಲಿಮರು ಭಯೋತ್ಪಾದಕರಲ್ಲ, ಆದರೂ ಅವರ್ಯಾಕೆ ಭಯೋತ್ಪಾದಕ ದಾಳಿಗಳನ್ನು, ಲವ್ ಜಿಹಾದ್ ಅನ್ನು, ಗೋಹತ್ಯೆಯನ್ನು, ಮತಾಂತರವನ್ನು ವಿರೋಧಿಸುವುದಿಲ್ಲ? ನಾವು ಅಬ್ದುಲ್ ಕಲಾಂ, ಜಾರ್ಜ್ ಫರ್ನಾಂಡಿಸ್ ರಂಥವರನ್ನು ಗೌರವಿಸುತ್ತೇವೆ. ನಾವು ಅಲ್ಪಸಂಖ್ಯಾತ ವಿರೋಧಿಗಳಲ್ಲ.

ನಮ್ಮ ಬೆಂಬಲ ಬಿಜೆಪಿಗೆ

ನಮ್ಮ ಬೆಂಬಲ ಬಿಜೆಪಿಗೆ

ಪ್ರ: ದಕ್ಷಿಣ ಕನ್ನಡದಲ್ಲಿ ಚುನಾವಣೆ ಗೆಲ್ಲವು ಒಂದು ರಾಜಕೀಯ ಪಕ್ಷಕ್ಕೆ ಆರೆಸ್ಸೆಸ್ ಎಷ್ಟು ಅಗತ್ಯ?

ಉ: ಬಹಳ ಪ್ರಮುಖ ಪಾತ್ರವಿದೆ. ನಾವು ಹಿಂದುಗಳ ಪರವಾಗಿ ಹೋರಾಡುವ ಪಕ್ಷಕ್ಕೆ ಸದಾ ಬೆಂಬಲ ನೀಡುತ್ತೇವೆ. ಆದರೆ ನಾವಾಗಿಯೇ ರಾಜಕೀಯಕ್ಕೆ ಧುಮುಕುವುದಿಲ್ಲ. ಚುನಾವಣೆಯಲ್ಲಿ ಹಿಂದುಗಳ ಮಹತ್ವವೇನು ಎಂಬುದು ಈಗಾಗಲೇ ಕಾಂಗ್ರೆಸ್ ಗೆ ಅರಿವಾಗಿದೆ. ಆದರೆ ರಾಹುಲ್ ಗಾಂಧಿಯವರು ತಮ್ಮನ್ನು 'ಹಿಂದು' ಎಂದು ಕರೆದುಕೊಂಡರೆ ಸೊಲ್ಲೆತ್ತದವರು, ನನ್ನನ್ನು ನಾನು 'ಹಿಂದು' ಎಂದು ಕರೆದುಕೊಂಡರೆ ಕೋಮುವಾದಿ ಎನ್ನುವುದೇಕೆ?

ಚುನಾವಣೆ ಸಮಯದಲ್ಲಿ ಹಿಂದುಗಳ ಸಂಖ್ಯೆ ಕಡಿಮೆ ಇರುವ ಕಡೆಗಳಲ್ಲಿ ಓಲೈಕೆಯ ತಂತ್ರಗಳು ಫಲಿಸಬಹುದು. ಆದರೆ ಎಲ್ಲಿ ಸುಶಿಕ್ಷಿತ ಮತದಾರರಿರುತ್ತಾರೋ, ಅವರಿಗೆ ನೈಜ ಬದ್ಧತೆಯ ಅರಿವಾಗುತ್ತದೆ. ನಮ್ಮ ಸಂಪೂರ್ಣ ಬೆಂಬಲ ಬಿಜೆಪಿಗೆ. ಏಕೆಂದರೆ ಹಿಂದುತ್ವದ ಪರವಾಗಿ ಹೋರಾಡುವ ಪಕ್ಷ ಅದೊಂದೇ. ನಾವು ವ್ಯಕ್ತಿಪೂಜೆಯನ್ನು ನಂಬುವುದಿಲ್ಲ. ಆದರೆ ಕಾಂಗ್ರೆಸ್ ನಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಮೋದಿಯವರ ಬೆಂಬಲ ಅಗತ್ಯವಾಗಿ ಬೇಕಿದೆ.

ಬಿಜೆಪಿಯೂ ಭ್ರಷ್ಟ ಆಡಳಿತ ನೀಡಿತ್ತಲ್ಲ...

ಬಿಜೆಪಿಯೂ ಭ್ರಷ್ಟ ಆಡಳಿತ ನೀಡಿತ್ತಲ್ಲ...

ಪ್ರ: ಭ್ರಷ್ಟಾಚಾರವನ್ನು ನೀವು ರಾಷ್ಟ್ರ ವಿರೋಧಿ ಎಂದು ಭಾವಿಸುವುದಾರೆ, ಕರ್ನಾತಕದಲ್ಲಿ ಬಿಜೆಪಿಯೂ ಭ್ರಷ್ಟ ಆಡಳಿತ ನೀಡಿತ್ತಲ್ಲ,ಅದರ ಬಗ್ಗೆ ಏನೆನ್ನುತ್ತೀರಿ?

ಉ: ಭ್ರಷ್ಟಾಚಾರ ನಿಜಕ್ಕೂ ರಾಷ್ಟ್ರವಿರೋಧಿಯೇ. ನಾವು ಅದನ್ನು ಎಂದಿಗೂ ವಿರೋಧಿಸುತ್ತೇವೆ. ಅದರಲ್ಲಿ ಬಿಜೆಪಿ ತೊಡಗಿದ್ದರೂ ವಿರೋಧಿಸುತ್ತೇವೆ. ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾದರೆ ನಾವೂ ಖುಷಿಪಡುತ್ತೇವೆ. ಆದರೆ ಆ ಶಿಕ್ಷೆ ಕಾನೂನಿನ ಪ್ರಕಾರ ಆಗಬೇಕು, ರಾಜಕೀಯದಿಂದ ಅಲ್ಲ. ಇಂಥ ಪ್ರಕರಣಗಳನ್ನು ಕಾನೂನಿಗೆ ಬಿಡೋಣ.

ಶಿಕ್ಷಣ ಎಂದರೆ...

ಶಿಕ್ಷಣ ಎಂದರೆ...

ಪ್ರ: ಆರೆಸ್ಸೆಸ್ ಪ್ರಕಾರ ಶಿಕ್ಷಣದ ಪಾತ್ರವೇನು?

ಉ: ಪ್ರತಿವ್ಯಕ್ತಿಯ ಬದುಕಿನಲ್ಲಿ ಶಿಕ್ಷಣಕ್ಕೆ ಮಹತ್ವದ ಸ್ಥಾನವಿದೆ. ಪ್ರತಿ ವಿದ್ಯಾರ್ಥಿಗೂ ರಾಷ್ಟ್ರಪ್ರೇಮದ ಶಿಕ್ಷಣ ದೊರಕಬೇಕು. ಮಕ್ಕಳಿಗೆ ಈ ದೇಶದ ಇತಿಹಾಸ, ವೈಭವ, ವೀರತ್ವದ ಕುರಿತು ಹೇಳಬೇಕು. ಅಷ್ಟೇ ಅಲ್ಲ, ಇತಿಹಾಸದಲ್ಲಾದ ಮೋಸಗಳ ಬಗ್ಗೆಯೂ, ಅವಕ್ಕೆ ಕಾರಣವೇನು ಎಂಬ ಕುರಿತೂ ಪಾಠ ಹೇಳಬೇಕು.

ಇವನ್ನೆಲ್ಲ ಮಾಡಿದರೆ ಕೋಮುವಾದಿಗಳು ಎಂದು ಜರೆಯಲಾಗುತ್ತದೆ. ನಿಮ್ಮ ಸಮಯ, ದೇಣಿಗೆ ಮತ್ತು ಬದುಕನ್ನು ರಾಷ್ಟ್ರಕ್ಕಾಗಿ ಮೀಸಲಿಡುವಂತೆ ನಾವು ಕೇಳುತ್ತೇವೆ. ನಾವು ಶಿಕ್ಷಣದಲ್ಲಿ ರಾಷ್ಟ್ರೀಯತೆಯನ್ನು ಸೇರಿಸಿದರೆ ಈ ದೇಶದಲ್ಲಿ ಖಂಡಿತ ಬದಲಾವಣೆ ಸಾಧ್ಯವಿದೆ. ನಮ್ಮ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳೂ ಇದ್ದಾರೆ. ನಾವು ಅವರನ್ನು ಭೇದಭಾವದಿಂದ ನೋಡುವುದಿಲ್ಲ.

ಗೌರಿ, ಕಲಬುರ್ಗಿ ಹತ್ಯೆ ಕುರಿತು...

ಗೌರಿ, ಕಲಬುರ್ಗಿ ಹತ್ಯೆ ಕುರಿತು...

ಪ್ರ: ಗೌರಿ ಲಂಕೇಶ್, ಎಂಎಂ.ಕಲಬುರ್ಗಿ ಹತ್ಯೆಗಳಲ್ಲಿ ಹಿಂದು ಸಂಘಟನೆಗಳ ಹೆಸರನ್ನೂ ಸೇರಿಸಲಾಗಿತ್ತು. ಈ ಬಗ್ಗೆ ಏನೆನ್ನುತ್ತೀರಿ?

ಉ: ಇಂದಿನವರೆಗೂ ಕೇವಲ ಆರೋಪಗಳಾಗುತ್ತಿವೆಯೇ ಹೊರತು ಯಾರನ್ನೂ ಬಂಧಿಸಲಾಗಿಲ್ಲ. ಅವರು ಆರೋಪ ಹೊರಿಸುವುದನ್ನು ನೋಡಿದರೆ ಎಲ್ಲೋ ಅವರದೇ ಕೈವಾಡವಿದೆಯೇನೋ ಎಂಬ ಅನುಮಾನ ನನ್ನನ್ನು ಕಾಡುತ್ತದೆ. ಮೊದಲು ಸಾಕ್ಷಿ ಸಿಗಲಿ. ಈ ಘಟನೆಯಲ್ಲಿ ಹಿಂದು ಸಂಘಟನೆಗಳ ಕೈವಾಡವಿದ್ದಿದ್ದರೆ ಸರ್ಕಾರ ಇದುವರೆಗೂ ಆರೋಪಿಗಳನ್ನು ಬಂಧಿಸದೆ ಸುಮ್ಮನೇ ಇರುತ್ತಿತ್ತೇ? ಸರ್ಕಾರಕ್ಕೆ ಗೊತ್ತು, ತಮಗೆ ಬೇಕಾದವರದ್ದೇ ಯಾರದೋ ಕೈವಾಡ ಇದರಲ್ಲಿದೆ ಅಂತ. ಅದಕ್ಕೆಂದೇ ಸರ್ಕಾರ ಪೊಲೀಸರಿಗೆ ಅಪರಾಧಿಗಳನ್ನು ಹಿಡಿಯುವುದಕ್ಕೆ ಒತ್ತಡ ಹೇರುತ್ತಿಲ್ಲ!

English summary
73-year-old Kalladka Prabhakar Bhat, perceivably seen as one of the most divisive figures in Karnataka, is a simple man. Clad in all whites, the vermillion on his forehead and sharp retorts to anything anti-Hindu is conspicuous. The Kshetra Karyakarini or Zonal Executive member of the Rashtriya Swayamsevak Sangh (RSS)- in charge of Karnataka, Andhra Pradesh and Telangana - Bhat, has many monikers including being called a fanatic and hate-monger on one side and educationist and crusader on the other, depending on who you ask.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X