ಸಿದ್ದ ಸರ್ಕಾರ ಬಿದ್ದ ಕರ್ನಾಟಕ: ಜಾವಡೇಕರ್ ಲೇವಡಿ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 13: ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಇದು ಬಿಜೆಇಗೆ ವರವಾಗಿ ಪರಿಣಮಿಸಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಇಂಡಿಯಾ ಟುಡೆ- ಕಾರ್ವಿ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿರುವ ಅವರು, ಸಮೀಕ್ಷೆ ನೀಡಿರುವ ಅಂಕಿಅಂಶಗಳನ್ನು ನಿರಾಕರಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಎಲ್ಲರೂ ಸಿಟ್ಟಾಗಿದ್ದಾರೆ. ಎಲ್ಲ ವರ್ಗದ ಜನರೊಟ್ಟಿಗೆ ಮಾತನಾಡಿದ್ದೇನೆ. ನಾನೇ ಸ್ವತಃ ಜನರ ಪ್ರತಿಕ್ರಿಯೆ ಆಲಿಸಿದ್ದೇನೆ. ಅವರಿಗೆ ಪ್ರಧಾನಿ ಮೋದಿ ಅವರಂತೆ ಉತ್ತಮ ಆಡಳಿತ ಬೇಕಾಗಿದೆ ಎಂದು ಜಾವಡೇಕರ್ ಹೇಳಿದ್ದಾರೆ.

ಸಮೀಕ್ಷೆ 2018 : ಇಂಡಿಯಾ ಟುಡೇ ಅಭಿಮತ, ವಿಧಾನಸಭೆ ಅತಂತ್ರ

ತಮ್ಮದು ಸಿದ್ಧ ಸರ್ಕಾರ ಎಂದು ಸಿದ್ದರಾಮಯ್ಯ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಜನರು ಅದನ್ನು 'ಸಿದ್ಧ ಸರ್ಕಾರ ಬಿದ್ದ ಕರ್ನಾಟಕ' ಎನ್ನುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಜನರು ಬಿಜೆಪಿ ಕಡೆಗೆ ಬರುತ್ತಿದ್ದಾರೆ. ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ ಎನ್ನುತ್ತಿದ್ದಾರೆ.

ಚುನಾವಣೆ ಕಾರ್ಯಕ್ಕಾಗಿ ಹದಿನೆಂಟು ಜಿಲ್ಲೆಗಳಲ್ಲಿ ಓಡಾದ್ದೇನೆ. ಯಾವ ವರ್ಗಕ್ಕೂ ಸರಿಯಾದ ಆಡಳಿತ ನೀಡಿಲ್ಲ. ಸುಮಾರು 3,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಾರ್ಡನ್ ಸಿಟಿ ಗಾರ್ಬೇಜ್ ಸಿಟಿ ಆಗಿದೆ. ಸುಂದರ ನಗರ ಗುಂಡಿಗಳ ನಗರವಾಗಿದೆ. ಐಟಿ ಸಿಟಿ ಕ್ರೈ ಸಿಟಿ ಆಗಿದೆ. ಕೆರೆಗಳ ನಗರ ಎಂದು ಕರೆಯುತ್ತಿದ್ದರು. ಈಗ ಆ ಕೆರೆಗಳಲ್ಲಿ ಬೆಂಕಿ ಉರಿಯುತ್ತಿದೆ. ಗೂಂಡಾರಾಜ್ಯವಾಗಿ ಬದಲಾಗಿದೆ. ಆಡಳಿತ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದರು.

prakash Javadekar reacts to india today survey

ಬಿಜೆಪಿಗೇ ನೆರವು:
ರಾಜ್ಯ ಸರ್ಕಾರ ಪ್ರತ್ಯೇಕ ಧರ್ಮದ ಮೂಲಕ ಜನರನ್ನು ಒಡೆಯುವ ಪ್ರಯತ್ನಕ್ಕೆ ಮುಂದಾಗಿದೆ. ಯಡಿಯೂರಪ್ಪ ಸಿಎಂ ಆಗುವುದನ್ನು ತಡೆಯವುದು ಅದರ ಉದ್ದೇಶ, ಅದು ಎಲ್ಲರಿಗೂ ಅರ್ಥವಾಗಿದೆ. ಒಡೆದು ಆಳುವ ನೀತಿ ಕಾಂಗ್ರೆಸ್‌ಗೆ ಮುಳುವಾಗಲಿದೆ.

ಕರ್ನಾಟಕ ಮಾತ್ರವಲ್ಲದೆ, ಎಲ್ಲ ಕಡೆಯ ಲಿಂಗಾಯತರೂ ಸಿದ್ದರಾಮಯ್ಯ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಕಾಂಗ್ರೆಸ್‌ನ ಈ ತಂತ್ರ ಬಿಜೆಪಿಗೇ ನೆರವಾಗಲಿದೆ. ಜನರು ಕಾಂಗ್ರೆಸ್‌ಅನ್ನು ದ್ವೇಷಿಸುತ್ತಿದ್ದಾರೆ ಎಂದರು.

ಹದಿನೈದು ದಿನದಲ್ಲಿ ಚಿತ್ರಣ ಬದಲಾಗಲಿದೆ. ನಾವು ನಡೆಸಿದ ಸಮೀಕ್ಷೆ, ಅಭಿಪ್ರಾಯ, ಅಂಕಿ-ಅಂಶ ಸಂಗ್ರಹ ಮಾಹಿತಿ ಪ್ರಕಾರ ನಾವು ಸಾಕಷ್ಟು ಮುಂದಿದ್ದೇವೆ.

ಜನಾಭಿಪ್ರಾಯ ಕಾಂಗ್ರೆಸ್ ಪರವಾಗಿದೆ ಎನ್ನುವುದನ್ನು ಒಪ್ಪುವುದಿಲ್ಲ. ತುಮಕೂರು ಜಿಲ್ಲೆಯಲ್ಲಿ ನೀರಿಲ್ಲದೆ ಒದ್ದಾಡುತ್ತಿದ್ದಾರೆ. ದಾವಣೆಗೆರೆಯಲ್ಲಿ ಏಳು ಲಕ್ಷ ಜನರಿದ್ದಾರೆ. ಹತ್ತು ದಿನದಲ್ಲಿ ಒಂದು ಗಂಟೆ ಕುಡಿಯುವ ನೀರು ಬರುತ್ತಿದೆ. ಈ ಪರಿಸ್ಥಿತಿ ರಾಜ್ಯದ ಎಲ್ಲ ಕಡೆಯೂ ಇದೆ ಎಂದು ಪ್ರತಿಕ್ರಿಯೆ ನೀಡಿದರು.

prakash Javadekar reacts to india today survey

ಮೋದಿಯಿಂದ ಕೆಟ್ಟ ಹೆಸರು: ಡಿಕೆಶಿ
ರಾಜ್ಯದಲ್ಲಿ ಯಾವ ಆಡಳಿತ ವಿರೋಧಿ ಅಲೆಯೂ ಇಲ್ಲ. ಎಲ್ಲ ವರ್ಗಗಳಿಗೂ ನೀಡಿದ ಭರವಸೆಗಳನ್ನು ಈಡೇರಿಸಲಾಗಿದೆ. ಇಲ್ಲಿನ ಜನರು ಹೆಚ್ಚು ಪ್ರಬುದ್ಧರು. ಯಾವ ಸಮುದಾಯದಲ್ಲಿಯೂ ಗೊಂದಲ ಇಲ್ಲ. ಎಲ್ಲ ಸಮುದಾಯಗಳನ್ನೂ ಜತೆಯಾಗಿ ಕೊಂಡೊಯ್ಯಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಸಿದ್ದರಾಮಯ್ಯ ಸರ್ಕಾರ ಜನರಿಗಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದೆ. ಶಿಕ್ಷಣ, ಕೃಷಿ, ಆರೋಗ್ಯ ಮುಂತಾದ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಕೊಡುಗೆ ನೀಡಿದೆ. ದೇಶದ ವಿವಿಧ ಭಾಗದ ಹೂಡಿಕೆದಾರರನ್ನು ಕರೆಯಿಸಿ ಸಮಾವೇಶ ಮಾಡಿದ್ದಾರೆ.

ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಿದೆ ಎಂದು ಮೋದಿ ಆರೋಪಿಸುತ್ತಾರೆ. ಕಮಿಷನ್ ಸರ್ಕಾರ ಎಂದು ಟೀಕಿಸಿದ್ದಾರೆ. ಇದಕ್ಕೆ ಅವರ ಬಳಿ ಸಾಕ್ಷಿಗಳಿದ್ದರೆ ಕ್ರಮ ತೆಗೆದುಕೊಲ್ಳಬಹುದಲ್ಲವೇ? ಎಂದು ಡಿಕೆಶಿ ಪ್ರಶ್ನಿಸಿದರು.

ದೇಶಕ್ಕೆ ಅಧಿಕ ವರಮಾನ ತಂದುಕೊಡುವ ರಾಜ್ಯ ನಮ್ಮದು. ಅದಕ್ಕೆ ಕಮಿಷನ್ ಸರ್ಕಾರ ಎನ್ನುವ ಮೂಲಕ ಇಡೀ ಪ್ರಪಂಚದ ಮುಂದೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಕರ್ನಾಟಕಕ್ಕೆ ಅದರದ್ದೇ ಆದ ಇತಿಹಾಸವಿದೆ. ದೇಶಕ್ಕೆ ರಾಜ್ಯದ ಕೊಡುಗೆಯನ್ನು ಮೊದಲು ಅರಿತುಕೊಳ್ಳಬೇಕು ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Union minister Prakash Javadekar criticise karnataka state government's advertise 'siddha sarkara' as 'siddha sarkara, bidda karnataka' in his reply to india today karvy's opinion poll

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ