ಲೋಕಭವನದಲ್ಲಿ ಡಿಕೆ ಶಿವಕುಮಾರ್ ಸರಳ ಪ್ರಮಾಣವಚನ ಸ್ವೀಕಾರ: ಸಿದ್ದು - ಆರ್‌ಸಿಬಿ ಸೇರಿ 3 ಕಾರಣಗಳು
ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ಜೂನ್ 3ರ ಬುಧವಾರ ಲೋಕಭವನದ ಗಾಜಿನ ಮನೆಯಲ್ಲಿ ಸರಳವಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಲವು ವರ್ಷಗಳಿಂದ ಮುಖ್ಯಮಂತ್ರಿಯಾಗಿ ಕನಸು ಕಂಡಿದ್ದ ಡಿ.ಕೆ ಶಿವಕುಮಾರ್ ಅವರು ಕೊನೆಗೂ ಮುಖ್ಯಮಂತ್ರಿಯಾಗುವುದಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಆದರೆ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಅತ್ಯಂತ ಸರಳವಾಗಿ ನಡೆಯುತ್ತಿದೆ. ಇದರ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ದುರಂತ, ಸಿದ್ದರಾಮಯ್ಯ ಬಣ ಹಾಗೂ ರಾಜಕೀಯ ತಂತ್ರಗಾರಿಕೆ ಇದೆ ಎಂದು ವಿಶ್ಲೇಷಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನಾಳೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಬೆಂಗಳೂರಿನ ಲೋಕಭವನದಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರ ಮಾಡಲಿದ್ದಾರೆ. ಅವರೊಂದಿಗೆ ಸಚಿವ ಸಂಪುಟಕ್ಕೆ 11 ಜನ ಶಾಸಕರು ಸಹ ಸೇರಲಿದ್ದಾರೆ ಎಂದು ಹೇಳಲಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಜಂಟಿಯಾಗಿ ನೀಡಿದ್ದ ಸಂಭವನೀಯ ಸಚಿವರ ಪಟ್ಟಿಯನ್ನು ಹೈಕಮಾಂಡ್ ಪರಿಶೀಲನೆ ಮಾಡಿ ಅಂತಿಮ ಮಾಡಿದೆ ಎಂದು ಹೇಳಲಾಗಿದೆ. ಆದರೆ ಸಮಾರಂಭ ಸರಳವಾಗುವುದರ ಹಿಂದೆ ಮೂರು ಕಾರಣಗಳಿವೆ.

ಡಿ.ಕೆ ಶಿವಕುಮಾರ್ ತಂತ್ರಗಾರಿಕೆ
ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿರಿಸಿದಾಗಿನಿಂದಲೂ ಡಿ.ಕೆ ಶಿವಕುಮಾರ್ ಅವರು ವಿಷಕಂಟನಂತೆ ಬದಲಾಗಿದ್ದರು. ಯಾವುದೇ ವಿವಾದಾತ್ಮಕ ಅಥವಾ ತಿರುಗೇಟುಗಳನ್ನು ಡಿ.ಕೆ ಶಿವಕುಮಾರ್ ಅವರು ನೇರವಾಗಿ ನೀಡಲೇ ಇಲ್ಲ. ಇದೀಗ ಪ್ರಮಾಣ ವಚನ ಸಂದರ್ಭದಲ್ಲೂ ಅದೇ ಜಾಣ್ಮೆಯನ್ನು ಪ್ರದರ್ಶಿಸಿದ್ದಾರೆ. ಡಿ.ಕೆ ಶಿವಕುಮಾರ್ ಅವರ ಪ್ರಮಾಣ ವಚನ ಸಮಾರಂಭವು ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ ಭಾರೀ ಜನಸಮೂಹದ ಮುಂದೆ ನಡೆಯಲಿದೆ.
ಡಿ.ಕೆ ಶಿವಕುಮಾರ್ ಅವರು ಶಕ್ತಿ ಪ್ರದರ್ಶನ ಮಾಡಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಡಿ.ಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಸರಳವಾಗಿಸಿದ್ದಾರೆ. ಈ ಮೂಲಕ ಟ್ರಾಫಿಕ್ ಜಾಮ್ ಸಮಸ್ಯೆಗಳಿಗೆ ಕಡಿವಾಣ ಹಾಕಲಾಗಿದೆ. ಪ್ರಮಾಣವಚನಾ ಸಮಾರಂಭದ ದಿನವೇ ಯಾವುದೇ ವಿವಾದ ಸೃಷ್ಟಿಯಾಗಬಾರದು ಎನ್ನುವ ಉದ್ದೇಶವೂ ಇದರ ಹಿಂದೆ ಇದೆ.
ಸಿದ್ದರಾಮಯ್ಯ ಬಣದ ವಿಶ್ವಾಸ ಗಳಿಸುವುದು - ಸುಗಮ ಸರ್ಕಾರ ರಚನೆ
ಇನ್ನು ಎರಡನೆಯದಾಗಿ ಸಿದ್ದರಾಮಯ್ಯ ಅವರ ಬಣದ ಶಾಸಕರ ವಿಶ್ವಾಸ ಗಳಿಸುವುದು ಸಹ ಮುಖ್ಯವಾಗಿದೆ. ಡಿ.ಕೆ ಶಿವಕುಮಾರ್ ಅವರಿಗೆ ಹೊಸ ಸರ್ಕಾರದಲ್ಲಿ ಹಲವು ಸವಾಲುಗಳು ಇರಲಿವೆ. ಅದರಲ್ಲಿ ಸಿದ್ದರಾಮಯ್ಯ ಬಣ ಅಥವಾ ಆಪ್ತ ಶಾಸಕರನ್ನು ಮನವೊಲಿಸಿಕೊಳ್ಳುವುದು ಸಹ ಒಂದು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದಿರುವುದು ಹಲವರಲ್ಲಿ ನೋವುಂಟು ಮಾಡಿದೆ. ಹೀಗಾಗಿ, ಈ ಸಂದರ್ಭದಲ್ಲಿ ಅದ್ಧೂರಿ ಸಮಾರಂಭ ಬೇಡ ಎಂದು ಡಿ.ಕೆ ಶಿವಕುಮಾರ್ ಅವರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಆರ್‌ಸಿಬಿ ವಿಜಯೋತ್ಸವದ ಕರಾಳ ನೆನಪು
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಮೊದಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿ ಇತಿಹಾಸ ನಿರ್ಮಿಸಿದಾಗ ದುರಂತ ಸಂಭವಿಸಿತ್ತು. ಆ ದುರಂತ ಸಂಭವಿಸಿದ್ದು ಸಹ 2025ರ ಜೂನ್ 4ರಂದು. ಆರ್‌ಸಿಬಿ ಆಟಗಾರರನ್ನು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನಿಸಲಾಗಿತ್ತು. ಇದಾದ ನಂತರ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿದ್ದರು. ಇದೀಗ ಆರ್‌ಸಿಬಿ ಎರಡನೇ ಬಾರಿ ಚಾಂಪಿಯನ್ಸ್ ಆಗಿದೆ.
ಆದರೆ ಕಳೆದ ಬಾರಿಯ ಆದ ನೋವನ್ನು ಯಾರೂ ಮರೆತಿಲ್ಲ. ಕಳೆದ ವರ್ಷದ 2025 ವಿಜಯೋತ್ಸವದ ವೇಳೆ ಸಂಭವಿಸಿದ ದುರಂತದ ಕಹಿನೆನಪು ಇನ್ನೂ ಜೀವಂತವಾಗಿದೆ. ಹೀಗಾಗಿ, ಈ ಸಂದರ್ಭದಲ್ಲಿ ವಿಜಯೋತ್ಸವವನ್ನು ಆರ್‌ಸಿಬಿ ತಂಡ ಆಯೋಜಿಸಿಲ್ಲ. ಅಲ್ಲದೆ ಡಿ.ಕೆ ಶಿವಕುಮಾರ್ ಅವರು ಸಹ ಈ ಹಿಂದೆ ವಿಜಯೋತ್ಸವದಲ್ಲಿ ಉತ್ಸಾಹ ತೋರಿಸಿದ್ದರು. ಜೂನ್ - 3ರಂದು ಹೆಚ್ಚು ಜನ ಸೇರುವುದು ಅಥವಾ ಸೋಶಿಯಲ್ ಮೀಡಿಯಾದಲ್ಲಿ ಎರಡನ್ನೂ ಹೋಲಿಕೆ ಮಾಡುವ ಸಾಧ್ಯತೆಯೂ ಇರುವುದರಿಂದ ಸಮಾರಂಭವನ್ನು ಸರಳವಾಗಿ ಇರಲಿಸಲಾಗಿದೆ ಎನ್ನಲಾಗಿದೆ.













Click it and Unblock the Notifications