10 ವರ್ಷಗಳಲ್ಲಿ 1.92 ಲಕ್ಷದಿಂದ 57.80 ಲಕ್ಷಕ್ಕೆ ಜಿಗಿದ ಸಂಬಳ: ಕೆಪಿಎಂಜಿ ಉದ್ಯೋಗಿಯ ಯಶೋಗಾಥೆಗೆ ನೆಟ್ಟಿಗರು ಫಿದಾ
ಬೆಂಗಳೂರು: ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನವಿದ್ದರೆ ಕಾರ್ಪೊರೇಟ್ ವಲಯದಲ್ಲಿ ಎಂತಹ ಯಶಸ್ಸನ್ನು ಸಾಧಿಸಬಹುದು ಎಂಬುದಕ್ಕೆ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಅನಿರುದ್ಧ್ ರಾಪೋಲೆ ಅವರ ಯಶೋಗಾಥೆಯೇ ಅತ್ಯುತ್ತಮ ಉದಾಹರಣೆಯಾಗಿದೆ.
ಪ್ರಮುಖ 'ಬಿಗ್ ಫೋರ್' ಅಕೌಂಟಿಂಗ್ ಸಂಸ್ಥೆಗಳಲ್ಲೊಂದಾದ ಕೆಪಿಎಂಜಿಯಲ್ಲಿ ಕಳೆದ ಒಂದು ದಶಕ ಅಂದರೆ 2013 ರಿಂದ 2023ರಲ್ಲಿ ತಮ್ಮ ಸಂಬಳ ಹೇಗೆ ಹಂತ-ಹಂತವಾಗಿ ಕೋಟಿ ರೂಪಾಯಿ ಆಸುಪಾಸಿಗೆ ತಲುಪಿತು ಎಂಬುದನ್ನು ಅನಿರುದ್ಧ್ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಆರ್ಟಿಕಲ್‌ಶಿಪ್ ತರಬೇತುದಾರನಾಗಿ ವೃತ್ತಿಜೀವನ ಆರಂಭಿಸಿದ ಅವರ ಈ ಪಯಣ ಇಂದಿನ ಯುವ ಪೀಳಿಗೆಗೆ ಮತ್ತು ಸಿಎ ಆಕಾಂಕ್ಷಿಗಳಿಗೆ ದೊಡ್ಡ ಪ್ರೇರಣೆಯಾಗಿದೆ.

ಅನಿರುದ್ಧ್ ರಾಪೋಲೆ ಅವರು 2013 ರಲ್ಲಿ ತಮ್ಮ ಸಿಎ ಪದವಿಯ ಕಡ್ಡಾಯ ಪ್ರಾಯೋಗಿಕ ತರಬೇತಿಯಾದ 'ಆರ್ಟಿಕಲ್‌ಶಿಪ್' ಅವಧಿಯಲ್ಲಿ ಕೆಪಿಎಂಜಿ ಸಂಸ್ಥೆಯನ್ನು 'ಸ್ಟಾಫ್ ಅಕೌಂಟೆಂಟ್' ಆಗಿ ಸೇರಿಕೊಂಡರು. ಆ ಸಮಯದಲ್ಲಿ ಅವರ ವಾರ್ಷಿಕ ವೇತನ ಕೇವಲ 1.92 ಲಕ್ಷ ರೂಪಾಯಿ ಆಗಿತ್ತು. ನಂತರದ ಮೂರು ವರ್ಷಗಳ ತರಬೇತಿ ಅವಧಿಯಲ್ಲಿ ಅವರ ಸಂಬಳ ಹೆಚ್ಚುತ್ತಾ ಹೋಯಿತು. ಎರಡನೇ ವರ್ಷದಲ್ಲಿ 2.52 ಲಕ್ಷ ರೂ. ಹಾಗೂ ಮೂರನೇ ವರ್ಷದಲ್ಲಿ 3.36 ಲಕ್ಷ ರೂಪಾಯಿಗೆ ಏರಿಕೆಯಾಯಿತು.
2016 ರಲ್ಲಿ ಆರ್ಟಿಕಲ್‌ಶಿಪ್ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಅವರು ಅದೇ ಸಂಸ್ಥೆಯಲ್ಲಿ 'ಸೀನಿಯರ್ ಅಸೋಸಿಯೇಟ್' ಆಗಿ ನೇಮಕಗೊಂಡರು. ಈ ವೇಳೆ ಅವರ ವಾರ್ಷಿಕ ವೇತನವು ಬರೋಬ್ಬರಿ 6.5 ಲಕ್ಷ ರೂಪಾಯಿಗೆ ತಲುಪಿತು.
ಸಂಸ್ಥೆಯಲ್ಲಿ ಅವರ ಅತ್ಯುತ್ತಮ ಕಾರ್ಯಕ್ಷಮತೆಯಿಂದಾಗಿ 2018 ರಲ್ಲಿ ಅವರಿಗೆ 'ಅಸಿಸ್ಟೆಂಟ್ ಮ್ಯಾನೇಜರ್' ಆಗಿ ಬಡ್ತಿ ಸಿಕ್ಕಿತು. ಈ ಹುದ್ದೆಯಲ್ಲಿ ಅವರಿಗೆ ವಾರ್ಷಿಕ 13.5 ಲಕ್ಷ ರೂ. ಸಂಬಳ ಮತ್ತು ಹೆಚ್ಚುವರಿಯಾಗಿ ಪರ್ಫಾರ್ಮೆನ್ಸ್ ಬೋನಸ್ ದೊರೆಯುತ್ತಿತ್ತು. ಇವರ ವೃತ್ತಿಜೀವನದ ಅತಿ ದೊಡ್ಡ ತಿರುವು ಸಿಕ್ಕಿದ್ದು 2021 ರಲ್ಲಿ. ಅವರು ಕೆಪಿಎಂಜಿ ಇಂಡಿಯಾದಿಂದ ಕೆಪಿಎಂಜಿ ಸ್ವೀಡನ್‌ಗೆ ವರ್ಗಾವಣೆಗೊಂಡರು. ಸ್ವೀಡನ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸೇರಿದಾಗ ಅವರ ವಾರ್ಷಿಕ ವೇತನ 46.30 ಲಕ್ಷ ರೂಗೆ ಜಿಗಿಯಿತು. ಮರುವರ್ಷ ಅಂದರೆ 2022 ರಲ್ಲಿ ಈ ಮೊತ್ತವು ಬೋನಸ್ ಹೊರತುಪಡಿಸಿ 57.80 ಲಕ್ಷ ರೂಪಾಯಿಗೆ ತಲುಪಿತು.
ಆದಾಗ್ಯೂ, ಭಾರತ ಮತ್ತು ಸ್ವೀಡನ್ ದೇಶಗಳ ಸಂಬಳವನ್ನು ಹೋಲಿಕೆ ಮಾಡುವಾಗ ಅಲ್ಲಿನ ಜೀವನ ವೆಚ್ಚ ಮತ್ತು ಖರೀದಿ ಸಾಮರ್ಥ್ಯದ ಸಮಾನತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅನಿರುದ್ಧ್ ತಮ್ಮ ವೀಕ್ಷಕರಿಗೆ ತಿಳಿಸಿದ್ದಾರೆ. ತಮ್ಮ ಕುಟುಂಬದ ಮೊದಲ ಸಿಎ ಆಗಿರುವ ಅನಿರುದ್ಧ್, "ಸಿಎ ಎಂಬುದು ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡುವ ಒಂದು ಶಕ್ತಿ. ಇಲ್ಲಿ ಯಾವುದೇ ಮೀಸಲಾತಿ ಇಲ್ಲ, ಕೇವಲ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ" ಎಂದು ಬರೆದುಕೊಂಡಿದ್ದಾರೆ. ಪ್ರಸ್ತುತ ಅವರು 2024 ರಲ್ಲಿ ಕೆಪಿಎಂಜಿ ತೊರೆದು, ಪ್ರತಿಷ್ಠಿತ ಐಐಎಂ ಅಹಮದಾಬಾದ್‌ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ.












Click it and Unblock the Notifications