Annamalai: ಪ್ರಾಮಾಣಿಕ ರಾಷ್ಟ್ರೀಯತೆಗೆ ಅಣ್ಣಾಮಲೈ ಧ್ವನಿಯಾಗಲಿ: ರಾಜೀವ್ ಹೆಗಡೆ ಬರಹ
ಬೆಂಗಳೂರು: ತಮಿಳುನಾಡು ರಾಜ್ಯದ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರ ಚುನಾವಣಾ ಪ್ರಯತ್ನ ಕೈ ಹಿಡಿದಿಲ್ಲ. ಇದರ ಬೆನ್ನಲ್ಲೆ ಒಂದಷ್ಟು ಹೊಸ ನಿರ್ಧಾರ ಕೈಗೊಂಡಿರುವ ಅಣ್ಣಾಮಲೈ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಅವರು ರಾಜ್ಯದಲ್ಲಿ ಹೊಸ ಅಲೆ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ವರದಿ ಆಗಿದೆ. ಅವರ ಮುಂದಿನ ರಾಜಕೀಯ ನಡೆ, ಅವರ ಮೇಲಿನ ನಿರೀಕ್ಷೆ ಇನ್ನಿತರ ಅಂಶಗಳ ಕುರಿತು ಗ್ಲ್ಯಾನ್ಸ್ ಅಸೋಸಿಯೇಟ್ ಎಡಿಟರ್ 'ರಾಜೀವ್ ಹೆಗಡೆ' ಅವರ ಫೇಸ್‌ಬುಕ್ ಬರಹ ಇಲ್ಲಿದೆ.
"ಕಳೆದ ಲೋಕಸಭೆ ಚುನಾವಣೆಗೂ ಮುನ್ನ ತಮಿಳುನಾಡಿನಲ್ಲಿ ಅಣ್ಣಾಮಲೈ ಮಾಡಿದ್ದ ಪಾದಯಾತ್ರೆಯನ್ನು ನೋಡಿ ನಾನು ರೋಮಾಂಚನಗೊಂಡಿದ್ದೆ. ಬಿಜೆಪಿಗೆ ಅಸ್ತಿತ್ವವೇ ಇಲ್ಲದ ತಮಿಳುನಾಡಿನಲ್ಲಿ ಅಷ್ಟೊಂದು ಅದ್ಭುತವಾಗಿ ಪಾದಯಾತ್ರೆ ಮಾಡುವುದು ಸುಲಭವಾಗಿರಲಿಲ್ಲ. ಹಾಗೆಯೇ ಪಕ್ಷ ಕಟ್ಟಲು ಸ್ಟಾಲಿನ್ ಕಟ್ಟಿದ ಕೋಟೆಯ ವಿರುದ್ಧ ನಿಲ್ಲುವುದು ಸಣ್ಣ ವಿಚಾರವಲ್ಲ.

ಆದಾಗ್ಯೂ ಅಣ್ಣಾಮಲೈ ಅವರ ಹೋರಾಟದ ಶಕ್ತಿಯು, ಯುವ ರಾಜಕಾರಣಿಗಳಿಗೆ ಒಂದು ಮಾದರಿ ಎನಿಸಿತ್ತು. ಕರ್ನಾಟಕ ಬಿಜೆಪಿಯಲ್ಲಿ ಅಣ್ಣಾಮಲೈ ರೀತಿಯ ನಾಯಕರೇ ಇಲ್ಲವಲ್ಲ ಎನ್ನುವ ಬೇಸರವಾಗುತ್ತಿತ್ತು. ಆದರೀಗ ಅಂತಹ ಹೋರಾಟದ ಹಿನ್ನೆಲೆಯ ಜನ ನಾಯಕ ಬಿಜೆಪಿಯಿಂದ ಹೊರಬಂದಿದ್ದಾರೆ. ಮೋದಿಯನ್ನು ಹೊಗಳಿಕೊಂಡೇ ಬಂದಿದ್ದ ಅಣ್ಣಾಮಲೈ, ಈಗ ಮೋದಿ ಸಾಗಿದ ದಾರಿಯಲ್ಲೇ ಈಜಲು ಹೊರಟಿದ್ದಾರೆ ಎನಿಸುತ್ತಿದೆ.
ಈ ದೇಶಕ್ಕೆ ಬಿಜೆಪಿಗೆ ಒಂದು ಪರ್ಯಾಯ ರಾಜಕೀಯ ಆಂದೋಲನ ಅಥವಾ ಪಕ್ಷದ ಅತ್ಯಗತ್ಯವಿದೆ. ಅದರಲ್ಲೂ ವಿಶೇಷವಾಗಿ ಶುದ್ಧ ರಾಷ್ಟ್ರೀಯತೆಯ ನೆಲೆಗಟ್ಟಿನಲ್ಲಿ ಭಾರತದ ಮತದಾರರಿಗೆ ಒಂದು ಪಕ್ಷದ ಅನಿವಾರ್ಯತೆಯಿದೆ. ರಾಷ್ಟ್ರೀಯತೆ ಎನ್ನುವುದು ಪ್ರಚಾರದ ಸರಕಾಗದೇ, ವಾಸ್ತವದಲ್ಲಿ ಕಟ್ಟುನಿಟ್ಟಾಗಿ ಅನ್ವಯ ಮಾಡುವಂಥ ಚಿಂತನೆಯ ರಾಜಕೀಯ ಪಕ್ಷವು ಬೇಕಾಗಿದೆ. ಮಾಜಿ ಐಪಿಎಸ್ ಅಧಿಕಾರಿಯಾದ ಅಣ್ಣಾಮಲೈ ಅವರನ್ನು ನೋಡಿದಾಗ ಅಂತಹ ಶಿಸ್ತು ಹಾಗೂ ಬದ್ಧತೆ ಕಾಣಿಸುತ್ತದೆ. ಹಾಗೆಯೇ ಅವರ ಹೋರಾಟ ಹಾಗೂ ನಿಲುವಿನಲ್ಲಿ ನಾಟಕದ ಬದಲಿಗೆ ವಸ್ತುನಿಷ್ಠತೆ ಹಾಗೂ ಪ್ರಾಮಾಣಿಕತೆ ಎದ್ದು ಕಾಣಿಸುತ್ತದೆ' ಎಂದು ಬರೆದುಕೊಂಡಿದ್ದಾರೆ.
ಅಣ್ಣಾಮಲೈ ನೋಡಿ ಹುಟ್ಟಿದ ಕನಸುಗಳು ಅಪಾರ
ಮುಂದುವರಿದು, "ದಶಕಗಳ ಹಿಂದೆ ಕನಸುಗಳನ್ನು ಬಿತ್ತಿಯೇ ನರೇಂದ್ರ ಮೋದಿ ಪ್ರಧಾನಿಯಾಗಿದ್ದರು. ಅಣ್ಣಾಮಲೈ ಅವರನ್ನು ನೋಡಿದಾಗ ಯುವ ಮತದಾರರಲ್ಲಿ ಒಂದಿಷ್ಟು ಕನಸು ಹುಟ್ಟುವುದು ಸಾಮಾನ್ಯ. ಅಣ್ಣಾಮಲೈ ಅವರನ್ನು ನೋಡಿ ಅಂತಹ ಕನಸುಗಳು ನನ್ನಲ್ಲಿಯೂ ಹುಟ್ಟಿವೆ. ಈ ಕ್ಷಣಕ್ಕೆ ಇದು ಅತಿಶಯ ಎನಿಸಬಹುದು. ಆದರೆ ತಮಿಳುನಾಡು, ಕರ್ನಾಟಕ ಸೇರಿ ರಾಷ್ಟ್ರ ಮಟ್ಟದಲ್ಲಿ ಇಂತಹದೊಂದು ಪರ್ಯಾಯ ಬೇಕು. ಇಲ್ಲವಾದಲ್ಲಿ ಬಿಜೆಪಿಯ ದುರಹಂಕಾರಕ್ಕೆ ಕೊನೆಯೇ ಇರುವುದಿಲ್ಲ.
ಅಂದಹಾಗೆ ಬಿಜೆಪಿಯಿಂದ ಅಣ್ಣಾಮಲೈ ಹೊರ ಹೋಗುತ್ತಿದ್ದಂತೆ, ಮೋದಿ-ಶಾ ಜೋಡಿಯ ಮಾಸ್ಟರ್ ಸ್ಟ್ರೋಕ್ ಎಂದು ಸುದ್ದಿ ಹರಡುವ ಸಂಖ್ಯೆಯೂ ದೊಡ್ಡದಿರಬಹುದು. ಆದರೆ ಇದೆಲ್ಲವೂ ಶುದ್ಧ ಸುಳ್ಳು ಎನ್ನುವುದು ರಾಜಕೀಯವನ್ನು ಅರಿತವರಿಗೆ ತಿಳಿಯುತ್ತದೆ. ಹಾಗೆಯೇ ಅಣ್ಣಾಮಲೈ ಅವರ ನಿಲುವಿಗೂ ಸಾಕಷ್ಟು ತಾರ್ಕಿಕ ಕಾರಣಗಳು ಕಣ್ಣಿಗೆ ರಾಚುತ್ತವೆ. ಪಳನಿಸ್ವಾಮಿಯಂತಹ ವ್ಯಕ್ತಿಗಾಗಿ ಅಣ್ಣಾಮಲೈಯನ್ನು ಮೂಲೆಗುಂಪು ಮಾಡಿದಾಗಲೇ ಎಲ್ಲವೂ ಅರ್ಥವಾಗಿತ್ತು.
ತಮಿಳುನಾಡಿನಲ್ಲಿ ಬಿಜೆಪಿಗೆ ಧ್ವನಿಯಿಲ್ಲದ ಸಂದರ್ಭದಲ್ಲಿ ಹೋರಾಡಿದ್ದ ಅಣ್ಣಾಮಲೈ, ದಶಕದ ಕನಸು ಕಂಡಿದ್ದರು. ಬಿಜೆಪಿಯ ಆಂತರಿಕ ವಲಯದ ಪ್ರಕಾರವೇ ಇನ್ನೊಂದು ದಶಕದೊಳಗೆ ಬಿಜೆಪಿಯು ನಿರ್ಣಾಯಕ ಹಂತಕ್ಕೆ ತಲುಪುವ ದೂರಗಾಮಿ ಯೋಜನೆ ಹಾಕಿಕೊಂಡಿತ್ತು. ಆದರೆ ಅಣ್ಣಾಮಲೈ ಪ್ರಾಮಾಣಿಕತೆಗಿಂತ ಭ್ರಷ್ಟ ಪಕ್ಷ ಹಾಗೂ ಆ ನಾಯಕನೊಂದಿಗಿನ ಮೈತ್ರಿಯೇ ದೊಡ್ಡದಾದಾಗ, ಈ ಎಲ್ಲ ಬಿರುಕು ಕಾಣಿಸಿಕೊಂಡಿತು. ಭ್ರಷ್ಟಾಚಾರದ ವಿರುದ್ಧ ಮಾತನಾಡಿಕೊಂಡು ಪಾದಯಾತ್ರೆ ಮಾಡಿದ್ದ ಅಣ್ಣಾಮಲೈಗೆ, ಮತ್ತದೇ ಭ್ರಷ್ಟರನ್ನು ಅಪ್ಪಿಕೊಳ್ಳಿ ಎನ್ನುವುದು ಒಪ್ಪಲು ಸಾಧ್ಯವಿರದ ಮಾತಾಗಿತ್ತು. ಹಾಗೆಯೇ ಅಣ್ಣಾಮಲೈಯನ್ನು ಟಿಶ್ಯೂ ಪೇಪರ್‌ನಂತೆ ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿತ್ತು.
ಇನ್ನೊಂದೆಡೆ ಅಣ್ಣಾಮಲೈ ಅವರು ಬಹುದಿನದಿಂದ ಹೇಳಿಕೊಂಡು ಬಂದಿದ್ದ ವಿಚಾರವೊಂದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಿಟವಾಯಿತು. ತಮಿಳುನಾಡಿನ ರಾಜಕೀಯವು ದ್ರಾವಿಡ ರಾಜಕೀಯಕ್ಕೆ ಪರ್ಯಾಯ ನೋಡುತ್ತಿದೆ. ದ್ರಾವಿಡ ಪಕ್ಷಗಳ ವಿಭಜನೆಯ ರಾಜಕೀಯ ಸಾಕಾಗಿದೆ ಎಂದು ಎಲ್ಲ ಭಾಷಣಗಳಲ್ಲಿ ಹೇಳುತ್ತಿದ್ದರು. ಎರಡೂ ಭ್ರಷ್ಟ ಪಕ್ಷಗಳಿಂದ ಮುಕ್ತಿ ಪಡೆಯಲು ಈ ಬಾರಿ ಹೊಸ ಆಯ್ಕೆ ಮಾಡಿದ್ದು, ಅಣ್ಣಾಮಲೈ ಮಾತನ್ನು ಸಮರ್ಥಿಸಿದಂತಿತ್ತು. ಇನ್ನೊಂದೆಡೆ ವಿಜಯ್ ಗೆಲುವು, ತಮಿಳುನಾಡಿನಲ್ಲಿ ಹೊಸತನಕ್ಕೆ ನಾಂದಿ ಹಾಡಿದೆ. ದ್ರಾವಿಡ ಪಕ್ಷಗಳ ಹೀನಾಯ ಸ್ಥಿತಿ ಮುಂದುವರಿದರೆ, ಅಲ್ಲಿ ಅಣ್ಣಾಮಲೈ ರೀತಿಯ ಪ್ರಾಮಾಣಿಕ ನಾಯಕತ್ವಕ್ಕೆ ಮಣೆ ಹಾಕುವ ಸಾಧ್ಯತೆಯೂ ಇದೆ.
ಹಣ ಬಲವಿಲ್ಲದೇ ಸರ್ಕಾರ ರಚಿಸಬಹುದು
ಅಣ್ಣಾಮಲೈ ಬಳಿ ಇಂತಹ ಪರ್ಯಾಯಕ್ಕೆ ಬೇಕಿರುವ ಪ್ರಾಮಾಣಿಕತೆ, ಹೋರಾಟದ ಕಿಚ್ಚು ಹಾಗೂ ವಯಸ್ಸಿದೆ. ಇದೆಲ್ಲದರ ಜೊತೆಗೆ ದೊಡ್ಡ ಪ್ರಮಾಣದ ಹಣ ಬಲವಿಲ್ಲದೆಯೂ ಸರ್ಕಾರ ರಚಿಸಬಹುದು ಎನ್ನುವುದಕ್ಕೆ ವಿಜಯ್ ಸಾಕ್ಷಿಯಾಗಿದ್ದಾರೆ. ತಮಿಳುನಾಡು ಚುನಾವಣೆಯು ಈ ದೇಶದ ಅತ್ಯಂತ ದುಬಾರಿ ಎಂದು ಹಲವು ವರ್ಷಗಳಿಂದಲೇ ಸಾಬೀತಾಗಿತ್ತು. ತಮಿಳುನಾಡಿನ ಚುನಾವಣೆಗೆ ಎಷ್ಟು ಸಾವಿರ ಕೋಟಿ ಹರಿದು ಹೋಗುತ್ತದೆ ಎಂದು ಅಂದಾಜು ಮಾಡದ ಸ್ಥಿತಿಗೆ ತಲುಪಿತ್ತು. ಆದರೆ ವಿಜಯ್ ಗೆಲುವು, ಹೊಸ ಲೆಕ್ಕಾಚಾರವನ್ನು ಹುಟ್ಟು ಹಾಕಿದೆ. ವಿಜಯ್ ಹಾಗೂ ಅಣ್ಣಾಮಲೈ ಅವರ ಜನಪ್ರಿಯತೆ ವಿಭಿನ್ನವಾಗಿದೆ ಎನ್ನುವ ವಿಚಾರ ತಿಳಿದಿದೆ. ಆದರೆ ಜನ ಬಲವಿದ್ರೆ ಹಣ ಬಲವಿಲ್ಲದೆಯೂ ಚುನಾವಣೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎನ್ನುವ ಸಾಧ್ಯತೆಯನ್ನು ತಮಿಳುನಾಡು ಚುನಾವಣೆ ಸಾಧಿಸಿ ತೋರಿಸಿದೆ.
ಇಂತಹ ಸ್ಥಿತಿಯಲ್ಲಿ ತಮಿಳುನಾಡಿಗೆ ಅಣ್ಣಾಮಲೈ ಅವರು ಭವಿಷ್ಯದಲ್ಲಿ ಮುಖ್ಯಮಂತ್ರಿ ಆಗಬೇಕು ಎನ್ನುವ ಆಶಯ ನನ್ನದು. ಅದರೊಂದಿಗೆ ಮುಂದಿನ ದಿನಗಳಲ್ಲಿ ಶುದ್ಧ ರಾಷ್ಟ್ರೀಯ ಚಿಂತನೆಗಳ ಮೂಲಕ ಬಿಜೆಪಿಗೆ ಪರ್ಯಾಯವಾದ ಪಕ್ಷವೊಂದನ್ನು ಕಟ್ಟಬೇಕಿದೆ. ಇಂತಹ ಪರ್ಯಾಯ ರಾಜಕೀಯ ಶಕ್ತಿಯ ಅಗತ್ಯವಿದೆ ಎನ್ನುವುದನ್ನು ರಾಷ್ಟ್ರೀಯ ಚಿಂತನೆಗಳನ್ನು ಬೆಂಬಲಿಸುವ ಕೆಲ ಸಂಘಟನೆಗಳು ಕೂಡ ಹಲವು ವರ್ಷಗಳಿಂದ ಹೇಳುತ್ತಾ ಬಂದಿವೆ. ಇಂತಹದೊಂದು ಸಾಧ್ಯತೆಗೆ ಅಣ್ಣಾಮಲೈ ಕಾರಣವಾಗಲಿ, ಕರ್ನಾಟಕ ಸೇರಿ ದೇಶದೆಲ್ಲೆಡೆ ಒಂದೊಳ್ಳೆ ಪರ್ಯಾಯ ಹುಟ್ಟಿಕೊಳ್ಳಲಿ.
ಅಣ್ಣಾಮಲೈ ಇಷ್ಟವಾಗಲು ಕಾರಣಗಳಿವೆ..
ನನ್ನಂತಹ ಯುವಕರಿಗೆ ಅಣ್ಣಾಮಲೈ ಇಷ್ಟವಾಗಲು ಸಾಕಷ್ಟು ಕಾರಣಗಳಿವೆ. ಅಣ್ಣಾಮಲೈ ಅವರಲ್ಲಿ ನುಡಿದಂತೆ ನಡೆಯುವ ಧೈರ್ಯ ಕಾಣಿಸುತ್ತದೆ. ಹಾಗೆಯೇ ತಮ್ಮ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳುವ ವ್ಯಕ್ತಿತ್ವವಲ್ಲ ಎನ್ನುವುದು ಈವರೆಗಿನ ರಾಜಕೀಯ ಹೋರಾಟ ತೋರಿಸಿಕೊಟ್ಟಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವಾಗ ಹಾಗೂ ಹೋರಾಡುವಾಗ ಡಿಎಂಕೆ, ಎಐಎಡಿಎಂಕೆಯನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗಿದ್ದಾರೆ. ಅಂದ್ಹಾಗೆ ಇದುವೇ ಅವರಿಗೆ ಮುಳ್ಳಾಗಿರಬಹುದು.
ನನ್ನೊಂದಿಗಿದ್ದರೆ ಅವರು ಒಳ್ಳೆಯವರು, ಇಲ್ಲವಾದಲ್ಲಿ ಭ್ರಷ್ಟರು ಹಾಗೂ ದೇಶದ್ರೋಹಿಗಳು ಎನ್ನುವ ಕೆಟ್ಟ ಮನಸ್ಥಿತಿಯಲ್ಲಿ ಬಿಜೆಪಿ ಹೊರಳಾಡುತ್ತಿದೆ. ಇಂತಹ ದ್ವಂದ್ವಗಳಿಲ್ಲದ ಪರ್ಯಾಯ ವ್ಯವಸ್ಥೆ ಬೇಕಿದೆ.
ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಕಳೆದ ಹತ್ತು ವರ್ಷಗಳಲ್ಲಿ ಈ ರಾಜ್ಯದಲ್ಲಿ ಆಗಿರುವ ದುರಾಡಳಿತವನ್ನು ನೆನೆಸಿಕೊಂಡರೆ ಮೈ ಉರಿಯುತ್ತದೆ. ಆದರೆ ಅಣ್ಣಾಮಲೈಯನ್ನು ಟೀಕಿಸುವ ಇಲ್ಲಿಯ ರಾಜಕೀಯ ನಾಯಕರು, ಕಂಬಳಿ ಮೇಲೆ ರಗ್ಗು ಹೊದ್ದುಕೊಂಡು ಮಲಗಿದ್ದಾರೆ.
ಗಂಭೀರ ರಾಜಕೀಯ ಹೋರಾಟವೇ ನಡೆದಿಲ್ಲ
ಕರ್ನಾಟಕದಲ್ಲಿ ಬಳ್ಳಾರಿ ಪಾದಯಾತ್ರೆಯ ಬಳಿಕ ಒಂದು ಗಂಭೀರ ರಾಜಕೀಯ ಹೋರಾಟವೇ ನಡೆದಿಲ್ಲ. ಸರ್ಕಾರಕ್ಕೆ ನಡುಕ ಹುಟ್ಟಿಸುವ ರೀತಿಯ ಆಂದೋಲನವೇ ಆಗಲಿಲ್ಲ. ಒಂದು ಕಂಪೆನಿಯಲ್ಲಿನ ಬಿಸಿನೆಸ್ ಪಾರ್ಟ್‌ನರ್‍ಗಳೇ ಈ ಮಟ್ಟದ ಹೊಂದಾಣಿಕೆ ಹೊಂದಿರುವುದಿಲ್ಲ. ಆದಾಗ್ಯೂ ನಮ್ಮ ರಾಜ್ಯದ ನಾಯಕರ ಮಧ್ಯೆ ಪಕ್ಷಾತೀತವಾಗಿ ಅಷ್ಟೊಂದು ಅದ್ಭುತವಾದ ತಾಳ-ಮೇಳವಿದೆ. ಪ್ರತಿ ಪಕ್ಷವು ಇನ್ನೊಂದು ಪಕ್ಷದ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ. ಎಲ್ಲರೂ ಸೇರಿ ರಾಜ್ಯದ ಮತದಾರರನ್ನು ತಮಗೆ ಬೇಕಾದಂತೆ ಗೋಳು ಹೊಯ್ದುಕೊಳ್ಳುತ್ತಾರೆ. ಕೇಂದ್ರದಲ್ಲೂ ಇಂತಹ ಮನಸ್ಥಿತಿಯು ಬೇರೆ ರೂಪದಲ್ಲಿದೆ. ನಮಗೆ ಮೋದಿಯ ನಾಮ ಬಲವಿದೆ ಸಾಕು, ಉಳಿದವರೆಲ್ಲ ಹಣ ಬಲದವರೇ ಬೇಕು ಎಂಬ ತರ್ಕಕ್ಕೆ ಪಕ್ಷ ಜಾರುತ್ತಿದೆಯೇ ಎಂದು ಆಗಾಗ ಅನಿಸುತ್ತದೆ.
ರಾಜ್ಯದ ಮತದಾರರಿಗೆ ಬೇಕಿದ್ದರೆ ನಮಗೆ ಅಧಿಕಾರ ಕೊಡಲಿ, ನಾವು ಮಾತ್ರ ಏನು ಹೋರಾಟ ಮಾಡುವುದಿಲ್ಲ ಎನ್ನುವ ಪರಮನೀಚ ಹಾಗೂ ಆಲಸಿ ರಾಜಕಾರಣಿಗಳ ಮಧ್ಯೆ ಹೋರಾಡುವ ಹಾಗೂ ಬೆವರು ಹರಿಸುವ ಅಣ್ಣಾಮಲೈ ಇಷ್ಟವಾಗದಿರಲು ಸಾಧ್ಯವೇ ಇಲ್ಲ. ಇದರ ಜೊತೆಗೆ ಆ ಮನುಷ್ಯನಿಗೆ ಆಡಳಿತದ ಅನುಭವದ ಜೊತೆಗೆ, ಸರ್ಕಾರ ಹೇಗೆ ನಡೆಯುತ್ತದೆ ಎನ್ನುವ ಸ್ಪಷ್ಟತೆಯೂ ಇದೆ. ಜನರ ಆಶಯದ ಬಗೆಗೂ ಸ್ಪಷ್ಟತೆಯಿದೆ. ಅವರ ಮಾತಿನಲ್ಲಿ ನಾಟಕದ ಬದಲಿಗೆ, ಯಾವಾಗಲೂ ಕಾಳಜಿ ಕಾಣಿಸುತ್ತದೆ.
ಅಂದಹಾಗೆ ಅಣ್ಣಾಮಲೈ ಅವರ ಈ ಪ್ರಯತ್ನವು ದೇಶವ್ಯಾಪಿಯಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ರಾಷ್ಟ್ರೀಯತೆಯನ್ನು ಗೌರವಿಸುವ ಹಾಗೂ ಬಹಿರಂಗವಾಗಿ ಮಾತನಾಡುವ ಪರ್ಯಾಯದ ಯಶಸ್ಸು ತುರ್ತಾಗಿ ಬೇಕಿದೆ. ಅದು ಒಂದೊಂದೇ ರಾಜ್ಯದಲ್ಲಿ ಯಶಸ್ವಿಯಾಗುತ್ತಾ ಸಾಗಿದರೆ, ದೇಶವ್ಯಾಪಿಯಾಗಲು ಭಾರಿ ಸಮಯ ಹಿಡಿಯದು. ಕೆಲವರಿಗೆ ಇದು ಹಗಲು ಕನಸು ಎನಿಸಬಹುದು. ಹಾಗೆಯೇ ಬಿಜೆಪಿಯ ಕಟ್ಟಾ ಬೆಂಬಲಿಗರಿಗೆ ನಾನು ದೇಶದ್ರೋಹಿಯ ರೀತಿ ಕಾಣಿಸಬಹುದು. ಆದರೆ ಇತ್ತೀಚಿನ ನೀಟ್, ಸಿಬಿಎಸ್‌ಇ ಸೇರಿ ಇತರ ಕೆಲ ವಿಚಾರಗಳಲ್ಲಿ ಸರ್ಕಾರದ ವರ್ತನೆಯನ್ನು ನೋಡಿದಾಗ, ಈ ಕ್ಷಣಕ್ಕೆ ಉತ್ತಮ ಪರ್ಯಾಯ ಬೇಕಿದೆ.
ರಾಷ್ಟ್ರೀಯತೆ ಎಂದರೆ....?
ರಾಷ್ಟ್ರೀಯತೆ ಎಂದರೆ ಒಂದು ಧರ್ಮದ ಬಗ್ಗೆ ದ್ವೇಷ ಹುಟ್ಟಿಸುವುದಷ್ಟೇ ಎನ್ನುವ ವ್ಯಾಖ್ಯಾನ ಮಾಡಲಾಗುತ್ತಿದೆ. ಆದರೆ ಈ ದೇಶದಲ್ಲಿ ಯಾವುದೇ ಒಂದು ಧರ್ಮವನ್ನು ಕಡೆಗಣಿಸಿ ಶಾಂತ ಹಾಗೂ ಸಮೃದ್ಧವಾಗಿರಲು ಸಾಧ್ಯವಿಲ್ಲ. ಈ ದೇಶ, ಸೇನೆ, ಸಂವಿಧಾನವನ್ನು ಗೌರವಿಸುವುದೇ ರಾಷ್ಟ್ರೀಯತೆ ಎನ್ನುವುದು ಸರಿ ಎನಿಸುತ್ತದೆ. ಅದರ ಜೊತೆಗೆ ಮುಖ್ಯವಾಗಿ ಬಹುಸಂಖ್ಯಾತರ ಆಶಯ ಹಾಗೂ ಭಾವನೆಗಳನ್ನು ಗೌರವಿಸುವುದರ ಜೊತೆಗೆ ಎಲ್ಲ ರಾಷ್ಟ್ರ ಪ್ರೇಮಿಗಳನ್ನು ಒಟ್ಟಾಗಿ ಕರೆದುಕೊಂಡು ಹೋಗುವುದು ನಿಜವಾದ ರಾಷ್ಟ್ರೀಯತೆ. ಅಣ್ಣಾಮಲೈ ಅವರ ಮಾತಿನಲ್ಲಿ ಇಂತಹ ವಿಚಾರಗಳನ್ನು ಕೇಳಿದ್ದೇನೆ. ಹಾಗೆಯೇ ಒಂದು ಧರ್ಮದ ಬಗ್ಗೆ ಕಿಡಿಕಾರುತ್ತಾ, ಇನ್ನೊಂದು ಬಹುಸಂಖ್ಯಾತ ಧರ್ಮವನ್ನು ʼಟೇಕನ್ ಫಾರ್ ಗ್ರಾಂಟೆಡ್ʼ ಎಂದು ಪರಿಗಣಿಸುವುದು ಸೂಕ್ತವಲ್ಲ. ಬಹುಸಂಖ್ಯಾತರ ಹಿತ ಕಾಪಾಡುವುದೆಂದರೆ, ಉಳಿದವರನ್ನು ದ್ವೇಷಿಸಬೇಕು ಎಂದಿಲ್ಲ. ಬಿಜೆಪಿಯಿಂದ ಹೊರಬಂದ ಅಣ್ಣಾಮಲೈ ನಿಲುವು ಇದೇ ರೀತಿ ಇರಬಹುದು ಎನ್ನುವ ಆಶಯವಿದೆ.
ಕೊನೆಯದಾಗಿ: ನರೇಂದ್ರ ಮೋದಿಯನ್ನು ಇಷ್ಟಪಡುವರಲ್ಲಿ ನಾನೂ ಓರ್ವ. ಮೋದಿಯ ಮುಖ ನೋಡಿಕೊಂಡೇ ಕಳೆದ ಮೂರು ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇನೆ. ಸೂಕ್ತ ಪರ್ಯಾಯ ಸಿಗುವವರೆಗೂ ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ ನನ್ನ ನಿಲುವು ಹಾಗೂ ಆಲೋಚನೆಯು ಯಾರೊಬ್ಬರಿಗೆ ಸೀಮಿತವಾಗಿಲ್ಲ. ದೇಶವನ್ನು ಪ್ರೇಮಿಸುವವರು ಮೋದಿಗಿಂತ ಇನ್ನೋರ್ವ ಬರಲಿ, ಮೋದಿಗೆ ಪರ್ಯಾಯ ಬರಲಿ ಎಂದು ಬಯಸುವವರಲ್ಲಿ ನಾನು ಮೊದಲಿಗ. ಏಕೆಂದರೆ ಅಂತಹ ಸ್ಪರ್ಧೆಯು ಸೀಟು ಗೆಲ್ಲುವುದಕ್ಕೆ ಸೀಮಿತವಾಗದೇ, ದೇಶ ಪ್ರೇಮದಲ್ಲೂ ಸ್ಪರ್ಧೆ ಇರಲೇಬೇಕು. ಇಲ್ಲವಾದಲ್ಲಿ ಚುನಾವಣೆ ಮುಗಿದ ಬಳಿಕ, ಒಂದಿಷ್ಟು ಮರೆತು ಬಿಡುತ್ತಾರೆ. ಹೀಗಾಗಿ ಈ ದೇಶಕ್ಕೆ ಮೋದಿಯನ್ನು ಎದುರಿಸುವ ಒಂದು ಬಲಿಷ್ಠ ರಾಷ್ಟ್ರೀಯ ಚಿಂತನೆಯ ಪರ್ಯಾಯ ಹುಟ್ಟಲೇಬೇಕು. ಅದು ಅಣ್ಣಾಮಲೈ ರೀತಿಯ ವ್ಯಕ್ತಿಗಳಿಂದಾದರೆ, ಅದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ' ಎಂದು ಹೇಳಿದ್ದಾರೆ.













Click it and Unblock the Notifications