ಮಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಸಂದರ್ಶನ
ಮಂಗಳೂರು, ಮೇ 08: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಅಖಾಡ ಸಿದ್ದಗೊಂಡಿದೆ. ಇನ್ನೇನಿದ್ದರೂ ಎರಡು ದಿನಗಳ ಪ್ರಚಾರ ಮತ್ತು ಮತದಾನ ಮಾತ್ರ ಬಾಕಿ ಉಳಿದಿದೆ. ಇಲ್ಲಿ ಏನಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ; ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ.
ಜಿಲ್ಲೆಯಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಕೂಡ ಒಂದು. ಕಳೆದ ಬಾರಿ 2013 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರ ದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆ.ಆರ್. ಲೊಬೋ 12,275 ಮತಗಳ ಅಂತರದಿಂದ ಬಿಜೆಪಿಯ ಯೋಗೀಶ್ ಭಟ್ ಅವರನ್ನು ಪರಾಭವಗೊಳಿಸಿದ್ದರು. ಇದಕ್ಕೂ ಮೊದಲು ಕ್ಷೇತ್ರದಲ್ಲಿ ಯೋಗೀಶ್ ಭಟ್ ಸತತ 4 ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದರು.
ಈ ಬಾರಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಯುವ ಮುಖಂಡ ವೇದವ್ಯಾಸ್ ಕಾಮತ್ ಕಣಕ್ಕಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರವನ್ನು ಮರಳಿ ಪಡೆಯುವ ದೃಷ್ಟಿಯಿಂದ ಬಿಜೆಪಿ ಭಾರೀ ಕಾರ್ಯತಂತ್ರ ರೂಪಿಸಿದೆ.
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ 'ಓನ್ಇಂಡಿಯಾ ಕನ್ನಡ' ತಂಡಕ್ಕೆ ಮಾತಿಗೆ ಸಿಕ್ಕಿದಾಗ ಕೇಳಿದ ಪ್ರಶ್ನೆಗಳಿಗೆ ವೇದವ್ಯಾಸ್ ತಮ್ಮ ಮನದಾಳವನ್ನು ತೆರೆದಿಟ್ಟಿದ್ದು ಹೀಗೆ...

ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದೆ. ಕ್ಷೇತ್ರದಲ್ಲಿ ಪ್ರಚಾರ ಹೇಗೆ ನಡೆಯುತ್ತಿದೆ ?
ಪ್ರತಿದಿನ ಮುಂಜಾನೆ 6 ಗಂಟೆಯಿಂದ ಸಂಜೆ 8 ರವರೆಗೆ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಪ್ರತಿದಿನ ಕ್ಷೇತ್ರದ ವಿವಿಧ ವಾರ್ಡ್ ಗಳ 700 ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಮತ ಯಾಚನೆ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿಗೆ ಪೂರಕ ವಾತಾವರಣವಿದೆ. ಈ ಬಾರಿ ಮೋದಿ ಅವರ ಕೈ ಬಲಪಡಿಸಲು ಜನರು ನಿರ್ಧರಿಸಿದ್ದಾರೆ. ಬಿಜೆಪಿಗೆ ಪಕ್ಷದ ಕಾರ್ಯಕರ್ತರೇ ಜೀವಾಳ. ಕಾರ್ಯಕರ್ತರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಮೋದಿಯವರ ಕಾರ್ಯ ವೈಖರಿ, ಸಾಧನೆಗಳ ಬಗ್ಗೆ ಜನರಿಗೆ ವಿವರಿಸಿ, ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರದ ವೈಫಲ್ಯ, ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ವೈಫಲ್ಯವನ್ನು ಜನರಿಗೆ ಮನವರಿಕೆ ಮಾಡಿದ್ದೇವೆ. ಈ ಬಾರಿ ನೂರು ಪ್ರತಿಶತಃ ಗೆಲುವು ನಮ್ಮದೇ.

ಯಾವ ವಿಚಾರಗಳನ್ನು ಮುಂದಿಟ್ಟುಕೊಂಡು ನೀವು ಜನರಲ್ಲಿ ಮತ ಯಾಚಿಸುತ್ತಿದ್ದೀರಿ ?
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ, ನಿಷ್ಕಲ್ಮಷ ಮನೋಭಾವ, ಭ್ರಷ್ಟಾಚಾರ ರಹಿತ ಯಾವುದೇ ಕಪ್ಪು ಚುಕ್ಕೆ ಇಲ್ಲದ ಆಡಳಿತದೊಂದಿಗೆ ದೇಶವನ್ನು ಮುನ್ನಡೆಸುತ್ತಿರುವ ಪರಿ, ಈ ವಿಚಾರಗಳನ್ನ ಜನರ ಮುಂದಿಡುತ್ತಿದ್ದೇವೆ.
ಅದೇ ವೇಳೆ ರಾಜ್ಯ ಸರಕಾರ ಜಾರಿಗೆ ತಂದ ಜನ ವಿರೋಧಿ ನೀತಿಗಳು, ರಾಜ್ಯ ಸರಕಾರದಲ್ಲಿ ನಡೆದ ಭ್ರಷ್ಟಾಚಾರ, ಅವ್ಯವಹಾರ, ಆಡಳಿತದಲ್ಲಿ ರಾಜಕಾರಣಿಗಳ ಹಸ್ತಕ್ಷೇಪ , ಅಧಿಕಾರಿಗಳ ಮೇಲೆ ನಡೆದ ದೌರ್ಜನ್ಯ , ಅಧಿಕಾರಿಗಳ ಆತ್ಮಹತ್ಯೆ ಪ್ರಕರಣ, ಕುಸಿದ ಕಾನೂನು ಸುವ್ಯವಸ್ಥೆ, ಮಂಗಳೂರಿನ ಘನತ್ಯಾಜ್ಯ ವಿಲೇವಾರಿಯಲ್ಲಿ ಆದ ವೈಫಲ್ಯ , ಕುಡಿಯುವ ನೀರಿನ ಸೋರಿಕೆ, ಕುಡ್ಸೆಂಪ್ ನಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ, ಅದರಲ್ಲಿ ಶಾಸಕ ಜೆ.ಆರ್. ಲೋಬೋ ಅವರ ಪಾತ್ರ ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟು ಜನರಲ್ಲಿ ಮತಯಾಚಿಸುತ್ತಿದ್ದೇನೆ.

ಮಂಗಳೂರಿನ ಅಭಿವೃದ್ಧಿಯ ಕುರಿತು ನಿಮ್ಮ ಮುಂದಿನ ದೃಷ್ಠಿಕೋನ ಏನು?
ಇದೇ ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಹುಡುಗ ನಾನು. ಇಲ್ಲಿಯ ಜನರ ನಾಡಿ ಮಿಡಿತ ಅರಿತವ. ದಿನದ ಇಪ್ಪತ್ತನಾಲ್ಕು ಗಂಟೆ ಹಗಲು ರಾತ್ರಿ ಶ್ರಮಿಸುವ ಸಾಮರ್ಥ್ಯ ನಾನು ಹೊಂದಿದ್ದೇನೆ. ಪ್ರಧಾನಿ ಮೋದಿಯವರಂತೆ ಜನಸೇವಕನಾಗಿ ದುಡಿಯುವ ಮನೋಭಾವ ಹೊಂದಿದ್ದೇನೆ. ಕೇಂದ್ರದಲ್ಲಿ ನಮ್ಮ ಸರಕಾರವಿದೆ. ರಾಜ್ಯದಲ್ಲಿ ಬಿಜೆಪಿ ಇನ್ನು ಕೆಲವೇ ದಿನಗಳಲ್ಲಿ ಅಧಿಕಾರಕ್ಕೆ ಬರಲಿದೆ. ಈ ಹಿನ್ನಲೆಯಲ್ಲಿ ಮಂಗಳೂರು ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಹೆಚ್ಚಿನ ಅನುದಾನಗಳನ್ನು ತಂದು ನಗರದ ಸಂಪೂರ್ಣ ಅಭಿವೃದ್ಧಿ ಮಾಡುವ ದೃಷ್ಠಿಕೋನ ಹೊಂದಿದ್ದೇನೆ.
24x7 ಕುಡಿಯುವ ನೀರಿನ ಪೂರೈಕೆ, 24x7 ವಿದ್ಯುತ್ ಪೂರೈಕೆ, ಪ್ರವಾಸೋದ್ಯಮ ಅಭಿವೃದ್ಧಿ, ಆ ಮೂಲಕ ಯುವಕರಿಗಾಗಿ ಉದ್ಯೋಗ ಸೃಷ್ಠಿ , ಸಮರ್ಪಕ ಒಳಚರಂಡಿ ಯೋಜನೆ, ಘನತ್ಯಾಜ್ಯ ವಿಲೇವಾರಿಯಲ್ಲಿ ಕ್ರಾಂತಿಕಾರಿ ಬದಲಾವಣೆ, ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನ, ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ಸೇರಿದಂತೆ ಹಲವಾರು ಯೋಜನೆಗಳನ್ನು ನಗರದ ಅಭಿವೃದ್ಧಿಗೆ ಹೊಂದಿದ್ದೇನೆ.

ನಿಮ್ಮೊಂದಿಗೆ ಭಾರೀ ಪೈಪೋಟಿ ನಡೆಸಿದ್ದ ಟಿಕೆಟ್ ಆಕಾಂಕ್ಷಿಗಳು ಈಗ ನಿಮ್ಮೊಂದಿಗೆ ಪ್ರಚಾರದಲ್ಲಿ ಕೈ ಜೋಡಿಸಿದ್ದಾರೆಯೇ ?
ಬಿಜೆಪಿ ಕಾರ್ಯಕರ್ತರು ಎಂದಿಗೂ ಬಿಜೆಪಿ ಕಾರ್ಯಕರ್ತರೇ. ಯಾರಿಗೆ ಟಿಕೆಟ್ ನೀಡಿದರೂ ನಿಸ್ವಾರ್ಥವಾಗಿ ಪಕ್ಷಕ್ಕೆ ದುಡಿಯುವ ಮನೋಭಾವ ಬಿಜೆಪಿ ಕಾರ್ಯಕರ್ತರಿಗೆ ರಕ್ತಗತವಾಗಿ ಬಂದಿದೆ. ಟಿಕೆಟ್ ಆಕಾಂಕ್ಷಿಗಳಾಗಿದ್ದ ಕೆಲ ಮುಖಂಡರು ಈಗಾಗಲೇ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನನ್ನೊಂದಿಗೆ ಮತಯಾಚನೆಗೆ ಬರುತ್ತಿದ್ದಾರೆ. ಪಕ್ಷ ನೀಡಿದ ಜವಾಬ್ದಾರಿಗಳನ್ನು ಚಾಚೂ ತಪ್ಪದೆ ನಿರ್ವಹಿಸುತ್ತಿದ್ದಾರೆ. ಇದು ಬಿಜೆಪಿಯ ಕಾರ್ಯಕರ್ತರ ಶಕ್ತಿ . ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಒಟ್ಟಾಗಿ ಪಕ್ಷ ಗೆಲ್ಲಿಸಲು ಶ್ರಮಿಸುತ್ತಿದ್ದೇವೆ.

ಪ್ರಧಾನಿ ಮೋದಿ ಮಂಗಳೂರಿಗೆ ಬಂದ ಬಳಿಕ ಕ್ಷೇತ್ರದಲ್ಲಿ ಯಾವ ರೀತಿಯ ಬದಲಾವಣೆಯಾಗಿದೆ?
ಪ್ರಧಾನಿ ಮೋದಿ ಬಂದು ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಬಳಿಕ ಕಾರ್ಯಕರ್ತರಲ್ಲಿ ಉತ್ಸಾಹ ಮತ್ತಷ್ಟು ಹೆಚ್ಚಿದೆ. ಮೋದಿಯವರು ಮತ್ತಷ್ಟು ಸ್ಪೂರ್ತಿ ತುಂಬಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಮೋದಿಯೇ ಪ್ರೇರಣಾ ಶಕ್ತಿ. ಮಂಗಳೂರಿನಲ್ಲಿ ಮೋದಿಯವರ ಪ್ರಚಾರದ ಬಳಿಕ ಮತದಾರರಲ್ಲಿ ಒಂದು ಸಂಚಲನ ಮೂಡಿದೆ. ಗೊಂದಲದಲ್ಲಿದ್ದ ಮತದಾರ ಬಿಜೆಪಿಗೆ ಮತ ಹಾಕಲು ನಿರ್ಧರಿಸಿದ್ದಾರೆ. ಈ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವು ನಿಶ್ಚಿತ.











Click it and Unblock the Notifications