ಚಾಮರಾಜ ಕ್ಷೇತ್ರದ ಜೆಡಿಎಸ್ ಮುಖಂಡ ಪ್ರೊ.ಕೆ.ಎಸ್ ರಂಗಪ್ಪ ಸಂದರ್ಶನ
ಮೈಸೂರು, ಏಪ್ರಿಲ್ 28 : ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೇ ಆರಂಭವಾಗಿದೆ. ಈಗಾಗಲೇ ಮೈಸೂರಿನಲ್ಲಂತೂ ಎಲ್ಲದಕ್ಕೂ ಅಖಾಡ ಸಜ್ಜಾಗಿದೆ.
ಇದೇ ಮೊದಲ ಬಾರಿಗೆ ತಾವೊಬ್ಬ ಅಭ್ಯರ್ಥಿ ಎಂದು ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದಾರೆ ಹಲವು ಪದವಿಗಳ ವೀರ, ಬುದ್ಧಿವಂತ ,ಚಾಣಾಕ್ಷ ನಾಯಕ ಪ್ರೊ.ಕೆ.ಎಸ್ ರಂಗಪ್ಪ. ತೆನೆ ಹೊತ್ತ ಮಹಿಳೆಯ ಕೈ ಹಿಡಿದಿರುವ ರಂಗಪ್ಪ ಈಗಾಗಲೇ ತಾವು ಸ್ಪರ್ಧಿಸುತ್ತಿರುವ ಚಾಮರಾಜ ಕ್ಷೇತ್ರದ ಸುತ್ತಲೂ ಮಿಂಚಿನಂತೆ ಸಂಚರಿಸುತ್ತಿದ್ದಾರೆ.
ಅವರ ಚುನಾವಣೆಯನ್ನು ಗೆಲ್ಲುವುದಕ್ಕೆ ಯಾವೆಲ್ಲಾ ರಣತಂತ್ರ ರೂಪಿಸುತ್ತಿದ್ದಾರೆ ಎಂಬುದಕ್ಕೆ ಸ್ವತಃ ಅವರೇ ಉತ್ತರಿಸಿದ್ದಾರೆ. ಮೇ 12 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅವರ ಸಂದರ್ಶನ ಇಲ್ಲಿದೆ.
ಪ್ರಚಾರ ಕಾರ್ಯ ಹೇಗೆ ನಡೆಯುತ್ತಿದೆ ?
ನನಗೆ ಕಳೆದ 6 ತಿಂಗಳ ಕೆಳಗೆಯೇ ನಾನೇ ಅಭ್ಯರ್ಥಿ ಎಂದು ಗೊತ್ತಿತ್ತು. ನಾನು ರಾಜಕೀಯಕ್ಕೆ ಬರಬೇಕೆಂದು ಅಂದುಕೊಂಡವನೇ ಅಲ್ಲ. ನನಗೆ ಇದು ಬಯಸದೇ ಬಂದ ಭಾಗ್ಯ. ನನ್ನ ಶೈಕ್ಷಣಿಕ ಸಾಮರ್ಥ್ಯ ದೇಶದ ಬದಲಾವಣೆಗೆ ಸಹಾಯಕ ಎಂಬ ಆಶಾಭಾವನೆ ಇದೆ. ಅದೇ ನಿಲುವಿನಲ್ಲಿ ಕಳೆದ 2 ತಿಂಗಳಿನಿಂದಲೇ ಪ್ರಚಾರ ನಡೆಸುತ್ತಲೇ ಬಂದಿದ್ದೇನೆ. ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ ಕೂಡ.
ಕ್ಯಾನ್ಸರ್ ಕುರಿತು ಸಂಶೋಧನೆ ಮಾಡುತ್ತಿರುವ ನೀವು ನಿಮ್ಮ ಕ್ಷೇತ್ರದಲ್ಲಿರುವ ಕ್ಯಾನ್ಸರ್ ನಂತಹ ಸಮಸ್ಯೆಗಳಿಗೆ ಏಗೆ ಪರಿಹಾರ ನೀಡುತ್ತೀರಾ?

ಚಾಮರಾಜ ಕ್ಷೇತ್ರದಲ್ಲಿ ಸ್ಥಳೀಯರೇ ಹೆಚ್ಚು ಸ್ಪರ್ಧಿಸಿ ಗೆದ್ದವರು. ಬೇರೇ ಕ್ಷೇತ್ರದಲ್ಲಿ ಬಂದಿದ್ದವರೂ ಇದ್ದಾರೆ. ಇಲ್ಲಿನ ಸಮಸ್ಯೆಗಳನ್ನು ಬಹು ದಿನಗಳಿಂದ ಅಧ್ಯಯನ ನಡೆಸಿದ್ದೇನೆ. ಬಗೆಹರಿಸಲು ಅವಿರತವಾಗಿ ಶ್ರಮಿಸುತ್ತೇನೆ.
ಚಾಮರಾಜ ಕ್ಷೇತ್ರದ ಬಗ್ಗೆ ನಿಮ್ಮ ಕನಸು ಏನು ? ಯಾವ ರೀತಿ ಬದಲಾಯಿಸುತ್ತೀರಾ ?
ನಾನು ಶೈಕ್ಷಣಿಕ ಕ್ಷೇತ್ರದಲ್ಲಿದ್ದಾಗ ಹಲವು ಬದಲಾವಣೆ ತಂದಿದ್ದನ್ನು ಇಲ್ಲಿನ ಜನರು ಗಮನಿಸುತ್ತಾರೆ. ನಾನೆಂದು ಹೇಳಿ ಸುಮ್ಮನಾಗುವುದಿಲ್ಲ. ಬದಲಿಸಿ ತೋರಿಸುತ್ತೇನೆ. ಇದಕ್ಕೆ ಉದಾಹರಣೆ ಕೆಎಸ್ಓಯು, ಮೈಸೂರು ವಿವಿ. ಇದೇ ನನಗೆ ಪೂರಕ. ನಾನು ಕ್ಷೇತ್ರಕ್ಕೆ ಹೋದಾಗ ನನ್ನನ್ನು ಗುರುತಿಸುವುದು ಶೈಕ್ಷಣಿಕ ಕ್ಷೇತ್ರದಿಂದಲೇ. ನಿಮ್ಮಷ್ಟು ಓದಿರುವವರು ನಮ್ಮ ಕ್ಷೇತ್ರದಿಂದ ಸ್ಪರ್ಧಿಸಿಲ್ಲ ಹಾಗೇ ನೀವು ಇಲ್ಲಿ ಬದಲಾವಣೆ ತರುತ್ತೀರಿ ಎಂಬ ನಂಬಿಕೆ ಇದೆ ಎನ್ನುತ್ತಿದ್ದಾರೆ. ಇದೇ ನನಗೆ ಶಕ್ತಿ.
ನಿಮ್ಮ ಮೇಲೆ ಬಹಳಷ್ಟು ಆರೋಪ, ಹಗರಣಗಳು ಈಗಲೂ ಜೀವಂತವಾಗಿದೆ ಏಕೆ ?
ನನ್ನ ಮೇಲಿನ ಆರೋಪ ಎಲ್ಲವೂ ನಿರಾಧಾರ. ಯಾರು ಕೂಡ ದಾಖಲೆಯಿಟ್ಟುಕೊಂಡು ಆರೋಪ ಮಾಡುತ್ತಿಲ್ಲ. ನಾನು ವಿವಿಗೆ ಬಂದ ಮೇಲೆ ಸಾಕಷ್ಟು ಬದಲಾವಣೆ ಆಗಿದೆ. ಆ ಬದಲಾವಣೆಯನ್ನು ಬಯಸದ ಶತ್ರುಗಳು ಈ ರೀತಿ ಪಿತೂರಿ ನಡೆಸಿದರು. ಎರಡೂ ವಿವಿಯನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋದೆ. ಇದರಿಂದ ಹೆಸರು ನನ್ನ ಮೇಲೆ ಬಂತು. ನನ್ನ ಮೇಲೆ ಆರೋಪ ಬಂದಿರುವುದನ್ನು ಸಾಬೀತುಗೊಂಡರೆ ಕಾಲಿಗೆ ಬಿದ್ದುಬಿಡುತ್ತೇನೆ.
ಹರೀಶ್ ಗೌಡರ ಎಂಟ್ರಿಯಿಂದ ನಿಮಗೆ ಹಿನ್ನಡೆಯಾಗಿದೆಯಾ ?
ಖಂಡಿತಾ ಇಲ್ಲ. ಅವರು ಯಾರದ್ದೋ ಮಾತುಗಳನ್ನು ಕೇಳಿ ಹೋದವರು. ಅವರು ಹೊರ ಹೋಗಿದ್ದುನನ್ನ ಮೇಲೆ ಕಿಂಚಿತ್ತು ಬದಲಾವಣೆ ತರಿಸಲ್ಲ. ಅವರು ಗೆಲ್ಲುತ್ತಾರೆ ಎಂದು ನಮ್ಮ ವರಿಷ್ಠರು ನಡೆಸಿದ ಸರ್ವೆಯಲ್ಲಿ ಕಂಡುಬರಲಿಲ್ಲ. ಹಾಗಾಗಿ ಅವರಿಗೆ ಟಿಕೆಟ್ ಮಿಸ್ ಆಯಿತು. ಇದರಲ್ಲಿ ನನ್ನ ಪಿತೂರಿಯೂ ಇಲ್ಲ.
ನೀವು ಹಿಂದಿನ ಅಭ್ಯರ್ಥಿಗಳಿಗಿಂತ ಹೇಗೆ ಭಿನ್ನ ?
ನಾನು ಮುಂದಿನ 6 ತಿಂಗಳ ಕುರಿತಾಗಿ ಪ್ಲಾನ್ ಮಾಡಿದ್ದೇನೆ. ಅದು ಅಭಿವೃದ್ಧಿ ಕಾರ್ಯ. ನನ್ನದು ರೋಡ್ ರಿಪೇರಿ, ಡ್ರೈನೇಜ್ ರಿಪೇರಿಯಷ್ಟೇ ಅಲ್ಲ. ಚಾಮರಾಜ ಕ್ಷೇತ್ರದ ಸಮಸ್ಯೆಯನ್ನು 6 ತಿಂಗಳಿನಿಂದ ಅಧ್ಯಯನ ನಡೆಸಿದ್ದೇನೆ. ಅದನ್ನು ಮುಂದಿನ 2 ವರುಷದಲ್ಲಿ ಬಗೆಹರಿಸುತ್ತಿದ್ದೇನೆ. ಇಲ್ಲವಾದರೆ ರಾಜಕೀಯ ವೃತ್ತಿಯಿಂದ ನಿವೃತ್ತಿ ತೆಗೆದುಕೊಳ್ಳುತ್ತೇನೆ.












Click it and Unblock the Notifications