ಕ್ಷೇತ್ರ ಪರಿಚಯ : ಬೀಳಗಿ ಕ್ಷೇತ್ರದಲ್ಲಿ ಗೆಲುವು ಯಾರಿಗೆ?
ಬಾಗಲಕೋಟೆ ಜಿಲ್ಲೆಯ ತಾಲೂಕು ಕೇಂದ್ರ ಬೀಳಗಿ. ಹಿಂದೆ ಜಮಖಂಡಿ ತಾಲೂಕಿಗೆ ಬೀಳಗಿ ಸೇರಿತ್ತು. 1959ರಲ್ಲಿ ಬೀಳಗಿ ತಾಲೂಕು ರಚನೆಗೊಂಡಿತು. ಘಟಪ್ರಭಾ ಮತ್ತು ಕೃಷ್ಣಾ ನದಿ ಕ್ಷೇತ್ರದ ವ್ಯಾಪ್ತಿಯಲ್ಲಿ ಹರಿಯುತ್ತವೆ.
ಬೀಳಗಿ ತಾಲೂಕಿನ ಹೆಚ್ಚಿನ ಪ್ರದೇಶ ಕರಿ ಎರೆಮಣ್ಣಿನಿಂದ ಕೂಡಿವೆ. ತಾಲೂಕಿನ ಬಹಳಷ್ಟು ಜನರು ವ್ಯವಸಾಯವನ್ನು ಅವಲಂಬಿಸಿದ್ದಾರೆ. ಕಬ್ಬು ಬೆಳೆಗಾರರೇ ಹೆಚ್ಚು.ಇದಕ್ಕೆ ಪೂರಕ ಎಂಬಂತೆ ಹಲವಾರು ಸಕ್ಕರೆ ಕಾರ್ಖನೆಗಳು ಕ್ಷೇತ್ರದಲ್ಲಿವೆ.
ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ ಪಕ್ಷದ ಜೆ.ಟಿ.ಪಾಟೀಲ್. ಇವರ ಮೇಲೆ ಯಾವುದೇ ಗಂಭೀರವಾದ ಆರೋಪಗಳು ಇಲ್ಲ. ಶಾಸಕರು ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ಕೊಟ್ಟಿದ್ದಾರೆ ಎನ್ನುವ ಮಾತಿದೆ. ಪ್ರಬಲ ರೆಡ್ಡಿ ಸಮುದಾಯಕ್ಕೆ ಸೇರಿದವರು ಜೆ.ಟಿ.ಪಾಟೀಲ್.

ಈ ಕ್ಷೇತ್ರದಲ್ಲಿ ಗಾಣಿಗ ಸಮುದಾಯದ ಮತಗಳು ನಿರ್ಣಾಯಕ. ಆದರೆ, ಚುನಾವಣೆ ಸಂದರ್ಭದಲ್ಲಿ ಶಾಸಕರಿಗೆ ಸಂಬಂಧಿಸಿದ ಯಾವುದೇ ವೈಯಕ್ತಿಕ ವಿಚಾರಗಳು ಬಹಿರಂಗವಾಗು ಸಾಧ್ಯತೆ ಇದೆ ಎನ್ನುವ ಸುದ್ದಿ ಹಬ್ಬಿದೆ. ಸಿಡಿ ಬಿಡುಗಡೆ ಮಾಡಿ ಶಾಸಕರ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂಬುದು ಮಾತು.
ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ. ಹಿಂದೆ ಜೆಡಿಎಸ್ ನಿಂದ ಸ್ಪರ್ಧಿಸಿದ್ದ, ಸದ್ಯ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಬಸವಪ್ರಭು ಸರನಾಡಗೌಡರು ಪ್ರಬಲ ಆಕಾಂಕ್ಷಿ. ಆದರೆ, ಜೆ.ಟಿ.ಪಾಟೀಲರೇ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳೂ ಇವೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಬಿಜೆಪಿಯಿಂದ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಕಂಡಿದ್ದ ಮುರುಗೇಶ ನಿರಾಣಿ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ನಿರಾಣಿ ಅವರು ಕಳೆದ ಚುನಾವಣೆಯಲ್ಲಿ ಜಮಖಂಡಿ ಕ್ಷೇತ್ರದಿಂದ ಸ್ಪರ್ಧಿಸಬೇಕೆ? ಅಥವಾ ಬೀಳಗಿ ಕ್ಷೇತ್ರದಿಂದ ಸ್ಪರ್ಧಿಸಬೇಕೆ? ಎಂದು ಗೊಂದಲ ಸೃಷ್ಠಿ ಮಾಡಿಕೊಂಡಿದ್ದರು.
ಅಂತಿಮವಾಗಿ ಬೀಳಗಿಯಿಂದಲೇ ಸ್ಪರ್ಧಿಸಿದರು. ಇದು ಕ್ಷೇತ್ರದ ಜನರಲ್ಲಿ ಗೊಂದಲ ಉಂಟು ಮಾಡಿತು. ಜೊತೆಗೆ ಬಿಜೆಪಿ-ಕೆಜೆಪಿ ಗೊಂದಲದಿಂದ ಸೋಲು ಕಂಡಿದ್ದರು. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪ್ತರು ಎಂಬದುದು ಅವರ ಪ್ಲಸ್ ಪಾಯಿಂಟ್.
ಮುರುಗೇಶ ನಿರಾಣಿ ಲಿಂಗಾಯತ ಮುಖಂಡರು. ಈ ಬಾರಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಇನ್ನು ಬಿಜೆಪಿಯಲ್ಲಿಯೂ ಆಕಾಂಕ್ಷಿಗಳಿದ್ದಾರೆ. ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಯಂಕಂಚಿ ಪ್ರಬಲ ಆಕಾಂಕ್ಷಿ.
ಬೀಳಗಿ ಕ್ಷೇತ್ರದಲ್ಲಿ ಗಾಣಿಗ ಸಮುದಾಯದ ಮತಗಳು ನಿರ್ಣಾಯಕ. ಗಾಣಿಗ ಸಮುದಾಯಕ್ಕೆ ಸೇರಿದ ಬಸವರಾಜ ಯಂಕಂಚಿ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿದರೆ ಗೆಲುವು ನಿಶ್ಚಿತ ಎಂದು ವಿಶ್ಲೇಷಿಸಲಾಗುತ್ತಿದೆ. ಜೆಡಿಎಸ್ ಅಭ್ಯರ್ಥಿಗಳ ಹುಡುಕಾಟದಲ್ಲಿದೆ.
2013ರ ಫಲಿತಾಂಶ
* ಜೆ.ಟಿ.ಪಾಟೀಲ : 66,655
* ಮುರುಗೇಶ ನಿರಾಣಿ (ಬಿಜೆಪಿ) : 55,417












Click it and Unblock the Notifications