• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚುನಾವಣೆಗೂ ಮುನ್ನವೇ ಕನ್ನಡದ ಆಸ್ಮಿತೆ ಕಿಚ್ಚು ಹಚ್ಚಿದ ಸಿದ್ದರಾಮಯ್ಯ

By ರವಿ ಕುಮಾರ್ ಆರ್
|

ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವು ದಿನ ಕಳೆದಂತೆ ತೀವ್ರ ಸ್ವರೂಪ ಪಡೆಯತೊಡಗಿದೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ನಡುವೆ ನೇರ ಹಣಾಹಣಿಯಾದರೆ ಇನ್ನುಳಿದ ಭಾಗಗಳಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿ.ಜೆ.ಪಿ ನಡುವೆ ಜಿದ್ದಾಜಿದ್ದಿ ಕಾಳಗ ಕಂಡುಬರತೊಡಗಿದೆ..ಈ ಬಾರಿಯ ಚುನಾವಣೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.

ಈ ಚುನಾವಣೆಯ ಅತಿ ದೊಡ್ಡ ವೈಶಿಷ್ಟ್ಯವೆಂದರೆ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತನ್ನ ಇಲ್ಲಿಯವರೆಗಿನ ಸಂಪ್ರದಾಯಕ್ಕೆ ತಿಲಾಂಜಲಿ ಕೊಟ್ಟು ಚುನಾವಣೆಗೂ ಮುನ್ನವೇ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿರುವುದು.

ಮತ್ತೊಂದು ಅತಿ ಪ್ರಮುಖ ವಿಶೇಷತೆಯನ್ನು ಗಮನಿಸಿದರೆ ಇದೇ ಮೊಟ್ಟಮೊದಲ ಬಾರಿಗೆ ಈ ಚುನಾವಣೆಯನ್ನು ಒಂದು ರಾಜ್ಯದ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಿ ನಡುವಿನ ಹೋರಾಟ ಎಂಬಂತೆ ರಾಷ್ಟ್ರವ್ಯಾಪಿ ಬಿಂಬಿಸಲಾಗುತ್ತಿದೆ. ರಾಷ್ಟ್ರೀಯ ಮಾಧ್ಯಮಗಳೂ ಕೂಡ ಇದಕ್ಕೆ ದನಿಗೂಡಿಸುತ್ತಿವೆ

ಚರ್ಚೆ: ಕನ್ನಡ ಧ್ವಜ, ರಾಜಕೀಯ ಪ್ರೇರಿತವೇ? ರಾಜ್ಯದ ಅಸ್ಮಿತೆಯೇ?

ಹಾಗೆಯೇ ಕರ್ನಾಟಕ ಚುನಾವಣಾ ಇತಿಹಾಸದಲ್ಲಿ ಹಿಂದೆಂದೂ ಕಂಡುಬರದ ಒಂದು ಸಂಗತಿ ಈ ಬಾರಿ ಬಲ ಪಡೆದುಕೊಂಡಿದೆ. ಅದುವೇ ಕನ್ನಡದ ಅಸ್ಮಿತೆಯ ವಿಷಯ ಐತಿಹಾಸಿಕವಾಗಿ ನೋಡುವುದಾದರೆ ನೆರೆ ರಾಜ್ಯದ ಜನರಷ್ಟು ಕನ್ನಡಿಗರು ಭಾಷಾವಿಷಯ ಪ್ರಸ್ತಾಪವಾದಾಗ ಆಕ್ರೋಶಕ್ಕೆ, ಭಾವೋದ್ವೇಗಕ್ಕೆ ಈಡಾಗುವವರಲ್ಲ.

ಈ ನೆಲದಲ್ಲಿ ಹಲವು ಹೋರಾಟಗಳು ರೂಪುಗೊಂಡಿವೆ ಮತ್ತು ಯಶಸ್ವಿಯಾಗಿವೆ. ಹಾಗಿದ್ದರೂ ಈ ಹೋರಾಟಗಳು ಸೀಮಿತ ಉದ್ದೇಶ ಮತ್ತು ವರ್ಗವನ್ನು ಪ್ರಭಾವಿಸಲಷ್ಟೇ ಶಕ್ತವಾದವು, ಈ ಹೋರಾಟಗಳನ್ನು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೃಹತ್ ವ್ಯಾಪ್ತಿಯ ತೆಕ್ಕೆಗೆ ಸೇರಿಸಿಕೊಳ್ಳುವ ಮುಂದಾಲೋಚನೆ ಆ ಹೋರಾಟದ ಮುಂಚೂಣಿಯ ನಾಯಕರಿಗೆ ಇರಲಿಲ್ಲ.

ಕಾರ್ಮಿಕ ಚಳುವಳಿ ಹಾಗೂ ಕನ್ನಡ ಅಸ್ಮಿತೆ

ಕಾರ್ಮಿಕ ಚಳುವಳಿ ಹಾಗೂ ಕನ್ನಡ ಅಸ್ಮಿತೆ

ಕಾರ್ಮಿಕ ಚಳುವಳಿ ತನ್ನ ಉತ್ತುಂಗಾವಸ್ಥೆಯಲ್ಲಿದ್ದಾಗ ಕೂಡ ಅದನ್ನು ಕನ್ನಡ ನಾಡು ನುಡಿಯ ಜೊತೆಗೆ ಜೋಡಿಸಲು ಸಾಧ್ಯವಾಗಲಿಲ್ಲ, ಬಹುತೇಕ ಕೂಲಿ ಕಾರ್ಮಿಕರು ಪರರಾಜ್ಯದವರಾಗಿದ್ದರು. ಹಾಗಾಗಿ ಇಂಥದ್ದೊಂದು ಪ್ರಯತ್ನ ಹೋರಾಟದ ಪ್ರಖರತೆಯನ್ನು ಮಂಕಾಗಿಸುವ ಅಪಾಯದಿಂದ ತಪ್ಪಿಸಿಕೊಳ್ಳಲು ಇದು ಅನಿವಾರ್ಯವಾಗಿತ್ತು. ಇನ್ನು ದಲಿತ ಚಳುವಳಿಯ ವಿಷಯದಲ್ಲೂ ಇದೇ ಸ್ಥಿತಿ ಪುನರಾವರ್ತನೆಯಾಯಿತು.

ರೈತ ಚಳುವಳಿಗೆ ಈ ಮಿತಿಗಳು ಇರಲಿಲ್ಲವಾದರೂ ಸಂಘಟನೆ ಒಳಗಿನ ಒಡಕು ಮತ್ತು ಸರ್ವಸಮ್ಮತ ನಾಯಕನ ಕೊರತೆಯಿಂದ ಅದು ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲು ಆಗಲಿಲ್ಲ.

ಹಾಗೆ ನೋಡಿದರೆ ಭಾಷಾ ವಿಷಯದಲ್ಲಿ ಕನ್ನಡಿಗರ ಒಗ್ಗಟ್ಟು, ರಣೋತ್ಸಾಹ , ಅಭಿಮಾನದ ಪರಾಕಾಷ್ಠೆ ಪ್ರಕಟಗೊಂಡಿದ್ದು ಗೋಕಾಕ್ ಚಳುವಳಿಯ ಸಂದರ್ಭದಲ್ಲಿ. "ನಭೂತೋ ನಭವಿಷ್ಯತಿ" ಎಂಬಂತೆ ಯಶಸ್ಸು ಕಂಡು ಆಳುವ ಪಕ್ಷದ ಎದೆಯಲ್ಲಿ ನಡುಕ ಹುಟ್ಟಿಸಿ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಸ್ಥಾಪನೆಗೊಳ್ಳಲು ಈ ಚಳುವಳಿ ಶ್ರೀಕಾರ ಹಾಕಿತು.

ರಾಜಕೀಯದಿಂದ ದೂರ ಉಳಿದ ಡಾ. ರಾಜ್

ರಾಜಕೀಯದಿಂದ ದೂರ ಉಳಿದ ಡಾ. ರಾಜ್

ಆದರೆ ಈ ಚಳುವಳಿಯ ಯಶಸ್ಸನ್ನು ರಾಜಕೀಯವಾಗಿ ಬಳಸಿಕೊಳ್ಳಲು ಡಾ. ರಾಜ್ ನಿರಾಕರಿಸಿ ಚಿತ್ರರಂಗದಲ್ಲೇ ಸಕ್ರಿಯರಾದುದರಿಂದ, ಲಭ್ಯವಿದ್ದ ಅಮೂಲ್ಯ ಅವಕಾಶವೊಂದು ತಪ್ಪಿಹೋಯಿತು. ಪಕ್ಕದ ರಾಜ್ಯಗಳಲ್ಲಿ ಸಿನಿಮಾ ಹೀರೋಗಳು ರಾಜಕೀಯ ಪ್ರವೇಶ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿದ ನಿದರ್ಶನಗಳ ನಡುವೆಯೂ ಡಾ. ರಾಜ್‍ ರ ನಿರ್ಧಾರ ಅಚಲವಾಗಿತ್ತು.

ಹೀಗಾಗಿ ಕರ್ನಾಟಕದ ಚುನಾವಣೆಗಳಲ್ಲಿ ಕನ್ನಡದ ಆಸ್ಮಿತೆ ಎಂಬುದು ಎಂದಿಗೂ ಪ್ರಮುಖವಾದ ವಿಷಯವಾಗಿ ಹೊರಹೊಮ್ಮಲಿಲ್ಲ. ಆದರೆ ಈ ಬಾರಿ ಸಿಎಂ ಸಿದ್ದರಾಮಯ್ಯ ಕನ್ನಡದ ಆಸ್ಮಿತೆಯನ್ನು ಪ್ರಮುಖ ಚುನಾವಣಾ ವಿಷಯವನ್ನಾಗಿಸುವಲ್ಲಿ ಸಫಲರಾಗಿದ್ದಾರೆ.

ಪ್ರಧಾನಿ ಮೋದಿ ಇತ್ತೀಚಿನ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾಗುವ ಸೂಚನೆ ದೊರೆತೊಡನೆ ಇದು ಗುಜರಾತಿಗಳ ಆಸ್ಮಿತೆಯ ಪ್ರಶ್ನೆ, ಇಲ್ಲಿ ಪಕ್ಷಕ್ಕೆ ಸೋಲುಂಟಾದರೆ ಅದು ಸಮಸ್ತ ಗುಜರಾತಿಗಳಿಗಾಗುವ ಅವಮಾನ ಎನ್ನುವ ಎಮೋಷನಲ್ ಮಾತುಗಳ ಮೂಲಕ ಅಲ್ಲಿನ ಮತದಾರ ಮನಸೆಳೆಯುವಲ್ಲಿ ಸಫಲರಾದರು. ಹಾಗಾಗಿ ಕೂದಲೆಳೆಯ ಅಂತರದ ಜಯದೊಂದಿಗೆ ಬಿ.ಜೆ.ಪಿ ಆ ರಾಜ್ಯದಲ್ಲಿ ಸರ್ಕಾರ ರಚಿಸುವುದರಲ್ಲಿ ಸಫಲವಾಯಿತು. ಇದೀಗ ಸಿದ್ದರಾಮಯ್ಯ ಸಹ ಇದೇ ಮಾದರಿಯನ್ನು ಅನುಸರಿಸಲು ಹೊರಟಿದ್ದಾರೆ.

ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ

ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ

ಮೂಲತಃ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗುವ ಮೂಲಕ ಸಾರ್ವಜನಿಕ ಜೀವನ ಪ್ರವೇಶ ಮಾಡಿದ ಅವರಿಗೆ ಜಾಗತೀಕರಣದ ಬಳಿಕ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗೆ ಬಂದೆರಗುತ್ತಿರುವ ಅಪಾಯದ ಅರಿವಿದೆ. ಹಾಗೆಯೇ ಎಲ್ಲೆಡೆಯೂ ಹಿಂದಿಯನ್ನು ಹೇರಲು ಹೊರಟಿರುವ ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ಸ್ಥಳೀಯ ಉದ್ಯೋಗಾಕಾಂಕ್ಷಿಗಳಲ್ಲಿ ಮನೆ ಮಾಡಿರುವ ಆಕ್ರೋಶದ ಪರಿಚಯವೂ ಇದೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಇದನ್ನು ಅಸ್ತ್ರವಾಗಿ ಬಳಸಲು ಸರ್ವ ರೀತಿಯಲ್ಲೂ ಅವರು ಸಜ್ಜಾಗಿದ್ದಾರೆ, ದೊರಕುವ ಯಾವ ಸಣ್ಣ ಅವಕಾಶವನ್ನೂ ಅವರು ಕಳೆದುಕೊಳ್ಳುತ್ತಿಲ್ಲ.

ಬಿ.ಜೆ.ಪಿ ಪಕ್ಷ ಉತ್ತರ ಭಾರತದ ಹಿಂದಿ ನೆಲದಲ್ಲಿ ಉದಯವಾದದ್ದು ಮತ್ತು ರಾಷ್ಟ್ರೀಯತಾವಾದವನ್ನು ಮೈಗೂಡಿಸಿಕೊಂಡಿರುವುದರಿಂದ ಅದು ದೇಶದ ಇತರೆ ಸ್ಥಳೀಯ ಭಾಷೆಗಳಿಗೆ ಅಷ್ಟಾಗಿ ಪ್ರಾಮುಖ್ಯತೆ ಕೊಡುತ್ತಿಲ್ಲ. ಅದೂ ಅಲ್ಲದೆ ಆ ಪಕ್ಷ ದಕ್ಷಿಣ ಭಾರತದಲ್ಲಿ ಅಷ್ಟಾಗಿ ಬೇರೂರಿರದ ಕಾರಣ ದಕ್ಷಿಣ ಭಾರತ ಜನರ ಭಾಷಾ ಪ್ರೇಮದ ಕುರಿತಾದ ಖಚಿತ ಒಳನೋಟ ಅದಕ್ಕಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯನವರು ಈ ಪ್ರಮುಖ ಅಂಶಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.

ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಕಡಿಮೆಯಾಗಿದ್ದು

ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಕಡಿಮೆಯಾಗಿದ್ದು

ಮೊದಲಿಗೆ ಬೆಂಗಳೂರಿನ ಹೆಮ್ಮಯ "ನಮ್ಮ ಮೆಟ್ರೋ" ದ ನಿಲ್ದಾಣದ ಮತ್ತು ಆವರಣದ ಹಿಂದಿ ನಾಮಫಲಕಗಳನ್ನು ತೆರವುಗೊಳಿಸಲು ದಿಟ್ಟ ನಿರ್ಧಾರ ಕೈಗೊಂಡು ಅದನ್ನು ಕೇಂದ್ರ ಸರ್ಕಾರಕ್ಕೆ ಖಚಿತ ನಿರ್ಧಾರದ ಸ್ವರೂಪದಲ್ಲಿ ತಿಳಿಸಿದ್ದು.

ಕನ್ನಡ ಧ್ವಜಕ್ಕೆ ಕಾನೂನು ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಅದರ ಸಾಧಕ-ಬಾಧಕಗಳನ್ನು ಅಭ್ಯಸಿಸಿ ಮತ್ತು ಕಾನೂನು ಅಂಶಗಳನ್ನು ಕೂಲಂಕೂಶವಾಗಿ ಅಧ್ಯಯನ ನಡೆಸಿ ವರದಿ ನೀಡಲು ಸಮಿತಿಯನ್ನು ರಚಿಸಿದ್ದು.

"ಸಂವಿಧಾನದಲ್ಲಿ ರಾಜ್ಯಧ್ವಜ ಹೊಂದಬಹುದು ಎಂಬ ಉಲ್ಲೇಖವಿಲ್ಲ" ಎಂಬ ಬಿಜೆಪಿ ನಾಯಕರ ಮಾತುಗಳನ್ನು ಅವರಿಗೇ ತಿರುಗಿಸಿ "ರಾಜ್ಯಧ್ವಜವನ್ನು ಹೊಂದುವಂತಿಲ್ಲ ಎಂಬ ಉಲ್ಲೇಖ ಇದ್ದರೆ ತೋರಿಸಿ" ಎಂದು ಮೀಸೆ ತಿರುಗಿಸುವ ಮೂಲಕ ಸೇರಿಗೆ ಸವ್ವಾಸೇರು ಎಂಬಂತಹ ಪ್ರತ್ಯುತ್ತರ ನೀಡಿದರು

"ನಿಮಗ್ಯಾಕೆ ನಾನು ಲೆಕ್ಕ ಕೊಡಬೇಕು ನನ್ನನ್ನು ಆರಿಸಿ ಗೆಲ್ಲಿಸಿದ ಜನರಿಗೆ ಮಾತ್ರ ಲೆಕ್ಕ ಕೇಳುವ ಹಕ್ಕಿದೆ ಎನ್ನುವ ಮಾತುಗಳ ಮೂಲಕ ಬಿಜೆಪಿಯ ಆರೋಪಗಳಿಗೆ ನಿರ್ಬಿಢೆಯ ಉತ್ತರ ಕೊಟ್ಟರು

ಹಿಂದಿ ಟ್ವೀಟ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.

ಹಿಂದಿ ಟ್ವೀಟ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.

ಇತ್ತೀಚೆಗೆ ಕೇಂದ್ರ ಬಿ.ಜೆ.ಪಿ ನಾಯಕ ಮತ್ತು ಕರ್ನಾಟಕದ ಉಸ್ತುವಾರಿ ಮುರಳೀಧರ್ ರಾವ್ ರವರ ಹಿಂದಿ ಟ್ವೀಟ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಅವರು ಕನ್ನಡದಲ್ಲಿ ಮರುಟ್ವೀಟ್ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಸಿದರು.

ಪರಿಸ್ಥಿತಿಯ ಗಂಭೀರತೆಯ ಸಾಕ್ಷಾತ್ ಅರಿವಾದ ಬಳಿಕ ಬಿಜೆಪಿ ಕೂಡ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಂತೆ ತೋರುತ್ತಿದೆ. ಬಿಜೆಪಿ ನಾಯಕರು ನಾಡಧ್ವಜದ ವಿಚಾರಗಳಲ್ಲಿ ಅನಗತ್ಯ ಹೇಳಿಕೆ ನೀಡದಂತೆ ಕಡಿವಾಣ ಹಾಕಲಾಗಿದೆ.

ಸಿದ್ದರಾಮಯ್ಯನವರಿಗೆ ನಿಜವಾದ ಕಳಕಳಿ ಕನ್ನಡದ ಕುರಿತಾಗಿ ಇಲ್ಲ, ಇದ್ದಿದ್ದೇ ಆಗಿದ್ದರೆ ಇದನ್ನೆಲ್ಲ ಚುನಾವಣೆಯ ಹೊಸ್ತಿಲಲ್ಲಿ ಯಾಕೆ ಮಾಡುತ್ತಿದ್ದರೆ ಎಂಬ ಮಾರ್ಮಿಕವಾದ ಪ್ರಶ್ನೆಯನ್ನು ಬಿಜೆಪಿ ನಾಯಕರು ಮುಂದಿಡುತ್ತಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕೂಡ ಕನ್ನಡಿಗರ ಓಲೈಕೆಯಲ್ಲಿ ಹಿಂದುಳಿದಿಲ್ಲ, ತಮ್ಮ ಇತ್ತೀಚಿನ ಚುನಾವಣಾ ಪ್ರಚಾರ ಪ್ರವಾಸದ ವೇಳೆ ಅವರು ಕುವೆಂಪುರವರ ಕವಿಶೈಲಕ್ಕೆ ಭೇಟಿ ಕೊಟ್ಟಿದ್ದು, ಧಾರವಾಡದ ಸಾಧನಕೇರಿಯ ದ.ರಾ. ಬೇಂದ್ರೆ ನಿವಾಸಕ್ಕೆ ಹೊರಟು ಅವರ ಕುಟುಂಬಸ್ಥರ ಯೋಗಕ್ಷೇಮ ವಿಚಾರಿಸಿದ್ದು ಈ ಓಲೈಕೆಯ ಒಂದು ಭಾಗವೆಂದೇ ಬಿಂಬಿಸಲಾಯ್ತು

ಸಮರ್ಥ ರೀತಿಯಲ್ಲಿ ಪ್ರತಿರೋಧ ಒಡ್ಡುತ್ತಿಲ್ಲ

ಸಮರ್ಥ ರೀತಿಯಲ್ಲಿ ಪ್ರತಿರೋಧ ಒಡ್ಡುತ್ತಿಲ್ಲ

ಇಷ್ಟಾದರೂ ಸಹ ಬಿಜೆಪಿ ಪಕ್ಷ ಸಿದ್ದರಾಮಯ್ಯನವರ ವೇಗಕ್ಕೆ ಸಮರ್ಥ ರೀತಿಯಲ್ಲಿ ಪ್ರತಿರೋಧ ಒಡ್ಡುತ್ತಿಲ್ಲ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಬಿಜೆಪಿಯ ಸ್ಥಳೀಯ ನಾಯಕರು ಕೂಡ ಈ ವಿಚಾರವನ್ನೂ ಅಷ್ಟಾಗಿ ಗಂಭೀರವಾಗಿ ಪರಿಗಣಿಸಿದಂತೆ ತೋರುತ್ತಿಲ್ಲ. ಅದೂ ಅಲ್ಲದೇ ಕರ್ನಾಟಕದ ಮತದಾರ ಈ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾರ ಎಂಬ ನಂಬಿಕೆಯಲ್ಲಿ ಅವರು ಇರುವಂತೆ ತೋರುತ್ತಿದ್ದು ಗೆಲ್ಲಲು ಬಳಸಬೇಕಾದ ಇತರೆ ವಿಷಯಗಳತ್ತ ಗಮನಹರಿಸುತ್ತಿದ್ದಾರೆ.

ಜೆ.ಡಿ.ಎಸ್. ಪಕ್ಷ ಹೆಸರಿಗೆ ರಾಷ್ಟ್ರೀಯ ಅಧ್ಯಕ್ಷರನ್ನು ಹೊಂದಿದ್ದರೂ ಅದರ ಶಕ್ತಿ, ಅಂತಃಸತ್ವದ ಬೇರುಗಳಿರುವುದು ಕರ್ನಾಟಕದಲ್ಲಿ ಮಾತ್ರವೇ. ಹಾಗಾಗಿ ಅದು ಸಹಜವಾಗಿಯೇ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುತ್ತದೆ ಎನ್ನುವ ಅಭಿಪ್ರಾಯ ಎಲ್ಲರಲ್ಲೂ ಮೂಡಿದೆ.

ಕಾವೇರಿ ನ್ಯಾಯಮಂಡಳಿ ರಚನೆಯ ತೂಗುಕತ್ತಿಯಲ್ಲಿ ರಾಜ್ಯದ ಜನರು ಕಂಗಾಲಾಗಿದ್ದಾಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಇಳಿವಯಸ್ಸು ಮತ್ತು ಆರೋಗ್ಯ ಸ್ಥಿತಿಯನ್ನೂ ಲೆಕ್ಕಿಸದೆ ಉಪವಾಸ ಕೂತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದಿದ್ದನ್ನು ಯಾರೂ ಮರೆಯಲಾರರು. ಹಾಗಾಗಿ ರಾಜ್ಯದ ಸಮಸ್ಯೆಗಳಿಗೆ ದನಿಯಾಗುವ, ಹೋರಾಟ ಮಾಡುವ ಆ ಪಕ್ಷದ ಬದ್ಧತೆ ಕುರಿತು ಯಾರಲ್ಲೂ ಅನುಮಾನಗಳಿಲ್ಲ.

ಬಿಜೆಪಿ ಪಕ್ಷದ ಪರಿಸ್ಥಿತಿ ಇದಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತ

ಬಿಜೆಪಿ ಪಕ್ಷದ ಪರಿಸ್ಥಿತಿ ಇದಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತ

ಬಿ.ಜೆ.ಪಿ ಆರಂಭದಿಂದಲೂ ರಾಷ್ಟ್ರೀಯತಾವಾದ ರೂಢಿಸಿಕೊಂಡು, ಬೋಧಿಸಿಕೊಂಡು ಬಂದ ಪಕ್ಷವಾಗಿದೆ. ಒಂದು ರಾಷ್ಟ್ರ, ಒಂದು ಧ್ವಜ ದಂತಹ ಘೋಷಣೆಗಳು ಅದಕ್ಕೆ ಮುಳುವಾಗುವ ಸಾಧ್ಯತೆಗಳು ಇಲ್ಲದಿಲ್ಲ.

ಕರ್ನಾಟಕ ರಕ್ಷಣಾ ವೇದಿಕೆಯ ಉಭಯ ಬಣಗಳು, ಬನವಾಸಿ ಬಳಗದಂತಹ ಕನ್ನಡ ಪರ ಸಂಘ ಸಂಸ್ಥೆಗಳು ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸಕ್ರಿಯವಾಗಿದ್ದು ಸ್ಥಳೀಯ ಜನರಲ್ಲಿ ಕನ್ನಡತನದ ಜಾಗೃತಿ ಮೂಡಿಸುತ್ತಿವೆ.

"ವೆಂಕಯ್ಯ ಸಾಕಯ್ಯ" ಎನ್ನುವ ಸಾಮಾಜಿಕ ಜಾಲತಾಣದ ಅಭಿಯಾನಕ್ಕೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆಯ ಕಾರಣದಿಂದಾಗಿ ನಿರಂತರವಾಗಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಾ ಬಂದಿದ್ದ ವೆಂಕಯ್ಯ ನಾಯ್ಡು ಉತ್ತರ ಭಾರತದ ರಾಜ್ಯಕ್ಕೆ ವಲಸೆ ಹೋಗಬೇಕಾಯಿತು.

ಬಿ.ಜೆ.ಪಿ. ಯಾವ ಉತ್ತರವನ್ನೂ ನೀಡಲಾಗುತ್ತಿಲ್ಲ

ಬಿ.ಜೆ.ಪಿ. ಯಾವ ಉತ್ತರವನ್ನೂ ನೀಡಲಾಗುತ್ತಿಲ್ಲ

ಕಾಂಗ್ರೆಸ್ಸಿನ ಆರೋಪಗಳಿಗೆ ಪ್ರತಿಯಾಗಿ ಬಿ.ಜೆ.ಪಿ. ಯಾವ ಉತ್ತರವನ್ನೂ ನೀಡಲಾಗದೇ ಈ ಚುನಾವಣೆಯಲ್ಲಿ ಬೇರೆ ವಿಷಯಗಳಾದ ಭ್ರಷ್ಟಾಚಾರದ ಆರೋಪಗಳು, ಹಿಂದೂ ಕಾರ್ಯಕರ್ತರ ಕೊಲೆ, ಪ್ರಾಮಾಣಿಕ ಅಧಿಕಾರಿಗಳಿಗೆ ನೀಡಲಾಗುತ್ತಿರುವ ಕಿರುಕುಳ ಮೊದಲಾದವುಗಳತ್ತ ಜನರ ಗಮನ ಸೆಳೆದು ವಿಷಯಾಂತರ ಮಾಡಲು ಯತ್ನಿಸುತ್ತಿದೆ ಎಂಬುದು ಬಹುಜನರ ಅಭಿಪ್ರಾಯ

ಹಾಗಾಗಿ ಈ ಹಂತದಲ್ಲಿ ಕನ್ನಡದ ಆಸ್ಮಿತೆಯ ವಿಚಾರದಲ್ಲಿ ಸಿದ್ದರಾಮಯ್ಯನವರ ಕೈ ಮೇಲಾಗಿರುವಂತೆ ಗೋಚರಿಸುತ್ತಿದೆ.

ಹಾಗಿದ್ದರೂ ಈ ಸಂಗತಿ ಚುನಾವಣೆಯ ಮಟ್ಟಿಗೆ ಎಷ್ಟು ಪರಿಣಾಮ ಬೀರಬಲ್ಲದು, ಕರ್ನಾಟಕದ ಮತದಾರರು ನಿಜಕ್ಕೂ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸುತ್ತಾರೆಯೇ ಮತ್ತು ಅದರ ಅಧಾರದ ಮೇಲೆ ಮತದಾನ ಮಾಡುವರೇ ಎನ್ನುವ ಕುರಿತು ರಾಜಕೀಯ ಪಂಡಿತರಲ್ಲಿ ಒಮ್ಮತವಿಲ್ಲ.

ದೀರ್ಘಕಾಲದ ಬಳಿಕ ನಮ್ಮ ನಾಡಿನ ರಾಜಕಾರಣಿಗಳಿಗೆ ತಮ್ಮ ಭಾಷೆಯ ಗರಿಮೆಯ ಕುರಿತು ಅಭಿಮಾನ ಹುಟ್ಟುತ್ತಿರುವುದು ಸಂತಸದ ವಿಷಯ. ಆದರೆ ಇದು ನಿರಂತರವಾಗಿ ತನ್ನ ಅಸ್ತಿತ್ವ ಉಳಿಸಿಕೊಂಡು ಹೋಗಬೇಕು, ಚುನಾವಣೆ ಸಂದರ್ಭದಲ್ಲಿ ಮತಬೇಟೆಯ ಅಸ್ತ್ರವಾಗಬಾರದು ಎನ್ನುವುದು ಕನ್ನಡ ಭಾಷಾಭಿಮಾನಿಗಳ, ಹೋರಾಟಗಾರರ ಕಳಕಳಿಯ ಆಶಯವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Election Debate : CM Siddaramaiah was successful in Kannada Pride issue during the election but can it be converted into votes one has to wait and see. Here is an analysis about the Kannada pride and Kannadigas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more