• search
  • Live TV
keyboard_backspace

ಪರಪ್ಪನ ಅಗ್ರಹಾರ ಕಾರಾಗೃಹ ಅಕ್ರಮ ಬಯಲು ಮಾಡಿದ ಕೈದಿಯ ಪತ್ರದಲ್ಲಿ ಏನಿದೆ?

Google Oneindia Kannada News

ಬೆಂಗಳೂರು, ಆ. 30: ಅಮಾಯಕರಿಗೆ ಅಲ್ಲಿ ನರಕ. ಹಣ ಇರುವರ ಪಾಲಿಗೆ ಅದೊಂದು ರಾಜ ವಿಲಾಸಿ ಕೇಂದ್ರ. ರೌಡಿಗಳಿಗೆ ಜೀವ ಕಾಪಾಡುವ ರಕ್ಷಾಣಾ ಕೋಟೆ. ಭ್ರಷ್ಟ ಅಧಿಕಾರಿಗಳಿಗೆ ದಿನವೂ ದುಡ್ಡು ಬಿಡುವ ಆಲದ ಮರ! ಕಾಗದದಲ್ಲಿ ಅದು ತಪ್ಪು ಮಾಡಿದವರ ಮನಸು ಪರಿವರ್ತಿಸುವ ಸುಧಾರಣಾ ಕೇಂದ್ರ. ಇದರ ಹೆಸರೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ ಖುದ್ದು ಜೈಲಿಗೆ ಭೇಟಿ ನೀಡಿ ಜೈಲಿನ ಸ್ವಚ್ಛತೆ ಕಾಪಾಡುವಂತೆ ತಾಕೀತು ಮಾಡಿದ್ದರು. ಗೃಹ ಸಚಿವರರ ಭೇಟಿ ಬೆನ್ನಲ್ಲಿ ಜೈಲಿನ ಅಕ್ರಮಗಳ ಚಿತ್ರಣವನ್ನು ಸನ್ನಡತೆ ಕೈದಿಯೊಬ್ಬ ಪತ್ರದ ಮೂಲಕ ಬಹಿರಂಗ ಪಡಿಸಿದ್ದಾನೆ.

ಕೈದಿಗಳ ಅನ್ನದಲ್ಲಿ ಅವ್ಯವಹಾರ ನಡೆಸಿ ಅಧಿಕಾರಿಗಳೇ ಕಾಸು ಮಾಡುವ ಆರೋಪ ಕೇಳಿ ಬಂದಿದೆ. ಇನ್ನು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿಗಳ ಕೈಯಲ್ಲಿ ಇಲ್ಲಿ ಮೊಬೈಲ್ ವ್ಯಾಪಾರವನ್ನು ಅಧಿಕಾರಿಗಳೇ ನಡೆಸುತ್ತಿದ್ದಾರಂತೆ. ದುಡ್ಡು ಕೊಡುವ ವಿಐಪಿ ಕೈದಿಗಳಿಗೆ ಪ್ರತ್ಯೇಕ ಸೆಲ್ ಗಳನ್ನು ಕೊಡುವ ದಂಧೆ ಹುಟ್ಟಿಕೊಂಡಿದೆಯಂತೆ. ಕ್ವಾರೆಂಟೈನ್ ಹೆಸರಿನಲ್ಲಿ ಮುಗ್ಧ ಕೈದಿಗಳಿಗೆ ಚಿತ್ರಹಿಂಸೆ. ಕಾಸು ಕೊಟ್ಟರೆ ಅನಾರೋಗ್ಯ ನೆಪದಲ್ಲಿ ಕೈದಿಗಳಿಗೆ ಬೆಂಗಳೂರು ದರ್ಶನ. ಅಲ್ಲಿನ ಅವ್ಯಸ್ಥೆಗಳ ಚಿತ್ರಣವನ್ನು ಸಜಾಬಂಧಿ ತನ್ನ ವಿವರ ಸಮೇತ ಲಿಖಿತ ಪತ್ರದಲ್ಲಿ ಹೊರ ಹಾಕಿದ್ದಾರೆ. ಜೈಲಿನ ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಗೃಹ ಸಚಿವರಿಗೆ ಮನವಿ ಮಾಡಿ ಬರೆದಿರುವ ಪತ್ರದ ಸಾರಾಂಶ ಇಲ್ಲಿದೆ.

ಅನ್ನ ತ್ಯಜಿಸುವಂತೆ ಕೆಮಿಕಲ್ ಮಿಶ್ರಣ

ಅನ್ನ ತ್ಯಜಿಸುವಂತೆ ಕೆಮಿಕಲ್ ಮಿಶ್ರಣ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಹಸಿವಿನ ದಾಹ ತೀರಿಸಿಕೊಳ್ಳಬೇಕಾದರೆ ತೋಳ್ಬಲ ಇರಬೇಕು. ಇಲ್ಲವೇ ಕೈ ತುಂಬಾ ಕಾಸು ಇರಬೇಕು. ಈ ಎರಡೂ ಇಲ್ಲದಿದ್ದರೆ ರಾಸಾಯನಿಕ ಮಿಶ್ರಣ ಮಾಡಿರುವ ಅನ್ನ ತಿಂದು ಜೀವನ ಪರ್ಯಂತ ಊಟವನ್ನೇ ತ್ಯಜಿಸಬೇಕು. ಹೌದು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ನೀಡುತ್ತಿರುವ ಅನ್ನದಲ್ಲಿ ಕೈದಿಗಳು ಅನ್ನ ತ್ಯಜಿಸುವಂತೆ ರಾಸಾಯನಿಕ ಬೆರೆಸುತ್ತಾರಂತೆ. ಕಾರಾಗೃಹದಲ್ಲಿ 5 ಸಾವಿರ ಕೈದಿಗಳು ಇದ್ದಾರೆ. ಬೆಳಗ್ಗೆ ತಿಂಡಿ ನೀಡುತ್ತಾರೆ. ಮಧ್ಯಾಹ್ನ ಹಾಗೂ ರಾತ್ರಿ ಊಟ ಕೊಡುತ್ತಾರೆ. ಐದು ಸಾವಿರ ಮಂದಿಯ ಬದಲಿಗೆ ಕೇವಲ ಎರಡು ಸಾವಿರ ಮಂದಿಗೆ ಊಟ ತಯಾರಿಸುತ್ತಾರೆ. ಕಾಸು ಕೊಟ್ಟವರಿಗೆ ಚಪಾತಿ ಅನ್ನ ಎಲ್ಲವೂ ಕೊಡುತ್ತಾರೆ. ಇನ್ನು ಜೈಲಿನಲ್ಲಿರುವ ರೌಡಿ ಗ್ಯಾಂಗ್ ಗಳಿಗೆ ಹೆದರಿ ಅವರಿಗೆ ಬೇಕಾದ ಊಟ ಕೊಡುತ್ತಾರೆ. ಇಲ್ಲವೇ ಹೊರಗಿನಿಂದ ತರಿಸಿಕೊಳ್ಳಲು ಅವಕಾಶ ಕೊಡುತ್ತಾರೆ. ಆದರೆ, ಧ್ವನಿಯಿಲ್ಲದ ಕೈದಿಗಳಿಗೆ ಊಟ ಕೊಡದೇ ಕೈದಿಗಳ ಆಹಾರ ಪದಾರ್ಥ ಕಡಿತಗೊಳಿಸಿ ಜೈಲು ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಕಾರಾಗೃಹ ಮೇಲಾಧಿಕಾರಿಗಳಿಗೆ ಸುಳ್ಳು ಲೆಕ್ಕ ನೀಡಿ ಮೋಸ ಮಾಡುತ್ತಿದ್ದಾರೆ ಎಂದು ಸಜಾ ಬಂಧಿ ಪತ್ರದಲ್ಲಿ ವಿವರಿಸಿದ್ದಾರೆ.

ಜೈಲಲ್ಲಿ ಸೀಜ್ ಆದ ಮೊಬೈಲ್ 20 ಸಾವಿರಕ್ಕೆ ರೀ ಸೇಲ್

ಜೈಲಲ್ಲಿ ಸೀಜ್ ಆದ ಮೊಬೈಲ್ 20 ಸಾವಿರಕ್ಕೆ ರೀ ಸೇಲ್

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬೀಡಿ, ಸಿಗರೇಟು, ಮಾದಕ ವಸ್ತು, ಮೊಬೈಲ್ , ಮೊಬೈಲ್ ಕರೆ, ವಿಡಿಯೋ ಕಾಲ್ ಮಾರಾಟ ಮಾಡಿ ಶ್ರೀಮಂತರಾಗಬಹುದು. ಅಧಿಕಾರಿಗಳ ಭ್ರಷ್ಟಾಚಾರದ ಜತೆ ಶಾಮೀಲಾಗುವ ಕೆಲವು ಸನ್ನಡತೆ ಕೈದಿಗಳು ಬೀಡಿ ಸಿಗರೇಟು ವ್ಯವಹಾರ ಜತೆಗೆ ಮೊಬೈಲ್ ಪೋನ್ ಕೂಡ ಮಾರಾಟ ಮಾಡುತ್ತಾರೆ. ಎರಡು ಸಾವಿರ ರೂ. ಮೌಲ್ಯದ ಬೇಸಿಕ್ ಮೊಬೈಲ್ ಹತ್ತರಿಂದ 20 ಸಾವಿರಕ್ಕೆ ಮಾರಟ ಮಾಡುತ್ತಾರೆ. ಅದನ್ನು ಕೇವಲ ಎರಡು ತಿಂಗಳ ಬಳಕೆಗೆ ಅವಕಾಶ ಕೊಡುತ್ತಾರೆ. ಆನಂತರ ಜೈಲು ಅಧಿಕಾರಿಗಳೇ ಜಪ್ತಿ ಹೊಡೆದು 20 ರಿಂದ 30 ಸಾವಿರ ರೂ. ದಂಡ ವಿಧಿಸುತ್ತಾರೆ. ಜಪ್ತಿಯಾದ ಮೊಬೈಲ್ ನ್ನು ಬೇರೆಯವರಿಗೆ ಅಷ್ಟೇ ಬೆಲೆಗೆ ಮಾರಾಟ ಮಾಡುತ್ತಾರೆ. ಯಾವುದೋ ಅಪರಾಧ ಕೃತ್ಯ ಎಸಗಿ ಜೈಲಿಗೆ ಹೋಗುವ ಕೈದಿಗಳು, ಶಿಕ್ಷೆಗೆ ಗುರಿಯಾಗುವ ಕೈದಿಗಳು ತಮ್ಮ ಸಂಬಂಧಿಕರ ಜತೆ ಭಾವನೆಗಳನ್ನು ಹಂಚಿಕೊಳ್ಳಲು ದುಬಾರಿ ಬೆಲೆ ಕೊಟ್ಟು ಮಾತನಾಡುತ್ತಾರೆ. ಜೈಲಿನ ಅಧಿಕಾರಿಗಳು ಮೊಬೈಲ್ ವಹಿವಾಟು ನಡೆಸಲು ಕೆಲವು ಸನ್ನಡತೆ ಕೈದಿಗಳನ್ನು ನಿಯೋಜಿಸಿಕೊಂಡಿದ್ದಾರೆ. ಇನ್ನು ಸಜಾ ಬಂಧಿಗಳು ತಮ್ಮ ಕುಟುಂಬಗಳ ಜತೆ ಮಾತನಾಡಲೆಂದು ಜೈಲಿನಲ್ಲಿ ಆರು STD ಬೂತ್ ಹಾಕಿದ್ದಾರೆ. ಈ ಪೋನ್ ಬೂತ್ ಇದ್ದರೆ ಮೊಬೈಲ್ ವಹಿವಾಟು ನಡೆಯಲ್ಲ ಎಂದು ಎರಡನ್ನು ರಿಪೇರಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಜೈಲಿನಲ್ಲಿ ವಸೂಲಿಗಾಗಿ ವೀರರ ನೇಮಕ

ಜೈಲಿನಲ್ಲಿ ವಸೂಲಿಗಾಗಿ ವೀರರ ನೇಮಕ

ಇನ್ನು ಜೈಲಿನ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳದ ಬಗ್ಗೆ ಭಯವಿಲ್ಲ. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಗುಪ್ತವಾಗಿ ಜೈಲಿನೊಳಗೆ ಎಂಟ್ರಿಯಾಗಲು ಸಾಧ್ಯವಿಲ್ಲ. ಗೇಟ್ ಸಮೀಪ ಬಂದ ಕೂಡಲೇ ಅವರ ಗುರುತು ಗೇಟ್ ಬಳಿ ನೀಡಲೇಬೇಕು. ಇಲ್ಲವೇ ಮೇಲಾಧಿಕಾರಿಗಳ ಅನುಮತಿ ಪಡೆದೇ ಒಳಗೆ ನುಗ್ಗಬೇಕು. ಹೀಗಾಗಿ ಜೈಲಿನೊಳಗೆ ಎಸಿಬಿ ಕಾರ್ಯಾಚರಣೆ ನಡೆಸುವುದು ಕಷ್ಟಕರ. ಇಷ್ಟಾಗಿಯೂ ಕೆಲವು ಸಿಸಿಟಿವಿ ಕ್ಯಾಮರಾ, ಕೈದಿಗಳು ಜೈಲಿನಲ್ಲಿ ರೆಕಾರ್ಡ್ ಮಾಡುತ್ತಾರೆ ಎನ್ನುವ ಭಯ. ಹೀಗಾಗಿ ಭ್ರಷ್ಟಾಚಾರವನ್ನು ಸುರಕ್ಷಿತವಾಗಿ ನಡೆಸಲು ಜೈಲು ಅಧಿಕಾರಿಗಳು ತಮ್ಮ ಮಾತು ಕೇಳುವ ಸನ್ನಡತೆ ಕೈದಿಗಳನ್ನು ನೇಮಿಸಿಕೊಂಡಿದ್ದಾರಂತೆ. ಅಲ್ಲಿ ಒಬ್ಬೊಬ್ಬ ಅಧಿಕಾರಿ ಒಂದೊಂದು ದಂಧೆಯ ಸಾರಥ್ಯವನ್ನು ಸಜಾ ಬಂಧಿಗಳಿಗೆ ವಹಿಸಿದ್ದಾರೆ. ಅಧಿಕಾರಿಗಳ ಹೆಸರಿನಲ್ಲಿ ಈ ವಸೂಲಿ ವೀರರೇ ದಂಧೆಯ ಕರಾಮತ್ತು ದುಡ್ಡು ವಸೂಲಿ ಮಾಡಿ ತಮಗೊಂದಿಷ್ಟು ಇಟ್ಟುಕೊಂಡು ಅಧಿಕಾರಿಗಳಿಗೆ ಕೊಡುತ್ತಾರೆ. ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಪೊಲೀಸ್ ಆನಂದ್ ಎಂಬಾತ ವಿಐಪಿ ಸೆಲ್ ಗಳಿಂದ ಹಣ ವಸೂಲಿ ಮಾಡುವ ದಂಧೆ ಮಡುತ್ತಿದ್ದಾನೆ ಎಂದು ದೂರಿನಲ್ಲಿ ಹೆಸರು ಉಲ್ಲೇಖಿಸಿ ಆರೋಪಿಸಲಾಗಿದೆ.

ಕಾಸು ಕೊಟ್ಟರೆ ಕ್ವಾರೆಂಟೈನ್ ಮುಕ್ತ ಜೈಲಿಗೆ ಎಂಟ್ರಿ

ಕಾಸು ಕೊಟ್ಟರೆ ಕ್ವಾರೆಂಟೈನ್ ಮುಕ್ತ ಜೈಲಿಗೆ ಎಂಟ್ರಿ

ಕೊರೊನಾ ಇಡೀ ದೇಶವನ್ನೇ ನಡುಗಿಸಿದೆ. ಕೊರೊನಾ ಹಾಗೂ ಕ್ವಾರೆಂಟೈನ್ ಕೇಂದ್ರ ಕಾರಾಗೃಹ ಪಾಲಿಗೆ ಚಿನ್ನದ ಮೊಟ್ಟೆ ಇಡುವ ವ್ಯಾಪಾರವಾಗಿ ರೂಪಾಂತರಗೊಂಡಿದೆ. ಕ್ವಾರೆಂಟೈನ್ ನೆಪದಲ್ಲಿ ಒಂದು ಕೊಠಡಿಯಲ್ಲಿ 80 ಮಂದಿಯನ್ನು ಮಲಗಿಸಲಾಗುತ್ತಿದೆಯಂತೆ. ಎರಡು ಅಡಿ ಜಾಗದಲ್ಲಿ ಮಲಗಬೇಕು. ಜೈಲಿನ ಹೊರಗೆ ಹದಿನಾಲ್ಕು ದಿನ ವನವಾಸ, ಜೈಲಿನ ಒಳಗೆ ಹದಿನಾಲ್ಕು ದಿನಗಳ ಕ್ವಾರೆಂಟೈನ್ ಜೀವನ. ಇನ್ನು ಸ್ವಲ್ಪ ತಗಾದೆ ತೆಗೆದರೆ ರಾತ್ರಿ ವೇಳೆ ತಲೆಗೆ ಬೆಡ್ ಶೀಟ್ ಹಾಕಿ ಮನ ಬಂದಂತೆ ಥಳಿಸುತ್ತಾರಂತೆ. ಕೈದಿ ಅತ್ತರೆ, ಪೋನ್ ನೀಡಿ ಕುಟುಂಬಕ್ಕೆ ಕರೆ ಮಾಡಿಸಿ ಹಣ ಹಾಕಿಸುವಂತೆ ಒತ್ತಡ ಹಾಕುತ್ತಾರಂತೆ. ಇನ್ನು ಜೈಲಿಗೆ ಹೋಗುವರು ಐವತ್ತು ಸಾವಿರ ದಿಂದ ಒಂದು ಲಕ್ಷ ರೂ. ವರೆಗೂ ಲಂಚ ನೀಡಿದರೆ, ಯಾವುದೇ ಕ್ವಾರೆಂಟೈನ್ ಇಲ್ಲದೇ ಸೆಲ್ ಗೆ ದಾಖಲಾಗಿ ಮಾಡಿಕೊಳ್ಳುತ್ತಿದ್ದಾರೆ. ಮುಗ್ಧರು ಜೈಲಿಗೆ ಬಂದರೆ ಕ್ವಾರೆಂಟೈನ್, ರೌಡಿಗಳು, ದುಡ್ಡು ಇರುವರು ಬಂದರೆ ನೇರವಾಗಿ ಸೆಲ್ ಗೆ ದಾಕಲಾಗುತ್ತಿದ್ದಾರೆ. ಇದರ ಬಗ್ಗೆ ಜೈಲಿನ ಹಿರಿಯ ಅಧಿಕಾರಿಗಳಿಗೂ ಮಾಹಿತಿ ಇದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎನ್ನಲಾಗಿದೆ.

ದೇಹಬಾಧೆ ತೀರಿಸಿಕೊಳ್ಳಲು ಬೆಳಗಿನ ಜಾವ ನೃತ್ಯ

ದೇಹಬಾಧೆ ತೀರಿಸಿಕೊಳ್ಳಲು ಬೆಳಗಿನ ಜಾವ ನೃತ್ಯ

ಐದು ಪೈಸೆ ಮೈ ಬಗ್ಗಿಸಿ ಕೆಲಸ ಮಾಡದೇ ಮೂರು ಹೊತ್ತು ಸರ್ಕಾರಿ ಊಟ ತಿನ್ನುವ ಕೈದಿಗಳು ಬೆಳಗಿನ ಜಾವ ಆದ್ರೆ ಶೌಚಾಲಯ ಮುಂದೆ ಕ್ಯೂ ನಿಲ್ಲುತ್ತಾರೆ. ದೇಹ ಬಾಧೆ ಬೇಗ ತೀರಿಸಿಕೊಳ್ಳಲಾಗದೇ ಕ್ಯೂ ನಲ್ಲಿ ನೃತ್ಯ ನಿಂತು ನೃತ್ಯ ಮಾಡುವ ದಯನೀಯ ಸ್ಥಿತಿಗೆ ಜೈಲು ತಲುಪಿದೆ ಎನ್ನಲಾಗಿದೆ. ಬ್ಯಾರಕ್ ನಂಬರ್ ಒಂದರಲ್ಲಿದ್ದ ಕಾಮನ್ ಶೌಚಾಲಯವನ್ನು ಮುಚ್ಚಿ ಗೋಡನ್ ಅಗಿ ಪರಿವರ್ತನೆ ಮಾಡಿದ್ದಾರಂತೆ. ಹೀಗಾಗಿ ಬ್ಯಾರಕ್ ಒಂದರಲ್ಲಿರುವ ಅಡ್ಮಿಷನ್ ರೂಮ್,1,4, 5 ಮತ್ತು 6ನೇ ರೂಮ್ ನಲ್ಲಿ ತಲಾ ನೂರು ಮಂದಿಯನ್ನು ಕೂಡಿ ಹಾಕಲಾಗಿದೆ. ಆದರೆ ನೂರು ಜನಕ್ಕೂ ಇರುವ ಒಂದೇ ಒಂದು ಟಾಯ್ಲೆಟ್ ಬಳಕೆ ಮಾಡಬೇಕು. ಇದನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಿರುವ ಜೈಲು ಅಧಿಕಾರಿಗಳು ಹಣ ಕೊಟ್ಟವರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಬ್ಯಾರಕ್ ನಂ 2ರಲ್ಲಿ ಹಣ ಕೊಟ್ಟ ಕೈದಿಗಳಿಗೆ ಕಂಪ್ಯೂಟರ್ ನಿಂದ ಮೆಮೋರಿ ಕಾರ್ಡ್ ಗೆ ಅಶ್ಲೀಲ ವಿಡಿಯೋ ಹಾಕಿಸಿ ಕೊಡುತ್ತಾರೆ ಎಂದು ಕೈದಿ ಗಂಭೀರ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಚಿಕನ್ ಕಡಿಮೆ ಹಾಕುವ ಬಗ್ಗೆ ಕೈದಿಗಳ ತಕರಾರು

ಚಿಕನ್ ಕಡಿಮೆ ಹಾಕುವ ಬಗ್ಗೆ ಕೈದಿಗಳ ತಕರಾರು

ಇನ್ನು ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ತಿಂಗಳಿಗೆ ಒಮ್ಮೆ ಚಿಕನ್ ಊಟ ನೀಡಲಾಗುತ್ತದೆ. ಜೈಲಿನ ನಿಯಮಾವಳಿ ಪ್ರಕಾರ ಒಬ್ಬ ಕೈದಿಗೆ 200 ಗ್ರಾಂ ಚಿಕನ್ ಕೊಡಬೇಕು. ಆದರೆ, ಕೈದಿಗಳಿಗೆ ಕೇವಲ 100 ಗ್ರಾಂ ಚಿಕನ್ ನೀಡಲಾಗುತ್ತಿದೆಯಂತೆ. ಇನ್ನು ಚಿಕನ್ ಗೆ ಚಪಾತಿ ನೀಡುವಂತೆ ಕೇಳಿದರೆ, ಜೈಲಿನ ನಿಯಮದಲ್ಲಿ ಚಪಾತಿ ಕೊಡುವ ಬಗ್ಗೆ ಉಲ್ಲೇಖಿಸಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರಂತೆ. ಆದ್ರೆ ಹಣ ಕೊಟ್ಟವರಿಗೆ ಚಿಕನ್ ಮತ್ತು ಚಪಾತಿ ನೀಡುತ್ತಾರೆ ಎಂದು ಕೈದಿ ಪತ್ರದಲ್ಲಿ ಆಪಾದಿಸಿದ್ದಾನೆ. ಜತೆಗೆ ಊಟಕ್ಕೆ ಕಳಪೆ ದರ್ಜೆ ಎಣ್ಣೆ , ಕಾಳು ಮತ್ತು ತರಕಾರಿ ಹಾಕುತ್ತಾರೆ. ಕೈದಿಗಳು ಹಣ ಕೊಟ್ಟು ಊಟ ಖರೀದಿ ಮಾಡುವ ವಾತಾವರಣ ಸೃಷ್ಟಿಸಲು ಜೈಲಿನಲ್ಲಿ ಉಚಿತವಾಗಿ ನೀಡುವ ಊಟಕ್ಕೆ ರಾಸಾಯನಿಕ ಮಿಶ್ರಣ ಮಾಡುತ್ತಾರೆ. ಆ ವಾಸನೆಗೆ ಬಹುತೇಕರು ಊಟ ತಿನ್ನದೇ ಬಿಸಾಡುತ್ತಾರೆ. ಇನ್ನೂ ಕೆಲವರು ಹಣ ಕೊಟ್ಟು ಊಟ ಖರೀದಿ ಮಾಡುತ್ತಾರೆ. ಹಣ ಕೊಟ್ಟವರಿಗೆ ಮಾತ್ರ ಸನ್ನಡತೆ ಬಗ್ಗೆ ಅಧಿಕಾರಿಗಳು ಒಳ್ಳೆಯ ವರದಿ ನೀಡುತ್ತಾರೆ. ಹಣ ನೀಡದಿದ್ದರೆ ದುರ್ವರ್ತನೆ ಎಂದು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಅವಕಾಶಕ್ಕೆ ಅಧಿಕಾರಿಗಳೇ ಕೊಕ್ಕೆ ಹಾಕುತ್ತಾರೆ. ಅನಾರೋಗ್ಯದಿಂದ ಚಿಕಿತ್ಸೆ ಪಡೆಯುವ ಹೆಸರಿನಲ್ಲಿ ಕೆಲವು ಕೈದಿಗಳು ಹತ್ತು ಸಾವಿರ ಕೊಟ್ಟು ಹೊರ ಹೋಗುತ್ತಾರೆ. ಹಣ ನೀಡದಿದ್ದರೆ ಗಂಭೀರ ಕಾಯಿಲೆಗೆ ಒಳಗಾದರೂ ಅಲ್ಲಿಯೇ ಚಿಕಿತ್ಸೆ ನೀಡಿ ಹಿಂಸೆ ನೀಡುತ್ತಾರೆ ಎಂದು ದೂರಲಾಗಿದೆ. ಜೈಲಿನಲ್ಲಿರುವ ಅಧಿಕಾರಿಗಳಾದ ಮಂಜುನಾಥ್, ಅಸಿಸ್ಟೆಂಟ್ ಸೂಪರವೈಸರ್ ಪರಮೇಶ್ವರ್, ಮಹದೇವ ನಾಯಕ್ ಹೆಡ್ ವಾರ್ಡನ್ ಶ್ರೀನಿವಾಸ ಭಜಂತ್ರಿ ಮತ್ತಿತರರ ಹೆಸರನ್ನು ಪತ್ರದಲ್ಲಿ ಕೈದಿ ಉಲ್ಲೇಖಿಸಿದ್ದಾರೆ.

ಜೈಲಿನ ಅಕ್ರಮದ ಬಗ್ಗೆ ಹೈಕೋರ್ಟ್ ಕಿಡಿ

ಜೈಲಿನ ಅಕ್ರಮದ ಬಗ್ಗೆ ಹೈಕೋರ್ಟ್ ಕಿಡಿ

ಬೆಂಗಳೂರು ಕೇಂದ್ರ ಕಾರಾಗೃಹದ ಅಕ್ರಮಗಳ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್ ಇತ್ತೀಚೆಗಷ್ಟೇ ಕಿಡಿ ಕಾರಿತ್ತು. ಕೆ.ಜಿ. ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕೈದಿಗಳು ತಮ್ಮ ಜಾಮೀನು ಅರ್ಜಿ ಹೈಕೋರ್ಟ್ ಕಲಾಪವನ್ನು ಜೈಲಿನಲ್ಲಿದ್ದುಕೊಂಡೇ ಮೊಬೈಲ್ ನಲ್ಲಿ ವೀಕ್ಷಿಸಿದ್ದರು. ಈ ಗಂಭೀರ ವಿಚಾರವನ್ನು ಕೇಂದ್ರ ತನಿಖಾ ಸಂಸ್ಥೆಯ ಸರ್ಕಾರಿ ಅಭಿಯೋಜಕರು ಕೋರ್ಟ್ ಗಮನಕ್ಕೆ ತಂದಿದ್ದರು. ಇದರಿಂದ ಕೆಂಡಾಮಂಡಲವಾಗಿದ್ದ ಹೈಕೋರ್ಟ್ ಜೈಲಿನ ಅಕ್ರಮದ ಬಗ್ಗೆ ವರದಿ ಕೇಳಿತ್ತು. ಇದರ ಬೆನ್ನಲ್ಲೇ ನೂತನ ಗೃಹ ಸಚಿವ ಅರಗ ಜ್ಞಾನೇಂದ್ರ ಜೈಲಿಗೆ ಭೇಟಿ ನೀಡಿದ್ದರು. ಕೈದಿಗಳು ತಪ್ಪು ಮಾಡದೇ ಪರಿವರ್ತನೆಯಾಗುವಂತೆ ಕಿವಿಮಾತು ಹೇಳಿದ್ದರು. ಜೈಲಿನಲ್ಲಿ ಕೈದಿಗಳ ಆರೋಗ್ಯ ದೃಷ್ಟಿಯಿಂದ ಉತ್ತಮ ಆಹಾರ ಮತ್ತು ಸ್ವಚ್ಛತೆಗೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಸನ್ನಡತೆ ಕೈದಿಯೊಬ್ಬ ಜೈಲಿನ ಅಕ್ರಮದ ಚಿತ್ರಣ ಬಗ್ಗೆ ಪತ್ರ ಬರೆದಿದ್ದು, ಅಸಲಿ ಕರ್ಮಕಾಂಡಗಳನ್ನು ಬಯಲಿಗೆ ಬಂದಂತಾಗಿದೆ. ಗೃಹ ಸಚಿವರು ಈ ಬಗ್ಗೆ ಎಚ್ಚೆತ್ತು ಜೈಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಸೂಚಿಸುತ್ತಾರಾ ? ಜೈಲಿನ ಮೇಲಾಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಾರಾ ಕಾದು ನೋಡಬೇಕು.

English summary
Inside story of Bengaluru Central Jail: Convicted Prisoner letter revels Bengaluru central jail scams know more
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X