ಶೂನ್ಯದಿಂದ ಸೃಷ್ಟಿ - ವಿವಾಹ ವೃಷ್ಟಿ!
ಅಮೆರಿಕದ ಟಿವಿಯಲ್ಲಿ ಬರುವ ಜನಪ್ರಿಯ ಹಾಸ್ಯ ಧಾರಾವಾಹಿ ‘ ಸೈನ್‌ಫಿ‚ೕಲ್ಡ್’ನ ಖ್ಯಾತಿ ’ಎಬೌಟ್ ನಥಿಂಗ್’ ಎಂದೇ. ಅದನ್ನು ನೆನಪಿಸಿಕೊಂಡು ಪ್ರತಿಕ್ರಿಯಿಸಿದವರು ಮೇರಿಲ್ಯಾಂಡ್‌ನ ಹಂ.ಕ.ರಾಮಪ್ರಿಯನ್. ಟಿವಿ ಸೀರಿಯಲ್ ‘ನಥಿಂಗ್’ಅನ್ನು ನೆನಪಿಸಿದರೆ ಉಪ್ಪಿ ಉಪೇಂದ್ರ ಚಲನಚಿತ್ರದ ಹಾಡು ನೆನಪಿಸಿದ್ದು ಏನೂ ಇಲ್ಲ! ಅದೇ, ‘‘ಏನಿಲ್ಲಾ, ಏನಿಲ್ಲಾ, ನಿನ್ನ ನನ್ನ ನಡುವೆ ಏನಿಲ್ಲ... ನಿಜದಂತಿರುವ ಸುಳ್ಳಲ್ಲ, ಸುಳ್ಳಿನ ನಿಜವು ಸುಳ್ಳಲ್ಲ...’’ ಹಾಡು ನೆನಪಾಯ್ತು ಎಂದವರು ಮಿನ್ನೆಸೊಟದಿಂದ ಶ್ರೀಲಕ್ಷ್ಮಿ ಹೊನ್ನವಳ್ಳಿ. ಅವರೆನ್ನುತ್ತಾರೆ: ‘‘ನನ್ನ ಗೆಳತಿಯಾಬ್ಬಳು ಆ ಹಾಡಿನ ‘ಆಳ’ವನ್ನು ಕುರಿತು ಹೊಗಳಿದ್ದೇ ಹೊಗಳಿದ್ದು. ಆ ಹಾಡು ಎರಡು ಅರ್ಥಗಳನ್ನು ಹೊಂದಿದೆಯಂತೆ. 1) Assertive ... ‘ಏನೂ ಇಲ್ಲ’ ಎಂಬ ಅರ್ಥ. 2) Imperative ... ‘ಏನಿಲ್ಲ? ಎಂದು ಪ್ರಶ್ನಿಸುತ್ತಲೇ ಎಲ್ಲವೂ ಇದೆ’ ಎಂಬ ಅರ್ಥ. (ನಾನಂತೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ)
ಶ್ರೀಲಕ್ಷ್ಮಿ ಇನ್ನೊಂದು ಸ್ವಾರಸ್ಯದ ಸಂಗತಿಯನ್ನೂ ಬರೆದಿದ್ದಾರೆ : ‘‘ಬೆಂಗಳೂರಿನಲ್ಲಿ ಹಿಂದೆ ನಾನು ಕೆಲಸ ಮಾಡುತ್ತಿರುವಾಗ ನಡೆದ ಒಂದು ತಮಾಷೆಯ ವಿಚಾರ. ನಾನು ರಜ ಹಾಕುವ ಹಿಂದಿನ ದಿನ ನನ್ನ ಗೆಳತಿಗೆ ನನ್ನ ಅನುಪಸ್ಥಿತಿಯಲ್ಲಿ ಮಾಡಬೇಕಾದ ಕೆಲಸಗಳನ್ನು ವಿವರಿಸಿ ‘ಸ್ಕಿೃೕನ್‌ಸೇವರ್ ಪಾಸ್‌ವರ್ಡ್’ ಅನ್ನು nothing ಎಂದು ಬರೆದಿದ್ದ ಚೀಟಿಯನ್ನು ನೀಡಿದ್ದೆ. ನಾನು ಕೆಲಸಕ್ಕೆ ಮತ್ತೆ ಹಾಜರಾದಾಗ ತಿಳಿಯಿತು, ಅವಳು ಆ nothing ಅನ್ನು ಸ್ಕಿೃೕನ್‌ಸೇವರ್‌ಗೆ ಪಾಸ್‌ವರ್ಡ್ ಇಲ್ಲವೆಂದು ಅರ್ಥ ಮಾಡಿಕೊಂಡು, ಸ್ವಲ್ಪ ಹೊತ್ತು ಪರದಾಡಿದ್ದಳು ಎಂದು! ಅಂತೂ nothing does not exactly mean nothing! ಅಂತ ಆಯಿತು.’’
ಉಪೇಂದ್ರನ ಏನಿಲ್ಲ ಏನಿಲ್ಲ ಹಾಡು ಸಿಯಾಟಲ್‌ನ ಅರುಣ್ ಕಟ್ಟಿಯವರಿಗೂ ನೆನಪಾಗಿದೆ. ಕಟ್ಟಿಯವರು ಕಟ್ಟಿಕೊಟ್ಟ ಇನ್ನೊಂದು ನೆನಪೆಂದರೆ ಪ್ರತಿಸಾರಿ ಇಂಡಿಯಾಕ್ಕೆ ಮನೆಗೆ ಫೋನಿಸಿದಾಗಲೂ ಅಮ್ಮ ಹೇಳುವ ಸ್ಟಾಂಡರ್ಡ್ ಉತ್ತರ ‘‘ಏನಿಲ್ಲ, ಹಿಂಗ ಅಡಿಗಿ ಮಾಡ್ಲಿಕತ್ತಿದ್ದೆ...’’! ಅಮ್ಮ-ಮಗನ ಆ ಸಾಪ್ತಾಹಿಕ ಫೋನ್ ಸಂಭಾಷಣೆಯಲ್ಲಿ ‘ಏನಿಲ್ಲ’ ಎಂಬ ಮಾತು, ಅದರ ಆಚೀಚೆಗಿನ ಮೌನ ತುಂಬಿಕೊಂಡಿರುವ ಮಮಕಾರ ಎಷ್ಟು ಎಂಥದು ಎನ್ನುವುದಂತೂ ನಿಮಗೆ ಗೊತ್ತೇ ಇದೆ.
ಏನಿಲ್ಲ ಬಗ್ಗೆ ಚಿಕಾಗೊದಿಂದ ಆನುರಾಧಾ ಅರುಣ್ ಬರೆಯುತ್ತಾರೆ: ‘‘ನಮ್ಮ ಮನೆಯವರಿಗೂ ಏನಿಲ್ಲವೆಂದರೆ ಕೋಪ ಬರುವುದು. ಅವರು ಹೇಳುವುದೆಂದರೆ ಏನಾದರೂ ಇದ್ದಾಗಲೂ ಎನಿಲ್ಲವೆಂದು ಹೇಳಿದರೆ ಅಲ್ಲಿ ಏನೋ ಇದ್ದಹಾಗೆಯೇ. ಯಾಕೆಂದರೆ ಸಿಕ್ಕು ಬಿದ್ದಾಗ, ಮುಚ್ಚಿಟ್ಟುಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿದ್ದೇವೆಂದು ಎಲ್ಲರಿಗೂ ಗುಮಾನಿ ಬರುವ ಹಾಗೆ ನಾವು ಅದರಲ್ಲೂ ಹೆಂಗಸರು ಮಾಡುತ್ತೇವೆಂದು. ಅದರಬದಲು ಸ್ವಲ್ಪವಾದರೂ ತಿಳಿಸಬಹುದಲ್ಲ! ಯಾರಿಗೂ ಗೊತ್ತಾಗಬಾರದಿದ್ದರೆ ವಿಷಯವನ್ನು ಪ್ರಸ್ತಾಪಿಸುವುದಾದರೂ ಏಕೆ ಅನ್ನುತ್ತಾರೆ. ಆ ಪ್ರಶ್ನೆಗೆ ನಾವು ಹೆಂಗಸರೇ ಹೆಚ್ಚಾಗಿ ಅನುವು ಮಾಡಿಕೊಡುತ್ತೇವೆ...’’ ಹೀಗೆ ಬರೆದು ಅವರು ಹೆಂಗಳೆಯರ ಬಗೆಗಿನ ಸಾರ್ವಕಾಲಿಕ ಸತ್ಯವನ್ನು ಸಮರ್ಥಿಸಿಕೊಂಡಿದ್ದಾರೆ!
ರಿಚ್ಮಂಡ್‌ನಿಂದ ಶ್ರೀನಾಥ ಭಲ್ಲೆ ‘ಏನಿಲ್ಲ’ ಬಗ್ಗೆ ಎಷ್ಟೆಲ್ಲ ಹನಿಗಳನ್ನುದುರಿಸಿದ್ದಾರೆ ನೋಡಿ.
- ಯಾರದೋ ಫ‚ೋನ್ ಬಂತೆಂದು ತೆಗೆದುಕೊಂಡು ಉಭಯಕುಶಲೋಪರಿ ಮಾತಾದ ಮೇಲೆ ಅವರು ಏನು ವಿಷಯಕ್ಕೆ ಫ‚ೋನ್ ಹಚ್ಚಿದರು ಎಂದು ಕೇಳುವ ಪರಿಯಲ್ಲಿ ಒಂದು ‘ಇನ್ನೇನು ವಿಶೇಷಾ?’ ಅದಕ್ಕೆ ಅವರು ಕೊಡುವ ಉತ್ತರ ‘‘ಏನಿಲ್ಲ, ಜಸ್ಟ್ ಹಾಗೇ ಸುಮ್ಮನೆ ಫ‚ೋನ್ ಮಾಡಿದೆ. ಮಗಳ ಮದುವೆ ಮಾಡಿದರಂತೇ...?’’ ಅವರನ್ನು ಕರೆಯಲಿಲ್ಲ ಎಂದು ನೇರವಾಗಿ ಹೇಳುವ ಬದಲು ಹೀಗೆ. ವಿಷಯ ಕೇಳುವುದು ಇದ್ದೂ ‘ಏನಿಲ್ಲ’ ಎಂಬ ಮುಸುಕು ಏಕೆ?
- ಭಿಕ್ಷುಕನೊಬ್ಬ ಮನೆಯ ಮುಂದೆ ನಿಂತು ‘ಅಮ್ಮಾ ತಾಯೀ’ ಎಂದ. ಒಳಗಿನಿಂದ ಬಂದ ಉತ್ತರ ‘ಏನಿಲ್ಲ, ಮುಂದೆ ಹೋಗು’. ಭಿಕ್ಷುಕನೆಂದ ‘ಏನಿಲ್ಲ ಎಂದರೆ ನನ್ನ ಜೊತೆ ನೀವೂ ಬನ್ನಿ ತಾಯಿ’ !
- ರುದ್ರಭೂಮಿಯಲ್ಲಿ ಹೆಣವ ಸುಡುವ ಮುನ್ನ ತನಗೆ ಸಲ್ಲಬೇಕಾದ್ದು ಮೊದಲು ಸಲ್ಲಿಸೆಂದು ಪಟ್ಟುಹಿಡಿದ ರಾಜಾ ಹರಿಶ್ಚಂದ್ರನ ಮುಂದೆ ಗೋಳಿಡುತ್ತಾ ಚಂದ್ರಮತಿ ನುಡಿದದ್ದು ‘ನಿನಗೆ ಕೊಡಲು ನನ್ನ ಬಳಿ ಏನಿಲ್ಲ’ ಎಂದೇ!?
- ‘ರಮೇಶ್ ಕುಮಾರ್’ ಎಂಬುವನು ಪಾಸ್‌ಪೋರ್ಟ್‌ಗಾಗಿ ಅಪ್ಲೈ ಮಾಡಿದ. ಫ‚ಸ್ಟ್‌ನೇಮ್ ಎಂಬ ಕಡೆ ‘ರಮೇಶ್’ ಎಂದೂ, ಲಾಸ್ಟ್‌ನೇಮ್ ಎಂಬ ಕಡೆ ‘ಕುಮಾರ್’ ಎಂದೂ ಬರೆದ. ಅವನಿಗೆ ಮಿಡಲ್ ಇನಿಶಿಯಲ್ ಇರಲಿಲ್ಲ. ‘ಏನಿಲ್ಲ’ ಎಂದು ಬರೆಯುವುದು ಹೇಗೆ? nil ಎಂದು ಬರೆಯಲು ಜಾಗವಿಲ್ಲ. ಒಂದೇ ಅಕ್ಷರ ಬರೆಯುವಷ್ಟು ಜಾಗವಿತ್ತು. ಹಾಗಾಗಿ ‘ಏನಿಲ್ಲ’ ಎಂಬುದರ ಸೂಚಕವಾಗಿ X ಎಂದು ಬರೆದ. ಅವನ ಹೆಸರು ಇಂದಿಗೂ Ramesh X Kumar ಎಂದು!
- ಮಹಾಭಾರತದ ಅಕ್ಷಯ ಪಾತ್ರೆಯ ಪ್ರಸಂಗವನ್ನು ಸಂಕ್ಷಿಪ್ತವಾಗಿ ಬರೆದರೆ, ದ್ರೌಪದಿ ಹೇಳಿದ್ದು nothing. ಕೃಷ್ಣ ಹೇಳಿದ something ನಂತರ ಆ ಪಾತ್ರೆಯೇ ಪಾಂಡವರ ಪಾಲಿನ everything ಆಯಿತು!
ಮಹಾಭಾರತದಲ್ಲಿನ ಅಕ್ಷಯಪಾತ್ರೆ ಪ್ರಸಂಗವನ್ನೇ ಉಲ್ಲೇಖಿಸಿ ಬರೆದವರು ನ್ಯೂಜಿಲ್ಯಾಂಡ್‌ನ ಪ್ರಕಾಶ್ ರಾಜಾರಾವ್. ‘‘ಪಾಂಡವರ ವನವಾಸದಲ್ಲಿ ಅವರಿಗೆ ಕೃಷ್ಣ ಕೊಟ್ಟಿದ್ದ ಅಕ್ಷಯಪಾತ್ರೆ ನಿತ್ಯ ಹೊಟ್ಟೆ ತುಂಬಿಸುತ್ತಿತ್ತು. ಒಂದು ದಿನ ಎಲ್ಲರ ಊಟವಾದ ನಂತರ ದ್ರೌಪದಿ ಪಾತ್ರೆ ತೊಳದಿಟ್ಟು ಮಲಗಿದ್ದಳು. ಆ ಪಾತ್ರೆ ಮರುದಿನದವರೆಗೆ ಉಪಯೋಗಕ್ಕಿಲ್ಲ. ಆಗ ಅಲ್ಲಿಗೆ ಬಂದ ದೂರ್ವಾಸಮುನಿಗಳು ತಮಗೂ ಮತ್ತು ತಮ್ಮ ಪರಿವಾರಕ್ಕೂ ಊಟ ನೀಡುವಂತೆ ಕೋರಿದರು. ಆಗ ದ್ರೌಪದಿ ಕೃಷ್ಣನನ್ನೇ ಸ್ಮರಿಸಿದಳು. ಪ್ರತ್ಯಕ್ಷನಾದ ಕೃಷ್ಣ ಆಕ್ಷಯಪಾತ್ರೆಯನ್ನು ಕೊಡುವಂತೆ ಕೇಳಿದ. ಅದಕ್ಕೆ ದ್ರೌಪದಿ, ಅದನ್ನು ಆಗಲೆ ತೊಳೆದಾಯ್ತು, ಅದರಲ್ಲಿ ಏnilಆ ಎಂದಳು. ಆದರೆ ಕೃಷ್ಣ ಅಕ್ಷಯಪಾತ್ರೆಯ ತಳದಲ್ಲಿದ್ದ ಒಂದು ಅಗುಳನ್ನು ತೆಗೆದು ನುಂಗಿದ. ಕೂಡಲೆ ಅವನಿಗೂ ಮತ್ತು ಅಲ್ಲಿದ್ದ ದೂರ್ವಾಸರಿಗೂ ಹೊಟ್ಟೆ ತುಂಬಿ ಹೋಯಿತು!’’












Click it and Unblock the Notifications