ಫಾದರ್ಸ್ ಡೇಗೆ ‘ಅಪ್ಪ’ ಸ್ಪೆಷಲ್!

ಮಾತೃ ದೇವೊ ಭವ... ಪಿತೃ ದೇವೊ ಭವ... ಆಚಾರ್ಯ ದೇವೊ ಭವ... ಎಂದು ಶೀಕ್ಷಾವಲ್ಲಿಯ ಸೂಕ್ತದಲ್ಲಿ ತಾಯಿ-ತಂದೆ-ಗುರುಗಳ ಉಲ್ಲೇಖ ಅನುಕ್ರಮವಾಗಿ ಬರುವುದಕ್ಕೂ, ಮದರ್ಸ್ ಡೇ ಮೇಯಲ್ಲಿ, ಫ‚ಾದರ್ಸ್ ಡೇ ಜೂನ್‌ನಲ್ಲಿ, ಟೀಚರ್ಸ್ ಡೇ ಸಪ್ಟೆಂಬರ್‌ನಲ್ಲಿ... (ಅತಿಥಿಗಳು ಮಾತ್ರ ವರ್ಷವಿಡೀ?) ಬರುವ ಅನುಕ್ರಮಕ್ಕೂ ತಾಳೆಯಾಗುವುದು ನಿಮ್ಮ ಗಮನಕ್ಕೆ ಬಂದಿತ್ತೇ? ಇಲ್ಲಾ ಅಂತಿದ್ರೂ ಇದೀಗ ಬಂತಲ್ಲ!? ಸರಿ, ಅಂದು 'ಮದರ್ಸ್ ಡೇ"ಗೆ ಮಾತೆಯ ಮಮಕಾರದ ಮಕಾರ ಬಳ್ಳಿ ಹಬ್ಬಿಸಿದ ವಿಚಿತ್ರಾನ್ನಭಟ್ಟರು ಇದೀಗ ಫ‚ಾದರ್ಸ್ ಡೇಗೆ ಏನು cookಇಸಿದ್ದಾರೆ ಎಂದು ಕೇಳಿದಿರಾ?
ಮತ್ತಿನ್ನೇನು, ಅಪ್ಪಂದಿರ ದಿನಕ್ಕೆ 'ಅಪ್ಪ" ಸ್ಪೆಷಲ್! ಆದರೆ ಇವತ್ತಿನ ಹರಟೆಯಲ್ಲಿನ 'ಅಪ್ಪ" ನೀವು ತಿಳಿದುಕೊಂಡ ಅಪ್ಪ ಅಲ್ಲ, ತಂದೆ ಅಲ್ಲ, ಪಿತಾ ಅಲ್ಲ, ಜನಕ ಅಲ್ಲ, ಜನ್ಮದಾತನೂ ಅಲ್ಲ. ಇಲ್ಲಿ 'ಅಪ್ಪ" ಅಂದರೆ ಒಂದು ತಿಂಡಿ! ಸ್ಪೆಸಿಫಿ‚ಕ್ ಆಗಿ ಹೇಳಬೇಕೆಂದರೆ ನಮ್ಮ ಕರಾವಳಿ ಕರ್ನಾಟಕದ ಸ್ಪೆಷಾಲಿಟಿಗಳ ಪೈಕಿಯದೇ ಇನ್ನೊಂದು ವಿಶಿಷ್ಟ ತಿಂಡಿ. ರುಚಿನೋಡಿ ಚಪ್ಪರಿಸಲು ಸಿದ್ಧರಿದ್ದೀರಾದರೆ ನೀವೂ ಹತ್ತಿ ಮಂಗಳೂರು ಬಂಡಿ.
*
ಅಪ್ಪಾಖ್ಯಾನದ ಮೊದಲು ನಿಮಗೊಂದು ಒಗಟು (ಅಥವಾ ಜಾಣ್ಮೆಲೆಕ್ಕ) ಹೇಳುತ್ತೇನೆ. ''ಕಾವಲಿಯಿಂದ ಏಳು ದೋಸೆ, ತಟ್ಟೆಯಲ್ಲಿ ಆರು ದೋಸೆ, ಬಾಯಿಗೆ ಹತ್ತು ದೋಸೆ. ಒಟ್ಟು ಎಷ್ಟು ದೋಸೆ?"" ಎಂದು ಯಾರಾದರೂ ನಿಮ್ಮನ್ನು ಕೇಳಿದರೆ, ಕೈಬೆರಳುಗಳಿಂದೆಣಿಸುತ್ತ ಒಟ್ಟು 23 ದೋಸೆ ಎಂಬ ತಪ್ಪು ಉತ್ತರವನ್ನು ತಂದು ಕೊಡುತ್ತೀರೋ ಅಥವಾ ಒಂದೇ ಒಂದು ದೋಸೆ ಎಂಬ ಸರಿಯುತ್ತರವನ್ನೇ ಹೇಳಿ ಅದನ್ನು ತಿಂದು ಬಿಡುತ್ತೀರಿ?
ನನಗ್ಗೊತ್ತು ಒಂದೇ ದೋಸೆ ಎನ್ನುವ ಸರಿಯುತ್ತರವನ್ನೇ ಕೊಡುವ ಜಾಣರು ನೀವಾದರೂ, 'ಕಾವಲಿಯಿಂದ ಏಳು ದೋಸೆ..." ಎಂದಾಗ ಒಂದುಕ್ಷಣ ಫ‚ಾ್ಲಷ್‌ಬ್ಯಾಕ್ ದೃಶ್ಯವೊಂದು - ನೀವಿನ್ನೂ ನಾಲ್ಕೈದು ವರ್ಷದ ಪುಟ್ಟಮಗುವಾಗಿದ್ದಾಗ ಅಮ್ಮ ದೋಸೆಯ ಕಾವಲಿಯಲ್ಲಿ ಹಿಟ್ಟಿನಿಂದ ಮಾಮೂಲಿಯಾಗಿ ದೊಡ್ಡ ದೋಸೆ ಹುಯ್ಯುವ ಬದಲು ಪುಟ್ಟಪುಟ್ಟದಾದ ಆರೇಳು 'ದೋಸೆ ಮರಿ"ಗಳನ್ನು ಮಾಡಿಕೊಟ್ಟಿದ್ದು - ನಿಮ್ಮ ಕಣ್ಮುಂದೆ ಮೂಡಿ ಮಾಯವಾಯ್ತಲ್ಲ? ಆಗ ನಿಜಕ್ಕೂ 'ಕಾವಲಿಯಿಂದ ಏಳು ದೋಸೆ" ಬಂದಿತ್ತಲ್ಲ ನಿಮ್ಮ ಬೆಳ್ಳಿಯ ತಟ್ಟೆಗೆ? ಒಂದು ದೊಡ್ಡ ದೋಸೆಯ ಬದಲಿಗೆ ಈ ಪುಟ್ಟಪುಟ್ಟ ಮರಿದೋಸೆಗಳು ಯಾಕೆ ಆಗ ಇಷ್ಟವಾಗುತ್ತಿದ್ದುವು? ತುಂಬ ಸಿಂಪಲ್ - ಒಂದೊಂದನ್ನೂ ಇಡಿಯಾಗಿ ಕೈಯಲ್ಲಿ ಹಿಡಿದು ತಿಂದು ಆನಂದಿಸಬಹುದಾಗಿತ್ತು, ಅಲ್ಲವೆ?
ಆ ಥರ ಮರಿದೋಸೆ ಮಾಡಲಿಕ್ಕೆ ಅನುಕೂಲವಾಗುವಂತೆ ದೋಸೆ ಕಾವಲಿಯಲ್ಲೇ ಏಳು ಪ್ರತ್ಯೇಕ 'ಗುಳಿ" ಅಥವಾ ಕಂಪಾರ್ಟ್‌ಮೆಂಟ್ ಗಳಿದ್ದರೆ? ಅದನ್ನೇ 'ಅಪ್ಪ"ದ ಕಾವಲಿ ಅನ್ನೋದು, ಮತ್ತು ವಿಶಿಷ್ಟವಾದ ಆ ದೋಸೆಮರಿಗಳನ್ನೇ 'ಅಪ್ಪ" ಅನ್ನೋದು! ಏಳು ಗುಳಿಗಳ ಅಪ್ಪ-ಕಾವಲಿ ನಮ್ಮಕಡೆ ಎಲ್ಲ ಮನೆಗಳ ಪಾತ್ರೆಪರಡಿಗಳಲ್ಲಿ ಸೇರಿರುತ್ತದೆ. ನನ್ನ ನೆನಪಿನಂತೆ ಹಿಂದೆಲ್ಲ ನಮ್ಮೂರಲ್ಲಿ ಬಲಾವು ಕಲ್ಲಿನ ಅಪ್ಪ-ಕಾವಲಿಗಳಿರುತ್ತಿದ್ದುವು. ಕಾರ್ಕಳ-ಬೆಳ್ತಂಗಡಿ ಮಧ್ಯದ 'ನಾರಾವಿ" ಎಂಬ ಊರು ಅಪ್ಪ-ಕಾವಲಿಗಳಿಗೆ ಪ್ರಸಿದ್ಧವಾದದ್ದು. ತೊಟ್ಟಿಲ ಹೊತ್ಕೊಂಡು ತವರ್ಬಣ್ಣ ಉಟ್ಕೊಂಡು ಹೊರಟ ಹೆಣ್ಮಕ್ಕಳು ಅಪ್ಪ ಕೊಟ್ಟೆಮ್ಮೆಯನ್ನು ಹೊಡಕೊಂಡಲ್ಲದಿದ್ದರೂ ನಾರಾವಿಯ 'ಅಪ್ಪ" ಕಾವಲಿಯನ್ನು ಹಿಡಕೊಂಡು ದೇಶವಿದೇಶಗಳಿಗೆ ಹೋಗಿ ನೆಲೆಸಿದ್ದಾರೆ. ಈಗೀಗ ಅಪ್ಪ-ಕಾವಲಿಗಳು ಕಬ್ಬಿಣದವೂ, ಟೆಫ‚ಾ್ಲನ್ ನಾನ್‌ಸ್ಟಿಕ್ ವೆರೈಟಿಯವೂ ಬಂದಿವೆ; ನಾರಾವಿ ಕಾವಲಿಗರ ಬದುಕು ಬಿಸಿಕಾವಲಿ ಮೇಲೆ ಬಿದ್ದ ನೀರಾವಿಯಾದಂತಾಗಿದೆ!
ಅಂದಹಾಗೆ 'ಅಪ್ಪ" ಕರಾವಳಿ ಸ್ಪೆಷಲ್ ಎಂದೆನಾದರೂ ಮಲೆನಾಡು-ಬಯಲುಸೀಮೆಗಳವರಿಗೂ 'ಅಪ್ಪ" ಗೊತ್ತಿದೆಯೆಂದುಕೊಳ್ಳುತ್ತೇನೆ. ಬಹುಶಃ ಹೆಸರು ಬೇರೆ ಇರಬಹುದು (ಗುಳಿಯಪ್ಪ, ಕಲ್ಲಪ್ಪ ಇತ್ಯಾದಿ), ಹಿಟ್ಟಿನ ರೆಸಿಪಿಯಲ್ಲಿ ಒಂಚೂರು ವ್ಯತ್ಯಾಸ ವೈವಿಧ್ಯಗಳಿರಬಹುದು (ಕರಾವಳಿಯವರು ಅಕ್ಕಿ ನೆನೆಸಿ ತೆಂಗಿನಕಾಯಿ ತುರಿ, ಬೆಲ್ಲ ಸೇರಿಸಿ ರುಬ್ಬಿದರೆ, ಘಟ್ಟದ ಮೇಲಿನವರು ಅಕ್ಕಿ+ಉದ್ದಿನಬೇಳೆ ನೆನೆಸಿ ದೋಸೆಹಿಟ್ಟು ಮಾಡಿದಂತೆಯೇ ಮಾಡಬಹುದು), ಆದರೆ ಒಂದು ಖಾದ್ಯವಾಗಿ 'ಅಪ್ಪ" ನಮ್ಮ ರಾಜ್ಯದಾದ್ಯಂತ ಬಹುಮಟ್ಟಿಗೆ ಪರಿಚಿತ. ಬರ್ಗರ್-ಪಿಜ್ಜಾ-ಸ್ಯಾಂಡ್‌ವಿಚ್ ಯುಗದ ಈಗಿನವರಿಗಲ್ಲದಿದ್ದರೂ ಒಂದು ತಲೆಮಾರು ಹಿಂದಿನವರಿಗಂತೂ ಹೌದು.
ಹಾಗೆ ನೋಡಿದರೆ 'ಅಪ್ಪ" ಕರ್ನಾಟಕದಲ್ಲಷ್ಟೇ ಅಲ್ಲ, ದಕ್ಷಿಣದ ಇತರ ರಾಜ್ಯಗಳವರಿಗೂ ಗೊತ್ತು - ಆಂಧ್ರಪ್ರದೇಶದ ರಾಯಲಸೀಮೆಯವರಿಗೆ 'ಗುಂಟ ಪೊಂಗನಲು" ಹೆಸರಿನಿಂದ, ತಮಿಳುನಾಡಿನವರಿಗೆ 'ಕುಳಿ ಪನಿಯಾರಮ್" ಹೆಸರಿನಿಂದ ಮತ್ತು ಕೇರಳದವರಿಗೆ 'ಉನ್ನಿ ಅಪ್ಪಮ್" ಹೆಸರಿನಿಂದ. ಅಷ್ಟಾಗಿ 'ಅಪ್ಪ" ಹೊಟೆಲ್/ರೆಸ್ಟೊರೆಂಟ್/ದರ್ಶಿನಿಗಳಲ್ಲಿ ಸಿಗುವ ತಿಂಡಿಗಳ ಪೈಕಿಯದಲ್ಲ. ಎಲ್ಲೋ 'ಮಂಗಳೂರು ಸ್ಪೆಷಲ್" ತಿಂಡಿಗಳನ್ನು ಸಾದರಪಡಿಸುವ ಮಲ್ಲೇಶ್ವರದ ನ್ಯೂಕೃಷ್ಣ ಭವನದಂತಹ ಹೊಟೆಲ್‌ಗಳಲ್ಲಿ ಅಥವಾ ಯಾವುದಾದರೂ ಫ‚ುಡ್ ಫ‚ೆಸ್ಟಿವಲ್‌ಗಳಲ್ಲಷ್ಟೆ 'ಅಪ್ಪ" ಕಾಣಿಸಿಕೊಳ್ಳಬಹುದು. ಅದುಬಿಟ್ಟರೆ 'ಅಪ್ಪ" ಪಕ್ಕಾ ನಾನ್-ಕಮರ್ಷಿಯಲ್ ತಿಂಡಿ; ಮನೆಯ ಆತ್ಮೀಯ ವಾತಾವರಣದಲ್ಲಿ ಮನೆಮಂದಿಯೆಲ್ಲ ಸೇರಿ ಮನಸಾರೆ ಮೆಲ್ಲಬಹುದಾದ ಸರಳವಾದ ತಿಂಡಿ.
ಪೂಜೆ-ಪುರಾಣಗಳಲ್ಲಿ 'ಅಪ್ಪ"
ಯಾವುದೇ ಸಂಗತಿಯಾದರೂ ಸೈ, ಪುರಾಣಗಳಲ್ಲಿ ಧಾರ್ಮಿಕ ಗ್ರಂಥಗಳಲ್ಲಿ ಭಜನೆ ಕೀರ್ತನೆಗಳಲ್ಲಿ ಅದರ ಉಲ್ಲೇಖವಿದೆಯಾ ಅಂತ ಲೈಟಾಗಿ ರಿಸರ್ಚಿಸುವುದು ನನ್ನ ಆಸಕ್ತಿಗಳಲ್ಲೊಂದು. ಹಾಗೆ ನನ್ನ ' ಸರ್ಚ್ ಇಂಜಿನ್"ಗೆ 'ಅಪ್ಪ"ವನ್ನು ಉಣಿಸಿದಾಗ ಯಾವ್ಯಾವ ಮಾಹಿತಿ ಹೊರಬಂತು ಗೊತ್ತೇ? ಪುರಂದರದಾಸರ 'ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣ..." ಕೀರ್ತನೆಯ ಮೊದಲ ಚರಣವು 'ಅಪ್ಪವು ಅತಿರಸ ಮೆದ್ದ ಸ್ವಾಮಿ ಅಸುರರ ಕಾಲಲಿ ಒದ್ದ..." ಎಂದು ಶುರುವಾಗುತ್ತದೆ. ಹಾಗೆಯೇ ಕನಕದಾಸರು 'ಏಳು ನಾರಾಯಣನೆ ಏಳು ಲಕ್ಷ್ಮೀರಮಣ ಏಳು ಕಮಲಾಕ್ಷ ಕಮಲನಾಭ ಏಳಯ್ಯ..." ಎಂದು ಹಾಡಿದ್ದು ಭಗವಂತನಿಗೆ 'ಅಪ್ಪ" ನೈವೇದ್ಯ ಮಾಡಲಿದ್ದಾರೆಂಬ ಹಿಂಟ್ ಕೊಡುವುದಕ್ಕಾಗಿಯೇ ಏನೊ ಎಂಬ ತಾಜಾ ಕುತರ್ಕವೂ ನನ್ನ ತಲೆಗೆ ಹೊಳೆಯುತ್ತದೆ.
ದೇವರಿಗೆ 'ಅಪ್ಪ" ನೈವೇದ್ಯ ಮಾಡುವ ಕ್ರಮವಂತೂ ಇದೆ. ನಮ್ಮ ಮಂಗಳೂರಿನ ಸುಪ್ರಸಿದ್ಧ ಶರವು ಮಹಾಗಣಪತಿ ದೇವಸ್ಥಾನದಲ್ಲಿ 'ಅಪ್ಪ ಪೂಜೆ" ಎಂಬ ಸೇವೆ ಇದ್ದು ಗಣಪ್ಪನಿಗೆ 'ಅಪ್ಪ" ನೈವೇದ್ಯ ಮಾಡಲಾಗುತ್ತದೆ. ಇನ್ನು ಯಜುರ್ವೇದದ ಉಪಾಕರ್ಮ ವಿ-ಧಿಗಳಲ್ಲಿ ಹೋಮಕ್ಕೆ 'ಅಪ್ಪ"ವನ್ನೂ ಅರ್ಪಿಸುವ ಕ್ರಮವೂ ಇದೆಯೆಂದ ಮೇಲೆ 'ಅಪ್ಪ" ಒಂದು ಪೌರಾಣಿಕ/ಶಾಸ್ತ್ರಬದ್ಧ ಕಜ್ಜಾಯ ಎಂದು ಧಾರಾಳವಾಗಿ ಹೇಳಬಹುದು.
ಅಪ್ಪ ಕಜ್ಜಾಯ ಎಂದಾಗ ನೆನಪಾಯ್ತು. ನಮ್ಮ ದಕ್ಷಿಣಕನ್ನಡದವರೇ ಆದ ಬೆಂಡರವಾಡಿ ಸುಬ್ರಹ್ಮಣ್ಯಶರ್ಮ ಎನ್ನುವ ಮಕ್ಕಳಕವಿ 'ಅಪ್ಪ ಕಜ್ಜಾಯ" ಹೆಸರಿನ ಶಿಶುಗೀತೆಗಳ ಪುಸ್ತಕವನ್ನು ಬರೆದು ಪ್ರಕಟಿಸಿದ್ದರು. ತಾವೇ ಶಾಲೆಗಳಿಗೆ ಭೇಟಿಕೊಟ್ಟು ಮಕ್ಕಳೆದುರು ಆ ಪದ್ಯಗಳನ್ನು ಹಾಡಿ ಪುಸ್ತಕವನ್ನು ಪ್ರತಿ ಮಗುವಿಗೊಂದರಂತೆ ವಿತರಿಸಿದ್ದರು! ಮಗ್ಗಿಪುಸ್ತಕದ ಗಾತ್ರದ ಅದರಲ್ಲಿ ಒಳ್ಳೊಳ್ಳೆಯ, 'ಅಪ್ಪ"ದಷ್ಟೇ ರುಚಿರುಚಿಯಾದ ಶಿಶುಗೀತೆಗಳು/ಅಭಿನಯಗೀತೆಗಳು ಇದ್ದುವು.
'ಅಪ್ಪ"ನ ಸಂಬಂ-ಧಿ - ಡೆನ್ಮಾರ್ಕ್‌ನ "ಅಯ್‌ಬ್ಲಸ್ಕೀವರ್"!
ನಮಗೆ ಕನ್ನಡಿಗರಿಗೆ "ಅಪ್ಪ" ಎಷ್ಟು ಆಪ್ಯಾಯಮಾನವೋ ಡೆನ್ಮಾರ್ಕ್ ದೇಶದ ಜನರಿಗೆ Aebleskiver (ಅಯ್-ಬ್ಲ-ಸ್ಕೀವರ್) ಅಷ್ಟೇ ಆಪ್ಯಾಯಮಾನ ಮತ್ತು ಆತ್ಮೀಯ. ನಮ್ಮ 'ಅಪ್ಪ"ವನ್ನೇ ಹೋಲುವ ಅಯ್‌ಬ್ಲಸ್ಕೀವರ್, ಡ್ಯಾನಿಷ್ ಜನರ ಮೋಸ್ಟ್ ಫ‚ೇವರಿಟ್ ಬ್ರೇಕ್‌ಫ‚ಾಸ್ಟ್ ಐಟಂ. 'ಅಪ್ಪ"ವನ್ನು ವಿವರಿಸುವಾಗ ನಾನು ಮರಿದೋಸೆ ಎಂದೆನಲ್ಲಾ, ಡೆನ್ಮಾರ್ಕ್‌ನವರೂ Aebleskiver ಎಂದರೆ little pancakes ಎಂದೇ ಪರಿಚಯಿಸುವುದು; ಅಪ್ಪ-ಕಾವಲಿಯಂತೆ ಇರುವ Aebleskiver Panನಲ್ಲಿ ಪ್ಯಾನ್‌ಕೇಕ್ ಹಿಟ್ಟನ್ನು ಹುಯ್ದೇ ಅವರು ಅಯ್‌ಬ್ಲಸ್ಕೀವರ್ ಮಾಡುವುದು; ನಾವು ಸಣ್ಣ ಚಾಕು ಅಥವಾ ಕತ್ತಿಯನ್ನುಪಯೋಗಿಸಿ 'ಅಪ್ಪ"ವನ್ನು ತಿರುವಿಹಾಕಿದಂತೆ ಅವರೂ knitting needleನಂಥದನ್ನು ಉಪಯೋಗಿಸಿ ಅಯ್‌ಬ್ಲಸ್ಕೀವರ್‌ಅನ್ನು ತಿರುವಿಹಾಕುವುದು; ನಾವು 'ಅಪ್ಪ"ವನ್ನು ತುಪ್ಪ ಅಥವಾ ಚಟ್ನಿಯಾಂದಿಗೆ ಸವಿದರೆ, ಡ್ಯಾನಿಷರು ಅಯ್‌ಬ್ಲಸ್ಕೀವರ್ ಮೇಲೆ ಸಕ್ಕರೆಹುಡಿ ಉದುರಿಸಿ ರಾಸ್ಪ್‌ಬೆರ್ರಿ ಜಾಮ್ ಸವರಿ ಮೆಲ್ಲುವುದು!
ನಮಗೆ 'ಅಪ್ಪ"ದ ಮೂಲ ಏನು, ಹೇಗೆ, ಅದಕ್ಕೆ 'ಅಪ್ಪ" ಹೆಸರು ಏಕೆ ಎಂಬುದೆಲ್ಲ ಗೊತ್ತಿಲ್ಲವಷ್ಟೆ? ಆದರೆ ಡೆನ್ಮಾರ್ಕ್‌ನವರು ತಮ್ಮಿಷ್ಟದ ಅಯ್‌ಬ್ಲಸ್ಕೀವರ್ ಮೂಲದ ಬಗ್ಗೆ ಸ್ವಾರಸ್ಯಕರ ದಂತಕಥೆಯಾಂದನ್ನು ಹೇಳುತ್ತಾರೆ:
ಬಹಳ ಹಿಂದಿನ ಕಾಲದಲ್ಲಿ, ಸಮುದ್ರಯಾನ ಮಾಡಿ ಹೊಸಹೊಸ ಭೂಪ್ರದೇಶಗಳನ್ನು ಅರಸುತ್ತ ಹೊರಟ ನಾವಿಕರು ("ವೈಕಿಂಗ್ಸ್") ತುಂಬ ಕಷ್ಟಗಳನ್ನೆದುರಿಸಬೇಕಾಗುತ್ತಿತ್ತು. ಶತ್ರುಗಳೊಂದಿಗೆ ಹೋರಾಡಬೇಕಾಗುತ್ತಿತ್ತು. ಡೆನ್ಮಾರ್ಕ್‌ನ ಒಂದು ವೈಕಿಂಗ್ ಗುಂಪು ಒಮ್ಮೆ ಸಾಕಷ್ಟು ಪೆಟ್ಟು ತಿಂದಿತ್ತು, ಸೋತು ಸುಣ್ಣವಾಗಿತ್ತು. ನಾವಿಕರ ಶಿರಸ್ತ್ರಾಣಗಳು, ಗುರಾಣಿಗಳೆಲ್ಲ ನಜ್ಜುಗುಜ್ಜಾಗಿದ್ದುವು. ಹಾಗೆ ಬಳಲಿ ತಾಯ್ನಾಡಿಗೆ ಮರಳುತ್ತಿದ್ದಾಗ ಹಸಿವೆಯಾಗಿ pancakes (ದೋಸೆ) ಮಾಡಿ ತಿನ್ನುವ ಯೋಚನೆ ಬಂತು. ಆದರೆ ದೋಸೆ ಮಾಡಲು ಕಾವಲಿ ಇಲ್ಲವಲ್ಲ? ಸರಿ, ನಜ್ಜುಗುಜ್ಜಾಗಿದ್ದ ಗುರಾಣಿಯನ್ನೇ ಬೆಂಕಿಯ ಮೇಲಿಟ್ಟು ಎಣ್ಣೆಹಚ್ಚಿ ಅದರಲ್ಲಿ ದೋಸೆಹಿಟ್ಟು ಹುಯ್ದು ಬೇಯಿಸಿದರು. ಅದೇ ಹೊಸದೊಂದು ತಿಂಡಿಯ ಆವಿಷ್ಕಾರವಾಯ್ತು, ಅಯ್‌ಬ್ಲಸ್ಕೀವರ್ ಜನ್ಮತಾಳಿತು!
ಅಮೆರಿಕದಂತಹ ದೇಶಗಳಿಗೆ ವಲಸೆ ಹೋದ ಡಾನಿಷರು ಅಯ್‌ಬ್ಲಸ್ಕೀವರ್ ಸಂಸ್ಕೃತಿಯನ್ನು ಆ ದೇಶಗಳಿಗೂ ಒಯ್ದರು. ಕ್ಯಾಲಿಫ‚ೊರ್ನಿಯಾದಲ್ಲಿ ಡಾನಿಷ್ ಜನರು ಬಹುಸಂಖ್ಯೆಯಲ್ಲಿರುವ Solvang ಪಟ್ಟಣದಲ್ಲಿ ವರ್ಷಕ್ಕೊಮ್ಮೆ ಡಾನಿಷ್ ಉತ್ಸವ ನಡೆದಾಗ ಅಯ್‌ಬ್ಲಸ್ಕೀವರ್ ಸಮಾರಾಧನೆ ಅಲ್ಲಿನ ಪ್ರಮುಖ ಆಕರ್ಷಣೆಯಾಗಿರುತ್ತದಂತೆ. ಐಯಾವಾ ರಾಜ್ಯದಲ್ಲಿರುವ ಡಾನಿಷ್ ವಿಂಡ್‌ಮಿಲ್ ಮ್ಯೂಸಿಯಂನಲ್ಲಿ ಮೆಮೊರಿಯಲ್ ಡೇ ವಾರಾಂತ್ಯದಲ್ಲಿ ನಡೆಯುವ ಅಯ್‌ಬ್ಲಸ್ಕೀವರ್ ತಯಾರಿ/ಮಾರಾಟ ಮೇಳಕ್ಕೆ ಅಮೆರಿಕದ ವಿವಿಧೆಡೆಯ ಡಾನಿಷ್ ಜನರು ಜಾತ್ರೆಸೇರುತ್ತಾರೆ.
ಅಂದಮೇಲೆ, ಅಮೆರಿಕದಲ್ಲಿ ಅಪ್ಪ-ಕಾವಲಿ ಸಿಗದಿದ್ದರೂ ಅದಕ್ಕೆ ಪರ್ಯಾಯವಾದ Aebleskiver Pan ಸಿಕ್ಕೇಸಿಗುತ್ತದೆ. ಇನ್ನು ತಡವೇಕೆ, ಅಪ್ಪಂದಿರ ದಿನಕ್ಕೆ 'ಅಪ್ಪ" ಮಾಡಿ, ಅಪ್ಪನೂ ಸೇರಿದಂತೆ ಮನೆಮಂದಿಯೆಲ್ಲ ಸವಿಯಿರಿ!
*
ಈವಾರದ ಪ್ರಶ್ನೆ/ಚಟುವಟಿಕೆ ಸುಲಭವಾಗಿ ಇದೆ. ನಿಮಗೆ 'ಅಪ್ಪ"ದ ಬಗ್ಗೆ ಗೊತ್ತಿತ್ತಾ, ಇದುವರೆಗೆ ಒಮ್ಮೆಯಾದರೂ 'ಅಪ್ಪ" ತಿಂದಿದ್ದೀರಾ? ಈ ಪ್ರಶ್ನೆಗೆ ನಿಮ್ಮ ಉತ್ತರ 'ಹೌದಪ್ಪ" ಆದರೆ ಇಲ್ಲಿ ಕ್ಲಿಕ್ಕಿಸಿ; ಒಂದುವೇಳೆ 'ಇಲ್ಲಪ್ಪ" ಅಂತಾದರೆ ಇಲ್ಲಿ ಕ್ಲಿಕ್ಕಿಸಿ
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications