ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಣಲೆಯಿಂದ ಬೆಂಕಿಗೆ!

By ಶ್ರೀವತ್ಸ ಜೋಶಿ
|
Google Oneindia Kannada News

Vichitranna for everyone !
ಬಹುಶಃ 'ಬಾಣಲೆಯಿಂದ ಬಾಳೆಲೆಗೆ...' ಎನ್ನುವುದೇ ಸಮಂಜಸವೂ ಸಾಧುವೂ ಆಗಬಹುದಾದರೂ ಕನ್ನಡದ ಆ ಪಡೆನುಡಿಯನ್ನು ಮೂಲರೂಪದಲ್ಲೇ ಇವತ್ತಿನ ಶೀರ್ಷಿಕೆಗೆ ಬಳಸಿಕೊಳ್ಳಲಾಗಿದೆ. ಇಲ್ಲಿಯವರೆಗೆ ದಟ್ಸ್‌ಕನ್ನಡ ಚಾರಣಿಗರ ಸಮುದಾಯ (ವಿಶ್ವವ್ಯಾಪಿಯೇ ಆಗಿದ್ದರೂ ಅದಿನ್ನೂ ಒಂದು 'ಪುಟ್ಟ ಪ್ರಪಂಚ')ಕ್ಕಷ್ಟೇ ಲಭ್ಯವಾಗಿದ್ದ, ಅಂದರೆ ಬಾಣಲೆಯಲ್ಲಿದ್ದ, ವಿಚಿತ್ರಾನ್ನ ಈಗ ಕನ್ನಡ ಪುಸ್ತಕಪ್ರಪಂಚಕ್ಕೆ ಪದಾರ್ಪಣ ಮಾಡಿದೆ; ಅಂದರೆ, ಸಾರಸ್ವತಲೋಕದಲ್ಲಿ ಸತ್ವಪರೀಕ್ಷೆಗೆ, ಅಗ್ನಿಪರೀಕ್ಷೆಗೆ ತನ್ನನ್ನು ಒಡ್ಡಿಕೊಂಡಿದೆ. ಹಾಗಾಗಿ ಅಕ್ಷರಶಃ 'ಬಾಣಲೆಯಿಂದ ಬೆಂಕಿಗೆ' ಆಗಿದೆ!

ಮೊನ್ನೆ ಶನಿವಾರ ಬೆಂಗಳೂರಿನಲ್ಲಿ ಜರುಗಿದ ವಿಚಿತ್ರಾನ್ನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಾಂಕೇತಿಕವಾಗಿಯೂ ಪ್ರತ್ಯಕ್ಷವಾಗಿಯೂ ಇರಲೆಂದು ಬಾಣಲೆಯನ್ನೇ ಉಪಯೋಗಿಸಿದ್ದು! ಅದಕ್ಕಾಗಿಯೇ ಪಾತ್ರೆಯಂಗಡಿಯಿಂದ ಒಂದು ಹೊಸಾ ಬಾಣಲೆ ಖರೀದಿಸಿ ತಂದು ವೇದಿಕೆಯ ಮೇಲೆ ಪುಷ್ಪಗುಚ್ಛದ ಪಕ್ಕದಲ್ಲೇ ಇಟ್ಟು ಅದರೊಳಗೆ ಬಣ್ಣದಕಾಗದ ಹೊದಿಕೆಯಲ್ಲಿ ಪುಸ್ತಕಗಳ ಕಟ್ಟನ್ನಿಟ್ಟದ್ದು. ಪ್ರೊ।ಅ.ರಾ.ಮಿತ್ರ ಬಾಣಲೆಯಲ್ಲಿದ್ದ 'ವಿಚಿತ್ರಾನ್ನ'ವನ್ನು ಸೌಟಿಂದ ತೆಗೆದು, ಕಟ್ಟನ್ನು ತೆರೆದು (ಪುಸ್ತಕಬಿಡುಗಡೆಯ ಮಾಮೂಲಿ ಸಾಂಪ್ರದಾಯಿಕ ಕಟ್ಟುಪಾಡನ್ನು ತೊರೆದು...?) ಕನ್ನಡಸಾಹಿತ್ಯ ಸಮಾರಾಧನೆಯಲ್ಲಿ ಈ ಹೊಸದೊಂದು ಪ್ರಯೋಗವನ್ನು ವಿಭಿನ್ನವಾಗಿ ಅನಾವರಣಗೊಳಿಸಿದ್ದು; ತನ್ಮೂಲಕ 'ಬಾಣಲೆಯಿಂದ ಬೆಂಕಿಗೆ...' ಕಾನ್ಸೆಪ್ಟ್‌ ಸಾಕಾರಗೊಂಡದ್ದು!

ಪುಸ್ತಕ ಬಿಡುಗಡೆ ಸಮಾರಂಭದ ಇನ್ನೂ ಕೆಲವು 'ಝಲಕ್ಸ್‌' ಈ ವಾರದ ನಮ್ಮ ಸಾಮಗ್ರಿ.

* ಬೆಂಗಳೂರಿನಲ್ಲಿ ನಡೆದ ಈ ಸಮಾರಂಭದಲ್ಲಿ ಭಾಗವಹಿಸಲೆಂದೇ ನಮ್ಮೂರಿನಿಂದ (ಕಾರ್ಕಳ) ನಮ್ಮ ಅಮ್ಮನನ್ನೂ ಕರಕೊಂಡು ಬಂದಿದ್ದೆ. 'ಹೆತ್ತ ತಾಯಿಗೆ ಹೆಗ್ಗಣ ಮುದ್ದು...' ಗಾದೆಯಿದ್ದರೂ ಎಂದೂ ತನ್ನ ಮಕ್ಕಳ ಬಗ್ಗೆ ತಾವೇ ಹೇಳಿಕೊಂಡವರಲ್ಲ ಅವರು; ಈಗ 'ವಿಚಿತ್ರಾನ್ನ ಭಟ್ಟ'ನಾಗಿ ತನ್ನ ಮಗ ಗಳಿಸಿರುವ ಸ್ನೇಹಜಾಲದ ಒಂದು ನೋಟವನ್ನು ಕಂಡು ಅವರು ಧನ್ಯರಾಗಿರಬೇಕು.

* ಪುಸ್ತಕ ಬಿಡುಗಡೆ ಸಮಾರಂಭ ಎನ್ನುವುದಕ್ಕಿಂತಲೂ ಒಂದು ಸ್ನೇಹಕೂಟ ಎಂದು ಕರೆಸಿಕೊಳ್ಳಬಹುದಾದ ಸಮಾರಂಭಕ್ಕೆ ಬಂದವರೆಲ್ಲರೂ ಮಿತ್ರರೇ. ಈ-ಮಿತ್ರ, ಆ-ಮಿತ್ರ... ವೇದಿಕೆಯ ಮೇಲೆ ಪ್ರೊ। ಅ.ರಾ ಮಿತ್ರ!

* ವೇದಿಕೆಯ ಮೇಲೆ ಮುಖ್ಯ ಸಭಾ ಕಾರ್ಯಕ್ರಮ ಆರಂಭವಾಗುವ ಮೊದಲು ಅದಕ್ಕಿಂತಲೂ ಮುಖ್ಯ ಕಾರ್ಯಕ್ರಮ ಚಹ-ಕಾಫಿ ಮತ್ತು ಲಘು (ಬೆಂಗಳೂರು ಸ್ಪೆಷಲ್‌ ಖಾರಾಭಾತ್‌ ಮತ್ತು ಜಹಂಗೀರ್‌) ಉಪಾಹಾರ ಸೇವನೆ. ಮಳೆಗಾಲವಾದರೂ ಅಂದು ಸಂಜೆ ಮಳೆಬೀಳದೆ ಹೊಂಬಿಸಿಲು ಇದ್ದುದರಿಂದ ಹೊರಾಂಗಣದಲ್ಲೇ ಈ ಉಪಚಾರದ ವ್ಯವಸ್ಥೆಗೆ ಅನುಕೂಲವಾಯಿತು.

* ಕೆಲ ತಿಂಗಳುಗಳ ಹಿಂದೆಯಷ್ಟೆ ರತ್ನಮಾಲಾಪ್ರಕಾಶ್‌ ಅವರೊಂದಿಗೆ ಅಮೆರಿಕಪ್ರವಾಸ ಕೈಗೊಂಡಿದ್ದ ಮಾಲತಿಶರ್ಮಾ (ಬೆಂಗಳೂರು ವಿವಿಧಭಾರತಿಯ ಚಿರಪರಿಚಿತ ಧ್ವನಿ) ನ್ಯೂಜೆರ್ಸಿಯಲ್ಲಿ, ವಾಷಿಂಗ್ಟನ್‌ನಲ್ಲಿ ಅವರ ರಸಮಂಜರಿ ಕಾರ್ಯಕ್ರಮಗಳ ವೇಳೆ ನನಗೆ ವೈಯಕ್ತಿಕವಾಗಿ ಭೇಟಿ/ಪರಿಚಯವಾಗಿದ್ದರು. ಆಗಸ್ಟ್‌ ತಿಂಗಳಲ್ಲಿ ನನ್ನ ಭಾರತಯಾತ್ರೆ, ಪುಸ್ತಕಬಿಡುಗಡೆ ಸಮಾಚಾರವನ್ನು ಆಗಲೇ ಅವರಿಬ್ಬರಿಗೂ ತಿಳಿಸಿದ್ದೆ. ಅನಿವಾಸಿ ಕನ್ನಡಿಗನೊಬ್ಬ ಕನ್ನಡಪುಸ್ತಕವನ್ನು ಬರೆದು ಬೆಂಗಳೂರಿಗೆ ಬಂದು ಪ್ರಕಟಿಸುತ್ತಿರುವ ಸುದ್ದಿಕೇಳಿ ಸಂತಸಗೊಂಡಿದ್ದ ಮಾಲತಿಶರ್ಮಾ ಆಗಲೇ - ಜೋಶಿಯವರೇ, ನಿಮ್ಮ ಪುಸ್ತಕಬಿಡುಗಡೆ ಸಮಾರಂಭವನ್ನು ಬೆಂಗಳೂರಲ್ಲಿ ನಾನೇ ನಿರ್ವಹಿಸುತ್ತೇನೆ ಎಂದಿದ್ದರು. ಅವರ ಆ ಪ್ರೀತಿಪ್ರೋತ್ಸಾಹಗಳಿಗೆ ಆಭಾರಿಯಾಗಿಯೇ ನಾನು ಕಾರ್ಯಕ್ರಮದ ನಿರೂಪಕಿಯಾಗಿ ಬರುವಂತೆ ಅವರನ್ನು ಆಹ್ವಾನಿಸಿದ್ದೆ. ತನ್ನ ಎಂದಿನ ಶೈಲಿಯಲ್ಲೇ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿಕೊಟ್ಟರು ಮಾಲತಿಶರ್ಮಾ. ರತ್ನಮಾಲಾ ಪ್ರಕಾಶ್‌ ಸಹ ಸಮಾರಂಭಕ್ಕೆ ಆಗಮಿಸಿದ್ದರು.

* ಸಭಾ ಕಾರ್ಯಕ್ರಮದ ಶುಭಾರಂಭವಾದದ್ದು ಕು। ಆರ್‌ ಶ್ರುತಿ (ಮಾಲತಿಯವರ ಶಿಷ್ಯೆ) ಸುಶ್ರಾವ್ಯವಾಗಿ ಹಾಡಿದ ಸರಸ್ವತಿ ಪ್ರಾರ್ಥನೆಯಾಂದಿಗೆ.

* ಕೃತಿ ಪರಿಚಯ ಮಾಡುತ್ತ ಮಾತಾಡಿದ (ಸಂತಸದಿಂದ ಗರ್ಜಿಸಿದ?) ಸಿ.ಆರ್‌ ಸಿಂಹ, ವಿಚಿತ್ರಾನ್ನ ಪುಸ್ತಕದ ಪರಿವಿಡಿ(ಪರಿಸಿಂಚನ)ದಲ್ಲಿನ 126 ಶೀರ್ಷಿಕೆಗಳೇ ಒಂದು ರಸಗವಳ ಇದ್ದಂತಿವೆ ಎಂದರು. ರಸಾಯನಶಾಸ್ತ್ರವೂ ರಾಮಾಯಣವೂ ಸಂಚಿಕೆಯ ಒಂದು ಭಾಗವೂ ಸೇರಿದಂತೆ ಪುಸ್ತಕದಲ್ಲಿ ತನಗಿಷ್ಟವಾದ ಕೆಲ ಸಂಗತಿಗಳನ್ನು ಓದಿ ಹೇಳಿದರು. ಟಾಂಪಾದಲ್ಲಿ ರಾಗಿಮುದ್ದೆ ಬಾಳ್ಕಮೆಣ್ಸಿನ... ಅಧ್ಯಾಯವನ್ನೋದಿಯಂತೂ ಬಾಯಲ್ಲಿ ನೀರೂರಿ ಮನೆಯಲ್ಲಿದ್ದ ಬಾಳ್ಕಮೆಣ್ಸನ್ನು ಕರೆಸಿ (ಅಂದರೆ ಎಣ್ಣೆಯಲ್ಲಿ ಕರಿದುಕೊಡುವಂತೆ ಹೆಂಡತಿಯ ಬಳಿ ಹೇಳಿ) ತಿಂದು ಆನಂದಿಸಿದೆ, ಅಂಥ ಸ್ಟಿಮ್ಯುಲೇಟಿಂಗ್‌ ಈ ವಿಚಿತ್ರಾನ್ನ ಎಂದು ಅಭಿಪ್ರಾಯಪಟ್ಟರು.

* An editor should be rarely seen, he should be occasionally heard, but widely read... ಎಂಬ ಉಕ್ತಿಯಾಂದಿಗೆ ಮಾತನ್ನಾರಂಭಿಸಿದ ವಿಶ್ವೇಶ್ವರ ಭಟ್‌ ತಾನು ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ, ಭಾಷಣ ಬಿಗಿಯುವುದು ಮತ್ತೂ ಕಡಿಮೆ ಆದರೆ ವಿಚಿತ್ರಾನ್ನದ ಜೋಶಿಯವರ ಸ್ನೇಹದ ಕರೆಯಿಂದಾಗಿ ಈ ಒಂದು ಆತ್ಮೀಯ ಸಮಾರಂಭದಲ್ಲಿ ಪಾಲ್ಗೊಂಡಿದ್ದೇನೆ, ಇಲ್ಲಿನ ಉಲ್ಲಾಸದ ಒಟ್ಟಂದವನ್ನು ಕಂಡು ಖುಶಿಪಟ್ಟಿದ್ದೇನೆ ಎಂದರು.

* ಸಾಫ್ಟ್‌ವೇರ್‌ ಇಂಜನಿಯರಿಂಗ್‌ ಕ್ಷೇತ್ರಕ್ಕೆ ಒಂದೊಮ್ಮೆ ಧುಮುಕಿರದಿದ್ದರೆ ಜೋಶಿಯವರು ಪ್ರಾಯಶಃ ಒಬ್ಬ ಒಳ್ಳೆಯ ಪತ್ರಕರ್ತನಾಗಿ, ಪತ್ರಿಕಾಸಂಪಾದಕನಾಗಿ ಹೆಸರುವಾಸಿಯಾಗುತ್ತಿದ್ದರೋ ಏನೊ, ಆ ಮಟ್ಟಿನ ಪ್ರತಿಭೆ ಲವಲವಿಕೆ ಅವರಲ್ಲಿದೆ... ಎಂಬ ಗುಣಗಾನ - ವಿಚಿತ್ರಾನ್ನ ಅಡಿಗೆಭಟ್ಟನ ಬಗ್ಗೆ - ವಿಶ್ವೇಶ್ವರ ಭಟ್ಟರಿಂದ. ಆ ಗುಣಗಾನ ಸ್ವಲ್ಪ ಜಾಸ್ತಿ ಭಾರದ್ದೇ ಆದರೂ ಮತ್ತು ಅಷ್ಟೊಂದಕ್ಕೆ ನಾನು ಅರ್ಹನಲ್ಲವಾದರೂ ನನಗೊಂದೇ ಸಮಾಧಾನವೆಂದರೆ ವಿಶ್ವೇಶ್ವರ ಭಟ್‌ ನನ್ನ ಈ ಅಲ್ಪ ಬರವಣಿಗೆಯನ್ನು 'ಸಾಹಿತ್ಯ' ಎಂಬ ಹಣೆಪಟ್ಟಿಗಿಂತ ನನ್ನಿಷ್ಟದ 'ಪತ್ರಿಕಾರಂಗ'ಕ್ಕೆ ಹೇಳಿಮಾಡಿಸಿದ ಬರಹಗಳು ಎಂದು ಸರಿಯಾಗಿಯೇ ಗುರುತಿಸಿದ್ದು.

* ಪ್ರೊ।ಮಿತ್ರ ಅವರು ಸಮಾರಂಭದ ಮೊದಲ ಭಾಗವಾಗಿಯೇ ಪುಸ್ತಕ ಬಿಡುಗಡೆ ಮಾಡಿದರಾದರೂ ಅವರು ಸಮಾರಂಭದ ಅಧ್ಯಕ್ಷರೂ ಆದ್ದರಿಂದ ಅವರ ಭಾಷಣ ಕೊನೆಗೆ ಇತ್ತು. ಅದಕ್ಕೆ ಮೊದಲು ಸಿ.ಆರ್‌.ಸಿಂಹ ಮತ್ತು ವಿಶ್ವೇಶ್ವರ ಭಟ್‌ ಅವರಿಂದ ರಸಾಳವಾದ ಭಾಷಣಗಳು. ಅವರಿಬ್ಬರ ಮಾತುಗಳಾದ ಮೇಲೆ ತಾನು ಮಾತಾಡುವುದು ಹೆಚ್ಚೇನೂ ಉಳಿದಿಲ್ಲ ಎಂದು ಮಿತ್ರ ಅವರು ಹೇಳಿದ್ದು ಹೇಗೆ ಗೊತ್ತೇ? 'ನಾನು ಭಾಷಣಮಾಡಲಿಕ್ಕೆಂದು ಬರೆದು ತಂದಿದ್ದ ಚೀಟಿಯನ್ನು ಕದ್ದು ಪಾಲು ಮಾಡಿಕೊಂಡು ಇವರಿಬ್ಬರೂ (ಸಿಂಹ + ಭಟ್‌) ಭರ್ಜರಿ ಭಾಷಣ ಹೊಡೆದದ್ದರಿಂದ ಈಗ ನಾನು ಹೇಳುವುದೇನೂ ಉಳಿದಿಲ್ಲ'! ಅದು ಅ.ರಾ.ಮಿತ್ರ ಟಿಪಿಕಲ್‌ ನಗೆಬಾಂಬ್‌. ಸಭೆಯಿಡೀ ಗೊಳ್ಳೆಂದು ನಗು, ಚಪ್ಪಾಳೆ. ಅವರ ಭಾಷಣದುದ್ದಕ್ಕೂ ನಡುನಡುವೆ ಇಂಥ ನಗೆಬಾಂಬ್‌ಗಳು ಸಿಡಿಯುತ್ತಲೇ ಇದ್ದುವು.

* 'ವಾರ್ತೆಗಳು... ಓದುತ್ತಿರುವವರು...' ಸಂಚಿಕೆಯಿಂದ ಮೊದಲ್ಗೊಂಡು ವಿಚಿತ್ರಾನ್ನ ಬೀಸಣಿಗೆಯಾದ ದೂರದರ್ಶನ ವಾರ್ತಾವಾಚಕಿ ಸರಸ್ವತಿ ವಟ್ಟಂ ಸಹ ಪುಸ್ತಕಬಿಡುಗಡೆ ಸಮಾರಂಭಕ್ಕೆ ಬಂದಿದ್ದರು.

* ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ಬಿಲ್ಡಿಂಗ್‌ನಲ್ಲಿ ಚಾರಿತ್ರಿಕವಾದ ಸಭಾಂಗಣವಲ್ಲದೆ ಈಗ ಹೊಸದಾಗಿ, ಮಹಡಿಯ ಮೇಲೆ ಒಂದು ಪುಟ್ಟದಾದ ಸಭಾಂಗಣವನ್ನು ನಿರ್ಮಿಸಿದ್ದಾರೆ. ಸುಮಾರು 100-120 ಮಂದಿಗೆ ಸ್ಥಳಾವಕಾಶದ ಈ ಹೊಸ ಹಾಲ್‌ನಲ್ಲಿ (ಮನೋರಮ ಹಾಲ್‌ ಎಂದು ಹೆಸರು) ವಿಚಿತ್ರಾನ್ನ ಸಮಾರಂಭ ನಡೆದದ್ದು. ಹಾಲ್‌ ಚಿಕ್ಕದಾದ್ದರಿಂದ ಕೊನೆಗೂ ಏನಾಯ್ತೆಂದರೆ ವಿಚಿತ್ರಾನ್ನ ಕುಕ್ಕಿನ ಸಮಾರಂಭಕ್ಕೆ ಕಿಕ್ಕಿರಿದ ಸಭೆ ಎಂದು ಪ್ರಾಸಬದ್ಧವಾಗಿ ಹೇಳುವಂತಾಯಿತು!

* ಕನ್ನಡದ ಮಟ್ಟಿಗೆ 'ಡಾಟ್‌ ಕಾಮ್‌' ಮತ್ತು 'ಎಸ್ಕೆ ಶಾಮ್‌' ನಿತ್ಯಸಂಬಂಧಿಅವ್ಯಯಗಳಿದ್ದಂತೆ. ಅಷ್ಟಾದರೂ ಡಾಟ್‌ ಕಾಮ್‌, ದಟ್ಸ್‌ ಕನ್ನಡ, ವಿಚಿತ್ರಾನ್ನ, ಇವೆಲ್ಲ ಕೇಳಿ/ನೋಡಿ ಗೊತ್ತಿರುವವರಿಗೂ ಶಾಮ್‌ ಎಂದರೆ ಯಾರು? ಗೊತ್ತಿಲ್ಲ! ಅಸಲಿಗೆ ದಟ್ಸ್‌ಕನ್ನಡ.ಕಾಮ್‌ ಅನ್ನೋದು ಕನ್ನಡರಾಜಧಾನಿ ಬೆಂಗಳೂರಿಂದ ಪ್ರಸರಣಗೊಳ್ಳುತ್ತದೆ ಎಂಬ ವಿಚಾರವೇ ಬಹುಮಂದಿಗೆ ಗೊತ್ತಿಲ್ಲ! ಮೊನ್ನೆಯ ಸಮಾರಂಭದಲ್ಲೂ ಅಷ್ಟೇ, ಎಲ್ಲ ಭಾಷಣಕಾರರೂ ಶಾಮೋಪಾಖ್ಯಾನ ಮಾಡಿದರು, ಆದರೆ ಯಾರು ಶಾಮ್‌? ಅದಕ್ಕೇ ಕಾರ್ಯಕ್ರಮದ ಕೊನೆಯಲ್ಲಿ ಶಾಮ್‌ ಸಹ ವೇದಿಕೆಗೆ ಬಂದು ಒಂದೇಒಂದು ನಿಮಿಷದ ಚಿಕ್ಕ-ಚೊಕ್ಕ ಭಾಷಣ ಬಿಗಿದದ್ದು ಅತಿ ಸೂಕ್ತವಾಯಿತು.

* ಕನ್ನಡಿಗರು ದುಡ್ಡುಕೊಟ್ಟು ಪುಸ್ತಕ ಕೊಳ್ಳುವುದಿಲ್ಲ... ಎಂಬ ಮಾತು ವಿಚಿತ್ರಾನ್ನಪ್ರಿಯ ಕನ್ನಡಿಗರಿಗೆ ಅನ್ವಯವಾಗುವುದೇ ಇಲ್ಲ. ಯಾಕೆಂದರೆ ಪುಸ್ತಕಬಿಡುಗಡೆಯ ದಿನದ ವಿಶೇಷ ರಿಯಾಯಿತಿಯೂ ಇದ್ದುದರಿಂದ ಮೊದಲು ತಂದಿಟ್ಟಿದ್ದ ಪುಸ್ತಕಪ್ರತಿಗಳೆಲ್ಲ ಬಿಸಿಬಿಸಿ ದೋಸೆಯಂತೆ ಖರ್ಚಾದುವು. ಮಾತ್ರವಲ್ಲ, ಪುಸ್ತಕಗಳ ಇನ್ನೊಂದು ಕಟ್ಟು ಸಮಾರಂಭದ ಸ್ಥಳಕ್ಕೆ ಬರುವ ವರೆಗೆ ಕೆಲ ಗಿರಾಕಿಗಳು, 'ಕಾಯುವಿಕೆಗಿಂತನ್ಯ ತಪವು ಇಲ್ಲ...' ಎನ್ನಬೇಕಾಯಿತು. ಬಹುಶಃ ಅಲ್ಲಿ ನಾವು ಸ್ವಲ್ಪ 'ಅಂಡರ್‌ ಎಸ್ಟಿಮೇಟ್‌' ಮಾಡಿದಂತಾಯ್ತು. ಪುಸ್ತಕ ಕೊಂಡವರಿಗೆ ಖುಶಿಯೋ ಖುಶಿ. ಲೇಖಕರ ಹಸ್ತಾಕ್ಷರ, ಜತೆಯಲ್ಲೇ ಅ.ರಾ.ಮಿತ್ರ, ಸಿ.ಆರ್‌.ಸಿಂಹರ ಹಸ್ತಾಕ್ಷರವನ್ನೂ ಪುಸ್ತಕದ ಮೇಲೆ ಪಡೆದ ಸಂಭ್ರಮ.

* ವಿಚಿತ್ರಾನ್ನದ ಪ್ರಪ್ರಥಮ ಸಂಚಿಕೆಯಿಂದ ಆರಂಭಿಸಿ ಒಂದೂ ತಪ್ಪದೇ ಎಲ್ಲ ಅಧ್ಯಾಯಗಳನ್ನು ಈಗಾಗಲೇ ದಟ್ಸ್‌ಕನ್ನಡದಲ್ಲಿ ಓದಿರುವವರೂ ಪುಸ್ತಕ ಕೊಂಡುಕೊಂಡಿದ್ದಾರೆ. ಯಾಕಿರಬಹುದು? ಕಾರಣ ಸರಳ. ಅಂತರ್ಜಾಲ ಪತ್ರಿಕೆಯೆಂದ ಮೇಲೆ ಕಂಪ್ಯೂಟರ್‌ ಪರದೆಯ ಮೇಲೆ ಮೂಡಿದ್ದನ್ನೇ ಓದಬೇಕಾಗಿ ಬರುವುದರಿಂದ ಅನುಕೂಲಗಳಿದ್ದಷ್ಟೇ ತೊಂದರೆಗಳೂ ಇವೆ. ಕಂಪ್ಯೂಟರ್‌ ಪರದೆಯ ಮೇಲಿನ ಸಾಹಿತ್ಯಕೃತಿ ಅದೆಷ್ಟೇ ರಸವತ್ತಾಗಿದ್ದರೂ, ಪುಸ್ತಕ ಅಥವಾ ದಿನಪತ್ರಿಕೆಯನ್ನು ಕೈಯಲ್ಲಿ ಹಿಡಿದು ಆರಾಮಕುರ್ಚಿಯ ಮೇಲೆ ಕುಳಿತು ಓದಿದಂತೆ, ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಓದಿದಂತೆ, ನಿದ್ದೆಹೋಗುವ ಮುನ್ನ ಹತ್ತಾರು ಪುಟ ಓದಿಯೇ ಮಲಗುವ ಅಭ್ಯಾಸವುಳ್ಳವರ ಓದಿನಂತೆ ಓದಿ ಆನಂದಿಸಲಿಕ್ಕಾಗದು. ಅಂತಹ ಓದಿನ ರಸಾನುಭವಕ್ಕೂ ದಕ್ಕಲಿ ಎಂದೇ ಪುಸ್ತಕರೂಪದಲ್ಲಿ ವಿಚಿತ್ರಾನ್ನ ಸವಿಯುವ ಹಂಬಲ.

* ಒಟ್ಟಿನಲ್ಲಿ ಎಲ್ಲರ ಅಭಿಪ್ರಾಯವೆಂದರೆ ಸಮಾರಂಭ ತುಂಬ ಚೆನ್ನಾಗಿ, ಅತ್ಮೀಯ ವಾತಾವರಣದಲ್ಲಿ, ಲಘುಬಗೆಯ ಕ್ಷಣಗಳಿಂದ ತುಂಬಿ ನಡೆಯಿತು. ಭಾಗವಹಿಸಿದವರಿಗೂ ಆಯೋಜಕರಿಗೂ ಸಮಪ್ರಮಾಣವಾಗಿ ಸಂತೃಪ್ತಿಯಾಯಿತು ಎನ್ನುವುದು ಷರಾ.

* * *

ಬೆಂಗಳೂರಿನಲ್ಲಿ, ಕರ್ನಾಟಕದಲ್ಲಿ, ಭಾರತದಲ್ಲಿ, ಪ್ರಪಂಚದ ಮೂಲೆಮೂಲೆಯಲ್ಲಿ ವಿಚಿತ್ರಾನ್ನ ಪುಸ್ತಕದ ಲಭ್ಯತೆಯನ್ನು ಕಲ್ಪಿಸುವ ಬಗ್ಗೆ, ಅದರ ಲಾಜಿಸ್ಟಿಕ್ಸ್‌ ಬಗ್ಗೆ ಏರ್ಪಾಡು ನಡೆಯುತ್ತಿದೆ. ಈಬಗ್ಗೆ ಪ್ರಕಟಣೆಯನ್ನೂ ಸದ್ಯದಲ್ಲೇ ನಿರೀಕ್ಷಿಸಬಹುದು. ಅಲ್ಲಿಯವರೆಗೆ, ವಿಚಿತ್ರಾನ್ನ ಅಂಕಣ, ಪುಸ್ತಕ ಮತ್ತೆಲ್ಲ ವಿಚಾರ ಸಮಾಚಾರ ವಿನಿಮಯಕ್ಕಾಗಿ ನಿಮಗೆ ಗೊತ್ತೇ ಇರುವ ವಿಳಾಸ ಇಲ್ಲಿದೆ

English summary
Vichitranna published as a column in ThatsKannada.com has come in the book form. Book was released by Prof.A.R. Mitra in Bangalore on 13th of August. Some notes from the author.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X