ಹೊಸತಿನ ಬಿರುಗಾಳಿಯಲ್ಲಿ ಅಳಿಯುತ್ತಿರುವ ಅಪೂರ್ವ ಕಲೆ!

By: ವಸಂತ ಕುಲಕರ್ಣಿ, ಸಿಂಗಪುರ
Subscribe to Oneindia Kannada

ಹಳೆಯ ವರ್ಷವೊಂದು ನಿವೃತ್ತಿ ಹೊಂದಿ ಹೊಸ ವರ್ಷವೊಂದು ಆ ಸ್ಥಾನವನ್ನು ಅಲಂಕರಿಸಿದೆ. ಕಳೆದ ವರ್ಷವನ್ನು ನೆನೆಯುತ್ತ ನಮ್ಮಲ್ಲನೇಕರು ಮುಗಿದು ಹೋದ ಅನೇಕ ಆಗು ಹೋಗುಗಳ ಬಗ್ಗೆ, ಏರು ಬೀಳುಗಳ ಬಗ್ಗೆ ಮೆಲುಕು ಹಾಕಿರಬಹುದು. ಜೀವನದ ರೋಲರ್ ಕೋಸ್ಟರ್ ಸವಾರಿಯಲ್ಲಿ ಕಳೆದ ಕ್ಷಣಗಳನ್ನು ಕುರಿತು ವಿಚಾರಿಸಿರಬಹುದು.

ಇಂತಹ ಅಂತರ್ಮಥನ ನಮ್ಮನ್ನು ನಾವು ಹಿಡಿದಿರುವ ಹಾದಿಯ ಕುರಿತು, ನಮ್ಮ ಜೀವನ ಲಕ್ಷ್ಯಗಳನ್ನು ಕುರಿತು ಹಾಗೂ ನಮ್ಮ ಜೀವನ ವಿಧಾನದ ಬಗ್ಗೆ ವಿಚಾರಿಸಲು ಹಾಗೂ ಅದನ್ನು ಸರಿಪಡಿಸಲು, ಬದಲಿಸಲು ಸಹಾಯ ಮಾಡುತ್ತದೆ ಎಂದುಕೊಳ್ಳುತ್ತೇನೆ.

ಹೊಸವರ್ಷದಲ್ಲಿ ನಮ್ಮಲ್ಲನೇಕರು ಬುದ್ಧಿಪೂರ್ವಕವಾಗಿ ಸಂಕಲ್ಪಗಳನ್ನು ಮಾಡದೇ ಇರಬಹುದು. ಆದರೆ ನಮ್ಮ ಜೀವನದಲ್ಲಿ ನಡೆದ ಆಗು ಹೋಗುಗಳ ಬಗ್ಗೆ ಮೆಲುಕು ಹಾಕುವುದರಿಂದ ಅಪ್ರಯತ್ನಪೂರ್ವಕವಾಗಿ ಕೆಲವು ಸಂಕಲ್ಪಗಳನ್ನು ಮಾಡಿಕೊಳ್ಳಬಹುದು.

ಈಗಂತೂ ನಾವು ವರ್ಷದಲ್ಲಿ ಎರಡು ಬಾರಿ ಈ ರೀತಿಯಾಗಿ ಯೋಚಿಸಬಹುದು ಅಲ್ಲವೆ? ಒಂದು ಈ ಜಾಗತಿಕ ಕ್ಯಾಲೆಂಡರ್ ಪ್ರಕಾರ ಬರುವ ಜನವರಿಯ ಹೊಸ ವರ್ಷ. ಮತ್ತೊಂದು ಏಪ್ರಿಲ್ ತಿಂಗಳಿನಲ್ಲಿ ಬರುವ ನಮ್ಮ ಯುಗಾದಿ! ಇನ್ನು ಸಿಂಗಪುರದಲ್ಲಿರುವ ನಾವು ಜನವರಿಯ ಕೊನೆ ಅಥವಾ ಫೆಬ್ರವರಿಯ ಆರಂಭದಲ್ಲಿ ಬರುವ ಚೀನೀಯರ ಹೊಸವರ್ಷವನ್ನು ಕೂಡ ಈ ಪಟ್ಟಿಗೆ ಸೇರಿಸಬಹುದು! [ಹೊಸವರ್ಷಕ್ಕೆ ಒಂದಷ್ಟು ತಮಾಷೆಯ ಸಂಕಲ್ಪಗಳು!]

What is your resolution for the new year?

ಒಟ್ಟಿನಲ್ಲಿ ಪುನರ್ವಿಮರ್ಶೆ ಮಾಡಿಕೊಳ್ಳಲು ಹಲವು ಸಂದರ್ಭಗಳು. ನಿಜ ಹೇಳಬೇಕೆಂದರೆ ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು ಹೊಸ, ಒಳ್ಳೆಯ ಸಂಕಲ್ಪಗಳನ್ನು ಮಾಡಲು ಹೊಸ ವರ್ಷವೇ ಬರಬೇಕಾಗಿಲ್ಲ. ಆದರೂ ಈ ಹೊಸ ವರ್ಷ ನಮ್ಮಲ್ಲನೇಕರನ್ನು ಈ ದಿಶೆಯಲ್ಲಿ ಯೋಚಿಸಲು ಪ್ರೇರೇಪಿಸುತ್ತದೆ ಅಲ್ಲವೇ?

ಕಳೆದ ವರ್ಷದಲ್ಲಿ ನನ್ನ ಬದುಕಿನಲ್ಲಿ ಕೆಲವು ಅಪೂರ್ವ ಪ್ರಸಂಗಗಳಾದವು. ಅಂತಹ ಒಂದು ಅಪರೂಪದ ಪ್ರಸಂಗ ನವೆಂಬರ್ ತಿಂಗಳಲ್ಲಿ ನಡೆಯಿತು. ಆ ದಿನ ಹೊಸ ವರ್ಷವಲ್ಲದಿದ್ದರೂ ನನ್ನನ್ನು ಆತ್ಮಾವಲೋಕನ ಮಾಡಲು ಪ್ರೇರೇಪಿಸಿತು. ಮಿತ್ರರಾದ ಗಿರೀಶ್ ಜಮದಗ್ನಿ ಏರ್ಪಡಿಸಿದ್ದ ಗಮಕ ವಾಚನ ಕಾರ್ಯಕ್ರಮ. ಅವರ ವಯೋವೃದ್ಧರಾದ ತಂದೆ ಎಚ್ ಎಸ್ ಸತ್ಯನಾರಾಯಣ ಖ್ಯಾತ ಗಮಕಿ. ಎಂಭತ್ತೈದರ ಇಳಿ ವಯಸ್ಸಿನಲ್ಲಿ ಕೂಡ ಅಲ್ಲಿ ನೆರೆದಿದ್ದ ಮೂರು ತಲೆಮಾರುಗಳ ಮುಂದೆ ಅತ್ಯುತ್ಸಾಹದಿಂದ ಕುಮಾರ ವ್ಯಾಸನ ಭಾರತದ "ಶ್ರೀ ಕೃಷ್ಣ ಸಂಧಾನ"ದ ಪ್ರಸಂಗದ ಆಯ್ದ ಭಾಗವನ್ನು ವಾಚನ ಮಾಡಿದರು. [ಜನಪ್ರಿಯ 25 ಹೊಸ ವರ್ಷದ ರೆಸಲೂಷನ್ಸ್]

What is your resolution for the new year?

ಸುಮಾರು ಎರಡು ಗಂಟೆಗಳ ಈ ಕಾರ್ಯಕ್ರಮ ಮುಗಿಯುವವರೆಗೆ ಸಭಿಕರೆಲ್ಲರೂ ಮೈಯೆಲ್ಲ ಕಿವಿಯಾಗಿ, ಆಸಕ್ತಿಯಿಂದ ಕೇಳುತ್ತಿದ್ದರು. ನನಗಂತೂ ಎರಡು ಗಂಟೆ ಹೇಗೆ ಕಳೆಯಿತೋ ಗೊತ್ತೇ ಆಗಲಿಲ್ಲ. ಅವರು ಇಡೀ ಪ್ರಸಂಗವನ್ನು ವಿಶ್ಲೇಷಿಸಿದ ಬಗೆ, ಕುಮಾರವ್ಯಾಸನ ಕನ್ನಡದ ಶ್ರೀಮಂತಿಕೆಯನ್ನು, ರೂಪಕ ಚಕ್ರವರ್ತಿ ಎಂದು ಹೆಸರಾದ ಅವನ ಕಾವ್ಯ ವೈಭವವನ್ನು ವರ್ಣಿಸಿದ ರೀತಿ ಮತ್ತು ಈ ಕಥೆಯ ಭಾಗವನ್ನು ಬಿಡಿಸಿ ಹೇಳಿದ ಕೌಶಲ ಮುಂದೆ ಅನೇಕ ದಿನಗಳವರೆಗೆ ಮೆಲುಕು ಹಾಕುವಂತಹದಾಗಿತ್ತು.

ಎಚ್ ಎಸ್ ಸತ್ಯನಾರಾಯಣ ಅವರು ಹೇಗೆ ಕಠಿಣವಾದ ಗಮಕ ಕಲೆಯನ್ನು ತಮ್ಮ ನಿವೃತ್ತಿಯ ನಂತರ ಅಭ್ಯಾಸ ಮಾಡಿದರು ಮತ್ತು ಕಾರ್ಯಕ್ರಮಗಳನ್ನು ಕೊಡುವಷ್ಟು ಪ್ರಾವೀಣ್ಯತೆ ಪಡೆದುಕೊಂಡರು ಎಂಬುದನ್ನಲ್ಲದೇ ಈ ವಯಸ್ಸಿನಲ್ಲಿ ಕೂಡ ಅನೇಕರಿಗೆ ಕಲಿಸುತ್ತಿದ್ದಾರೆ ಎಂಬುದನ್ನು ಕೇಳಿದಾಗ ಅಚ್ಚರಿಯುಂಟಾಯಿತು. ಗಮಕ ಕಲೆಯನ್ನು ಕರಗತ ಮಾಡಿ ಕೊಳ್ಳಬೇಕಾದರೆ, ಸಾಹಿತ್ಯ ಮತ್ತು ಕರ್ನಾಟಕ ಸಂಗೀತಗಳೆರಡರಲ್ಲೂ ಪ್ರಾವೀಣ್ಯತೆ ಇರಬೇಕಾಗುತ್ತದೆ. ತಮ್ಮ ಚಿಕ್ಕಂದಿನ ಒಲವಾದ ಗಮಕ ಕಲೆಯನ್ನು ತಮ್ಮ ನಿವೃತ್ತಿಯ ನಂತರ ಕಲಿತದ್ದಲ್ಲದೇ ಇತರರಿಗೂ ಈ ಕಲೆಯನ್ನು ಹಂಚುತ್ತಿರುವ ಆ ಹಿರಿಯ ಜೀವವನ್ನು ನೋಡಿ ಮನಸ್ಸು ತುಂಬಿ ಬಂದಿತು. [ಕನಸುಗಳ ಸಾಕಾರಕ್ಕಾಗಿ ಹೊಸವರ್ಷದ ಸಂಕಲ್ಪ]

What is your resolution for the new year?

ನಾನು ಏಕೆ ಈ ಪ್ರಸಂಗವನ್ನು ಇಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆಂದರೆ, ಈ ಪ್ರಸಂಗ ನನ್ನಲ್ಲಿ ಎರಡು ಮುಖ್ಯ ಸಂಕಲ್ಪಗಳನ್ನು ಹುಟ್ಟು ಹಾಕಿತು. ಮೊದಲನೇಯದು ನಾನು ಆ ಕ್ಷಣದಿಂದಲೇ ನಾನು ಕನ್ನಡದ ಉತ್ತಮ ಕವನಗಳನ್ನು ಮತ್ತು ಸಾಧ್ಯವಾದರೆ ಮಹಾಕಾವ್ಯಗಳನ್ನು ಅಭ್ಯಸಿಸುವುದು ಮತ್ತು ಎರಡನೇಯದು ನಮ್ಮಲ್ಲಿ ನಶಿಸಿ ಹೋಗುತ್ತಿರುವ ಆದರೆ ಅದ್ಭುತ ಕಲೆಗಳಾದ ಗಮಕ ಮತ್ತು ಹರಿಕಥೆ (ಕೀರ್ತನ ಕಲೆ)ಗಳನ್ನು ಕುರಿತು ಅಭ್ಯಸಿಸುವುದು. ನಮ್ಮ ಮನೆಯಲ್ಲಿ ಕೂಡ ಕೀರ್ತನ ಕಲೆ ಇದೆ. ನನ್ನ ತಂದೆ ಕೂಡಾ ಕೀರ್ತನ ಕಲೆಯನ್ನು ಅಭ್ಯಸಿಸಿದ್ದಾರೆ. ಅಲ್ಲದೇ ಅನೇಕ ಕಡೆಗಳಲ್ಲಿ ಹರಿಕಥೆ ಹೇಳಿದ್ದಾರೆ. ನನ್ನ ಚಿಕ್ಕಂದಿನಲ್ಲಿ ನಮ್ಮೂರಿನಲ್ಲಿ ವಿಜೃಂಭಿಸುತ್ತಿದ್ದ ಕೀರ್ತನ ಕಲೆ ಇಂದು ನಶಿಸುತ್ತಿರುವುದನ್ನು ಕಣ್ಣಾರೆ ಕಾಣುತ್ತಿದ್ದೇನೆ.

ಮುಖ್ಯವಾಗಿ ಈ ಪ್ರಸಂಗ ನನ್ನನ್ನು ಕರ್ನಾಟಕ ಏಕೆ ಇಡೀ ಭಾರತದಲ್ಲಿರುವ ಇಂತಹ ಅಪೂರ್ವ ಕಲೆಗಳ ಸದ್ಯದ ಸ್ಥಿತಿಯ ಬಗ್ಗೆ ಒಮ್ಮೆ ವಿಚಾರಿಸುವಂತೆ ಪ್ರೇರೇಪಿಸಿತು. ಹೊಸತಿನ ಬಿರುಗಾಳಿಯಲ್ಲಿ ಮತ್ತದರ ವಿಚಿತ್ರ ಆಕರ್ಷಣೆಯಲ್ಲಿ ನಾವು ಇಂತಹ ಹಳೆಯ ಅಪೂರ್ವ ಕಲೆಗಳನ್ನು ಮತ್ತು ನಮ್ಮ ಸಂಸ್ಕೃತಿಯ ಅತ್ಯಮೂಲ್ಯ ಬಳುವಳಿಗಳನ್ನು ಕಳೆದುಕೊಳ್ಳುತ್ತಿದ್ದೇವೆಯೇ? ಹೊಸತನ್ನು ಸ್ವಾಗತಿಸುವ ಭರಾಟೆಯಲ್ಲಿ ಹಳೆಯದರ ಮಹತ್ತನ್ನು ನಾವು ಮರೆಯುತ್ತಿದ್ದೇವೆಯೆ? ಅಥವಾ ನವೀನ ಕಟ್ಟಡಗಳನ್ನು ಕಟ್ಟಲು ಹಳೆಯ ಬುನಾದಿಯನ್ನು ಹಾಳುಗೆಡವುತ್ತಿದ್ದೇವೆಯೆ? [ಶರಶೈಯೆಯಲ್ಲಿ ಪವಡಿಸಿದ ಭೀಷ್ಮ ಪ್ರತಿಜ್ಞೆ]

What is your resolution for the new year?

ನನಗನಿಸುವದೇನೆಂದರೆ, ನಮ್ಮ ಸಾಂಸ್ಕೃತಿಕ ಬಳುವಳಿಗಳನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ಕಲೆಗಳನ್ನು ನಾವು ಕಲಿತು ನಮ್ಮ ಮುಂದಿನ ಪೀಳಿಗಗಳಿಗೂ ಕಲಿಸುವ ಹೊಣೆ ಕೂಡಾ ನಮ್ಮ ಮೇಲಿದೆ.

ಅದಕ್ಕೆ ನಾವು ಸರಕಾರ ಅಥವಾ ಮತ್ಯಾರನ್ನೋ ಹೊಣೆಗಾರರನ್ನಾಗಿ ಮಾಡಿ ಮತ್ತೇನನ್ನೂ ಮಾಡಲಾರದೇ ಸಂಕಟಪಡುವುದಕ್ಕಿಂತ ಎಚ್ ಎಸ್ ಸತ್ಯನಾರಾಯಣ ಅವರ ಮೇಲ್ಪಂಕ್ತಿಯನ್ನು ಅನುಸರಿಸಿ ನಾವೇ ಈ ಕಲೆಗಳನ್ನು ಕಲಿಯಬೇಕು ಮತ್ತು ಕಲಿಸಬೇಕು. ಯುವ ಪೀಳಿಗೆಯನ್ನು ಕಲಿಯಲು ಪ್ರೋತ್ಸಾಹಿಸಬೇಕು. ಹಿಂದಿನಂತೆ ಪೀಳಿಗೆಗಳಿಂದ ಪೀಳಿಗೆಗಳಿಗೆ ನಮ್ಮ ಸಂಸ್ಕೃತಿ ಮತ್ತು ಕಲೆಗಳು ವರ್ಗವಾದರೆ, ನಮ್ಮ ಸಂಸ್ಕೃತಿ ನಷ್ಟವಾಗುವುದರ ಬಗ್ಗೆ ನಾವ್ಯಾರೂ ಚಿಂತಿಸಬೇಕಾಗಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
What is your resolution for the new year? Resolution can be taken up at any point of time. We may not resolve to do anything special. But, we should take this opportunity to think in a different way. Vasant Kulkarni narrates such an incident and writes about artist HS Satyanarayana.
Please Wait while comments are loading...