ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಅಂಕಣ : ಏನು ಬೇಕಾದ್ರೂ ಆಗಬಹುದು!

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

"ಕುಚ್ ಭೀ ಹೋ ಸಕ್ತಾ ಹೈ" ಎನ್ನುವುದು ಪ್ರಸಿದ್ಧ ನಟ ಅನುಪಮ್ ಖೇರ್ ಅವರ ಜನಪ್ರಿಯ ಟಿವಿ ರಿಯಾಲಿಟಿ ಶೋದ ಹೆಸರು. ಈ ರಿಯಾಲಿಟಿ ಶೋವನ್ನು ನಮ್ಮಲ್ಲಿ ಅನೇಕರು ನೋಡಿರಬಹುದು. ಇದರಲ್ಲಿ ಅನುಪಮ್ ಖೇರ್ ಕೆಲವು ಹೆಸರಾಂತ ಸಿನೆ ಕಲಾವಿದರನ್ನು ಕರೆದು ಅವರು ಜೀವನದಲ್ಲಿ ಕಂಡಿರುವ ಏಳು ಬೀಳುಗಳನ್ನು ಕುರಿತು ಮಾತನಾಡಿದ್ದರು. ಈ ಕಲಾವಿದರು ಅದು ಹೇಗೆ ಅನಾಮಧೇಯರಾಗಿ ಬಡತನದಲ್ಲಿ ಬದುಕಿದ್ದುಕೊಂಡು ಕೂಡ ಮುಂದೆ ತಮ್ಮ ಸತತ ಪ್ರಯತ್ನದಿಂದ ಪ್ರಸಿದ್ಧ ಕಲಾವಿದರಾಗಿ ಹೊರಹೊಮ್ಮಿದರು ಎಂಬುದರ ಮೇಲೆ ಕೇಂದ್ರೀಕರಿಸುವ ಈ ಪ್ರದರ್ಶನ, ಮುಖ್ಯವಾಗಿ ಜೀವನದಲ್ಲಿ ಧೈರ್ಯಗೆಡದೇ ಮುಂದುವರೆದರೆ ಏನು ಬೇಕಾದರೂ ಆಗಬಹುದು, ಆದುದರಿಂದ ಧೃತಿಗೆಡದೆ ಇರುವುದು ಮುಖ್ಯ ಎಂಬ ಧನಾತ್ಮಕ ಸಂದೇಶವನ್ನು ಹರಡುತ್ತದೆ.

ನಮ್ಮಂತಹ ಸಾಮಾನ್ಯ ಮನುಷ್ಯರು ಪ್ರಖ್ಯಾತಿಯ ತುಟ್ಟ ತುದಿಯನ್ನು ಮುಟ್ಟದಿರಬಹುದು. ಅನೇಕರಿಗೆ ಅದು ಬೇಡವಾಗಿರಬಹುದು ಕೂಡಾ. ಅಲ್ಲದೇ ಅನೇಕರಿಗೆ ಖ್ಯಾತಿ ಮತ್ತು ಶ್ರೀಮಂತಿಕೆ ಯಶಸ್ಸಿನ ಮಾನದಂಡವಾಗಿರದೇ ಇರಬಹುದು. ಆದರೆ ಯಾವುದು ನಮ್ಮ ಪಾಲಿಗೆ ಯಶಸ್ಸು ಎಂದುಕೊಳ್ಳುತ್ತೇವೋ ಅದು ಕೂಡಾ ನಾವು ಧೃತಿಗೆಡದೇ ಮುನ್ನುಗ್ಗಿ ಪ್ರಯತ್ನಿಸುವುದರಿಂದ ಮಾತ್ರ ದೊರಕುವುದು ಎಂಬುದು ಮಾತ್ರ ನಿಚ್ಚಳವಾದ ಸತ್ಯ ಅಲ್ಲವೇ?

ತುಪ್ಪದಲ್ಲೇ ಕೈತೊಳೆವ ಮನೆತನದಲ್ಲಿ ಹುಟ್ಟಿ, ವಿಧಿಯ ಹೊಡೆತಕ್ಕೆ ಸಿಲುಕಿ ಎಲ್ಲವನ್ನೂ ಕಳೆದುಕೊಂಡು ಅಮೇರಿಕದಲ್ಲಿ ಕಾರುಗಳನ್ನು ತೊಳೆಯುತ್ತಿದ್ದ ಶಿವ ಖೇರಾ ತಮ್ಮ ಸತತ ಪ್ರಯತ್ನದಿಂದ ಪ್ರಸಿದ್ಧರಾಗಿದ್ದು ತಮ್ಮ ಪ್ರೋತ್ಸಾಹಕ ಭಾಷಣಗಳಿಂದ ಮತ್ತು ತಮ್ಮ ವಿಶ್ವ ವಿಖ್ಯಾತ ಪುಸ್ತಕ "ಯೂ ಕೆನ್ ವಿನ್"ನಿಂದ. ಸಹಿಸಲಾಗದ ಕಡು ಬಡತನದಲ್ಲಿ ಅನಾಥರಾಗಿ ಬೆಳೆದು, ಪಿ ಎಚ್ ಡಿ ಓದಿ, ಕನ್ನಡದ ಖ್ಯಾತ ಕಾದಂಬರಿಕಾರರಾಗಿ ಜನಮನದಲ್ಲಿ ಸದಾ ಮನೆ ಮಾಡಿಕೊಂಡಿರುವ ಎಸ್ ಎಲ್ ಭೈರಪ್ಪ ಅವರ ಜೀವನ ಕೂಡ ಕನ್ನಡಿಗರಲ್ಲರಿಗೆ ಹೆಮ್ಮೆಯ ಮಾದರಿ ತಾನೆ?

Vasant Kulkarni, Singapore

ಕೈಕಾಲು ಕೂಡ ಅಲ್ಲಾಡಿಸಲಾಗದ, ಮಾತನಾಡಲೂ ಕೂಡ ಕಂಪ್ಯೂಟರ್ ಬಳಸುವ ಪ್ರೊ. ಸ್ಟೀಫನ್ ಹಾಕಿಂಗ್ಸ್ ವಿಶ್ವವನ್ನೇ ಅಲ್ಲಾಡಿಸುವ ವೈಜ್ಞಾನಿಕ ಸಿದ್ಧಾಂತಗಳ ಕರ್ತೃ ಎಂಬುದು ಆಶ್ಚರ್ಯಕರವಾದರೂ ಸತ್ಯ ಅಲ್ಲವೇ? ಇಪ್ಪತ್ತೇಳು ವರ್ಷಗಳನ್ನು ಕಾರಾಗೃಹದ ಕತ್ತಲ ಕೋಣೆಯಲ್ಲಿ ಕಳೆದು ಕೂಡ ದಕ್ಷಿಣ ಆಫ್ರಿಕದ ಅಧ್ಯಕ್ಷರಾಗಿ ತಮ್ಮನ್ನು ಕಾರಾಗೃಹದಲ್ಲಿಟ್ಟ ವರ್ಣಭೇದ ನೀತಿಯ ಬಿಳಿಯರನ್ನು ಕ್ಷಮಿಸಿ ರಾಷ್ಟ್ರದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸಿದ ನೆಲ್ಸನ್ ಮಂಡೇಲಾ ಅವರ ಜೀವನ ಕೂಡ ಅದ್ಭುತ ಅಲ್ಲವೇ?

ಈ ಎಲ್ಲ ಪ್ರಸಿದ್ಧರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತುಂಗವನ್ನು ತಲುಪಿದ್ದು ತಮ್ಮಲ್ಲಿದ್ದ ವಿಕ್ರಮಾದಿತ್ಯನ ಛಲದಿಂದ ಎಂಬುದು ಸರ್ವ ವಿದಿತ. ನಾವು ಇವರಷ್ಟು ದೊಡ್ಡ ಶಿಖರವನ್ನು ಏರದಿರಬಹುದು. ಆದರೆ ನಮ್ಮ ಗುರಿಯಾದ ಚಿಕ್ಕ ಪುಟ್ಟ ಬೆಟ್ಟಗಳನ್ನೇರಲು, ಸಾಮಾನ್ಯರಾಗಿದ್ದುಕೊಂಡು ಅಸಾಮಾನ್ಯರಾಗಿ ಬೆಳೆದ ಇವರ ಜೀವನ ನಮಗೆ ಮಾದರಿ ಮತ್ತು ಪ್ರೋತ್ಸಾಹಕಾರಿಯಾಗಬಹುದು ತಾನೇ?

ವಾಯುವ್ಯ ಕರ್ನಾಟಕದ ಕುಂದಾ ನಗರಿ ಬೆಳಗಾವಿಯಲ್ಲಿಯ ಹತ್ತು ಬೈ ಹತ್ತರ ಕೋಣೆಯನ್ನೇ ಮನೆಯಾಗಿಸಿಕೊಂಡು ನನ್ನ ತಂದೆ, ತಾಯಿ, ಅಣ್ಣ ಮತ್ತು ತಂಗಿಯರೊಡನೆ ನನ್ನ ಬಾಲ್ಯ ಮತ್ತು ಮೊದಲ ತಾರುಣ್ಯವನ್ನು ಸ್ವಲ್ಪ ಕೀಳರಿಮೆಯಿಂದಲೇ ಕಳೆದ ನನಗೆ ನನ್ನ ದೇಶವನ್ನು ಬಿಟ್ಟು ಹೊರಗೆ ಬಂದು ಅನುಭವ ಗಳಿಸುವ ಕನಸು ಕೂಡ ಬಂದಿರಲಿಲ್ಲ. ಆದರೆ ಎತ್ತೆತ್ತಲೋ ಕರೆದೊಯ್ದ ಕೆಲಸದ ಜವಾಬ್ದಾರಿ ನನ್ನನ್ನು ಕಳೆದ ಹದಿನಾಲ್ಕು ವರ್ಷಗಳಿಂದ ಸಿಂಗಪುರದಲ್ಲಿ ನೆಲೆಸುವಂತೆ ಮಾಡಿದ್ದು ಕೂಡ "ಕುಚ್ ಭೀ ಹೋ ಸಕ್ತಾ ಹೈ" ಅಲ್ಲವೇ?

ನಮ್ಮ ಮಗಳು ಕೊನೇ ಪಕ್ಷ ಎರಡನೇ ಕ್ಲಾಸು ಪಡೆದು ಪಾಸ್ ಆದರೂ ಆಗುತ್ತಾಳೋ ಇಲ್ಲವೋ ಎಂಬ ವಿಚಿತ್ರ ಆತಂಕದಲ್ಲಿದ್ದ ನಾನು ಮತ್ತು ನನ್ನ ಹೆಂಡತಿಗೆ, ತನ್ನ ಹತ್ತನೇ ತರಗತಿಯಲ್ಲಿ ಹತ್ತಕ್ಕೆ ಹತ್ತು ಸಿ ಜಿ ಪಿ ಎ ಅಂಕಗಳನ್ನು ಪಡೆದ ನನ್ನ ಮಗಳು, ನಮ್ಮಿಬ್ಬರಿಗೂ ತೋರಿಸಿದ್ದು "ಕುಚ್ ಭೀ ಹೋ ಸಕ್ತಾ ಹೈ" ಎಂಬ ಮುತ್ತಿನ ಮಾತುಗಳ ಮೋಡಿ.

ಬಹಳ ದಿನಗಳಿಂದ ನನ್ನ ಮನದಲ್ಲಿದ್ದ ಬಯಕೆಯನ್ನು ಮಿತ್ರರಾದ ಪ್ರಸಾದ್ ನಾಯಿಕರ ಮುಂದೆ ಪ್ರಶ್ನೆಯ ಮೂಲಕ ತೋಡಿಕೊಂಡೆ. "ನನ್ನಿಂದ ಕೂಡ ಒಂದು ಅಂಕಣ ಬರೆಯಲು ಸಾಧ್ಯವಾದೀತೋ?". ನನ್ನ ಈ ಪ್ರಶ್ನೆಯಲ್ಲಿ ಪ್ರತೀ ವಾರ ತಪ್ಪದೇ ಬರೆದು ಕೊಡಲು ನನ್ನಿಂದ ಸಾಧ್ಯವೇ, ಅಥವಾ ನನ್ನಲ್ಲಿ ಅಂಕಣ ಬರೆಯುವ ಸಾಮರ್ಥ್ಯ ಇದೆಯೇ ಎಂಬ ಅಳುಕೊಂದಿತ್ತು. ಆಗ ಅವರಂದದ್ದು "ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು, ಅಲ್ಲವೇ?" ಅವರ ಈ ಉತ್ತರ ನನ್ನ ಅಳುಕನ್ನು ಮೆಟ್ಟಿ ಹಾಕಿತು. ಇದರ ಫಲವೇ ಈ ಅಂಕಣದ ಮೊದಲ ಬರಹ ಇದು. ನಿಜವಾಗಿಯೂ "ಕುಚ್ ಭೀ ಹೋ ಸಕ್ತಾ ಹೈ" ಅಲ್ಲವೇ?

ಅಂಕಣಕಾರರ ಪರಿಚಯ : ಕುಂದಾನಗರ ಬೆಳಗಾವಿಯವರಾದ ವಸಂತ ಕುಲಕರ್ಣಿ ಕಳೆದ ಹದಿನಾಲ್ಕು ವರ್ಷಗಳಿಂದ ಸಿಂಗಪುರದಲ್ಲಿ ನೆಲೆಸಿದ್ದಾರೆ. ವೃತ್ತಿಯಿಂದ ಇಂಜಿನಿಯರ್ ಆದರೂ ಸಾಹಿತ್ಯದಲ್ಲಿ ಆಸಕ್ತಿ. ಒನ್ ಇಂಡಿಯ ಕನ್ನಡದಲ್ಲಿ ಅನೇಕ ಕಥೆ, ಕವನ ಮತ್ತು ಲೇಖನಗಳನ್ನು ಪ್ರಕಟಿಸಿದ್ದಾರೆ. 'ಅಂತರ ಮತ್ತು ಇತರ ಕವನಗಳು' ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ವಸಂತ ಅವರ ಕೆಲವು ಕವನಗಳಿಗೆ ಖ್ಯಾತ ಸಂಗೀತ ಸಂಯೋಜಕ ಶ್ರೀ ಉಪಾಸನಾ ಮೋಹನ್ ಅವರು ಸಂಗೀತ ಸಂಯೋಜಿಸಿ ಪ್ರೇಮ ಪ್ರಣತಿ ಎಂಬ ಭಾವ ಗೀತೆಗಳ ಧ್ವನಿ ಸುರುಳಿಯನ್ನು ಹೊರ ತಂದಿದ್ದಾರೆ. ಕನ್ನಡ ಸಂಘ (ಸಿಂಗಪುರ)ದ ಮಾಸ ಪತ್ರಿಕೆ ಸಿಂಚನದ ಸಂಪಾದಕ ಮಂಡಳಿಯಲ್ಲಿ ಕೆಲಸ ಮಾಡಿದ್ದಾರೆ. ಸಿಂಚನದ ಚಿಂತನ ಚಾವಡಿ ಎಂಬ ಅಂಕಣಕ್ಕೆ ಒಂದೂವರೆ ವರ್ಷ ಬರೆದಿದ್ದಾರೆ.

English summary
New column is making a beginning in Oneindia Kannada from 15th November, Tuesday. Vasant Kulkarni, a mechanical engineer, originally from Belagavi district, working for a multi-national company in Singapore, will serve Kannada literary lovers with sumptuous food.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X