ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಥೆಗಳ ಕಳೆಯುವ ಕಥೆಗಾರ !

By Staff
|
Google Oneindia Kannada News
K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ
[email protected]

ಶಾಂತಾರಾಮ ಸೋಮಯಾಜಿ ಎನ್ನುವ ಹೆಸರು ಕನ್ನಡ ನಿಯತಕಾಲಿಕಗಳನ್ನು, ನಿಯಮಿತವಾಗಿ ಓದುವ ಓದುಗರಿಗೆ ಬಹಳ ಚಿರಪರಿಚಿತ. ನಾನೂ ಕೂಡ ಶಾಂತಾರಾಮ ಸೋಮಯಾಜಿಯವರ ಕತೆಗಳನ್ನು ಬಹು ಹಿಂದೆಯೇ ಓದಿ ಮೆಚ್ಚಿದ್ದೆ. ಪತ್ರ ಬರೆದು ಲೇಖಕರಿಗೆ ನನ್ನ ಮೆಚ್ಚಿಗೆ, ಅಭಿನಂದನೆಗಳನ್ನು ತಿಳಿಸಬೇಕೆಂದು ಕೂಡ ನನಗೆ ಬಹಳ ಸಲ ಅನ್ನಿಸಿತ್ತು. ಆದರೆ ಕತೆಯ ಜೊತೆಯಲ್ಲಿ, ಕತೆಗಾರರ ಹೆಸರಿನ ಜೊತೆಗೆ ಲಾಸ್‌ಏಂಜಲೀಸ್‌, ಅಮೆರಿಕಾ ಎಂಬ ವಿಳಾಸ ಇರುತ್ತಿದ್ದುದರಿಂದ, ಇವರು ನಮ್ಮ ಕೈಗೆಟುಕುವವರಲ್ಲವೆಂಬ ಅನಿಸಿಕೆ ಮೂಡಿ, ಅಲ್ಲಿಗೇ ಸುಮ್ಮನಾಗಿ ಬಿಡುತ್ತಿದ್ದೆ.

ನಾನು ಅಮೆರಿಕಾಕ್ಕೆ ಬಂದ ಮೇಲೆ ಮತ್ತೆ ಸೋಮಯಾಜಿಗಳ ಬಗೆಗೆ ತಿಳಿಯುವ ಕುತೂಹಲ ಗರಿಗೆದರಿತು. ಇಲ್ಲೂ ಕೂಡ ನನಗೆ ತಿಳಿದ ಅನೇಕ ಲೇಖಕರನ್ನು ಶಾಂತಾರಾಮ ಸೋಮಯಾಜಿಗಳು ನಿಮಗೆ ಗೊತ್ತೇ? ನಿಮಗೆ ಗೊತ್ತೇ? ಎಂದು ಕೇಳಿ ಇಲ್ಲವೆನ್ನಿಸಿಕೊಂಡಿದ್ದೆ. ಪ್ರಚಾರದಿಂದ ಸದಾ ದೂರವಿರುವ ಸೋಮಯಾಜಿಯವರ ಬಗ್ಗೆ ಯಾರಿಗಾದರೂ ತಿಳಿಯುವುದಾದರೂ ತಾನೇ ಹೇಗೆ? ಆದರೆ, ಇಂತಹ ಎಲೆಮರೆಯ ಕಾಯಿಯಂತಹ ವ್ಯಕ್ತಿತ್ವದ ಸೋಮಯಾಜಿಯವರ ಬಗ್ಗೆ ಕೂಡ ತಿಳಿಯುವ ದಿನ ಬಂದೇ ಬಂದಿತು. ಗೆಳೆಯರೊಬ್ಬರ ಮೂಲಕ ವಿ-ಅಂಚೆಯಲ್ಲಿ ಬಂದ ವಿಜಯ ಕರ್ನಾಟಕದ ಶನಿವಾರದ ಪುಟದಲ್ಲಿ , ಸೋಮಯಾಜಿಯವರ ಅಂಕಣದ ಜೊತೆಗೆ ಅವರ ಭಾವಚಿತ್ರ, ಈ-ವಿಳಾಸ ಕೂಡ ಪ್ರಕಟವಾಗಿಬಿಟ್ಟಿತ್ತು !

Kannadas Love labour lost !ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿಕೊಂಡ ಮೇಲೆ ಇನ್ನು ಸುಮ್ಮನಿರುವುದುಂಟೇ? ಸೋಮಯಾಜಿಯವರಿಗೊಂದು ಈ-ಪತ್ರವನ್ನು ರವಾನಿಸಿಯೇಬಿಟ್ಟೆ. ಆದರೆ ನನ್ನ ಪತ್ರ ಅವರನ್ನು ತಲುಪಿ, ಅವರಿಂದ ಪ್ರತ್ಯುತ್ತರ ಬರುವ ಬಗ್ಗೆ ನನಗೆ ಭರವಸೆಯೇನೂ ಇರಲಿಲ್ಲ. ನನ್ನ ಅನುಭವದ ಪ್ರಕಾರ, ಖ್ಯಾತನಾಮರ ಈ-ವಿಳಾಸಗಳಿಗೆ ಬರೆದ ಪತ್ರಗಳಿಗೆ ಉತ್ತರ ದೊರಕುವುದು ಅಪರೂಪ. ಬಹಳ ಸಲ ಇಂತಹ ಪತ್ರಗಳು ತಿರುಗಿ ಬಂದು ನಮ್ಮನ್ನು ಅಪ್ಪಳಿಸುವುದೇ ಹೆಚ್ಚು. ಆದರೆ ಈ ಬಾರಿ ಹಾಗೇನೂ ಆಗಲಿಲ್ಲ. ಪತ್ರಕ್ಕೆ ಕೂಡಲೇ ಪ್ರತ್ಯುತ್ತರ ಬಂದುದಷ್ಟೇ ಅಲ್ಲ , ಅವರೊಡನೆ ದೂರವಾಣಿಯಲ್ಲಿ ಮಾತನಾಡುವ ಅವಕಾಶ ಕೂಡ ದೊರೆಯಿತು. ತಮ್ಮ ಮೆಲುವಾದ ದನಿಗೆ ಆತ್ಮೀಯತೆಯ ಸವಿ ಬೆರೆಸಿಯೇ ಮಾತನಾಡುವ ಸೋಮಯಾಜಿಯವರೊಂದಿಗೆ ಸಂಭಾಷಣೆಯೇ ಒಂದು ಸುಂದರ ಅನುಭವ!

ನನಗೆ ಮಾತು ಕೊಟ್ಟಿದ್ದಂತೆಯೇ, ಸೋಮಯಾಜಿಯವರು ಅವರ ಕಥಾಸಂಕಲನಗಳು, ಲೇಖನಗಳ ಸಂಗ್ರಹವಲ್ಲದೆ ‘ತರಂಗ’ ವಾರಪತ್ರಿಕೆಯಲ್ಲಿ ಪ್ರಕಟವಾದ ಧಾರಾವಾಹಿಯ ಎಲ್ಲಾ ಸಂಚಿಕೆಗಳನ್ನೂ ಕೂಡ ಕಳಿಸಿಕೊಟ್ಟಿದ್ದರು. ಕನ್ನಡದಲ್ಲಿ ಬರೆದಿದ್ದು ಏನು ಸಿಕ್ಕರೂ ಓದಿ ಮುಗಿಸುವ ನನ್ನ ಬಕಾಸುರ ಹಸಿವಿಗೆ ಸುಮಾರು ದಿನಗಳಿಗಾಗುವಷ್ಟು ಸುಗ್ರಾಸ ಭೋಜನ! ಕನ್ನಡವೆಂಬುದನ್ನು ಬರೀ ಅಂತರ್ಜಾಲದಲ್ಲಿ ಮಾತ್ರ ಓದಿ ಬೇಸತ್ತ ಕಣ್ಣುಗಳಿಗೆ, ಪುಸ್ತಕವನ್ನು ಕೈಗೆತ್ತಿಕೊಂಡು ಕೂತು, ಮಲಗಿ, ಹೇಗೆ ಬೇಕಾದರೂ ಹಾಗೆ, ಹಾಯಾಗಿ ಓದಿಕೊಳ್ಳುವ ಭಾಗ್ಯ. ಓದುವ ಸುಖ! ಇದಲ್ಲವೇ ಸಖ?

ಸೋಮಯಾಜಿಯವರ ಕತೆಗಳನ್ನು ವಿಮರ್ಶಿಸುವ ಉದ್ದೇಶವಾಗಲೀ, ಸಾಮರ್ಥ್ಯವಾಗಲೀ ಖಂಡಿತ ನನ್ನದಲ್ಲ. ಒಬ್ಬ ಸಾಮಾನ್ಯ ಓದುಗಳಾಗಿ, ಅವರ ಕತೆಗಳನ್ನು ಓದಿದಾಗ ನನಗೆ ಅನ್ನಿಸಿದ್ದನ್ನು ಮಾತ್ರ ನಾನಿಲ್ಲಿ ಹೇಳಬಯಸುತ್ತೇನೆ. ಅಮೆರಿಕಾ ಕುರಿತು ಈವರೆಗೂ ಸೃಷ್ಟಿಯಾಗಿರುವ ಸಾಹಿತ್ಯ ರಾಶಿ ಕಡಿಮೆಯೇನಲ್ಲ. ಪ್ರವಾಸಕ್ಕೆಂದು ಬಂದ ಕವಿಗಳು, ಸಾಹಿತಿಗಳು, ಉದ್ದಾಮ ಪಂಡಿತರಿಂದ ಹಿಡಿದು, ಮಗಳ, ಸೊಸೆಯ ಬಾಣಂತನಕ್ಕೆಂದು ಬಂದ ಹಿರಿಯಜೀವಗಳವರೆಗೆ, ಅಮೆರಿಕಾ ಬದುಕು ಅನೇಕರಿಗೆ ಅನೇಕ ರೀತಿ ಕಂಡಿದ್ದಿದೆ. ಇಂತಹ ಸಾಹಿತ್ಯದಲ್ಲಿ ಕೆಲವು ಯಾವುದೋ ಮುಲಾಜಿಗೆಂದು ಬರೆದಂತೆ ಕಾಣಿಸಿದರೆ, ಮತ್ತೆ ಹಲವಕ್ಕೆ ಗುಣವಾಗದ ಪೂರ್ವಾಗ್ರಹ!

ಬಹುಪಾಲು ಲೇಖಕರು ಇಲ್ಲಿಯ ನಿಜಸ್ಥಿತಿಯನ್ನು ಮುಚ್ಚಿಟ್ಟು , ಅಮೆರಿಕಾವನ್ನು ಭೂಸ್ವರ್ಗದಂತೆ ರಮ್ಯವಾಗಿ ಚಿತ್ರಿಸಿ, ದೂರದಲ್ಲಿರುವವರ ಬಾಯಲ್ಲಿ ನೀರೂರುವ ಹಾಗೆ ಬರೆದಿರುವುದೇ ಅಧಿಕ. ಸೋಮಯಾಜಿಯವರ ಕಥೆಗಳು ಇದಕ್ಕೆ ತದ್ವಿರುದ್ಧ ! ಅವರ ಅನೇಕ ಕಥೆಗಳು ವಸ್ತುಸ್ಥಿತಿಗೆ ಹಿಡಿದ ಕನ್ನಡಿಯಂತಿವೆ. ತುಂಬಿತುಳುಕುವ ಸಿರಿಸಂಪತ್ತಿನ ನಡುವೆಯೂ ಏಕಾಕಿತನ, ಅನಾಥಭಾವನೆಯಿಂದ ತಪಿಸುವ, ಅತೃಪ್ತ ಅಂತರಾತ್ಮಗಳ ನರಳಾಟ ಇಲ್ಲಿ ಮಾತಾಗುತ್ತವೆ, ನೋವಿನ ಹಾಡಾಗುತ್ತವೆ. ಭೌತಿಕ ಸಮೃದ್ಧತೆಯ ನಡುವೆಯೂ ಕಾಡುವ ಮನಸ್ಸಿನ ಖಾಲಿತನ, ಎಲ್ಲಾ ಇದ್ದು ಏನೂ ಇಲ್ಲದಂತೆನಿಸಿಬಿಡುವ ಹತಾಶ ಭಾವನೆಯನ್ನು ಅವರ ಕಥೆಗಳು ಸಮರ್ಥವಾಗಿ ಹಿಡಿದಿಟ್ಟಿವೆ. ನಿಜ ಹೇಳಬೇಕೆಂದರೆ - ಸೋಮಯಾಜಿಯವರ ‘ಲಾಸ್‌ಏಂಜಲಿಸ್‌ನಲ್ಲಿ ಬೆಳಗಾಯಿತು’ ಮಾದರಿಯ ಕೆಲವು ಕಥೆಗಳನ್ನು ನಾನು ‘ಮಯೂರ’ ದಲ್ಲಿ ಓದಿ ಅಮೆರಿಕಾ ಬಗೆಗೆ ಅವ್ಯಕ್ತ ಭೀತಿಯನ್ನೇ ಬೆಳೆಸಿಕೊಂಡಿದ್ದೆ. ಇಲ್ಲಿಗೆ ಬಂದು, ಈ ಬದುಕನ್ನು ಪೂರ್ತಿಯಾಗಿ ಅರಗಿಸಿಕೊಂಡ ನಂತರವೇ ನನ್ನಲ್ಲಿದ್ದ ಆ ಭಯ ದೂರವಾಗಿದ್ದು !

ಸೋಮಯಾಜಿಯವರ ಕತೆಗಳನ್ನು ನಮ್ಮ ವಿಮರ್ಶಕರು ಓದಿದ್ದಾರಾ? ಓದಿದ್ದರೆ, ಆ ಬಗ್ಗೆ ಅವರ ಅಭಿಪ್ರಾಯಗಳು ಏನಿವೆಯೋ ನನಗೆ ಗೊತ್ತಿಲ್ಲ. ಆದರೆ ಸೋಮಯಾಜಿಯವರ ಕತೆಗಳನ್ನು ವಿಮರ್ಶೆಯ ತಕ್ಕಡಿಯಲ್ಲಿ ಹಾಕಿ ತೂಗುವಾಗ, ಅದಕ್ಕೆ ಅನಿವಾಸಿಯಾಬ್ಬರು ಬರೆದ ಸಾಹಿತ್ಯ ಎಂಬ ಹಣೆಪಟ್ಟಿಯಾಗಲೀ, ರಿಯಾಯಿತಿಗಳಾಗಲೀ ಖಂಡಿತ ಇರಬಾರದು. ಸೋಮಯಾಜಿಯವರು ಮುಂದೆ ಎಂದಾದರೊಮ್ಮೆ ಭಾರತದಲ್ಲಿ , ಕರ್ನಾಟಕದಲ್ಲಿಯೇ ಹೋಗಿ ನೆಲೆಸಿದರೂ, ಅವರನ್ನೂ ಕೂಡ ಹರಿಹರೇಶ್ವರ ದಂಪತಿಗಳಂತೆ, ನಮ್ಮ ಅನಿವಾಸಿಗಳ ಪಕ್ಷದಲ್ಲೇ ಉಳಿಸಿಕೊಂಡಿರಲು ನನಗಂತೂ ಬಹಳ ಹೆಮ್ಮೆ! ಏನು ಸೋಮಯಾಜಿಗಳೇ, ನೀವು ನಮ್ಮ ಸೊರಬದ ಬಂಗಾರಪ್ಪನವರಂತೆ ಪಕ್ಷಾಂತರ ಮಾಡುವುದಿಲ್ಲ ಅಲ್ಲವೇ? ನನ್ನ ಈ ಪ್ರಶ್ನೆಗೆ ನೀವು ಕೋಪಿಸಿಕೊಳ್ಳುವುದಿಲ್ಲವೆಂದು ಕೂಡ ನನಗೆ ಗೊತ್ತು. ಎಷ್ಟೆಂದರೂ ನೀವು ‘ಶಾಂತಾ’ರಾಮರು ತಾನೇ?

ಸೋಮಯಾಜಿಯವರು ಕನ್ನಡ ಪುಸ್ತಕಗಳನ್ನು ಪ್ರಕಟಿಸಿ, ಅದನ್ನು ಜನರ ಮನೆಬಾಗಿಲಿಗೇ ತಲುಪಿಸುವ ‘ಜನಪರ ಪುಸ್ತಕಮಾಲೆ’ ಎಂಬ ಉತ್ತಮ ಯೋಜನೆ ಹಾಕಿಕೊಂಡು ಕೈಸುಟ್ಟುಕೊಂಡವರು. ಆರು ತಿಂಗಳಿಗೆ ಎರಡು ಪುಸ್ತಕವನ್ನು ಪ್ರಕಟಿಸುವ ಉದ್ದೇಶವನ್ನು ಹೊಂದಿದ್ದ ಈ ಪುಸ್ತಕ ಮಾಲೆಯ ಸದಸ್ಯತ್ವವನ್ನು ಹೊಂದಲು, ಕೊಡಬೇಕಾಗಿದ್ದ ಹಣ ಎಷ್ಟಿತ್ತು ಗೊತ್ತಾ ? ಸಾವಿರ, ದಶ ಸಾವಿರವಲ್ಲ , ಲಕ್ಷವೂ ಅಲ್ಲ ; ಬಿಡಿ, ಹತ್ತರ ನಂತರ ಬರುವ ನೂರು ರೂಪಾಯಿಗಳು ಮಾತ್ರ! ಈ ಅಲ್ಪ ಮೊತ್ತವನ್ನೂ ಕೊಡಲು ಕನ್ನಡ ಜನರು ನಿರಾಕರಿಸಿದ್ದರಿಂದ, ಬರಿಯ ಬೆರಳೆಣಿಕೆಯಷ್ಟೇ ಮಂದಿ ಮಾತ್ರ ಸದಸ್ಯತ್ವ ಪಡೆದಿದ್ದುದರಿಂದ ‘ಜನಪರ’ ದಂತಹ, ಉದಾತ್ತ ಆಶಯವನ್ನು ಹೊಂದಿದ್ದ, ಸುಂದರ ಯೋಜನೆಯಾಂದು ಆರಂಭದಲ್ಲಿಯೇ ಅಂತ್ಯವಾಗಿ ಹೋಯಿತು.

ಕನ್ನಡದ ಜನಪ್ರಿಯ ನಟ ವಿಷ್ಣುವರ್ಧನ್‌, ಹಿಂದೆ ಯಾವುದೋ ಒಂದು ಸಂದರ್ಭದಲ್ಲಿ - ‘ನಾವು ಕನ್ನಡಿಗರು ಶಾಪಗ್ರಸ್ತರು’ - ಎಂದು ಬಹಳ ನೋವಿನಿಂದ ನುಡಿದಿದ್ದರು. ‘ದಿವಂಗತ ಸಾಹಿತಿ ಆಲನಹಳ್ಳಿ ಕೃಷ್ಣ ಅವರು ತಮ್ಮ ಕೆಲವು ಪುಸ್ತಕಗಳು ಮಲೆಯಾಳಮ್‌ ಭಾಷೆಗೆ ಅನುವಾದಗೊಂಡು, ಅದರಿಂದ ಬಂದ ಹಣದಿಂದ ಬದುಕಿದ್ದರಂತೆ’- ಎಂಬ ಕಹಿಸತ್ಯವೊಂದು ಈಚೆಗೆ ಮಿತ್ರರೊಬ್ಬರ ಮೂಲಕ ನನಗೆ ತಿಳಿದು ಬಂದ ಮೇಲೆ, ಆ ಮಾತು ನಿಜವೇ ಇರಬೇಕು ಅನ್ನಿಸಿತು. ಕನ್ನಡ ಪತ್ರಿಕೆ, ಪುಸ್ತಕ ಹೊರ ತರುವ ಪ್ರಕಾಶನದ ಸಾಹಸವೇ ಇರಬಹುದು, ಕನ್ನಡ ಸಿನಿಮಾ ಮಾಡುವುದೋ, ಅದನ್ನು ತಂದು ತೋರಿಸುವುದೋ ಆಗಬಹುದು, ಕನ್ನಡ ಸಂಘ, ಸಮ್ಮೇಳನಗಳನ್ನು ನಡೆಸುವುದೇ ಆಗಿರಬಹುದು - ಕನ್ನಡದ ಯಾವುದೇ ಕೆಲಸ ತೆಗೆದುಕೊಳ್ಳಿ , ಕೊನೆಗೆ ಆ ಕೆಲಸ ಮಾಡಲು ಉತ್ಸಾಹದಿಂದ ಮುಂದಾದವರ ಕೈತುಂಬ, ಮನಸ್ಸಿನ ತುಂಬ ಉಳಿದುಕೊಳ್ಳುವುದು ಭರಿಸಲಾರದ ಕಹಿನೆನಪುಗಳು ಮಾತ್ರ!

‘ಕನ್ನಡಾಭಿಮಾನವೆಂದರೆ ಹೋಗುತ್ತಲೂ, ಬರುತ್ತಲೂ ಕೊಯ್ಯುವ ಗರಗಸ’ - ಎಂದು ಯಾರೋ ತಮಾಷೆಗೆಂಬಂತೆ ನುಡಿದ ಮಾತು, ಈಗ ನಿಜವಾಗಿಯೇ ಬಿಟ್ಟಿದೆಯಾ ಹಾಗಾದರೆ? ನನಗನ್ನಿಸುವಂತೆ ಇದನ್ನು ಎಂದೋ, ಯಾರೋ ಕೊಟ್ಟ ಶಾಪ ಅನ್ನುವುದಕ್ಕಿಂತಲೂ, ಇದು ನಮ್ಮ ನಿರಭಿಮಾನದ ಪಾಪದ ಫಲ ಅನ್ನುವುದೇ ಹೆಚ್ಚು ಸರಿ!

ಕನ್ನಡದ ಹಾಸಿ ಹೊದ್ದರೂ ಮುಗಿಯದಂತಹ ಈ ಕಥೆ-ವ್ಯಥೆಗಳು ಅಂತಿರಲಿ, ಇವು ಯಾವುವೂ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಎಲ್ಲಿಯೂ ಕಾಣಿಸುತ್ತಿಲ್ಲ. ಅಷ್ಟಕ್ಕೂ, ಆ ಬಗ್ಗೆ ಚಿಂತಿಸಲು, ಮಾತನಾಡಲು ಮುಂದೆ ಬರುವ ನವೆಂಬರ್‌ ತಿಂಗಳು ಇದ್ದೇ ಇದೆಯಲ್ಲಾ ! ಕನ್ನಡಿಗರ ಕನ್ನಡಾಭಿಮಾನ ಜಾಗೃತವಾಗುವುದು ನವೆಂಬರ್‌ ತಿಂಗಳಿನಲ್ಲಿ ಮಾತ್ರ ತಾನೇ?

ಶಾಂತಾರಾಮ ಸೋಮಯಾಜಿಯವರ ಎಲ್ಲಾ ಕತೆಗಳನ್ನು ಓದಿ ಮುಗಿಸಿದ ಮೇಲೆ ನನಗೆ ಅದೇಕೋ ಎಂದೋ, ಎಲ್ಲೋ ಕೇಳಿದ್ದ, ಮಾಸ್ತಿಯವರ ಈ ಸಾಲುಗಳ ನೆನಪಾಗಿಬಿಟ್ಟಿತು -

ವ್ಯಥೆಗಳ ಕಳೆಯುವ ಕಥೆಗಾರ
ನಿನ್ನ ಕಲೆಗೆ ಯಾವುದು ದೂರ?
ಯಾವುದು ದುಸ್ತರ? ಯಾವುದು ವಿಸ್ತರ?
ನಿನಗೆಲೋ ಹರ್ಷದ ಹರಿಕಾರ
ನಿನ್ನ ಕಲೆಗೆ ಯಾವುದು ಭಾರ!

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X