ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಕಲೆಯಲ್ಲಿ ಅರಳಿದ ದೈವೀಶಕ್ತಿ

By Shami
|
Google Oneindia Kannada News

Traditional art works by Meera Kumar
ದಟ್ಟ ಅರಣ್ಯ. ದೂರದಲ್ಲೆಲ್ಲೋ ಒಂದು ಮಿಣುಕು ದೀಪ. ಭರ್ತಿ ನಿಶ್ಯಬ್ದ. ಅಂಥ ಸಮಯದಲ್ಲಿ ಹುಣ್ಣಿಮೆಯ ಚಂದಿರ ತನ್ನ ತಂಪು ಕಿರಣಗಳಿಂದ ಹಸುರು ಗಿಡಮರಗಳಿಗೆ ಬಣ್ಣ ಹಚ್ಚುತ್ತಾಯಿದ್ದ. ಆ ರಾತ್ರಿಯೇ ಅತ್ಯಂತ ಮನಮೋಹಕ. ಪ್ರಕೃತಿ ಪ್ರಿಯರಿಗೆ ಉಲ್ಲಾಸದ ಕ್ಷಣಕ್ಷಣ. ಕವಿ ಹೃದಯಕ್ಕೆ ಹಾಡುವ ಸಮಯ. ಕುಂಚ ಹಿಡಿದ ಕಲಾವಿದರಿಗೆ ಸ್ಫೂರ್ತಿಯ ಪುಳಕ.

* ಧವಳ

ಅಂಥ ಕ್ಷಣಕ್ಷಣಗಳನ್ನು ಮುಗ್ಧವಾಗಿ ಅನುಭವಿಸಿದ ಚಿತ್ರ ಕಲಾವಿದೆ ಮೀರಾ ಕುಮಾರ್. ಅಲ್ಲಿಂದ ಆರಂಭವಾದ ಅವರ ಕುಂಚ ಲೋಕದ ಪಯಣದಲ್ಲಿ ಅರಳಿದವರು ಆದಿ ಶಂಕರಾಚಾರ್ಯ ಹಾಗೂ ಆದಿ ಶಕ್ತಿಯ ಉಗ್ರ ಹಾಗೂ ಸೌಮ್ಯ ಚಿತ್ರಣ. ಅವರ ಒಳಗಣ್ಣಿಗೆ ಇಂತಹ ಅತ್ಯದ್ಭುತವಾದ ದೃಶ್ಯ ಕಂಡಿದ್ದು ಕೊಲ್ಲೂರಿನಲ್ಲಿ. ಗಾಢ ಅರಣ್ಯದಲ್ಲಿ ತಾವು ಕೊಲ್ಲೂರಿಗೆ ಹೋಗುವಾಗ ಕಾರ್ ಡ್ರೈವ್ ಮಾಡುತ್ತಿದ್ದ ಮಗನಿಗೆ ಗಾಡಿಯನ್ನು ನಿಲ್ಲಿಸಲು ಹೇಳಿ ಮಧ್ಯರಾತ್ರಿಯಲ್ಲಿ ಪ್ರಕೃತಿಯ ಸೌಂದರ್ಯ ಸವಿದು ಅದನ್ನು ತಮ್ಮಲ್ಲಿಯೇ ಉಳಿಸಿಕೊಳ್ಳದೆ ತಾಯ ಚಿತ್ರ ಬರೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಆ ಕಲಾಕೃತಿ ಕೊಲ್ಲೂರಿನಲ್ಲಿ ಈಗಲೂ ಇದೆ.

ಮೀರಾ ಅವರ ಊರು ಬೆಂಗಳೂರು. ಗಾಂಧೀ ಬಜಾರ್ ನಲ್ಲಿ ಜನನ. ನಗರದ ಪ್ರತಿಷ್ಠಿತರಲ್ಲಿ ಒಬ್ಬರಾದ ಬಸಪ್ಪನವರ ಮೊಮ್ಮಗಳಾದ ಮೀರಾಗೆ ಮೊದಲಿಂದಲೂ ಬಣ್ಣದತ್ತ ಅಪಾರ ಒಲವು. ಸದಾ ಬಣ್ಣಗಳ ಜೊತೆ ಆಡಬೇಕೆನ್ನುವ ತವಕ. ಅದಕ್ಕೆ ಪ್ರೇರಕವಾದದ್ದು ಮನೆಯ ಅಂಗಳವನ್ನು ಅಲಂಕರಿಸುತ್ತಿದ್ದ ರಂಗೋಲಿ.

ತಂದೆ ನೀಲಕಂಠಯ್ಯನವರದು ಇಂಜಿನಿಯರ್ ವೃತ್ತಿ. ವರ್ಗಾವಣೆಯ ಕಾರಣದಿಂದ ಮೀರಾ ಬಾಲ್ಯ ಕಳೆದಿದ್ದು ಮಲೆನಾಡಿನ ಪ್ರಕೃತಿಯ ಮಡಿಲಲ್ಲಿ! ಅಲ್ಲಿದ್ದ ವಾತಾವರಣ ಮೀರಾ ಅವರ ಆಸಕ್ತಿಗೊಂದು ರೂಪ ಕೊಡಲು ಸಾಧ್ಯವಾಯಿತು. ತಾಯಿ ಪ್ರಫುಲ್ಲಮುಖಿ ಮಗಳ ಆಸೆಗೆ ಪ್ರೋತ್ಸಾಹ ನೀಡಿದರು. ಇವರ ಮನೆಯ ಪಕ್ಕದಲ್ಲಿ ಐಯ್ಯರ್ ಕುಟುಂಬ ಒಂದಿತ್ತು. ಅವರ ಮನೆಯಲ್ಲಿ ನೆಲೆಯೂರಿದ್ದ ಆಧ್ಯಾತ್ಮಿಕ ವಾತಾವರಣ ಕಲಾವಿದೆ ಮೀರಾ ಮೇಲೆ ಅಚ್ಚಳಿಯದ ಪ್ರಭಾವ ಬೀರಿತು. ಇಷ್ಟೆಲ್ಲದರ ನಡುವೆ ಮೀರಾ ಅವರು ತಮ್ಮ ಹದಿನೇಳನೆಯ ವಯಸ್ಸಿನಲ್ಲಿ ವಸಂತ್ ಕುಮಾರ್ ಅವರ ಕೈ ಹಿಡಿದರು. ವಿನಯ್ ಹಾಗೂ ವಿಕ್ರಂ ಈ ಕುಟುಂಬದ ಎರಡು ಕಣ್ಣುಗಳಾಗಿ ಮನೆ ಮನ ಬೆಳಗಿದರು.

ಕಲಾಭಿವ್ಯಕ್ತಿಗೆ ಶಿಕ್ಷಣದ ಆವರಣ : ಆ ಸಂದರ್ಭದಲ್ಲಿ ಮೀರಾ ಅವರ ಬದುಕಲ್ಲಿ ಮಹತ್ತರ ತಿರುವು ದೊರಕಿತು. ಅವರ ಪತಿ ವಸಂತ್ ಕುಮಾರ್ ಅವರ ಪ್ರೋತ್ಸಾಹದಿಂದ ಪುನಃ ಅವರು ಬಣ್ಣದ ಲೋಕಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಆವರೆಗೂ ಹವ್ಯಾಸವಾಗಿದ್ದ ಕಲೆಗೊಂದು ಶಿಷ್ಟ ರೂಪ ಕೊಡಲು ಕ್ರಮ ಶಿಕ್ಷಣ ಬೇಕಾಗಿತ್ತು. ಆಗ ಮೀರಾ ಗಾಂಧಿಬಜಾರಿನಲ್ಲಿ ಇರುವ ಆ.ನಾ.ಸುಬ್ಬರಾಯರ ಕಲಾಶಾಲೆಗೆ ಸೇರಿದರು. ಕಲಾಗುರುಗಳಾದ ಸುಬ್ಬರಾಯರು, ಕಂಠಪ್ಪ ಗೌಡರು, ಗೋವಿಂದ ರಾಜು, ಮೀರಾ ಅವರು ಕಲೆ ನಿಂತ ನೀರಾಗಲು ಬಿಡದೆ ಮತ್ತಷ್ಟು ಕಲಾಲೋಕಕ್ಕೆ ಸಮರ್ಪಿಸಿಕೊಳ್ಳುವಂತೆ ಮಾಡಿದರು.

ಐದು ವರ್ಷಗಳ ಡಿಜಿ ಆರ್ಟ್ ಪದವಿ ಪಡೆದ ಬಳಿಕ ಮೀರಾ ಎಲ್ಲ ಕಲಾವಿದರಂತೆ ತಮ್ಮ ಕುಂಚದಿಂದ ರಚಿಸಿದ್ದು ಮಾಡ್ರನ್ ಆರ್ಟ್. ಈ ಕಲೆಯಲ್ಲಿ ವಾಸ್ತವ ಚಿತ್ರಣಕ್ಕೆ ಹೆಚ್ಚು ಆದ್ಯತೆ. ಚಿತ್ರಗಳಲ್ಲಿ ಮಡುಗಟ್ಟಿದ್ದು ಅದೇ ನೋವು, ಅದೇ ದುಃಖ. ಇವೆಲ್ಲವೂ ನಾವು ಪ್ರತಿದಿನ ನೋಡುವ, ಅನುಭವಿಸುವ ಸಂಗತಿಗಳೇ. ಪುನಃ ಅಂತಹ ಸಂಗತಿಗಳು ತಮ್ಮ ಕುಂಚದಲ್ಲಿ ಅರಳುವುದು ಬೇಡವೆಂದು ಭಾವಿಸಿದ ಕಲಾವಿದೆ ನಮ್ಮ ಸನಾತನ ಧರ್ಮದಲ್ಲೇ ಅಡಗಿರುವ ಅಪರೂಪದ ಸಂಗತಿಗಳ ಚಿತ್ರಣಕ್ಕೆ ಮನಸೋತರು.

ತಾವು ಆರಾಧಿಸುವ ತ್ರಿಪುರ ಸುಂದರಿದೇವಿಯನ್ನ ತಮ್ಮ ಕಲ್ಪನೆಯ ಮೂಸೆಯಲ್ಲಿ ಬಣ್ಣದ ಲೋಕದಲ್ಲಿ ವಿಶಿಷ್ಟವಾಗಿ ರಚಿಸಿದರು. ಅವರ ಈ ಕಲಾ ಕಂಕರ್ಯಕ್ಕೆ ಆಧ್ಯಾತ್ಮಿಕ ಗುರುಗಳಾದವರು ಲಕ್ಷ್ಮಣ ರಾವ್. ಮೈಸೂರು ಶೈಲಿಯಲ್ಲಿ ಅಪಾರ ಕಲಾಕೃತಿಗಳನ್ನು ರಚಿಸಿರುವ ಮೀರಾ ಅವರು ತಮ್ಮ ಆಧ್ಯಾತ್ಮಿಕ ಕಲ್ಪನೆಗೊಂದು ಸುಂದರ ರೂಪವನ್ನು ಕೊಡುತ್ತ ಬಂದಿದ್ದಾರೆ.

ವಿಗ್ರಹ ವಿನ್ಯಾಸ ಇವರ ವಿಶೇಷ ಪ್ರತಿಭೆಗಳಲ್ಲಿ ಒಂದು. ಸಾಮಾನ್ಯವಾಗಿ ನವರಾತ್ರಿ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಮೂಲ ಇಲ್ಲವೇ ಉತ್ಸವ ವಿಗ್ರಹಕ್ಕೆ ಒಂದೊಂದು ದಿನ ಒಂದೊಂದು ಅಲಂಕಾರ ಮಾಡಲಾಗುತ್ತದೆ (ಸರಸ್ವತಿ, ದುರ್ಗೆ, ಶಿವ, ಲಕ್ಷ್ಮಿ..). ಇದನ್ನು ನಿಪುಣರು ಮಾತ್ರ ಮಾಡಲು ಸಾಧ್ಯ. ಆದರೆ ಮೀರಾ ಅವರು ಈ ವಿದ್ಯೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ತ್ರಿಪುರಸುಂದರಿ ಅಮ್ಮ ಗೌರಿಹಬ್ಬದಲ್ಲಿ ಭಿನ್ನ ರೀತಿಯ ಅವತಾರಗಳನ್ನು ಎತ್ತಿ ಭಕ್ತರ ಹೃದಯದಲ್ಲಿ ನೆಲೆಯೂರುತ್ತಿದ್ದಾಳೆ. ಈ ಹಬ್ಬದಲ್ಲಿ ಇನ್ಫೋಸಿಸ್ ನ ಸುಧಾ ಮೂರ್ತಿ, ಕಾಂಗ್ರೆಸ್ ಧುರೀಣೆ ರಾಣಿ ಸತೀಶ್ ಸೇರಿದಂತೆ ಹಲವು ಗಣ್ಯಾತಿಗಣ್ಯ ಹೆಣ್ಣುಮಕ್ಕಳು ಈ ಹಬ್ಬದಲ್ಲಿ ಪ್ರತಿವರ್ಷ ಇವರ ಮನೆಗೆ ಭೇಟಿ ಕೊಟ್ಟು ಬಾಗಿನ ತೆಗೆದುಕೊಂಡು ತಾಯಿಯ ಆಶೀರ್ವಾದ ಪಡೆದು ಬರುತ್ತಾರೆ.

ಸರಿಸುಮಾರು ಮುವ್ವತ್ತೆರಡು ದೇಶಗಳಲ್ಲಿ ಗ್ಯಾಲರಿಗಳು ಮತ್ತು ಕಲಾಸಕ್ತರ ಮನೆಗಳಲ್ಲಿ ಮೀರಾ ಅವರ ಕಲಾಕೃತಿಗಳು ಸ್ಥಾನ ಪಡೆದಿದೆ. ನಲವತ್ತರಿಂದ ಐವತ್ತು ಹಿಂದೂ ಧಾರ್ಮಿಕ ಪುಸ್ತಕಗಳಲ್ಲಿ ಇವರ ಕಲಾ ಕೃತಿಗಳು ಮುಖಪುಟವಾಗಿ ಸ್ಥಾಯಿಯಾಗಿದೆ. ಅಷ್ಟೆ ಅಲ್ಲದೆ ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಾದ ಸುಧಾ, ತರಂಗ, ಮಂಗಳ.. ಪತ್ರಿಕೆಗಳ ಮುಖಪುಟದಲ್ಲಿ ಇವರ ಕಲಾಕೃತಿಗಳು ಕಂಗೊಳಿಸಿವೆ. ವಿಜಯಕರ್ನಾಟಕ, ಪ್ರಜಾವಾಣಿ, ಉದಯವಾಣಿ ಸೇರಿದಂತೆ ಅನೇಕ ಪ್ರತಿಷ್ಠಿತ ಪತ್ರಿಕೆಗಳಲ್ಲೂ ಇವರ ಕಲಾಕೃತಿಗಳು ಬಳಕೆ ಆಗಿವೆ. ಕೆ.ಪಿ.ರತ್ನಾಕರ ಭಟ್ಟರ ಶ್ರೀ ಗೀತಾಂತರಂಗ ಶ್ರೀಮದ್ಭಗವದ್ಗೀತೆ ಕನ್ನಡ ಅವತರಣಿಕೆಯ ಪುಸ್ತಕದಲ್ಲಿ ಬರುವ 18 ಅಧ್ಯಾಯಗಳಿಗೆ ಇವರ ಕಲಾಕೃತಿಯನ್ನು ಬಳಸಿಕೊಳ್ಳಲಾಗಿದೆ. ಹೀಗೆ ಹಲವಾರು ಕಡೆ ಇವರು ತಮ್ಮ ಕಲಾಕೃತಿಗಳ ಮೂಲಕ ಜನಮನ ಗೆದ್ದಿದ್ದಾರೆ ಮೀರಾ.

ಏಳನೇ ಕರ್ನಾಟಕ ಕಲಾಮೇಳ ಸೇರಿದಂತೆ, ಆ.ನ.ಸು. ಜನ್ಮಶತಾಬ್ಧಿ-92, ಮೈಸೂರು ದಸರಾ ವಸ್ತು ಪ್ರದರ್ಶನ, ಕರ್ನಾಟಕ ಲಲಿತ ಅಕಾಡೆಮಿ ಪ್ರದರ್ಶನ, 1995ರಲ್ಲಿ ಅಮೃತಸರದಲ್ಲಿ ನಡೆದ ಅಖಿಲ ಭಾರತ ಕಲಾ ಮೇಳ, ಪ್ಯಾರಿಸ್, ಲಂಡನ್ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಅಧ್ಯಯನಾರ್ಥಿಯಾಗಿ ಪ್ರವಾಸ ಮಾಡಿ ಬಂದಿದ್ದಾರೆ. ಕಲಾಕಸ್ತೂರಿ, ರಾಜೀವ್ ಗಾಂಧೀ ಏಕತಾ ರಾಷ್ಟ್ರೀಯ ಪ್ರಶಸ್ತಿ, ಶಿವರಾಮ ಕಾರಂತ ಸದ್ಭಾವನಾ ಪ್ರಶಸ್ತಿ, ಭಾರತ ಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರನ್ನು ಹಿಂಬಾಲಿಸಿದೆ.

ಮೀರಾ ಅವರ ಒಂದೊಂದು ಕಲಾಕೃತಿಯೂ ಒಂದೊಂದು ಸುಂದರ ಪೌರಾಣಿಕ ಕಥೆಯನ್ನು ಸಾರುತ್ತದೆ. ಇವರ ಪ್ರತಿಯೊಂದು ಸಾಧನೆಗೂ ಬೆನ್ನೆಲುಬಾಗಿ ನಿಂತವರು ಪತಿ ವಸಂತ್ ಕುಮಾರ್ ಹಾಗೂ ಮಗ ವಿನಯ್ ಮತ್ತು ಸೊಸೆ ಶಾಲಿನಿ ವಿಕ್ರಂ. ಈ ಕಲಾ ತಪಸ್ವಿಯ ಕಲಾ ಸೇವೆಯು ಹೆಚ್ಚು ಪ್ರಮಾಣದಲ್ಲಿ ಸಮಾಜಕ್ಕೆ ಸಿಗಲಿ ಎಂದು ಹಾರೈಸೋಣ. ಮೀರಾ ಅವರ ಇ ಸಂಪರ್ಕ [email protected], ಫೋನ್ 99013 98112

ಗ್ಯಾಲರಿ : ಮೀರಾ ಕುಮಾರ್ ಅವರ ವರ್ಣಚಿತ್ರಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X