• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಸಂಖ್ಯಾತ ಓದುಗರ ಆಗ್ರಹದ ಮೇರೆಗೆ, ಬೆಂಗಳೂರು ಭಾಗ 2

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಅಸಂಖ್ಯಾತ ಪ್ರೇಕ್ಷಕರ ಒತ್ತಾಯದ ಮೇರೆಗೆ ಈಗ ನನ್ನ ಭಾರತ ಪ್ರವಾಸದ ಭಾಗ 02 ನಿಮ್ಮ ಮುಂದೆ. ಅಬ್ಬಬ್ಬಾ! ಅಸಂಖ್ಯಾತ ಓದುಗರೇ ನಿಮಗೆ? ಖಂಡಿತಾ, ಹೇಗೆ ಅಂದ್ರಾ? ನಾನು ಯಾವತ್ತೂ ಎಣಿಸಲು ಹೋಗಿಲ್ಲ, ಹಾಗಾಗಿ ಅಸಂಖ್ಯಾತ. ಆದರೆ ಇನ್ನೊಂದಿಷ್ಟು ವಿಷಯ ಹೇಳಿ ಅಂತ ಮಂದಿ ಕೇಳಿದ್ದು ಸುಳ್ಳಲ್ಲ! ಒಂದೊಂದೂ ವಿಷಯವನ್ನು ಸ್ಥೂಲವಾಗಿ ಬರೀತಾ ಹೋದರೆ ಭಾಗ 10ರವರೆಗೂ ಹೋಗಬಹುದು. ಬೇಡಾ ಬಿಡಿ, ನನಗೆ ಕಾದಂಬರಿ ಬರೆಯುವ ಇರಾದೆ, ಅಭ್ಯಾಸ ಅಥವಾ ಅನುಭವ ಇಲ್ಲ. ಹಾಗಾಗಿ ಪಾಯಿಂಟ್ಸ್ ಹೇಳ್ತಾ ಸಾಗುತ್ತೇನೆ:

ಸಾವಿಲ್ಲದ ಮನೆಯಿಂದ ಸಾಸಿವೆ ತರಬಲ್ಲೆ, ಮೊಬೈಲ್ ಇಲ್ಲದ ಮನೆಯಿಂದಲೂ ಸಾಸಿವೆ ತರಬಲ್ಲೆ. ಆದರೆ ಒಂದು ಅಪಾರ್ಟ್ಮೆಂಟ್ ಮೇಲೆ ಹಳದಿ ಅಥವಾ ಕಪ್ಪು ಪ್ಲಾಸ್ಟಿಕ್ ಟ್ಯಾಂಕ್ ಇಲ್ಲದ ಮನೆಯಿಂದ ಸಾಸಿವೆ ತರಲಾರೆ. ಒಂದೊಂದೂ ಅಪಾರ್ಟ್ಮೆಂಟ್ / ಮನೆ ಈಶ್ವರ ಸಮಾನ. ಗಂಗೆಯನ್ನು ಹೊರದೇ ಇದ್ದುದೇ ಇಲ್ಲ. ನಿಜವೇ ಅನ್ನಿ, ನೀರೆ ಇಲ್ಲದ ಮನೆ ಇರಬಹುದು ಆದರೆ ನೀರಿಲ್ಲದ ಮನೆ ಹೇಗಿದ್ದೀತು. bare necessity ಅಲ್ಲವೇ?

ನಾನೂ ಮತ್ತು ಬೆಂಗಳೂರಿನಲ್ಲಿ ನನ್ನ ಪರವಾಸ!

ಅಪಾರ್ಟ್ಮೆಂಟ್ ಜೀವನ ಒಂಥರಾ ಮಜಾ. ಪಕ್ಕದ ಮನೆಯವರು ಮಾತನಾಡಿದ್ದಕ್ಕೆ ಅವರ ಮನೆಯ ಕೆಳಗಿನ ಮನೆಯವರು ಉತ್ತರ ಕೊಟ್ಟರೂ ಒಮ್ಮೊಮ್ಮೆ ಗೊತ್ತಾಗೊಲ್ಲ. ನಾನಿದ್ದ ಮನೆಯ ಪಕ್ಕದ ಮನೆಯ ಬಚ್ಚಲ ಮನೆಯಿಂದ ಭಾನುವಾರ ಬೆಳ್ ಬೆಳಿಗ್ಗೆ ಹಾಡು "ನಿನ್ನ ನಡುವು ಸಣ್ ಐತಿ... ಚುಟು ಚುಟು ಅಂತೈತಿ"... ಅಯ್ಯಯ್ಯಪ್ಪಾ! ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಕ್ಕೆ ಸಿದ್ಧವಾಗಲು ಎದ್ದು ಕೂತರೇ, ಇದ್ಯಾವುದೋ ಸಾಹಿತ್ಯ ಕೇಳಿಸ್ತಿದೆಯಲ್ಲಪ್ಪ ಶಿವನೇ! ಅದೇ ವೇಳೆಗೆ ನನ್ನಾಕೆ ನನ್ನ ಹಸಿರು ಜುಬ್ಬಾ ಬಗ್ಗೆ ಕೇಳಿದಳು "measurement correct ಆಗಿ ಇದ್ಯಾ ನೋಡಿದ್ರಾ?" ಇನ್ನೂ ಈ ವಿಷಯ ಅಳೆದು / ಎಳೆದು ಬರೆಯಲಾರೆ! ಯಾಕೋ ಎಲ್ಲ ವಿಷ್ಯ ನನ್ನನ್ನೇ ಹುಡುಕಿಕೊಂಡು ಬರುತ್ತೆ!

ಹಲವಾರು ಬಾರಿ ಮನೆಯ ಎದುರಿಗೇ ಇರುತ್ತಿದ್ದ ನಂದಿನಿ ಬೂತ್'ಗೆ ಹೋಗಿ ಹಾಲಿನ ಪ್ಯಾಕೆಟ್ ತರುತ್ತಿದ್ದೆ. ಬೀದಿಯಲ್ಲಿ ಹೋದಾಗ ನನ್ನ ಮನಸ್ಸಿನಲ್ಲಿ ಬರುತ್ತಿದ್ದ ಹಾಡು "ಎಲ್ಲಿಗೆ ಪಯಣ, ಯಾವುದೋ ದಾರಿ, ಏಕಾಂಗಿ ಸಂಚಾರಿ..." ಅಂತ... ಒಮ್ಮೆ ಬಹುಶ: ಜೋರಾಗಿಯೇ ಹಾಡಿರಬೇಕು ಅನ್ನಿಸುತ್ತೆ, ನನ್ನ ಮುಂದೆ ಸಾಗುತ್ತಿದ್ದ ನೈಟಿ ಧಾರಿಣಿ ಕೆಕ್ಕರಿಸಿಕೊಂಡು ನೋಡಿದಳು. ನೈಟಿ'ಗೆ ಏಕಾಂಗಿ (ಏಕ ಅಂಗಿ) ಅಂತಲೂ ಹೆಸರಿದೆ ಅಂತ ನನಗೆ ಗೊತ್ತಿರಲಿಲ್ಲ!

ಒಮ್ಮೆ ಬೀದಿ ಬದಿಯಲ್ಲಿ ನನ್ನ ಓಲಾ'ಗಾಗಿ ಕಾದು ನಿಂತಿದ್ದೆ. ಆಗ ಬಂದ ಒಂದು ಆಟೋ ಧಡಕ್ಕೆಂದು ನನ್ನ ಮುಂದೆ ನಿಂತಿತು. ಡ್ರೈವರ್ ಹೊಸಬ ಇರಬೇಕೇನೋ ಗೊತ್ತಿಲ್ಲ, 'ಇಂಥಾ' ಆಫೀಸು ಇಲ್ಲೆಲ್ಲಿದೆ ಅಂತ ಕೇಳಿದ. ನನಗೆ ಗೊತ್ತಿತ್ತು ಹಾಗಾಗಿ, 'ಸೀದಾ ಹೋಗಿ ಬಲಕ್ಕೆ ತಿರುಗಿ, ಮೂರನೇ ಬಿಲ್ಡಿಂಗ್ ಮೂರನೆಯ floorಗೆ ಹೋಗಿ' ಅಂದೆ. ಆತ ಟುರ್ರ್ ಅಂತ ಹೋದ ಮೇಲೆ ಥಟ್ಟನೆ ಗಾಭರಿ ಆಯ್ತು. ಈತ ಆಟೋ ಓಡಿಸಿಕೊಂಡೇ ಮೂರನೆಯ ಫ್ಲೋರಿಗೆ ಹೋಗಿಬಿಟ್ಟರೆ ಏನು ಗತಿ? ಆಟೋ'ನ್ನ ಹೇಗೆ ಕೆಳಗೆ ಇಳಿಸಿಕೊಂಡು ಬರ್ತಾನೆ? ಅಂತ! ಎಲ್ಲಾ ಟೈಮಿನಲ್ಲೂ ಬುದ್ದಿ ಒಂದೇ ಥರ ಓಡುತ್ತೆ ಅನ್ನೋಕ್ಕಾಗಲ್ಲ. ಪೆದ್ದುತನ ನಮ್ಮ ಜನ್ಮ ಸಿದ್ದ ಹಕ್ಕು :-)

ಕನ್ನಡ ಭಾಷೆಯಲ್ಲಿ ಸೀಳು ಕಥಾನಕ : ಸೀಳೋದ್ ಸೀಳ್ರಿ ಸೀಳಬಾರದ್ ಸೀಳಬ್ಯಾಡಿ

ಒಮ್ಮೆ ಕೆಲಸ ಮೇಲೆ bankಗೆ ಹೋದಾಗ ಅವರು passport ಅನ್ನು ಜೆರಾಕ್ಸ್ ಮಾಡಿಸಿಕೊಂಡು ಬನ್ನಿ ಅಂದ್ರು. ಸರಿ ಅಂತ ಹೋದೆ. ಜೆರಾಕ್ಸ್ ಅಂಗಡಿ ಎಲ್ಲೂ ಕಾಣಲಿಲ್ಲ. ಅಲ್ಲೇ ಒಂದು ಗೂಡಂಗಡಿಯಲ್ಲಿ 'ಜೆರಾಕ್ಸ್ ಅಂಗಡಿ ಇಲ್ಲಿ ಎಲ್ಲಿದೆ?' ಅಂತ ಕೇಳಿದೆ. ಆತ ಬಾಯನ್ನೇ ಬಿಡದೆ ತನ್ನ ಕುತ್ತಿಗೆಯನ್ನು ಒಮ್ಮೆ ಎಡಕ್ಕೆ ಮತ್ತು ಮೇಲಕ್ಕೆ ಆಡಿಸಿದ. ಎಂಥಾ ಚಾತುರ್ಯ! ನಾನು ಒಮ್ಮೆ ಅವನಿಗೆ ಬೆನ್ನು ಹಾಕಿ ನನ್ನ ಕುತ್ತಿಗೆಯನ್ನು ಎಡಕ್ಕೆ ಮತ್ತು ಮೇಲಕ್ಕೆ ಮಾಡಿದಾಗ ಅರ್ಥವಾಯ್ತು ಲೆಫ್ಟ್ ಹೋಗಿ ಮತ್ತೆ straight ಹೋಗಬೇಕು ಅಂತ. ಭಾಷೆಗಳು ಸಾಯುತ್ತಿದೆ ಎಂಬ ಅಳಲು ನಿಜವೇ! ಸನ್ನೆ ಭಾಷೆಗಳು, ಎಮೋಜಿ'ಗಳು ಎಲ್ಲೆಲ್ಲೂ ತಾಂಡವವಾಡಲಿದೆ.

ಜೆರಾಕ್ಸ್ ಅಂಗಡಿಗೆ ಹೋದೆ. ಅವನು ಒಬ್ಬರಿಗೆ ಕೆಲಸ ಮಾಡಿಕೊಡುತ್ತಿದ್ದ. ನಾನು ಅವರ ಕೆಲಸ ಆಗಲಿ ಅಂತ ನನ್ನ ಸರದಿಗಾಗಿ ಕಾದು ನಿಂತಿದ್ದೆ. ಆಗ ಒಬ್ಬ ವಿದ್ಯಾವಂತ ಯುವಕ ಬೈಕಿನಲ್ಲಿ ಬಂದು ನಾನು ಸರದಿಯಲ್ಲಿ ನಿಂತಿದ್ದೇನೆ ಎಂಬುದನ್ನೂ ಲೆಕ್ಕಿಸದೇ ಅವನ ಪೇಪರ್ ಅನ್ನು ಅಂಗಡಿಯವನಿಗೆ ಕೊಟ್ಟು ಜೆರಾಕ್ಸ್ ಮಾಡಿಸಿಕೊಂಡು ಹೊರಟೇ ಹೋದ. ನನ್ನ ಸರದಿಗಾಗಿ ನಿಂತಿದ್ದ ನಾನು ಬೆಪ್ಪುತಕ್ಕಡಿ ಬೋಳೇಶಂಕರನಾಗಿದ್ದೆ! Literate ಮತ್ತು Educated ನಡುವೆ ಅಗಾಧ ವ್ಯತ್ಯಾಸವಿದೆ.

ಹೋಗ್ಲಿ ಬಿಡಿ, ಜೆರಾಕ್ಸ್ ಅಂಗಡಿ ಪ್ರಕರಣದಲ್ಲಿ ನನಗಂತೂ ಯಾವ ರೀತಿಯ loss ಆಗಲಿಲ್ಲ. ಜೆರಾಕ್ಸ್ ಅಂಗಡಿಯ ಮುಂದೆ ನಮ್ಮ DRDO ವಿಜ್ಞಾನಿ ಪ್ರೊಫೆಸರ್ ಸುಧೀಂದ್ರ ಹಾಲ್ದೊಡ್ಡೇರಿ'ಯವರು ಕುಳಿತಿದ್ದರು. ಮೊದಲಿಗೆ ನೋಡಿದ ಕೂಡಲೇ ಗೊತ್ತಾದರೂ, ಅಂಥಾ ದೊಡ್ಡ ವ್ಯಕ್ತಿ ಒಂದು ಚಿಕ್ಕ ಅಂಗಡಿಯ ಮುಂದೆ ಕುಳಿತಿರಬಹುದೇ ಎಂದು ಅನ್ನಿಸಿತು. ಥಟ್ಟನೆ ಫೇಸ್ಬುಕ್ ತೆರೆದು ಅವರ ಭಾವ ಚಿತ್ರ ನೋಡಿ, confirm ಮಾಡಿಕೊಂಡು ಸೀದಾ ಹೋಗಿ ಮಾತನಾಡಿಸಿಯೇಬಿಟ್ಟೆ. ಕೆಲವೇ ನಿಮಿಷಗಳ ಭೇಟಿಯಾದರೂ ಬಹಳ ಸೌಹಾರ್ದ ಭೇಟಿ ಎಂದರೆ ಅತಿಶಯೋಕ್ತಿಯೇನಲ್ಲ.

ಒಮ್ಮೆ ನಾನೊಂದು ಬೀದಿ ಬದಿಯ ಅಂಗಡಿಯಲ್ಲಿ ಏನನ್ನೋ ಖರೀದಿಸುತ್ತಿದ್ದೆ. ಅಂಗಡಿಯಾತನಿಗೆ ಫೋನ್ ಬಂತು. ಅವನು ಮಾತನಾಡುವಾಗ "ಪರ್ಪಲ್ ಕಲರ್ ಕಾರು ನಿಂತಿರುತ್ತೆ. ಅದರ ಎದುರಿಗಿನ ಅಂಗಡಿಯೇ ನನ್ನದು, ಬನ್ನಿ" ಅಂದ. ನನಗೋ ನಗು ಬಂತು. ಪಾಪ, ಅವರ್ಯಾರೋ ಇಲ್ಲಿಗೆ ಬಂದಾಗ ಈ ಪರ್ಪಲ್ ಕಾರು ಹೊರಟು ಹೋಗಿದ್ರೆ ಅವರೇನು ಮಾಡ್ತಾರೆ? ಅವರು ಮತ್ತೆ ಫೋನ್ ಮಾಡಿದಾಗ 'ಹಾಗೇ ಮುಂದೆ ಬನ್ನಿ ಸ್ವಾಮಿ, ಅಲ್ಲೊಂದು ಕರೀ ನಾಯಿ ನಿಂತಿರುತ್ತೆ. ಅದರ ಎದುರಿಗೇ ನನ್ನ ಅಂಗಡಿ" ಅಂತ ಹೇಳಬಹುದಾ? ಅಂತ. ನಗುತ್ತಲೇ ಆತನಿಗೆ ಕೇಳಿದೆ "ಸ್ವಾಮಿ ಅವರು ಬರುವಷ್ಟರಲ್ಲಿ ಈ ಕಾರು ಇಲ್ಲಿಂದ ಹೊರಟು ಹೋಗಿದ್ದರೆ ಏನ್ ಮಾಡ್ತೀರಾ?" ಅಂತ. ಅದಕ್ಕವನು ಸಿಡುಕಿಕೊಂಡು "ಅದು ನನ್ನ ಕಾರು. ಅದ್ಯಾವ ಮಗ ಎತ್ಕೊಂಡ್ ಓಯ್ತಾನೆ ನಾನೂ ನೋಡ್ತೀನಿ". ಪೆಟ್ಟಿ ಅಂಗಡಿಯವನು ಕಾರು ಇಟ್ಕೋಬಾರದು ಅಂತ ಯಾವ ಮಗ ಹೇಳಿದ್ದು ಅಂತೀನಿ!

ಇನ್ನೊಬ್ಬರ ಜೀವನದಲ್ಲಿ ಏನು ನಡೆಯುತ್ತಿದೆ ಊಹಿಸಿದ್ದೀರಾ?

ಒಮ್ಮೆ ಮುಸ್ಸಂಜೆಯ ವೇಳೆ ಎಲ್ಲಿಗೋ ನಡ್ಕೊಂಡ್ ಹೋಗ್ತಿದ್ದೆ. ಕೊಂಚ ದೂರದಲ್ಲಿ ನಿಂತಿದ್ದ ಒಬ್ಬಾಕೆ ಜೋರಾಗಿ ಫೋನಿನಲ್ಲಿ ಒದರುತ್ತಾ ಇದ್ದಳು "ನೀನೇ ನನ್ನ ಬಾಳಿನ ಬೆಳಕು ಕಣೋ"... ಬೀದಿಯಲ್ಲಿ ಅದೂ ಫೋನಿನಲ್ಲಿ ಹೀಗೆ ಹೇಳ್ತಾ ಇರೋದು ಕೊಂಚ ಸೋಜಿಗವೇ ಅನ್ನಿಸ್ತು. ನನಗೇನೂ urgency ಇರಲಿಲ್ಲ ಹಾಗಾಗಿ ನನ್ನ ನಡಿಗೆ ನಿಧಾನ ಮಾಡಿಕೊಂಡೆ. ಆಮೇಲೆ ಅವಳ ದನಿ ಕೊಂಚ ತಗ್ಗಿತ್ತು ಆದರೆ ಒರಟುತನ ಹೆಚ್ಚಿತ್ತು. "ನೋಡೋ, ನನಗೆ ಅವೆಲ್ಲಾ ಗೊತ್ತಿಲ್ಲ! ಆ ಗೂಬೆಗೆ ಸೋಡಾ ಚೀಟಿ ಕೊಡ್ತೀಯೋ ಇನ್ನೇನ್ ಮಾಡ್ತೀಯೋ ನನಗೆ ಗೊತ್ತಿಲ್ಲ, ಒಟ್ನಲ್ಲಿ ನನ್ನನ್ನ ಮದುವೆಯಾಗಬೇಕ್ ಅಷ್ಟೇ!" ಅದ್ಯಾಕೋ ಅಲ್ಲಿ ನಿಲ್ಲಲು ಮನಸ್ಸಾಗಲಿಲ್ಲ. ನವಿರಾದ ಭಾವನೆಯ ಮಾತುಗಳನ್ನು, ಕಣ್ಣಲ್ಲಿ ಕಣ್ಣಿಟ್ಟು ಹೇಳಬೇಕಾದ ಸವಿ ನುಡಿಗಳನ್ನು ಬೀದಿಯಲ್ಲಿ ನುಡಿಯೋದಾ ಎಂದುಕೊಂಡರೆ ಮಿಕ್ಕ ಮಾತುಗಳು ರೌಡಿಸಂ ರೀತಿ ಇದ್ದದ್ದು ಕೇಳಿ ಖೇದವಾಯ್ತು. ಆಕೆಯ ಭಾಷೆಯಲ್ಲಿ ಎಲ್ಲೂ ಕುಂದು ಕಾಣಲಿಲ್ಲ. ಆಕೆಯ ಮನಸ್ಸು ಮತ್ತು ಹೃದಯದ ಭಾಷೆಯಲ್ಲಿ ದೊಡ್ಡ ಕುಂದು ಇತ್ತು!

ನಾನಿದ್ದ ಅಪಾರ್ಟ್ಮೆಂಟ್'ನ ಮುಂದಿನ ಬೀದಿ ತುಂಬಾ busy. ದಟ್ಟ ವಾಹನಗಳ ಭರಾಟೆಯ ಮಧ್ಯೆ ಎದುರಿನ ಬೂತ್'ಗೆ ಹೋಗುವುದೂ ದುಸ್ತರ. ಬೀದಿಯ ಎರಡೂ ಬದಿಯಲ್ಲಿ ಸಾಲು ಸಾಲು ಅಂಗಡಿಗಳು. ಒಮ್ಮೆ ಹೀಗೆ ಹೊರಗೆ ಹೋದಾಗ ಇದ್ದಕ್ಕಿದ್ದಂತೆ traffic jam ಆಯ್ತು. ಅದೊಂದು T junction ಆಗಿದ್ದು ಮೂರೂ ಕಡೆ ವಾಹನಗಳೂ ವಾಹನಗಳು. ಒಂದು ಕಾರು ಕೆಟ್ಟು ನಿಂತಿದ್ದರಿಂದ ಹೀಗಾಯ್ತು. ಏನಾಯ್ತು ಅಂತ ಅರಿವಾಗಿದ್ದೆ ತಡ, ಅಲ್ಲಿನ ನಾಲ್ಕಾರು ಅಂಗಡಿಗಳ ಯಜಮಾನರೇ ಇರಬೇಕು, ಸೀದಾ ಹೊರಗೆ ಬಂದವರೇ, ನಿಂತಿದ್ದ ಕಾರನ್ನು ನೂಕುತ್ತ ಬದಿಗೆ ಸರಿಸಿದರು. ಆಮೇಲೆ ಮೂರು ಕಡೆ ನಿಂತು ಟ್ರಾಫಿಕ್ ಅನ್ನು ಕಂಟ್ರೋಲ್ ಮಾಡಿ ಸರದಿಯ ಮೇರೆಗೆ ಆ ಕಡೆ ಈ ಕಡೆ ಹೋಗುವಂತೆ ನೋಡಿಕೊಂಡು ಮುಂದಿನ ಹತ್ತೇ ನಿಮಿಷದಲ್ಲಿ ವಾಹನಗಳು ಸರಾಗವಾಗಿ ಸಾಗುವಂತೆ ನೋಡಿಕೊಂಡರು. ಒಂದು ಸಮಸ್ಯೆ ಎದುರಾದಾಗ complain ಮಾಡುವ ಬದಲು solution ಹುಡುಕಿ ಜಾರಿಗೆ ತಂದರೆ, ತೊಂದರೆಗಳೇ ಇರೋದಿಲ್ಲ ಅಲ್ಲವೇ?

ಏನೂ ಚಿಂತೆ ಮಾಡಬೇಡಿ, ಏನೂ ಆಗೋಲ್ಲ, ಎಲ್ಲ ಸರಿಹೋಗತ್ತೆ!

ಮನೆಯ ಒಳಗೆ ಲಕ್ಷಾಂತರ ಖರ್ಚು ಮಾಡಿ interior ಡಿಸೈನ್ ಮಾಡಿದ್ದು ಅದ್ಭುತವಾಗಿ ಕಂಡರೂ ಮನೆಯ ಹೊರಗೆ ಬಟ್ಟೆ ಒಣಗಿ ಹಾಕೋ ಪದ್ದತಿಯಲ್ಲಂತೂ ಏನೂ ಬದಲಾವಣೆ ಇಲ್ಲ. ಅದ್ಭುತವಾದ ಗಗನಚುಂಬಿ apartmentಗಳ ಮನೆಯ ಹೊರಗೆ ಬಟ್ಟೆಗಳ ಸಾಲು ಕಂಡಿದ್ದು ಸಾಮಾನ್ಯ ಅಂಶ. ಬಹಿರಂಗ ಹೇಗಿದ್ದರೇನು ಅಂತರಂಗ ಚೆನ್ನಾಗಿರಬೇಕು ಎಂಬ ತತ್ವ ಹೇಳಿರಬಹುದೇ?

"ಬೆರಳ ತುದಿಯಲ್ಲಿ ಬಂದಂಥ ಮಾತೊಂದೇ ಒಂದು, ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು"... ಮುಂದೆ ಹೀಗೇ ಸಮಯ ಸಿಕ್ಕಾಗ ನನ್ನ observation ಅನ್ನು ಕಲಿಕೆಯೊಂದಿಗೆ ಮಿಶ್ರಣ ಮಾಡಿ ಕೊಡುತ್ತೇನೆ. ಸದ್ಯಕ್ಕೆ ನಿಲ್ಲಿಸುತ್ತೇನೆ. ನಿಮ್ಮ ಅನಿಸಿಕೆ ತಿಳಿಸ್ತೀರಲ್ಲಾ?

English summary
Unstructured observation about Beautiful Bengaluru by visiting Kannada columnist Srinath Bhalle from Richmond, USA. Why people are not bothered about others? Are we moving in the right direction? Asks Srinath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X