• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್ನೊಬ್ಬರ ಜೀವನದಲ್ಲಿ ಏನು ನಡೆಯುತ್ತಿದೆ ಊಹಿಸಿದ್ದೀರಾ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಈ ಜೀವನ ಒಂದು ಟೆನಿಸ್ ಕೋರ್ಟ್'ನ ಪರದೆ (net) ಇದ್ದಂತೆ. ಈ ಕಡೆ ಇದ್ದವರಿಗೆ ಆ ಕಡೆಯವರು ಬಲೆಯ ಒಳಗೆ ಇದ್ದಂತೆ ಕಾಣುತ್ತದೆ. ಆ ಕಡೆ ಇದ್ದವರಿಗೆ ಈ ಕಡೆಯವರು ಬಲೆಯ ಒಳಗೆ ಇದ್ದ ಹಾಗೆ ಕಾಣುತ್ತದೆ ಅಂತ ಯಾವುದೋ ಒಂದು ಚಿತ್ರದ ಸಂಭಾಷಣೆ ಇದೆ. ಆದರೆ ಸತ್ಯವಾಗಿ ಆ ಇಬ್ಬರೂ ಬಲೆಯ ಒಳಗಿಲ್ಲ. ಈ ವಿಚಾರಕ್ಕೆ ನನ್ನದೇ ಒಂದು ಸಾಲು ಸೇರಿಸುವುದಾದರೆ, 'ಆ ಇಬ್ಬರೂ ಆ ಬಲೆಯ ಒಳಗಿಲ್ಲ, ಆದರೆ ಇಬ್ಬರೂ ಸಿಲುಕಿರುವ ಬಲೆಯು ಅವರಿಗೆ ಕಣ್ಣಿಗೆ ಕಾಣೋದಿಲ್ಲ' ಅಂತ.

ಟೆನಿಸ್ ಕೋರ್ಟ್'ನ ಬಲೆಯ ವಿಚಾರವನ್ನೇ ತೆಗೆದುಕೊಂಡರೆ ಇಬ್ಬರೂ ಒಬ್ಬರನ್ನೊಬ್ಬರು ನೋಡಬಹುದು. ನಮ್ಮ ನಿತ್ಯ ಜೀವನದಲ್ಲಿ ಇದು ಸಾಧ್ಯವೇ? ಖಂಡಿತ ಇಲ್ಲ. ಒಂದೇ ಸೂರಿನ ಅಡಿಯಿರುವ ಗಂಡ-ಹೆಂಡತಿಯ ಸನ್ನಿವೇಶವನ್ನೇ ತೆಗೆದುಕೊಂಡರೆ, ಗಂಡನ ಒಳ ಬೇಗುದಿ ಸಂಪೂರ್ಣವಾಗಿ ಹೆಂಡತಿಗೆ ಅರಿವಿರುವುದಿಲ್ಲ, ಹಾಗೆಯೇ ಹೆಂಡತಿಯ ಮನದಲ್ಲಿ ಹೃದಯದಲ್ಲಿ ಏನು ನಡೆಯುತ್ತಿದೆ ಎಂಬ ಸಂಪೂರ್ಣ ಚಿತ್ರಣ ಗಂಡನಿಗೆ ಇರುವುದಿಲ್ಲ. ಆದರ್ಶ ದಂಪತಿಗಳನ್ನೇ ಮನದಲ್ಲಿ ಇಟ್ಟುಕೊಂಡು 'ಸಂಪೂರ್ಣವಾಗಿ' ಎಂಬ ಮಾತನ್ನು ಹೇಳಿದ್ದು.

ಏನೂ ಚಿಂತೆ ಮಾಡಬೇಡಿ, ಏನೂ ಆಗೋಲ್ಲ, ಎಲ್ಲ ಸರಿಹೋಗತ್ತೆ!

ಈಗ ಈ ಸನ್ನಿವೇಶ ತೆಗೆದುಕೊಳ್ಳೋಣ. ಇಬ್ಬರ ನಡುವೆ ಇರುವ ಬಲೆಯು ಒಂದು ದೊಡ್ಡ ಗೋಡೆ ಅಂತ ಅಂದುಕೊಳ್ಳಿ. ಆ ಕಡೆ ಇರುವವರು ಈ ಕಡೆಯವರಿಗೆ ಕಾಣಲಾಗದು. ಅದರಂತೆಯೇ ಈ ಕಡೆ ಇರುವವರ ಅರಿವು ಆ ಕಡೆಯವರಿಗೆ ಇಲ್ಲ ಅಂತ. ಅರ್ಥಾತ್, ಒಬ್ಬರ ಜೀವನದಲ್ಲಿ ಏನು ನಡೆಯುತ್ತಿದೆ ಎನ್ನುವ ಅರಿವು ಮತ್ತೊಬ್ಬರಿಗೆ ಇಲ್ಲ ಎಂಬುದೇ ಸಾರಾಂಶ.

ಕೆಲವೊಮ್ಮೆ ಹೀಗೆ ಆಗುತ್ತೆ. ಯಾರದ್ದೋ ಮೊಬೈಲಿಗೆ ಕರೆ ಮಾಡುತ್ತೇವೆ. ಅವರು ಫೋನ್ ತೆಗೆಯೋದಿಲ್ಲ. ಹಾಗಂತ ಅವರ ಮನೆಯ ನಂಬರ್'ಗೆ ಕರೆ ಮಾಡುತ್ತೇವೆ. ಅಲ್ಲೂ ಕರೆ ಸ್ವೀಕರಿಸೋದಿಲ್ಲ. ಸ್ವಲ್ಪ frustration ಶುರುವಾಗುತ್ತದೆ. ಕೊಂಚ ಹೊತ್ತು ಕಳೆದು ಮತ್ತೊಮ್ಮೆ, ಮಗದೊಮ್ಮೆ ಕರೆ ಮಾಡುತ್ತೇವೆ. ಅವರು ಫೋನ್ ತೆಗೆಯೋದಿಲ್ಲ. ಅಲ್ಲಿಗೆ ಸಹನೆಯ ಕಟ್ಟೆ ಒಡೆಯುತ್ತೆ. ಮನಸ್ಸನ್ನು ಏನೆಲ್ಲಾ ಆಲೋಚನೆಗಳು. ತೀರಾ ಹತ್ತಿರದವರಾದರೆ 'ಅವರಿಗೇನಾಯ್ತೋ? ನಮ್ಮಿಂದ ಏನಾದ್ರೂ ತಪ್ಪಾಗಿದೆಯೇ? ಮೊನ್ನೆಯೂ ಅವರು ಯಾಕೋ ಮುಖ ಕೊಟ್ಟು ಮಾತನಾಡಲಿಲ್ಲ...' ಹೀಗೆ ಏನೇನೋ ಆಲೋಚನೆಗಳು.

ಕೊಂಚ ದೂರದವರಾದರೆ 'ಅವರಿಗೆ ಬೇಕಿರೋ ತನಕ ನಮ್ಮ ಸಹಾಯ ಬೇಕಿತ್ತು... ಈಗ್ಯಾಕೆ ನಮ್ಮನ್ನು care ಮಾಡ್ತಾರೆ ಹೇಳಿ?' ಅಂತ ಮನಸ್ಸು ಚಿಕ್ಕದು ಮಾಡಿಕೊಂಡು ಒದ್ದಾಡೋದು ಅಥವಾ ಮನಸ್ಸನ್ನು ಕಹಿಮಾಡಿಕೊಳ್ಳೋದು. ಇಷ್ಟೆಲ್ಲಾ ಆದ ಮೇಲೆ ಅವರಿಂದ ಕರೆ ಬರುತ್ತೆ. ಆಗ ನಮಗೆ ಬಿಗುಮಾನ. ಆಯ್ತತ್ಲಾಗೆ ಅಂತ ಫೋನ್ ಕರೆ ಸ್ವೀಕರಿಸಿದಾಗ, ಅವರು "ಸಾರೀ ಕಣ್ರೀ, ಮಾವನವರನ್ನು ಆಸ್ಪತ್ರೆಗೆ ಸೇರಿಸಿದ್ವಿ. ನಿನ್ನೆ ಮಧ್ಯರಾತ್ರಿಯಿಂದ ಇಲ್ಲೇ ಇದ್ದೀವಿ. ICU ಮುಂದೆಯೇ ಕೂತಿದ್ದಾಗ ನೆನಪಾಯ್ತು ಮೊಬೈಲು ಕಾರಿನಲ್ಲೇ ಬಿಟ್ಟಿದ್ದೆ ಅಂತ"... ಹೀಗೇ ಹೇಳ್ತಾ ಹೋದಂತೆ ಕೇಳುತ್ತಾ ಹೋದವರ ತಲೆ ನಾಚಿಕೆಯಿಂದ ಬಾಗುತ್ತಾ ಸಾಗುತ್ತೆ.

ಭಲ್ಲೆ ಭಲ್ಲೆ! ಶ್ರೀನಾಥ್ ಭಲ್ಲೆಯವರ 'ನವರಸಾಯನ' ಅಂಕಣದ ನೂರನೆಯ ಬರಹ!

ಎಲ್ಲಾ ಸಮಯದಲ್ಲೂ ಇಂಥಾ ಗಂಭೀರ ಸಂದರ್ಭಗಳೇ ಇರೋದಿಲ್ಲ. ಯಾರನ್ನೋ ಕಾಯ್ತಾ ಇರ್ತೀರಾ ಆದ್ರೆ ಅವರು ಬರೋದೇ ಇಲ್ಲ. ಆಮೇಲೆ ರಾತ್ರಿ ಯಾವಾಗ್ಲೋ ಒಂದು ಮೆಸೇಜ್ ಕಳಿಸಬಹುದು, ಎಲ್ಲೋ ಹೊರಗೆ ಹೋಗಿದ್ವಿ ಬರೋದಕ್ಕೆ ಆಗ್ಲಿಲ್ಲ, ನಾಳೆ ಬರ್ತೀವಿ. ಇವರು ಅವರಿಗಾಗಿ ಕಾಯ್ತಾ ಇದ್ದಾರೆ ಅನ್ನೋದು ಬಹುಶ: ಅವರು ಅಷ್ಟಾಗಿ ಹಚ್ಚಿಕೊಂಡಿಲ್ಲ. ಆ ಕಡೆಯವರು ಯಾಕೆ ಬರಲಿಲ್ಲ ಅಂತ ಇವರಿಗೆ ಗೊತ್ತಿಲ್ಲ. ಕಾಯುವ ಬದಲು ಒಂದು ಮಾತು ಕೇಳಬಹುದಿತ್ತಲ್ವಾ ಅನ್ನೋದಕ್ಕಿಂತ ಅದು ಯಾರು ಬರಬೇಕಿತ್ತೋ ಅವರ ಜವಾಬ್ದಾರಿ ಆಗಿರುತ್ತದೆ, ಉಡಾಫೆತನ ಬೇಡ ಅಷ್ಟೇ!

ಈ ಒಂದು ಕಥೆಯನ್ನು ನೀವೆಲ್ಲರೂ ವಾಟ್ಸಪ್ಪ್'ನಲ್ಲಿ ಓದಿಯೇ ಇರುತ್ತೀರಿ. ತನ್ನ ಮಗ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುತ್ತಾನೆ, ಆಪರೇಷನ್ ಆಗಬೇಕಿರುತ್ತದೆ. ಆದರೆ ವೈದ್ಯರಾದವರು ಇನ್ನೂ ಬಂದೇ ಇರೋದಿಲ್ಲ. ತಡವಾಗಿ ಬಂದ ವೈದ್ಯರ ಮೇಲೆ ಹರಿಹಾಯುತ್ತಾನೆ ಆ ತಂದೆ. 'ಏನ್ ಡಾಕ್ಟ್ರೇ ? golf ಆಡೋಕ್ಕೆ ಹೋಗಿದ್ರಾ ಹೇಗೆ? ನಾವು ಇಲ್ಲಿ ಮಗನ ಪ್ರಾಣ ನಿಮ್ಮ ಕೈಯಲ್ಲಿಟ್ಟು ಕಾಯ್ತಾ ಇದ್ದೀವಿ ಆದರೆ ನೀವು ಈಗ ಬರ್ತಿದ್ದೀರಾ' ಇತ್ಯಾದಿ.

ನಗುಮೊಗದಿಂದಲೇ ಆತನಿಗೆ ಸಮಾಧಾನ ಮಾಡಿದ ವೈದ್ಯ ಯಶಸ್ವಿಯಾಗಿ operation ಮುಗಿಸಿ ಹೊರಡುವ ಮುನ್ನ, 'ತಾನೀಗ ಅರ್ಜೆಂಟ್ ಆಗಿ ಸ್ಮಶಾನಕ್ಕೆ ಹೋಗಬೇಕು, ಸತ್ತಿರುವ ಮಗನ ಸಂಸ್ಕಾರ ಮಾಡೋದಿದೆ' ಎನ್ನುತ್ತಾರೆ. ಇದು ನೈಜವೋ ಅಥವಾ ಕಥೆಯೋ ಅದು ಬೇರೆ ವಿಷಯ. ಆದರೆ ಒಬ್ಬರ ಜೀವನದಲ್ಲಿ ಏನು ನಡೆಯುತ್ತಿದೆ ಎಂದೇ ಅರಿವಿರದೆ ನಾವು ಏನೇನಲ್ಲಾ ಊಹಿಸಿಕೊಂಡು ಜೀವನ ಹಾಳುಮಾಡಿಕೊಳ್ಳುತ್ತೇವೆ ಅಲ್ಲವೇ?

ಎಷ್ಟೋ ಸಾರಿ ಒಂದು ಮನದಲ್ಲಿ ಮತ್ತೊಬ್ಬರ ಬಗ್ಗೆ ಬೇರೆಯೇ ಅಭಿಪ್ರಾಯ ಮೂಡುವುದಕ್ಕೆ ಮುಖ್ಯ ಕಾರಣವೇ 'ಮತ್ತೊಬ್ಬರ ಜೀವನದಲ್ಲಿ ಏನು ನಡೆಯುತ್ತಿದೆ ಎಂಬ ಅರಿವು ಇಲ್ಲದೆ ಹೋಗುವುದು'. ಹಾಗಂತ ಎಲ್ಲರ ಮನೆಯ ವಿಷಯ ಎಲ್ಲರಿಗೂ ಹೇಳಬೇಕು ಅಂತಲ್ಲಾ. ಇಂದಿನ ದಿನಗಳ ಬಗ್ಗೆಯೇ ಹೇಳುವುದಾದರೆ, ಯಾರಿಗೋ ಒಂದು ಈಮೇಲ್ ಅಥವಾ ವಾಟ್ಸಪ್ಪ್ ಮೆಸೇಜ್ ಕಳಿಸುತ್ತೇವೆ. ಅವರಿಂದ ಉತ್ತರವೇ ಬಂದಿರೋದಿಲ್ಲ. ಕೆಲವೊಮ್ಮೆ ಅವರು ಓದಿದ್ದಾರೆ ಅಂತ ಗೊತ್ತಾಗುತ್ತೆ, ಆದರೆ ಹಲವೊಮ್ಮೆ ಅದೂ ಗೊತ್ತಾಗೋಲ್ಲ. ಅವರಿಂದ ಉತ್ತರ ಬರದೇ ಹೋಗುವುದಕ್ಕೆ ಕಾರಣ ಅವರು ನಮ್ಮನ್ನು avoid ಮಾಡ್ತಾ ಇದ್ದಾರೆ ಅನ್ನೋ ನಮ್ಮ ಊಹಾಪೋಹ. ಬಹುಶ: ಒಂದು ದಿನದಲ್ಲಿ ಏನೂ ಅನ್ನಿಸದೇ ಹೋದರೂ ಕ್ರಮೇಣ ಅವರ ಬಗ್ಗೆ ಏನೇನೋ ಭಾವನೆಗಳು ಮೂಡಲು ಆರಂಭವಾಗುತ್ತದೆ. ಉತ್ತರ ಬಾರದ ದಿನಗಳು ಹೆಚ್ಚಾದಷ್ಟೂ ಮನಸ್ತಾಪದ ಕಂದಕ ಅಗಲವಾಗುತ್ತಾ ಹೋಗುತ್ತೆ.

ವಿಧಿಯಿಲ್ಲದ ಪರಾವಲಂಬಿ ಜೀವನ ನಿಮ್ಮದಾಗದಿರಲಿ

ಒಬ್ಬರ ಬದುಕಿನಲ್ಲಿ ನಡೆಯುತ್ತಿರಬಹುದಾದ ಸಂತಸ ಅಥವಾ ವೇದನೆಯ ಅರಿವು ನಮಗಿದ್ದಾಗ ಅದಕ್ಕೆ ತಕ್ಕಂತೆ ಪ್ರತಿಸ್ಪಂದಿಸುವ ಮನಸ್ಸು ನಮಗೂ ಇರುತ್ತೆ. ಆದರೆ ಇರಲೇಬೇಕೆಂದೇನೂ ಇಲ್ಲ. ಒಬ್ಬರ ಬದುಕಿನಲ್ಲಿ ಇಣುಕಿ ನೋಡಿದಾಗ ಅವರ ನೋವು ಅರ್ಥವಾಗಬಹುದು. ಆದರೆ ಆ ವ್ಯಕ್ತಿಗೆ ನೀವು ಒಂದು ಪರಿಧಿಯನ್ನು ದಾಟಿ ಅವನ ಜೀವನದಲ್ಲಿ ಅನಾವಶ್ಯಕವಾಗಿ ಮೂಗು ತೂರಿಸುತ್ತಿದ್ದೀರಿ ಎಂದು ಅವರಿಗೇನಾದರೂ ಅನ್ನಿಸಿದರೆ ನಿಮ್ಮನ್ನು ತಕ್ಕಮಟ್ಟಿಗೆ ದೂರವಿರಿಸುತ್ತಾರೆ. ಹಾಗಾಗಿ ಒಬ್ಬರ ಜೀವನವನ್ನು ಅರಿಯುವ ಮತ್ತು ಬೇಕಿದ್ದರೆ ತಕ್ಕಂತೆ ಸಲಹೆ ನೀಡುವ ಕಲೆಯನ್ನು ಮೊದಲು ಬೆಳೆಸಿಕೊಳ್ಳಬಹುದು.

ಇಷ್ಟಕ್ಕೂ ಈ ಕಲೆಯನ್ನು ಬೆಳೆಸಿಕೊಳ್ಳಬೇಕಾದ ಅವಶ್ಯಕತೆಯಾದರೂ ಏನು? 'ಪರೋಪಕಾರಾರ್ಥಂ ಇದಂ ಶರೀರಂ' ಎಂಬ ಉದ್ದೇಶ ಇಲ್ಲಿ ಇದ್ದರೂ ಅದು ನಂತರದ್ದು. ಈ ಕಲೆಯನ್ನು ಬೆಳೆಸಿಕೊಂಡಾಗ ನಾವೂ ಅವರಲ್ಲಿ ಒಬ್ಬರಾಗಿ ನಮ್ಮ ಜೀವನವನ್ನು ಅರ್ಥೈಸಿಕೊಳ್ಳಲು ಆರಂಭಿಸುತ್ತೇವೆ. ನಾವು ಆ ವ್ಯಕ್ತಿಯೇ ಆಗಿ ಅವರ ನೋವನ್ನು ಅನುಭವಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಯತ್ನವನ್ನೂ ಮಾಡುತ್ತೇವೆ.

ಹೀಗೆ ಒಬ್ಬೊಬ್ಬರ ಜೀವನವನ್ನು ಅರಿಯುತ್ತಾ ಸಾಗಿದಾಗ ಅದು ಕೇವಲ ಒಬ್ಬ ವ್ಯಕ್ತಿಯ ಜೀವನದ ಸಂದರ್ಭ ಅಥವಾ ಸಂಕಟ ಎಂದಾಗದೆ ಅಲ್ಲೊಂದು ಗುಂಪು ಅಥವಾ ಸಮೂಹ ಇದೆ ಎಂಬ ಅರಿವು ಮೂಡುತ್ತದೆ. ಒಂದೆಡೆ ಸಮಸ್ಯೆಯನ್ನು ಅರ್ಥೈಸಿಕೊಂಡ ಜ್ಞಾನ ಮತ್ತೊಂದೆಡೆ ಅದಕ್ಕೆ ಪರಿಹಾರ ಬೇಕಿರುವ ಸಮೂಹ ಎಂದಿದ್ದಾಗ ನಿಮ್ಮಲ್ಲಿ ತಾನಾಗಿಯೇ ಆ ಪರಿಹಾರವನ್ನು ಹಂಚಿಕೊಳ್ಳುವ ಮನಸ್ಸಾಗುತ್ತದೆ. ಪರಿಹಾರ ಸೂಚಕವು ಸಮಾಜ ಸೇವೆಯೂ ಆಗಿರಬಹುದು ಅಥವಾ ವ್ಯಾವಹಾರಿಕವೂ ಆಗಿರಬಹುದು. ಯಾವ ದಾರಿ ಆಯ್ದುಕೊಳ್ಳುತ್ತೀರಾ ಎಂಬುದಕ್ಕಿಂತ ನಾಲ್ಕು ಜನಕ್ಕೆ ನಿಮ್ಮಿಂದ ಸಹಾಯವಾಗುವುದು ಎಂಬ ಮನಸ್ಸಂತೋಷ ನಿಮ್ಮದಾಗುತ್ತದೆ.

ಮೇಲೆ ಹೇಳಿದ ಮಾತುಗಳೆಲ್ಲಾ demand ಅಂಡ್ supplyನ ಮತ್ತೊಂದು ಆಯಾಮವೇ ಆಗಿದೆ. ಸಾಧಕರುಗಳು ಅನೇಕ, ಸಾಧನೆಗಳೂ ಅನೇಕ. ಆದರೆ ಈ ಸಾಧಕರ ಸಾಧನೆಗಳಲೆಲ್ಲಾ ರಾತ್ರೋರಾತ್ರಿ ಆಗಿದ್ದಲ್ಲಾ. ಗುಡ್ಡಗಾಡಿನ ಜನರ ಜೀವನದ ಸಂಕಷ್ಟಗಳಿಗೆ ಅವರ ಜೊತೆ ನಿಂತು ತಮ್ಮ ಜೀವನವನ್ನೇ ಮುಡಿಪಿಟ್ಟು ವೈದ್ಯರ ಬಗ್ಗೆ ಕೇಳಿರುತ್ತೇವೆ, ಅಥವಾ ಕಾಮಾಟಿಪುರದ ಹೆಣ್ಗಳ ಸಂವೇದನೆ ಅರಿತು ಅವರ ಬಾಳಿಗೆ ಬೆಳಕಾಗುವ ಹಾದಿ ಕಲ್ಪಿಸಿಕೊಟ್ಟ ಸಾಧಕರ ಬಗ್ಗೆ ಕೇಳಿರುತ್ತೇವೆ. ಇಂಥ ಸಾಧನೆಗಳೆಲ್ಲಾ ಅಹೋರಾತ್ರಿ ಆದದ್ದಲ್ಲಾ.

ಮೊದಲಿಗೆ, ಇಂಥಾ ಸಾಧಕರಿಗೂ ಮತ್ತು ವೇದನೆಯನ್ನು ಅನುಭವಿಸುವವರಿಗೂ ಕಾಣದ ಗೋಡೆಯೇ ಮಧ್ಯೆ ಇದ್ದಿದ್ದು. ಅವರ ಬದುಕು ಇವರಿಗೆ ಕಾಣುವಂಥದ್ದಾಗಿರಲಿಲ್ಲ. ಇವರ ಬಂದು ಏನೂ ಅಂತಲೇ ಮತ್ತೊಬ್ಬರಿಗೆ ಗೊತ್ತಿರಲಿಲ್ಲ. ಇಂಥಾ ಗೋಡೆಯನ್ನು ಸಾಧಕರು ಒಮ್ಮೆಲೇ ತೊಡೆದು ಹಾಕಿ ಬೆಳಕು ನೀಡಿದ ದೈವ ಅಲ್ಲ. ಇವರ ಸಾಧನೆಯ ಮೊದಲ ದಿನಗಳ ಬಗ್ಗೆ ಕೇಳಿದಾಗ 'ನಾವಾಗಿದ್ರೆ ಆ ಕೆಲಸ ಅಲ್ಲೇ ಬಿಟ್ಹಾಕಿ ಓಡಿ ಬಿಡ್ತಿದ್ವಿ' ಅನ್ನಿಸಿರುತ್ತೆ. ಆ ಕಾಣದ ಗೋಡೆಯನ್ನು ನಿಧಾನವಾಗಿ ಒಡೆಯುತ್ತಾ ಕೆಡವುತ್ತಾ ತಮ್ಮ ಹಾದಿಯನ್ನು ಅವರ ಜೀವನದತ್ತ ನಡೆಸಿಕೊಂಡು ಸಾಗಿ, ಅವರೊಂದಿಗೆ ಸೇರಿ, ಅವರನ್ನು ಅರಿತು ಅವರುಗಳಿಗೆ ಸಹಾಯಕವಾಗಿ ನಿಲ್ಲಬೇಕಾದರೆ ಆತ್ಮಸ್ಥೈರ್ಯಬೇಕು.

ಈ ಆತ್ಮಸ್ಥೈರ್ಯ ಬೆಳೆಸಿಕೊಳ್ಳಲು ತಪಸ್ಸು ಮಾಡಬೇಕಿಲ್ಲ. ಇಂದಿನಿಂದಲೇ ಕೆಲಸ ಮಾಡಿ ಮಹಾನ್ ಸಾಧಕ ಆಗುತ್ತೇನೆ ಎಂಬ ಕನಸೂ ಬೇಡ. ನಮ್ಮ ನಮ್ಮ ಮನೆಗಳಲ್ಲಿನ ಮನಗಳ ನಡುವೆ ಎದ್ದಿರುವ ಗೋಡೆಯನ್ನು ಮೊದಲು ಕೆಡವೋಣ. ಮಿಕ್ಕಿದ್ದೆಲ್ಲಾ ತಂತಾನೇ ಸರಿಹೋಗುತ್ತೆ. ಒಂದು ಗೆರೆ ಎಳೆಯುವ ಮುನ್ನ ಚುಕ್ಕಿ ಇಡುವಂತೆ, ಮರವಾಗುವ ಮುನ್ನ ಸಸಿಯಾಗುವಂತೆ ನಿಷ್ಠೆಯಿಂದ ಇಟ್ಟ ಹೆಜ್ಜೆಗಳು ಧೃತಿಗೆಡದಂತೆ ಸಾಗಿದರೆ ಫಲ ಸಿಗುವುದರಲ್ಲಿ ಸಂಶಯವೇ ಇಲ್ಲ. ಏನಂತೀರಿ?

English summary
Together let's break down the barriers and start seeing what's happening in the life of others and understand their mind in a better way. Writes Srinath Bhalle from Richmond, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more