ಒಂದಿಲ್ಲೊಂದು ದಿನ ನೀವು ಹಾಟ್ ಸೀಟಲ್ಲಿ ಕುಳಿತಿರುತ್ತೀರಿ!

Posted By: ಶ್ರೀನಾಥ್ ಭಲ್ಲೆ, ರಿಚ್ಮಂಡ್
Subscribe to Oneindia Kannada

ಕನ್ನಡದ ಕೋಟ್ಯಾಧಿಪತಿ ಆಗಬಹುದು, ಆಸ್ಟ್ರೇಲಿಯಾದ 'Millionaire' ಆಗಿರಬಹುದು ಅಥವಾ ಹಿಂದಿಯ 'ಕರೋಡ್ ಪತಿ'ಯಾಗಿರಬಹುದು ಒಟ್ಟಿನಲ್ಲಿ ಸ್ಪರ್ಧಾಳುಗಳು ಆ 'ಹಾಟ್ ಸೀಟ್'ಗಾಗಿ ಹಾತೊರೆದು ಕೂತು ಪ್ರಶ್ನೆಗಳನ್ನು ಎದುರಿಸುತ್ತಾರೆ. ಆದರೆ ಇದೊಂದು ಆಟ ಇರಬಹುದು ಆದರೆ ಲಘುವಾಗಿ ಪರಿಗಣಿಸದಿರಿ.

ಒಬ್ಬಾತ ತಕ್ಕ ಮಟ್ಟಿಗೆ ಗೆದ್ದು ತನ್ನ ಊರಿಗೆ ಹೋದ. ಅಲ್ಲಿ ಯಾರೋ, 'ಅಲ್ಲಾ ಕಣ್ಲಾ! ಅದೊಂದು ಪ್ರಶ್ನೆಗೆ ಅದೆಷ್ಟು ಒದ್ದಾಡಿ ಕೊನೆಗೆ ಉತ್ತರ ಕೊಟ್ಯಲ್ಲಾ ಸ್ವಲ್ಪ ಮುಂಚೆನೇ ಸರಿ ಉತ್ತರ ಕೊಡೋದಲ್ವಾ?' ಅಂದರಂತೆ. ಅದಕ್ಕೆ ಈತನ ಉತ್ತರ 'ನೀನು ಒಂದ್ಸಾರಿ ಆ ಸೀಟ್ ಮೇಲೆ ಕೂತ್ಕೋ, ಬಿಸಿ ತಟ್ಟಿದ್ ಮೇಲೆ ನನಗೆ ಬಂದು ಹೇಳು' ಅಂತ. ಇದ್ದು ಹಾಸ್ಯ ಅಲ್ಲ, ನಿಜಕ್ಕೂ ಕರೋಡ್ ಪತಿ ಸ್ಪರ್ಧಾಳು ಒಬ್ಬನ ಅನುಭವ.

'ವೀಕೆಂಡ್ ವಿತ್ ರಮೇಶ್' ತಂಡಕ್ಕೆ ಹ್ಯಾಟ್ಸ್ ಆಫ್ ಹೇಳಿದ ಸಾಧಕರು

ಮೊದಲ ಸುತ್ತಿನಲ್ಲಿ ತಮ್ಮಂತೆ ಇತರ ಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಿ ಅತ್ಯಂತ ಕಡಿಮೆ ಸಮಯದಲ್ಲಿ ಸರಿಯಾದ ಉತ್ತರ ನೀಡುವುದರೊಂದಿಗೆ ಎಲ್ಲರಿಗಿಂತ ಮುಂದೆ ಸಾಗುವ ಸ್ಪರ್ಧಿ ಆ ಹಾಟ್ ಸೀಟ್'ನಲ್ಲಿ ಕೂರಲು ಯೋಗ್ಯನಾಗುತ್ತಾನೆ. ಆ ನಂತರ ಪ್ರಶ್ನೋತ್ತರ ಎಂಬ ಸರಣಿಯಲ್ಲಿ ಮೂರು ಅಥವಾ ನಾಲ್ಕು ಬಾರಿ ಮತ್ತೊಬ್ಬರ ಆಸರೆ ಬೇಡಬಹುದು.

The life itself is a reality show

ಒಗ್ಗಟ್ಟಿನಲ್ಲಿ ಬಲವಿದೆ ಎಂಬುದರ ಪ್ರತೀಕ audience'ನ ಸಹಾಯ ಬೇಡೋದು. ನಾನು ತಿಳಿದ ಮಟ್ಟಿಗೆ ಈ ನಡೆ ಇಂದಿಗೂ ತಪ್ಪಾಗಿಲ್ಲ. Audience'ನ ಕಡೆ ಪ್ರಶ್ನೆ ಹೋದರೆ ಉತ್ತರ ಖಂಡಿತ ಸಿಕ್ಕೇ ಸಿಗುತ್ತದೆ. ಕಷ್ಟದಲ್ಲಿದ್ದ ಪಾಂಡವರಿಗೆ ಕೃಷ್ಣನ ಸಹಾಯ ಇದ್ದಂತೆ!

ಸ್ನೇಹಿತರಿಗೆ ಕರೆ ಮಾಡೋದು ಮತ್ತೊಂದು ಬಲ. ಇದು ಒಂದು ರೀತಿ ಕರ್ಣನಿಗೆ ಸಿಕ್ಕ ದುರ್ಯೋಧನ ಎಂಬ ಬೆಂಬಲದಂತೆ. optionಸ್ ಇದೆ, ಆದರೆ ಸಮಯಕ್ಕೆ ಸರಿಯಾಗಿ ಉಪಯೋಗಕ್ಕೆ ಬರುತ್ತೋ ಇಲ್ವೋ ಗ್ಯಾರಂಟಿ ಇಲ್ಲ.

ಧಾರಾವಾಹಿಗಳೆಂಬ ರಾಯರ ಕುದುರೆ, ರಿಯಾಲಿಟಿ ಶೋ ಎಂಬ ಪೀಡೆ

ಜೊತೆಗಾರರ ಸಹಾಯ ಎರಡು ರೀತಿಯದು. ಕರ್ಣನಿಗೆ ಆಶ್ರಯ ಕೊಟ್ಟ ದುರ್ಯೋಧನನಂತೆಯೂ ಆಗಬಹುದು ಅಥವಾ ಕರ್ಣನನ್ನು ಬಲವಾಗಿ ನಂಬಿದ್ದ ದುರ್ಯೋಧನನ ಕಥೆಯೂ ಆಗಬಹುದು.

50:50 ಅನ್ನೋದು ಒಂಥರಾ ಅರ್ಜುನ-ದುರ್ಯೋಧನರ ಮುಂದೆ ಕೃಷ್ಣ ಇಟ್ಟ ಎರಡು options ರೀತಿ. ಸೈನ್ಯ ತೆಗೆದುಕೊಳ್ಳುವುದೋ, ಕೃಷ್ಣನನ್ನು ತೆಗೆದುಕೊಳ್ಳುವುದೋ ಅನ್ನೋ ಹಾಗೆ. ಕೆಲವೊಮ್ಮೆ ದುರ್ಯೋಧನನ ನಿರ್ಧಾರವಾಗುತ್ತದೆ ಮತ್ತೆ ಕೆಲವೊಮ್ಮೆ ಅರ್ಜುನನ ನಿರ್ಣಯದಂತೆ.

ಒಮ್ಮೆ ಆ ಆಸರೆ ನೀಡಬಲ್ಲವರೂ ರಂಗದಿಂದ ನಿರ್ಗಮನವಾದರು ಎಂದಾದ ಮೇಲೆ ಆ ಸ್ಪರ್ಧಾಳು 'ಅಭಿಮನ್ಯು' ಅಲ್ಲ 'ಧರ್ಮರಾಯ'ನೇ ಸರಿ! ಎಲ್ಲ ಬಾಹುಬಲಗಳೂ ಉರುಳಿದ ಮೇಲೆ ಬುದ್ಧಿಬಲವೊಂದೇ ನಡೆಯೋದು! ಯಕ್ಷಪ್ರಶ್ನೆ ಪ್ರಸಂಗದಂತೆ!

ಇಲ್ಲಿ ಸ್ಪರ್ಧಾಳು ಒಂದರ್ಥದಲ್ಲಿ ಧರ್ಮರಾಯ ಅಷ್ಟೇ! ಅರ್ಥಾತ್ ಯಕ್ಷಪ್ರಶ್ನೆ ಎದುರಿಸುತ್ತಾ ತಮ್ಮ ಜ್ಞಾನದ ಬಲದಿಂದ ಹೋರಾಡುತ್ತಾರೆ. ಆದರೆ ಧರ್ಮರಾಯನಂತೆ ಎಲ್ಲ ಪ್ರಶ್ನೆಗೂ ಉತ್ತರ ಗೊತ್ತಿರುವುದಿಲ್ಲ. ಎದುರಿಸಿ ಉತ್ತರವೀಯಲು ಆಗದೆ ಹೋದಾಗ ಶಸ್ತ್ರಾಸ್ತ್ರ ಚೆಲ್ಲಿ 'ಐ ಕ್ವಿಟ್' ಎಂದಾಗ ಭೀಷ್ಮರೋ ಅಥವಾ ದ್ರೋಣರೋ ಆಗುತ್ತಾರೆ. ತಪ್ಪು ಉತ್ತರಕೊಟ್ಟರೆ ಯಕ್ಷಪ್ರಶ್ನೆಗೆ ನಿರ್ಲಕ್ಷ್ಯ ತೋರಿದ ನಾಲ್ವರು ಪಾಂಡವರಂತೆ.

ಬಿಡಿ ವಿಷಯ ಇದಲ್ಲ! ಒಮ್ಮೆ 'ಕರೋಡ್ ಪತಿ' ಕಾರ್ಯಕ್ರಮದ ಕೊನೆಯಲ್ಲಿ ಅಮಿತಾಬ್ ಅವರು ಹೇಳಿದ್ದು ಹೀಗೆ "ಇಲ್ಲಿನ ಹಾಟ್ ಸೀಟ್ ನೋಡಿದ್ದೀರಿ. ಒಂದು ವಿಷಯ ನಿಜ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಂದಲ್ಲಾ ಒಂದು ಸಾರಿ ಯಾವುದೋ ಒಂದು ಸನ್ನಿವೇಶದಲ್ಲಿ 'ಹಾಟ್ ಸೀಟ್'ನಲ್ಲಿ ಕುಳಿತಿಯೇ ಇರುತ್ತಾರೆ. ನೀವು ಕೂತ ಹಾಟ್ ಸೀಟ್'ನ ಬಗ್ಗೆ ಒಮ್ಮೆ ನೆನಪಿಸಿಕೊಳ್ಳಿ" ಅಂತಂದು ತಲೆಯಲ್ಲಿ ಹುಳುಬಿಟ್ಟು ಗುಡ್ ನೈಟ್ ಹೇಳಿ ಹೊರಟುಹೋದರು! ವಾರಾಂತ್ಯ ನಿದ್ದೆ ಬರಲಿಲ್ಲ!

ಸ್ನೇಹಿತರೊಬ್ಬರ ಅನುಭವ ಹೀಗಿದೆ. ಸ್ನೇಹಿತ ಪರದೇಶದಲ್ಲಿದ್ದ. ಭಾರತದಲ್ಲಿ, ಆಸ್ಪತ್ರೆಗೆ ಸೇರಿದ್ದ ಅಪ್ಪನಿಗೆ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಸನ್ನಿವೇಶ ಹೇಗಿತ್ತೂ ಎಂದರೆ ಮನೆಯವರು ಈತನಿಗೆ ಕರೆ ಮಾಡಿ "ನೋಡಪ್ಪಾ ಆಸ್ಪತ್ರೆಯಲ್ಲಿ ಇದ್ದರೂ ಮನೆಗೆ ಕರೆದುಕೊಂಡು ಬಂದರೂ ಯಾವ ರೀತಿಯಲ್ಲೂ ಇಂಪ್ರೂವ್ ಆಗಲಾರದೂ ಅಂತಲೇ ಡಾಕ್ಟರ್ ಹೇಳ್ತಿದ್ದಾರೆ. ನೀನೇ ನಿರ್ಧಾರ ತೊಗೋಬೇಕು ಈಗ" ಎಂದರು!

ಇದೆಂಥಾ ಹಾಟ್ ಸೀಟ್ ಅಂತೀರಿ? ಅಪ್ಪನ ಜೀವ ಇರಬೇಕೋ ಬೇಡವೋ ಎನ್ನುವುದರ ಬಗ್ಗೆ ನಿಂತ ನಿಲುವಿನಲ್ಲೇ ನಿರ್ಧಾರ ತೆಗೆದುಕೊಳ್ಳುವುದು ಹೇಗೆ? ಇನ್ನರ್ಧ ಘಂಟೆಗೆ ಮತ್ತೆ ಕರೆ ಮಾಡುತ್ತೇನೆ ಎಂದು ಫೋನ್ ಇಟ್ಟವನಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿತ್ತು. ಅಪ್ಪನ ಅವಿರತ ದುಡಿಮೆ ಮತ್ತು ಇವನ ಪರಿಶ್ರಮದಿಂದಾಗಿ, ವಿದೇಶಕ್ಕೆ ಬಂದವನಿಗೆ ಅಪ್ಪನ ಜೀವ ಬೇಕೋ ಬೇಡೋ ನಿರ್ಧಾರ ಮಾಡು ಎಂದರೆ ಹೇಗಿರಬೇಕು ಪರಿಸ್ಥಿತಿ? ಅವನ ಪುಣ್ಯವೋ ಏನೋ ಕೆಲವೇ ನಿಮಿಷಗಳಲ್ಲಿ ತಂದೆ ತೀರಿಕೊಂಡರೆಂದು ಕರೆ ಬಂತು!

ಹಾಟ್ ಸೀಟ್ ಅಂದರೆ ಇದು! ಕೂತ ಕಡೆ ನಿರ್ಧಾರ ತೆಗೆದುಕೊಳ್ಳಬೇಕು. ಆ ಸಮಯ ಹೇಗಿರುತ್ತದೆ ಎಂದರೆ ಎಲ್ಲಾ ಬಲಗಳನ್ನೂ ಕಳೆದುಕೊಂಡು ಏಕಾಂಗಿಯಾಗಿ ಹೋರಾಡುವಾಗ ಮುಂದಿನ ಹೆಜ್ಜೆ ಹೇಗಿಡಬೇಕು ಎಂಬ ನಿರ್ಧಾರ ಕೈಗೊಳ್ಳುವಂತೆ. ತಪ್ಪು ಹೆಜ್ಜೆ ಇಟ್ಟರೆ ಜೀವನಪರ್ಯಂತ ಕೊರಗಬೇಕು!

ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಇಂಟರ್ವ್ಯೂ ತೆಗೆದುಕೊಳ್ಳುವಾಗ ಕೂಡುವ ಕುರ್ಚಿಯೂ ಒಂದು ರೀತಿಯ ಹಾಟ್-ಸೀಟ್. ಒಂದು ಘಂಟೆ ಕಾಲದ interview ಎಂದು ಆ ಸೀಟಿನ ಮೇಲೆ ಕೂತಾಗ, ಆ ಒಂದು ಘಂಟೆ ಕಾಲ ಕಳೆಯೋದು ಎಂಥಾ ಕಷ್ಟ ಎಂದರೆ ಊಹಿಸೋದೇ ಕಷ್ಟ. ಟಿವಿ ಮುಂದೆ ಕೂತೋ, ಮಾಲ್'ಗಳಲ್ಲಿ ಅಳೆಯುತ್ತಲೋ ಒಂದೇನು ಹಲವಾರು ಘಂಟೆಗಳ ಕಾಲ ಕಳೆದಿರುತ್ತೇವೆ. ಆದರೆ ಹಾಟ್ ಸೀಟ್ ಮೇಲೆ ಕಾಲು ಘಂಟೆ ಕೂರುವುದೂ ಕಷ್ಟ.

ಡಿಸೆಂಬರ್ ತಿಂಗಳ ಕ್ರಿಸ್ಮಸ್ ಬಂದಾಗಲೆಲ್ಲ ನನ್ನ ಮನ ಆವರಿಸೋ ಹಾಟ್ ಸೀಟ್ ಎಂದರೆ 1999'ರ ವಿಮಾನದ ಹೈಜಾಕ್! ನೇಪಾಳದಿಂದ ದೆಹಲಿಗೆ ಬರೋ ವಿಮಾನವನ್ನು ಎಲ್ಲೆಲ್ಲಿಗೋ ಎಳ್ಕೊಂಡ್ ಹೋಗಿ ಊಟ, ನಿದ್ದೆ, ನೀರಡಿಕೆ, ಪಾಯಿಖಾನೆ ಎಂಬೆಲ್ಲಾ ಮೂಲಭೂತಗಳಿಗೆ ಮುಳುವಾಗಿ ಬದುಕಿ ಬರುವೆವೋ ಇಲ್ಲವೋ ಎಂಬ ಗ್ಯಾರಂಟಿ ಇಲ್ಲದೆ ಇದ್ದ ಏಳು ದಿನಗಳ ಹಾಟ್ ಸೀಟ್ ಆ ವಿಮಾನದ ಸೀಟ್!

ರೂಪನ್ ಎಂಬಾತ ಸತ್ತ, ಆದರೆ ಮಿಕ್ಕವರು ಬದುಕಿದ್ದೂ ಸತ್ತಂತೆ ಇದ್ದರು. ಯಾರಿಗೂ ಏನೂ ಮಾಡಲು ಸಾಧ್ಯವಿರಲಿಲ್ಲ.

ವರ್ಷ ಮುಗೀತಾ ಇದ್ದಂತೆ ಏನೇನೋ ನೆನಪು ಮಾಡಿ ಮನಸ್ಸಿಗೆ ಹಿಂಸೆ ಮಾಡ್ತೀರಪ್ಪ ಎನ್ನಬೇಡಿ. ಆಗಾಗ ನಡೆದು ಬಂದ ಹಾದಿಯನ್ನು ಪರಿಶೀಲಿಸುತ್ತಾ ಹೋದಂತೆ ಮುಂದೆ ನಡೆವ ಹಾದಿ ಸುಗಮವಾದೀತು. ಸರ್ಪದ ಮೇಲೆ ಮಲಗಿಹ ಶ್ರೀಹರಿಗೆ ಸೀಟು ಹಾಟ್ ಆಗದಿರಬಹುದು. ಆದರೆ ಕಮಲದ ಮೇಲೆ ಕೂತ ಬ್ರಹ್ಮನಿಗೆ ಸೀಟು ಹಾಟ್ ಆಗಬಹುದು. ಸ್ವರ್ಗಾಧಿಪತಿ ಇಂದ್ರನಿಗಂತೂ ಬಹಳಷ್ಟು ಸಾರಿ ಸೀಟು ಹಾಟ್ ಆಗಿದೆ.

ಕುಳಿತ ಸೀಟು ಕೂಲ್ ಆಗಿದ್ದರೂ ಹಾಟ್ ಆಗೋದಕ್ಕೆ ಹೆಚ್ಚು ಸಮಯ ಬೇಕಿಲ್ಲ. Coolಆಗಿಯೇ ಇರಿ ಆದರೆ ಸೀಟು hot ಆಗಬಹುದು ಎಂಬುದರ ಬಗ್ಗೆ ಬರಲಿರುವ ಹೊಸವರ್ಷದಲ್ಲಿ ಎಚ್ಚರವಿರಲಿ. ಹೊಸವರ್ಷದಲ್ಲಿ ಭೇಟಿಯಾಗೋಣ. ನಾನಿನ್ನು ಬರಲೇ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The life itself is a reality show and you will be sitting on the hot seat. We face many situations where we have to take decision in quick time, just like anyone sitting on the hot seat in a reality show. Srinath Bhalle relates it with real life incidents.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ