ಅದೇ ಈ ಮನುಷ್ಯ ಇದ್ದಾನೆ ನೋಡಿ, ಅಬ್ಬಬ್ಬಾ!

By: ಶ್ರೀನಾಥ್ ಭಲ್ಲೆ, ರಿಚ್ಮಂಡ್
Subscribe to Oneindia Kannada

ಕಾರಿನಲ್ಲಿ ಅಲ್ಲಿ ಇಲ್ಲಿ ಸಾಗುವಾಗ ನಮ್ಮೊಂದಿಗಿರುವ ಜೊತೆಗಾರನೇ mp3 player ಮಹಾಶಯ. ತನ್ನೊಡಲಲ್ಲಿ ತುಂಬಿಕೊಂಡಿರೋ ಗಾನಭಂಡಾರವನ್ನು ಪದೇ ಪದೇ ಹಾಡೆಂದರೂ ಬೇಸರವಿಲ್ಲದೆ ಹಾಡಿಸುತ್ತಾನೆ. ಯಾವಾಗ ಹಾಡೆಂದರೂ ಆಯಾ ಹಾಡನ್ನು ಈ ಹಿಂದೆ ಹೇಗೆ ಹಾಡಿದ್ದನೋ ಹಾಗೆಯೇ ಮತ್ತೊಮ್ಮೆ ಹಾಡುತ್ತಾನೆ.

ಇದೊಂದು ರೀತಿಯ automation testing ಇದ್ದ ಹಾಗೆ. ಮಷೀಶಿನ ಕೆಲಸವೇ ಹಾಗೆ. ಅವಕ್ಕೆ ಭಾವನೆಗಳಿರೋದಿಲ್ಲ. ಅದೇ ಈ ಮನುಷ್ಯ ಇದ್ದಾನೆ ನೋಡಿ, ಅಬ್ಬಬ್ಬಾ, ಮನೆಯಲ್ಲಿ ಚೆನ್ನಾಗಿ ಹೊಟ್ಟೆಗೆ ಬಿದ್ದಿದ್ದರೆ ಒಂದು ರೀತಿ, ಶುಕ್ರವಾರ ಸಂಜೆ ಒಂದು ರೀತಿ, ಸೋಮವಾರ ಬೆಳಿಗ್ಗೆ ಎಂದರೆ ಇನ್ನೊಂದು ರೀತಿ. ಬಾಯ್ ಫ್ರೆಂಡ್ ಕೈಕೊಟ್ಟರೆ ಒಂದು ರೀತಿ, ಗರ್ಲ್ ಫ್ರೆಂಡ್ ಲೇಟ್ ಆಗಿ ಬಂದ್ಲೂ ಅಂದ್ರೆ ಇನ್ನೊಂದ್ ರೀತಿ, ಮನೆಯಲ್ಲಿ ಮಕ್ಕಳಿಗೆ ಆರೋಗ್ಯ ಕೆಟ್ಟಿದ್ದರೆ ಮತ್ತೊಂದು ರೀತಿ. ಮನುಷ್ಯನ ದಿನದ ಕೆಲಸದ ವೈಖರಿ ಆತನ/ಆಕೆಯ ಪರಿಸರದ ಮೇಲೆ ಅವಲಂಬಿತ.

ನೀವು ಯಾವ ರೀತಿ ಹೊಗಳಿಕೆ ಬಯಸುತ್ತೀರಿ?

ಯಾವುದು ಏನೇ ಆಗಿದ್ದರೂ ಸುಮ್ಮನೆ ಹಲ್ಲು ಕಿರಿದುಕೊಂಡು ಕೆಲಸ ಮಾಡಲು ನಾವೇನು ಗಗನಸಖಿಯರೇ? ಅಥವಾ ಎಲ್ಲವನ್ನೂ ಬದಿಗಿರಿಸಿ ಮುಗುಳುನಗೆ ತೋರುವ ಧನ್ವಂತರಿಗಳೇ?

Navella Kurigalu saar Kurigalu

ನನ್ನ ನೆಚ್ಚಿನ ವಿದ್ಯಾಭೂಷಣರ ಮಧುರಗಾನಗಳು ಒಂದೆಡೆಯಾದರೆ, ಈಚೆಗೆ ಕಾಡ್ತಿರೋದು ರಾಜು ಅನಂತಸ್ವಾಮಿ! ಆತನ ದನಿಯಲ್ಲಿ ಭಾವಗೀತೆಗಳು ಮತ್ತು ಕಗ್ಗ ಕೇಳಿ ಕೇಳಿ ಅದೇ ಗುಂಗಿನಲ್ಲಿ ಎಷ್ಟೋ ಬಾರಿ ಕಳೆದುಹೋಗಿದ್ದೇನೆ. ಅನೇಕ ಬಾರಿ ಮನುಷ್ಯನ ಬದುಕಿನ ಭಾವನೆ ಮತ್ತು ಬವಣೆಗಳ ಬಗ್ಗೆ ಹತ್ತು ಹಲವು ಆಲೋಚನೆಗಳು ಮನಸ್ಸಿನಲ್ಲಿ ಹಾದುಹೋಗಿವೆ. ಹರಿಕೇನ್ ಪ್ರಭಾವವೋ ಏನೋ, ಈ ಬಾರಿ ಸ್ವಲ್ಪ ಜಾಸ್ತಿ ಅಪ್ಪಳಿಸಿದೆ. ಒಂದೆರಡು ಅನಿಸಿಕೆಗಳು ಈ ವಾರ ನಿಮ್ಮ ಮುಂದೆ.

ಮನುಷ್ಯ ಇತ್ತೀಚಿಗೆ ಮೃಗವಾಗಿ ಬದಲಾಗುತ್ತಿದ್ದಾನೆ. ಪೈಶಾಚಿಕ ರೀತಿಯಲ್ಲಿ ವರ್ತಿಸುತ್ತಿದ್ದಾನೆ. ಒಟ್ಟಿನಲ್ಲಿ ಮನುಷ್ಯ ಮನುಷ್ಯನಾಗಿ ಬದುಕೋದು ಬಿಟ್ಟು ಮಿಕ್ಕೆಲ್ಲ ಆಗಿದ್ದಾನೆ. ಗಳಿಸಿ ತಿನ್ನುವ ಬದಲು ಮತ್ತೊಬ್ಬನನ್ನು, ಮತ್ತೊಂದನ್ನು ಕೊಂದೇ ತಿನ್ನುವ ಮಟ್ಟಕ್ಕೆ ತಲುಪಿದ್ದಾನೆ. ಒಂದಾನೊಂದು ಕಾಲದಲ್ಲಿ ಆಹಾರ ಸಮೃದ್ಧಿಯಾಗಿದ್ದರೂ ಅದನ್ನು ಬಳಸಿಕೊಳ್ಳುವ ರೀತಿ ಗೊತ್ತಿಲ್ಲದೇ ಹೋಗಿ ಇನ್ನೊಬ್ಬರ ತಲೆ ಹೊಡೆದು ತಿನ್ನುತ್ತಿದ್ದರು. ಇಂದು ಅಂಗೈಯಲ್ಲೇ ಜಗತ್ತು ಇದ್ದೂ ತಲೆ ಹೊಡೆದು ತಿನ್ನೋ ವಿಷಯದಲ್ಲಿ ಆತ ಬದಲಾಗಿಯೇ ಇಲ್ಲ!

ಇನ್ನೊಂದರ್ಥದಲ್ಲಿ ಮೃಗ ಎಂದ ಮಾತ್ರಕ್ಕೆ ವನ್ಯಮೃಗ ಆಗಿರಬೇಕಿಲ್ಲ ಅಲ್ಲವೇ? ಕೊಂದು ತಿನ್ನುವ ಮೃಗ ಆಗಬೇಕಿಲ್ಲ ಅಲ್ಲವೇ? ಕವಿ ನಿಸಾರ ಅಹ್ಮದ್ ಅವರ 'ಕುರಿ'ಯೂ ಆಗಬಹುದಲ್ಲವೇ?

ನೀವು Multitaskerರೋ? Unitaskerರೋ?

ಮಂದೆಯಲಿ ಒಂದಾಗಿ, ಸ್ವಂತತೆಯೆ ಬಂದಾಗಿ
ಇದರ ಬಾಲ ಅದು, ಮತ್ತೆ ಅದರ ಬಾಲ ಇದು ಮೂಸಿ,
ದನಿ ಕುಗ್ಗಿಸಿ, ತಲೆತಗ್ಗಿಸಿ
ಹುಡುಕಿ ಹುಲ್ಲು ಕಡ್ಡಿ ಮೇವು, ಅಂಡಲೆಯುವ ನಾವು, ನೀವು,

Navella Kurigalu saar Kurigalu

ಅಬ್ಬಾ! ಎಂಥಾ ಸಾಲುಗಳಿವು? ಇವರ ಮಾತುಗಳನ್ನು ಕಾರ್ಪೊರೇಟ್ ಕುರಿಗಳಿಗೆ ಹೋಲಿಸಿದರೆ ಹೇಗೆ? ಕಾಂಟ್ರಾಕ್ಟಿಂಗ್ ಕಂಪನಿ ಸೇರಿ ಅಲ್ಲಿಂದ ಕ್ಲೈಂಟ್ ಬಳಿ ಹೋಗಿ ಕೆಲಸ ಮಾಡುವ ಕುರಿಯನ್ನೇ ಉದಾಹರಣೆ ತೆಗೆದುಕೊಳ್ಳಿ.

ಹತ್ತಾರು ಮಂದಿಯ ಮಂದೆಯಲಿ ಒಂದಾಗಿ, ದೊಡ್ಡವರು ಹೇಳಿದಂತೆ ಕೆಲಸ ಮಾಡುತ್ತಾ ಸ್ವಂತತೆಯನ್ನು ಬಂದ್ ಮಾಡಿಕೊಂಡು, ತನ್ನ ಮೆನೇಜರ್ ಎಂಬ ಮತ್ತೊಂದು ಕುರಿಯನ್ನು ಮೂಸಿಕೊಂಡು ಕಾಂಟ್ರಾಕ್ಟ್ ಹೆಚ್ಚಿಸಿಕೊಳ್ಳುವತ್ತಲೇ ಗಮನವಿಟ್ಟುಕೊಂಡು ಕೆಲಸ ಮಾಡುತ್ತಾ, ಹಾಗಲ್ಲಾ ಹೀಗೆ ಎಂದು ದನಿ ಎತ್ತದೆ ದನಿ ಕುಗ್ಗಿಸಿಯೇ ಮಾತನಾಡುವ, ಬತ್ತಿದ ಬಕ್ಕ ತಲೆ ಎತ್ತದೆ, ಮೆದುಳಲ್ಲಿ ಹೊಸ ಆಲೋಚನೆ ಬಿತ್ತದೆ, ಅಡುಗೆ ಮಾಡಿಕೊಳ್ಳಲೂ ಸಮಯವಿರದೆ ಕಸಕಡ್ಡಿ ತಿಂಬ, ಒಂದೂರಿನಿಂದ ಮತ್ತೊಂದು ಊರಿಗೆ ಅಂಡಲೆಯುವ ಕುರಿಗಳು ಸಾರ್ ಕುರಿಗಳು.

ಉಡುಗೊರೆ ಏನ್ ಕೊಡೋದು, ಅದೇ ಒಂದು ದೊಡ್ಡ ತಲೆಬಿಸಿ

ನಮಗೋ ನೂರು ಗುರಿಗಳು,
ಎಡ ದಿಕ್ಕಿಗೆ ಬಲ ದಿಕ್ಕಿಗೆ, ಒಮ್ಮೆ ದಿಕ್ಕು ಪಾಲಾಗಿ,
ಒಮ್ಮೆ ಅದೂ ಕಳೆದುಕೊಂಡು ತಾಟಸ್ಥ್ಯದಿ ದಿಕ್ಕೆಟ್ಟು
ಹೇಗೆ ಹೇಗೊ ಏಗುತಿರುವ, ಬರೀ ಕಿರುಚಿ ರೇಗುತಿರುವ,
ನೊಣ ಕೂತರೆ ಬಾಗುತಿರುವ, ತಿನ್ನದಿದ್ದರೂ ತೇಗುತಿರುವ,
ಹಿಂದೆ ಬಂದರೆ ಒದೆಯದ, ಮುಂದೆ ಬರಲು ಹಾಯದ . . .

ಮೇಲಿನ ವಿಷಯಕ್ಕೆ ಟೆಕ್ಕಿಯೇ ಆಗಬೇಕಿಲ್ಲ. ಜೀವನದಲ್ಲಿ ದುಡ್ಡು ಮಾಡಬೇಕೆಂಬ ಒಂದು ಗುರಿ ಇದ್ದರೂ ಆ ಮರೀಚಿಕೆಯನ್ನು ಹಿಡಿಯಲು ಹೋಗುವ ದಾರಿಗಳು ಬರೀ ನೂರಾಗಿದ್ದರೆ ಚೆನ್ನಿತ್ತು. ಎಡ, ಬಲ, ಮೇಲೆ, ಕೆಳಗೆ ಎಂದು ಎಲ್ಲೆಲ್ಲೋ ಒದ್ದಾಡಿ ಓಡಾಡಿ ಒಂದಷ್ಟು ಹಣ ಮಾಡಿಕೊಂಡು ನಂತರ ಅದನ್ನು ದುಪ್ಪಟ್ಟು ಮಾಡಿಕೊಳ್ಳಬೇಕೆಂಬ ದುರಾಸೆಗೆ ಬಿದ್ದು ಇದ್ದುದನ್ನೂ ಕಳೆದುಕೊಂಡು ಡಿಪ್ರೆಶನ್ ಎಂಬ ಸ್ಥಿತಿ ತಲುಪಿ ನೊಣ ಕೂತರೂ ಬಾಗಿ, ಇನ್ನೊಬ್ಬರ ಕಣ್ಣಿಗೆ ನಾವು ಚೆನ್ನಾಗಿದ್ದೇವೆ ಎಂಬ ತೋರಿಕೆಯ ಬದುಕು ಬಾಳುತ್ತ ನಿಶಕ್ತರಾಗಿ ಬದುಕುತ್ತಿರುವ ಎಷ್ಟೋ ಮಂದಿ ಅಂದು ಇಂದು ಮುಂದು ಎಂದೆಂದಿಗೂ ಕಾಣಲು ಸಿಗುವ ಕುರಿಗಳು ಸಾರ್ ಕುರಿಗಳು.

ಮುಂದ?
ಇಂದಿನ ಸಾಮಾಜಿಕ ತಾಣದಲ್ಲಿ ಎಷ್ಟೋ ಮಂದಿ ದಿನನಿತ್ಯದಲ್ಲಿ ಏನಾದರೂ ಬರೆಯುತ್ತಲೇ ಇರುತ್ತಾರೆ, ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ, ಮತ್ತೊಬ್ಬರ ಬುದ್ದಿಯನ್ನು ಒರೆಗೆ ಹಚ್ಚುತ್ತಾರೆ. ಇಷ್ಟೆಲ್ಲಾ ಮಾಡಿದರೂ ತಮಗೆ ಲೈಕ್ ಹಾಕಲಿ, ಕಾಮೆಂಟ್ ಮಾಡಿ ಎಂದೆಲ್ಲಾ ಬಯಸುವುದಿಲ್ಲ. ಅವರಿಗೆ ಗೊತ್ತಿರುತ್ತದೆ ಜನ ತಮ್ಮ ಬರಹ ಓದುತ್ತಾರೆ, ಮೆಚ್ಚಿರಲೇಬೇಕು ಎಂದೇನೂ ಇಲ್ಲ ಅಂತ.

ನಮ್ಮ ಜಿ.ಎಸ್.ಶಿವರುದ್ರಪ್ಪನವರ ಮಾತಿನಲ್ಲೇ ಹೇಳುವುದಾದರೆ . . .

ಇಂದು ನಾ ಹಾಡಿದರು, ಅಂದಿನಂತೆಯೇ ಕುಳಿತು
ಕೇಳುವಿರಿ ಸಾಕೆನಗೆ ಅದುವೇ ಬಹುಮಾನ
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ,
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾ ಬಲ್ಲೆ ಅದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ.

ಲೈಕು ಬರಲಿಲ್ಲ, ಕಮೆಂಟು ಕಾಣಲಿಲ್ಲ ಎಂದು ಬರಹ ನಿಲ್ಲಿಸುವ ಪರಿ ಅಲ್ಲ ಅವರದ್ದು. ಯಾರು ಕಿವಿ ಮುಚ್ಚಿದರು ಅವರಿಗಿಲ್ಲ ಆ ಚಿಂತೆ.

ಮನುಷ್ಯ ಗುಣಾವಗುಣಗಳ ಖನಿಜವೇ ಸರಿ. ಒಬ್ಬೊಬ್ಬರದ್ದೂ ಒಂದೊಂದು ಗುಣ. ಎಲ್ಲರೂ ಒಂದೇ ರೀತಿ ಇದ್ದಲ್ಲಿ ರೋಬೊ ಆಗಿಬಿಡುತ್ತೇವೆ. ಎಲ್ಲಿ ಹೋದರು ಒಂದೇ ರೀತಿ ಮುಖಗಳಿದ್ದರೆ ಮಜವೇ ಇರೋಲ್ಲ. ಚೈನಾ ಬಗ್ಗೆ ಹೇಳುತ್ತಿಲ್ಲ. ಸಿಡುಕು ಮೋರೆ ಸಿಂಡ್ರೆಲ್ಲಾಗಳು, ನಗುಮೊಗದ ನಗುವಾನಂದರು, ಮೋಸದ ಮುಖದ ಮೋಹನ್ ಕುಮಾರ, ಎದೆ ಝಲ್ ಎನಿಸೋ ಜಮುನಾ ಬರೀತಾ ಹೋಗುತ್ತಾ ಇದ್ದರೆ ಮುಗಿಯುವುದೇ ಇಲ್ಲ. ಒಬ್ಬೊಬ್ಬರದ್ದೂ ಒಂದೊಂದು ಮುಖ, ನಿಜವಾದ ಮೊಗ, ಮುಸುಕು ಮೊಗ, ಒಂದೊಂದು ನೈಜ ಭಾವನೆ, ಒಂದೊಂದು ಹುದುಗಿಹ ಭಾವನೆ ಹೀಗೆ . . .

ಇಂಥದ್ದು ತಪ್ಪು, ಇಂಥದ್ದು ಸರಿ ಅಂತೇನಿಲ್ಲ. ನಗುಮೊಗ ಹೊತ್ತು ಕಾವಿತೊಟ್ಟು ಇನ್ನೊಬ್ಬರನ್ನು ಮೋಸ ಮಾಡುವ ಮಂದಿ ಖಳೆ ಹೊತ್ತ ಮುಖದವರಾಗಿದ್ದರೆ ಏನು ಪ್ರಯೋಜನ?

ಯಾವುದು ಏನೇ ಇದ್ದರೂ, ಜನರ ಮಧ್ಯದಲ್ಲಿ ಅರ್ಥಾತ್ ಸಮಾಜದಲ್ಲಿ ಹೇಗಿರಬೇಕು, ಭಗವಂತನಲ್ಲಿ ಒಂದು ವಿಚಾರವನ್ನು ಬೇಡುವುದಿದ್ದರೆ ಅದು ಯಾವುದು ಎಂಬುದನ್ನು ನಮ್ಮ ಡಿ.ವಿ.ಜಿ'ಯವರು ಕಗ್ಗದಲ್ಲಿ ಹೇಳುತ್ತಾರೆ.

ನಗುವು ಸಹಜದ ಧರ್ಮ
ನಗಿಸುವುದು ಪರಧರ್ಮ।
ನಗುವ ಕೇಳುತ ನಗುವುದತಿಶಯದ ಧರ್ಮ॥
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ।
ಮಿಗೆ ನೀನು ಬೇಡಿಕೊಳೊ - ಮಂಕುತಿಮ್ಮ ॥ 917 ॥

ಅರಿತೋ ಅರಿವಿಲ್ಲದೆಯೋ ನಮಗೆ ಅರಿಗಳಾಗಿದ್ದರೆ, ಅವರೇಕೆ ಅರಿಗಳಾದರು ಎಂಬ ಅರಿವನ್ನು ನೀಡಯ್ಯಾ ತಂದೆ. ಅರಿವು ಮೂಡಿಸಿಕೊಂಡು ಅಂಧತೆಯ ಅರಿವೆಯನ್ನು ಹರಿದು ಸಂತಸವನ್ನೇ ಅರೆದು ಕುಡಿವ ಶಕ್ತಿ ನೀಡಯ್ಯಾ...

ಅಂದಿನ ಮಾತು ಇಂದಿನ ನಡೆಯಾಗಿರಬಹುದು ಅಥವಾ ಅಂದಿನ ಮಾತು ಇಂದಿನ ನಡೆಯಾಗಿರಬಹುದು ಆದರೆ ಭಗವಂತನಲ್ಲಿನ ಈ ಬೇಡಿಕೆ ಅಂದಿಗೂ ಇಂದಿಗೂ ಒಂದೇ. ಏನಂತೀರಾ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
That human behavior is more influenced by things outside of us than inside. The 'situation' is the external environment. The inner environment is genes, moral history, religious training.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ